ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ: ಸಿದ್ಧತಾ ಕ್ರಮಗಳ ಸಭೆ
Team Udayavani, Mar 22, 2018, 4:29 PM IST
ನಗರ : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ನಗರಸಭೆಯಿಂದ ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಯ ಕುರಿತು ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಪುತ್ತೂರು ಜಾತ್ರೆ ಎಂಬುದು ಪುತ್ತೂರಿಗೆ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಗರ ಸಭೆಗೂ ಜವಾಬ್ದಾರಿ ಇದೆ. ಸ್ವಚ್ಛತೆಯ ಕುರಿತಂತೆ ಎರಡು ವರ್ಷಗಳಿಂದ ವಿಶೇಷ ಜವಾಬ್ದಾರಿ ತೆಗೆದುಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಇದು ನಗರಸಭೆಗೆ ಹಾಗೂ ನಗರವಾಸಿಗಳಿಗೆ ಹೆಮ್ಮೆಯ ವಿಚಾರ ಎಂದರು.
ದೇವರ ಸವಾರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಸ್ವಚ್ಛತೆ, ರಸ್ತೆ ಸರಿಪಡಿಸುವ, ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಶೀಘ್ರ ನಡೆಸಲಾಗುವುದು. ಪೇಟೆ ಸವಾರಿ ಸಂದರ್ಭ ರಸ್ತೆಗೆ ನೀರು ಹಾಕುವ, ರಸ್ತೆ ಬದಿಯ ಸ್ಲ್ಯಾಬ್ಗಳನ್ನು ಸರಿಪಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಥಬೀದಿಗೆ ಜಾತ್ರೆ ಆರಂಭಕ್ಕೆ ಮೊದಲೇ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕೆಲಸ ಮಾಡಲಾಗುವುದು ಎಂದರು.
ದೇವಾಲಯದಿಂದ ಸಹಕಾರ
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಮಾತನಾಡಿ, ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ನಗರಸಭೆಯಿಂದ ಕೈಗೊಳ್ಳಲಾದ ವ್ಯವಸ್ಥೆಗಳ ಕುರಿತಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಹಿರಿಯರಾದ ಕಿಟ್ಟಣ್ಣ ಗೌಡ ಮಾತನಾಡಿ, ಬಲ್ನಾ ಡಿನಿಂದ ದೇವರ ಭಂಡಾರ ಬಂದು ಬಪ್ಪಳಿಗೆಯಲ್ಲಿ ಇಳಿಯುವಲ್ಲಿ ರಸ್ತೆಯಲ್ಲಿ ಹೊಂಡಗಳಿವೆ. ಬೀದಿ ದೀಪಗಳನ್ನೂ ಅಳವಡಿಸಬೇಕು. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಮಾತನಾಡಿ, ದೇವರು ಪೇಟೆ ಸವಾರಿ ಹೋಗುವಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮುಖ್ಯ ರಸ್ತೆಯಿಂದ ಬಲ್ನಾ ಡಿಗೆ ಹೋಗುವಲ್ಲಿ ಇರುವ ದೊಡ್ಡ ಗಾತ್ರದ ಹೊಂಡವನ್ನು ಮುಚ್ಚಿಸಬೇಕು ಎಂದರು. ವಿದ್ಯುತ್ ವ್ಯವಸ್ಥೆಯ ಕುರಿತು ಮೆಸ್ಕಾಂ ಅಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗುವುದು. ಜನ ಸೇರುವ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕರಪತ್ರದ ಮೂಲಕ ಸ್ವತ್ಛತೆಯ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಮುಖೇಶ್ ಕೆಮ್ಮಿಂಜೆ, ಜಯಲಕ್ಷ್ಮೀ ಸುರೇಶ್, ಹರೀಶ್ ನಾೖಕ್, ನಗರಸಭಾ ವ್ಯವಸ್ಥಾಪಕ ಚಂದ್ರಕುಮಾರ್, ಶ್ವೇತಾ ಕಿರಣ್, ರಾಮಚಂದ್ರ, ನಗರಸಭಾ ಅಧಿಕಾರಿ ಪುರಂದರ ರೈ, ವ್ಯವಸ್ಥಾಪನ ಸಮಿತಿ ಸದಸ್ಯ ಜಾನು ನಾಯ್ಕ, ಕೊರಗಪ್ಪ ಗೌಡ, ಯು.ಕೆ. ನಾೖಕ್, ನಾಗೇಶ್ ಭಾಗವಹಿಸಿ ಸಲಹೆ -ಸೂಚನೆಗಳನ್ನು ನೀಡಿದರು.
ತಾತ್ಕಾಲಿಕ ಶೌಚಾಲಯ
ಸ್ವಚ್ಛತೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು, ರಥಬೀದಿ, ಜಾತ್ರಾ ಗದ್ದೆಯಲ್ಲಿ ಧೂಳು ಹೆಚ್ಚಾಗದಂತೆ ಸಾಯಂಕಾಲದ ಸಮಯದಲ್ಲಿ ನೀರು ಸಿಂಪಡಿಸುವ ವ್ಯವಸ್ಥೆ ಆಗಬೇಕು. ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಲ್ಲಿ ಡಸ್ಟ್ ಬಿನ್ ಅಳವಡಿಸುವಂತೆ, ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸುವಂತೆ ವಿನಂತಿಸಿದರು. ನಗರಸಭೆಗೆ ದೇವಾಲಯದ ಕಡೆಯಿಂದ ಎಲ್ಲರ ಸಹಕಾರ ನೀಡುವುದಾಗಿ ಎನ್.ಕೆ. ಜಗನ್ನಿವಾಸ್ ರಾವ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.