ಜೇನುನೊಣಗಳು ಊರು ಬಿಟ್ಟಿದ್ದೇಕೆ?
Team Udayavani, Mar 22, 2018, 5:14 PM IST
ಒಂದು ಊರಿನಲ್ಲಿ ಜೇನುನೊಣಗಳು ತಲೆತಲಾಂತರದಿಂದ ನೆಲೆಸಿದ್ದವು. ಅದಕ್ಕೇ ಆ ಊರಿಗೆ ಜೇನೂರು ಎಂಬ ಹೆಸರು ಬಂದಿತ್ತು. ಆ ಊರಿನಲ್ಲಿ ಜೇನುತುಪ್ಪ ಹೇರಳವಾಗಿ ದೊರೆಯುತ್ತಿತ್ತು. ವಾರಕ್ಕೊಮ್ಮೆ ಜರುಗುತ್ತಿದ್ದ ಜೇನಿನ ಸಂತೆಗೆ ಕಡಿಮೆ ಬೆಲೆಗೆ ಜೇನುತುಪ್ಪ ಕೊಳ್ಳಲು ದೂರದೂರಿನಿಂದ ಜನರು ಬರುತ್ತಿದ್ದರು. ಅನೇಕ ಬಾರಿ ಸಂತೆ ಮುಗಿದ ನಂತರ ವ್ಯಾಪಾರಿಗಳು ಅಷ್ಟು ದೊಡ್ಡ ಪ್ರಮಾಣದ ಜೇನನ್ನು ಶೇಖರಿಸಿಡುವುದು ಕಷ್ಟವೆಂದು ಪೋಲು ಮಾಡುತ್ತಿದ್ದರು.
ಇದನ್ನೆಲ್ಲಾ ನೋಡಿ ಜೇನ್ನೊಣಗಳಿಗೆ ಸಿಟ್ಟು ಬಂದಿತು. ತಾವು ಕಷ್ಟಪಟ್ಟು ಶೇಖರಿಸಿದ ಜೇನನ್ನು ಜನರು ಬಳಸುತ್ತಿರುವುದಲ್ಲದೆ, ಪೋಲು ಮಾಡುತ್ತಿದ್ದಾರೆ ಎಂದು ರಾಣಿಜೇನಿಗೆ ದೂರು ನೀಡಿದರು. ರಾಣಿಜೇನು ಯೋಚಿಸಿ ಒಂದು ನಿರ್ಧಾರ ಕೈಗೊಂಡಿತು. “ನಾವು ಊರು ಬಿಟ್ಟು ಸೀದಾ ಪಕ್ಕದ ಕಾಡಿಗೇ ಹೋಗೋಣ! ನಾವು ಇಲ್ಲಿ ಇಲ್ಲದೇ ಇದ್ದಾಗಲೇ ನಮ್ಮ ಬೆಲೆ ಜನರಿಗೆ ತಿಳಿಯುತ್ತೆ’ ಎಂದಿತು ರಾಣಿ ಜೇನು. ಎಲ್ಲಾ ಜೇನ್ನೊಣಗಳು ಒಕ್ಕೊರಳಿನಿಂದ ದನಿಗೂಡಿಸಿದರು.
ಅದರಂತೆ ಎಲ್ಲಾ ಜೇನ್ನೊಣಗಳು ಊರು ಬಿಟ್ಟು ದೂರದ ಕಾಡಿಗೆ ವಲಸೆ ಹೋದವು. ಇತ್ತ ಊರಿನಲ್ಲಿ ಜೇನ್ನೊಣಗಳನ್ನು ಕಾಣದೆ ಜನರು ಆತಂಕಿತರಾದರು. ಹೆಚ್ಚಿನವರ ಮನೆಗಳಲ್ಲಿ ಜೇನುತುಪ್ಪ ಮುಗಿದುಹೋಗಿತ್ತು. ಅಮ್ಮಂದಿರು ಹಲಸಿನಕಾಯಿ ದೋಸೆ ಮಾಡಿ ಮುಂದಿಟ್ಟಾಗ, ಜೇನುತುಪ್ಪವಿಲ್ಲದೆ ದೋಸೆ ತಿನ್ನುವುದಿಲ್ಲವೆಂದು ಮಕ್ಕಳು ಹಠಕಟ್ಟಿ ಕೂತರು. ಊರಿನ ಹಿರಿಯರು ಸಭೆ ಸೇರಿ ಜೇನುನೊಣಗಳನ್ನು ಹೇಗೆ ಮತ್ತೆ ಊರಿಗೆ ವಾಪಸ್ ಕರೆಸುವುದೆಂದು ಚರ್ಚಿಸಿದರು.
ಊರಿನ ಹಿರಿಯರು ಜೇನುನೊಣಗಳ ಮನವೊಲಿಸಿ, ಇನ್ನುಮುಂದೆ ಅಂಥಾ ಯಾವುದೇ ತಪ್ಪಾಗದೆಂದು ಆಶ್ವಾಸನೆ ನೀಡಿದರು. ಡಂಗುರ, ಡೋಲು, ವಾದ್ಯಗಳ ಸಮೇತ ಕಾಡಿನಿಂದ ಜೇನುನೊಣಗಳನ್ನು ಊರಿಗೆ ಮರಳಿ ಕರೆತಂದರು. ಈ ವಿದ್ಯಮಾನದಿಂದ ಆಸೂಯೆ ಪಟ್ಟಿದ್ದು ಮನೆ ನೊಣಗಳು. “ನಮ್ಮನ್ನು ತಿರಸ್ಕಾರ ಭಾವದಿಂದ ಕಂಡು, ಬಾಯಿಗೆ ಬಂದಿದ್ದು ಬಯ್ತಾರೆ. ಇನ್ನು ಮುಂದೆ ನಾವು ಜನರ ದಬ್ಟಾಳಿಕೆ, ನಿರ್ಲಕ್ಷ್ಯವನ್ನು ಸಹಿಸಬಾರದು’ ಎಂದಿತು ಗುಂಡ ನೊಣ.
ಎಲ್ಲರೂ ಗುಂಡ ನೊಣದ ಮಾತಿಗೆ ಸಹಮತ ವ್ಯಕ್ತಪಡಿಸಿದವು. ಈ ಪ್ರಕಾರವಾಗಿ ಎಲ್ಲಾ ನೊಣಗಳು ಜೇನುನೊಣಗಳಂತೆಯೇ ಜನರಿಗೆ ಪಾಠ ಕಲಿಸಲು ಊರು ಬಿಟ್ಟುಹೋಗಲು ತೀರ್ಮಾನಿಸಿದವು. ತಮ್ಮನ್ನೂ ಮೆರವಣಿಗೆ ಮೂಲಕ ಊರಿಗೆ ಸ್ವಾಗತಿಸಬೇಕು ಎನ್ನುವುದು ನೊಣಗಳ ಬೇಡಿಕೆಯಾಗಿತ್ತು. ಇತ್ತ ಊರಿನವರು ಜೇನುನೊಣಗಳನ್ನು ವಾಪಸು ಕರೆತಂದ ಖುಷಿಯಲ್ಲಿದ್ದರು. ಅದೇ ಸಮಯಕ್ಕೆ ಊರಿನಿಂದ ನೊಣಗಳು ಮಾಯವಾಗಿದ್ದನ್ನು ಗಮನಿಸಿದರು.
ಮಧ್ಯಾಹ್ನ ನೊಣಗಳ ಕಾಟದಿಂದ ನಿದ್ದೆ ಮಾಡಲಾಗದೆ ಕಷ್ಟ ಪಡುತ್ತಿದ್ದ ಅಜ್ಜಿಯರು ಹಾಯಾಗಿ ನಿದ್ದೆ ಮಾಡಿದರು. ಅಡುಗೆ ಮನೆಗಳಲ್ಲಿ ಅಮ್ಮಂದಿರು ನಿಶ್ಚಿಂತೆಯಿಂದ ಅಡುಗೆ ಮಾಡಿದರು. ಜೇನುನೊಣಗಳು ಊರಿಗೆ ಕಾಲಿಟ್ಟ ಘಳಿಗೆ ಚೆನ್ನಾಗಿದೆಯೆಂದು ಎಲ್ಲರೂ ತಿಳಿದರು. ಅತ್ತ ಮೆರವಣಿಗೆಯ ಕನಸು ಕಾಣುತ್ತಿದ್ದ ನೊಣಗಳಿಗೆ ಮುಖಭಂಗವಾಗಿತ್ತು. ಅವು ಊರಿಗೆ ಮರಳಿದವು. ಮತ್ತೆಂದೂ ನೊಣಗಳು ಜನರಿಗೆ ತೊಂದರೆ ನೀಡಲಿಲ್ಲ.
* ಶ್ರುತಿ ಶರ್ಮಾ, ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.