ರಾಜಕಾರಣದ ಶಕ್ತಿ ಕೇಂದ್ರದಲ್ಲಿ ತ್ರಿಕೋನ ಸ್ಪರ್ಧೆ ಸ್ಪಷ್ಟ
Team Udayavani, Mar 21, 2018, 12:39 PM IST
ಬೆಂಗಳೂರು: ದೇಶದ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿದ್ದ ಉತ್ತರಹಳ್ಳಿ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ರಚನೆಯಾದ ಕ್ಷೇತ್ರಗಳ ಪೈಕಿ ಪದ್ಮನಾಭನಗರವೂ ಒಂದು. ರಾಜಧಾನಿಯ ದಕ್ಷಿಣ ಭಾಗದಲ್ಲಿ ರಾಜಕೀಯವಾಗಿಯೂ ಸಾಕಷ್ಟು ಮಹತ್ವ ಪಡೆದಿರುವ ಕ್ಷೇತ್ರ.
ಉತ್ತರಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿ ಮೂರು ಬಾರಿ ಶಾಸಕರಾಗಿದ್ದ ಬಿಜೆಪಿಯ ಆರ್.ಅಶೋಕ್ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸದ್ಯ ವಿಧಾನಸಭೆ ಪ್ರತಿಪಕ್ಷದ ಉಪನಾಯಕರಾಗಿದ್ದಾರೆ. ಸತತ ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಆರ್.ಅಶೋಕ್, ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.
ಹೆಚ್ಚಿದ ಕಳೆ: ಬಿಡಿಎ ಬಡಾವಣೆ, ರೆವಿನ್ಯೂ ಬಡಾವಣೆ, ಕೊಳೆಗೇರಿ, ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ಹೀಗೆ ಭೌಗೋಳಿಕ ವೈವಿಧ್ಯದ ಜತೆಗೆ ನಾನಾ ವರ್ಗ, ಭಾಷೆ, ಸಂಸ್ಕೃತಿಯ ಜನರು ನೆಲೆಸಿರುವ ಕ್ಷೇತ್ರ ಇದಾಗಿದೆ. ಹೊಸ ಮೇಲುಸೇತುವೆ, ಪಾಸ್ ಓವರ್, ಡಾಂಬರೀಕರಣ, ಹೊಸ ಉದ್ಯಾನಗಳ ನಿರ್ಮಾಣ, ನಿರ್ವಹಣೆ, ಅಭಿವೃದ್ಧಿಯಾಗಿರುವ ಕೆರೆಗಳು ಕ್ಷೇತ್ರದ ಕಳೆ ಹೆಚ್ಚಿಸಿವೆ.
ಸೌಕರ್ಯದ ಕೊರತೆ: ಕಿರಿದಾದ ರಸ್ತೆಗಳಲ್ಲಿ ನಿತ್ಯ ಉಂಟಾಗುವ ವಾಹನ ದಟ್ಟಣೆ ಸಮಸ್ಯೆಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಗೌಡನಪಾಳ್ಯ, ಹೊಸಕೆರೆಹಳ್ಳಿ, ಕರಿಸಂದ್ರ, ಚಿಕ್ಕಕಲ್ಲಸಂದ್ರ, ಬನಶಂಕರಿ ವಾರ್ಡ್ ವ್ಯಾಪ್ತಿಯ ಕೆಲ ಪ್ರದೇಶದ ನಿವಾಸಿಗಳಿಗೆ ಈವರೆಗೆ ಹಕ್ಕುಪತ್ರ ಸಿಕ್ಕಿಲ್ಲ.
ಪ್ರತಿಷ್ಠಿತ ಯೋಜಿತ ಬಡಾವಣೆಗಳು ಹೆಚ್ಚು ಅಭಿವೃದ್ಧಿ, ಸುಧಾರಿತ ಸೌಲಭ್ಯ ಪಡೆಯುತ್ತಿದ್ದರೆ ಕೊಳೆಗೇರಿಗಳು, ರೆವಿನ್ಯೂ ಬಡಾವಣೆಗಳು ಮೂಲ ಸೌಕರ್ಯಕ್ಕಾಗಿ ಪರದಾಡುತ್ತಿವೆ. ಈ ಕ್ಷೇತ್ರದಲ್ಲಿ ಒಕ್ಕಲಿಗರ ಹಾಗೂ ಬ್ರಾಹ್ಮಣರ ಸಮುದಾಯದವರು ಸಮ ಸಂಖ್ಯೆಯಲ್ಲಿದ್ದು, ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿ ಪಂಗಡ, ನಾಯ್ಡು ಸಮುದಾಯದವರೇ ನಿರ್ಣಾಯಕರಾಗಿದ್ದಾರೆ.
ಕ್ಷೇತ್ರದ ಪದ್ಮನಾಭನಗರ, ಯಡಿಯೂರು, ಚಿಕ್ಕಕಲ್ಲಸಂದ್ರ, ಗಣೇಶ ಮಂದಿರ, ಕುಮಾರಸ್ವಾಮಿ ಬಡಾವಣೆ, ಕರಿಸಂದ್ರ, ಹೊಸಕೆರೆಹಳ್ಳಿ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದರೆ ಬನಶಂಕರಿ ದೇವಸ್ಥಾನ ವಾರ್ಡ್‌ನಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ.
ಈ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ವಿ.ಕೆ.ಗೋಪಾಲ್ ಘೋಷಣೆಯಾಗಿದ್ದು, ಈಗಾಗಲೇ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಮೇಲಷ್ಟೇ ಚುನಾವಣಾ ಕಣ ಸ್ಪಷ್ಟವಾಗಲಿದೆ. ಬಿಜೆಪಿಯಲ್ಲಿರುವ ಮಾಜಿ ಮೇಯರ್ ವೆಂಕಟೇಶಮೂರ್ತಿ ಅವರು ಕಾಂಗ್ರೆಸ್ ಸೇರಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕ್ಷೇತ್ರದ ಮಹಿಮೆ: ಶಕ್ತಿ ದೇವತೆ ಬನಶಂಕರಿ ದೇವಸ್ಥಾನ, ದೇವಗಿರಿ ಶ್ರೀನಿವಾಸ, ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ ಸೇರಿದಂತೆ ಸಾಕಷ್ಟು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪದ್ಮನಾಭನಗರ ಕ್ಷೇತ್ರದಲ್ಲಿವೆ. ಯಡಿಯೂರು ಕೆರೆ, ಅಬ್ಬಯ್ಯ ನಾಯ್ಡು ಸ್ಟುಡಿಯೋ ಕ್ಷೇತ್ರದ ಆಕರ್ಷಣೆ. ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರದ ದಿಗ್ಗಜರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದೇ ಕ್ಷೇತ್ರದ ಮತದಾರರು ಎಂಬುದೇ ವಿಶೇಷ
ಕ್ಷೇತ್ರದ ಬೆಸ್ಟ್ ಏನು?: ತೀವ್ರ ವಾಹನ ದಟ್ಟಣೆ ಉಂಟಾಗುತ್ತಿದ್ದ ವರ್ತುಲ ರಸ್ತೆ ಹಾಗೂ ಅತ್ತಿಮಬ್ಬೆ ರಸ್ತೆ ಕೂಡುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಬಿಎಂಪಿ ವತಿಯಿಂದ ಮೇಲುಸೇತುವೆ ನಿರ್ಮಾಣವಾಗಿದ್ದು, ಸಂಚಾರ ಸುಗಮವಾಗಿದೆ. ಕಾಮಾಕ್ಯ ಚಿತ್ರಮಂದಿರ ಜಂಕ್ಷನ್‌ನಿಂದ ಕದಿರೇನಹಳ್ಳಿ ಜಂಕ್ಷನ್‌ವರೆಗೆ ವರ್ತುಲ ರಸ್ತೆಯಲ್ಲಿ ಸಿಗ್ನಲ್ ಮುಕ್ತವಾಗಿ ಸಂಚರಿಸಬಹುದಾಗಿದೆ. ಹಾಗೆಯೇ ಹೊಸಕೆರೆಹಳ್ಳಿ ಕೆಇಬಿ ಜಂಕ್ಷನ್‌ನಲ್ಲಿ ಪಾಸ್ ಓವರ್ ನಿರ್ಮಾಣವಾಗಿದ್ದು, ವರ್ತುಲ ರಸ್ತೆಯಲ್ಲಿ ಸಂಚಾರ ಸುಗಮವಾಗಿದೆ.
ಕ್ಷೇತ್ರದ ದೊಡ್ಡ ಸಮಸ್ಯೆ: ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ಗಳಿದ್ದು, ಮಳೆ ಸುರಿದಾಗ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಪಡುವಂತಾಗಿದೆ. ಪದ್ಮನಾಭನಗರದಿಂದ ಚಿಕ್ಕಕಲ್ಲಸಂದ್ರ ಸಂಪರ್ಕಿಸುವ ರಸ್ತೆ, ಕಿಡ್ನಿ ಫೌಂಡೇಶನ್‌ನಿಂದ ಚಿಕ್ಕಕಲ್ಲಸಂದ್ರದ ಶನಿಮಹಾತ್ಮ ದೇವಸ್ಥಾನದ ರಸ್ತೆ, ಕದಿರೇನಹಳ್ಳಿ ಕ್ರಾಸ್‌ನಿಂದ ಕುಮಾರಸ್ವಾಮಿ ಬಡಾವಣೆಗೆ ಸಂಪರ್ಕಿಸುವ ರಸ್ತೆಗಳು ಕಿರಿದಾಗಿದ್ದು, ನಿತ್ಯ ವಾಹನ ದಟ್ಟಣೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಶಾಸಕರು ಏನಂತರಾರೆ?
ಕ್ಷೇತ್ರದಲ್ಲಿದ್ದ ಸರ್ಕಾರಿ ಜಾಗದಲ್ಲೆಲ್ಲಾ ಉದ್ಯಾನ ನಿರ್ಮಿಸಲಾಗಿದೆ. ಮಳೆ ಸುರಿದಾಗ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕಾಲುವೆಗಳಿಗೆ ಕಾಂಕ್ರಿಟ್ ಮೇಲ್ಛಾವಣಿ ನಿರ್ಮಿಸುವ ಕಾಮಗಾರಿ ನಡೆದಿದೆ. ಅಪರಾಧ ತಡೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
-ಆರ್.ಅಶೋಕ್, ಶಾಸಕ
ಹಿಂದಿನ ಫಲಿತಾಂಶ
-ಆರ್.ಅಶೋಕ್ (ಬಿಜೆಪಿ)- 53680
-ಎಲ್.ಎಸ್.ಚೇತನ್‌ಗೌಡ (ಕಾಂಗ್ರೆಸ್)- 33557
-ಡಾ.ಎಂ.ಆರ್.ವಿ.ಪ್ರಸಾದ್ (ಜೆಡಿಎಸ್)- 26272
ಟಿಕೆಟ್ ಆಕಾಂಕ್ಷಿಗಳು
-ಬಿಜೆಪಿ- ಆರ್.ಅಶೋಕ್
-ಕಾಂಗ್ರೆಸ್- ಎಂ.ಶ್ರೀನಿವಾಸ್, ವೆಂಕಟೇಶಬಾಬು
-ಜೆಡಿಎಸ್- ಗೋಪಾಲ್ (ಘೋಷಿತ ಅಭ್ಯರ್ಥಿ)
ಚಿಕ್ಕಕಲ್ಲಸಂದ್ರದ ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಮಳೆಗಾಲದಲ್ಲಿ ಅಪಾರ್ಟ್‌ಮೆಂಟ್‌ಗಳ ತಳಮಹಡಿ ಜಲಾವೃತವಾಗುತ್ತಿದ್ದು, ಸಮಸ್ಯೆ ಬಗೆಹರಿದಿಲ್ಲ. ಚೌಡೇಶ್ವರಿ ದೇವಸ್ಥಾನದ ಬಳಿ ಕುಸಿದ ಕಾಲುವೆ ತಡೆಗೋಡೆ ಈಗ ದುರಸ್ತಿಯಾಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಯೂ ಇಲ್ಲ.
-ಎಲ್.ವಿ. ಮಹೇಶ್
ಕ್ಷೇತ್ರದ ಎಲ್ಲೆಡೆ ಕುಡಿವ ನೀರು, ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗವೆಲ್ಲಾ ಉತ್ತಮವಾಗಿವೆ. ಪಾರ್ಕ್‌ಗಳ ನಿರ್ವಹಣೆಯೂ ಉತ್ತಮವಾಗಿದೆ. ಸರಗಳ್ಳತನ ಪ್ರಕರಣ ತಗ್ಗಿವೆ. ಇನ್ನಷ್ಟು ಸೌಲಭ್ಯ ಸಿಕ್ಕರೆ ಅನುಕೂಲ.
-ರೇವತಿ, ಗೃಹಿಣಿ
ಮೂಲ ಸೌಕರ್ಯಗಳು ಸಾಕಷ್ಟು ಸುಧಾರಿಸಿವೆ. ದುಸ್ಥಿತಿಯಲ್ಲಿದ್ದ ಸುಮುದಾಯ ಭವನವೂ ಅಭಿವೃದ್ಧಿಯಾಗಿದೆ. ಕಸದ ಸಮಸ್ಯೆ ನಿವಾರಿಸಿ, ನೈರ್ಮಲ್ಯ ಇನ್ನಷ್ಟು ಹೆಚ್ಚಾಗಬೇಕಿದೆ. ಸಮತೋಲನಕ್ಕೆ ಆದ್ಯತೆ ನೀಡಬೇಕಿದೆ.
-ಅಫರ್, ವ್ಯಾಪಾರಿ
ಕಳೆದ ಮೂರು ವರ್ಷದಲ್ಲಿ ಸಾಕಷ್ಟು ಸೌಲಭ್ಯಗಳು ದೊರಕಿವೆ. ಸಮಸ್ಯೆಗಳಿಗೆ ಪಾಲಿಕೆ ಸದಸ್ಯರು ತಕ್ಷಣ ಸ್ಪಂದಿಸಿ ಪರಿಹರಿಸುತ್ತಾರೆ. ಕಿರಿದಾದ ರಸ್ತೆಗಳಲ್ಲೂ ವಾಹನ ದಟ್ಟಣೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಗಮನ ಹರಿಸಬೇಕಿದೆ.
-ಕೌಶಿಕ್
* ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.