ಕಲ್ಲಾನೆ-ಕಾಟೆ ದರವಾಜ್ ನವೀಕರಣಕ್ಕೆ ಚಿಂತನೆ
Team Udayavani, Mar 23, 2018, 3:51 PM IST
ರಾಯಚೂರು: ನಗರದ ಐತಿಹಾಸಿಕ ಕುರುಹುಗಳಾದ ಕಲ್ಲಾನೆ, ಕಾಟೆ ದರವಾಜ್‌ಗಳ ದುರಸ್ತಿ ಮತ್ತು ನವೀಕರಣಕ್ಕೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಮುಂದಾಗಿದ್ದು, ಸುಮಾರು 57 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. 15 ಲಕ್ಷ ರೂ. ವೆಚ್ಚದಲ್ಲಿ ಕಲ್ಲಾನೆ ಹಾಗೂ 52 ಲಕ್ಷ ರೂ. ವೆಚ್ಚದಲ್ಲಿ ಕಾಟೆ ದರವಾಜ್‌ವನ್ನು ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಾಚ್ಯವಸ್ತು ಮತ್ತು
ಪುರಾತತ್ವ ಇಲಾಖೆಯಿಂದಲೇ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ರಾಯಚೂರನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಲ್ಲಿ ಕಲ್ಲಾನೆ ಕೂಡ ಒಂದು. ಸಮೀಪದ ಮಲಯಾಬಾದ್‌ನಲ್ಲಿರುವ ಸ್ಥಳದಲ್ಲೂ ಸಾಕಷ್ಟು ಕಲ್ಲಾನೆಗಳ ಅವಶೇಷಗಳಿವೆ. ಆದರೆ, ನಗರದ ಮಧ್ಯಭಾಗದಲ್ಲಿನ ಕಲ್ಲಾನೆ ಮಾತ್ರ ಸಂರಕ್ಷಿಸಲ್ಪಟ್ಟಿದೆ.
ಈ ಕಲ್ಲಾನೆ ಪಕ್ಕದಲ್ಲೇ ಬ್ರಿಟಿಷರು ಮೂರು ಕಂದಿಲುಗಳುಳ್ಳ ಕಂಬ ನಿರ್ಮಿಸುವ ಮೂಲಕ ಈ ಸ್ಥಳವನ್ನು ಸುಂದರ ವೃತ್ತವನ್ನಾಗಿ ರೂಪಿಸಿದ್ದರು. ಅದು ತೀನ್ ಕಂದಿಲ್ ವೃತ್ತ ಎಂದೂ ಪ್ರಸಿದ್ಧಿ ಹೊಂದಿದೆ. ಆದರೆ, ಕಾಲಕ್ರಮೇಣ ಸುತ್ತಲೂ ಕಟ್ಟಡಗಳು ನಿರ್ಮಾಣಗೊಂಡು ಕಲ್ಲಾನೆಯೇ ಕಾಣದಂತಾಗಿದೆ. ಸುತ್ತಲೂ ಚರಂಡಿ ನೀರು ಸಂಗ್ರಹಗೊಂಡು ಅದರ ಅಂದಗೆಟ್ಟಿದೆ.
ದುರಸ್ತಿಗೆ ಮುಂದಾಗಿತ್ತು ನಗರಸಭೆ: ಕಲ್ಲಾನೆ ಸುತ್ತಲಿನ ಪ್ರದೇಶದ ದುರಸ್ತಿಗೆಂದು ನಗರಸಭೆ 15 ಲಕ್ಷ ರೂ. ಮೀಸಲಿಟ್ಟಿದ್ದಾಗಿ ತಿಳಿಸಿತ್ತು. ಆದರೆ , ಈ ವಿಚಾರ ಅರಿತ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ದುರಸ್ತಿ ಮಾಡುವುದಾದರೆ ಕ್ರಮಬದ್ಧತೆ ಅನುಸರಿಸಬೇಕು. ಹೀಗಾಗಿ ನಾವೇ ಮಾಡುತ್ತೇವೆ ಎಂದು ತಿಳಿಸಿದೆ. ಆದರೆ, ನಗರಸಭೆ ಮೀಸಲಿಟ್ಟ 15 ಲಕ್ಷ ರೂ. ಅನುದಾನ ಇಲಾಖೆಗೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇಲಾಖೆಯಿಂದಲೇ 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲು ಪ್ರಸ್ತಾವನೆ
ಸಲ್ಲಿಸಲಾಗುತ್ತಿದೆ.
ಕಾಟೆ ದರವಾಜ್ ದುರಸ್ತಿ: ತನ್ವೀರ್ ಸೇಠ್… ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ನಗರದ ಕಾಟೆ ದರವಾಜ್ ಅಭಿವೃದ್ಧಿಗೆ ಮಾಜಿ ಶಾಸಕ ಸೈಯ್ಯದ್ ಯಾಸೀನ್ ಸಾಕಷ್ಟು ಒತ್ತಾಯ ಮಾಡಿದ್ದರು. ಕಾಟೆ ದರವಾಜ್ ಐತಿಹಾಸಿಕ ತಾಣವಾಗಿದ್ದು, ಅವಸಾನ ಸ್ಥಿತಿಯಲ್ಲಿದೆ. ಅಲ್ಲದೇ, ಈ ಸುಂದರ ಕಟ್ಟಡ ಸಾಕಷ್ಟು ಒತ್ತುವರಿಗೆ ಒಳಪಡುತ್ತಿದೆ. ಅದರ ಮೂಲ ಅಂದವನ್ನು ಉಳಿಸುವ ಕೆಲಸವಾಗಬೇಕು. ಅದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ಆದರೆ, ಆಗ ಅದು ಸಾಕಾರಗೊಂಡಿಲ್ಲ. ಪ್ರಾಚ್ಯವಸ್ತು ಇಲಾಖೆ ಈಗ ಕಲ್ಲಾನೆ ಜತೆಗೆ ಕಾಟೆ ದರವಾಜ್ ದುರಸ್ತಿಗೂ ಮುಂದಾಗಿದ್ದು, 52 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ದುರಸ್ತಿಗೂ ನಿಯಮಗಳುಂಟು: ಐತಿಹಾಸಿಕ ಸ್ಥಳಗಳ ದುರಸ್ತಿಗೆ, ಮರು ನಿರ್ಮಾಣಕ್ಕೆ ತನ್ನದೇ ಆದ ನಿಯಮಗಳಿವೆ. ಆದರೆ, ಈಚೆಗೆ ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಟಿಪ್ಪು ಸುಲ್ತಾನ್ ಉದ್ಯಾನವನ ಬಳಿಯ ಕೋಟೆ ದುರಸ್ತಿಗೆ ಜಿಲ್ಲಾಧಿಕಾರಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದರು. ಆದರೆ, ಇದು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಗಮನಕ್ಕೆ ಇರಲಿಲ್ಲ. ಗುತ್ತಿಗೆ ಪಡೆದವರು ಸಿಮೆಂಟ್ ಬಳಸಿ ಮನಬಂದಂತೆ ಕಟ್ಟಡ ನಿರ್ಮಿಸಿದ್ದಾರೆ. ತಕ್ಷಣಕ್ಕೆ ಮಧ್ಯ ಪ್ರವೇಶಿಸಿದ ಇಲಾಖೆ ಕಾಮಗಾರಿ ನಿಲ್ಲಿಸಿದೆ. ಈಗ
ಟೆಂಡರ್ ರದ್ದುಗೊಳಿಸಿದ್ದು, ಮಾಡಿದ ಕೆಲಸವೆಲ್ಲ ವ್ಯರ್ಥವಾಗಲಿದೆ. ಅಲ್ಲದೇ, ಕೊಟ್ಯಂತರ ಮೊತ್ತದ ಕೆಲಸಕ್ಕೆ ಗುತ್ತಿಗೆದಾರರು ಕೇವಲ 100 ಮೀಟರ್ ಗೆ ಕ್ರಿಯಾಯೋಜನೆ ರೂಪಿಸುವ ಮೂಲಕ ಜಿಲ್ಲಾಡಳಿತಕ್ಕೆ ವಂಚನೆ ಮಾಡಲು ಮುಂದಾಗಿದ್ದರು ಎಂದು ದೂರುತ್ತಾರೆ ಇಲಾಖೆ ಅಧಿಕಾರಿಗಳು. ನಗರದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದಾಗಿರುವ ಪುರಾತತ್ವ ಇಲಾಖೆ ಕಾರ್ಯ ಪ್ರಶಂಸನೀಯ. ಆದರೆ, ಅದೇ ಸ್ಮಾರಕಗಳು ಹಾಳಾಗುತ್ತಿದ್ದರೂ ಕ್ರಮ ಕೈಗೊಳ್ಳದ ನಗರಾಡಳಿತ, ಜಿಲ್ಲಾಡಳಿತದ ವಿರುದ್ಧ ಜನ ಬೇಸರ
ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸ್ಮಾರಕಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕಿದೆ.
ನಗರದಲ್ಲಿ ಐದು ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕಲ್ಲಾನೆ, ಕಾಟೆ ದರವಾಜ್ ಕೂಡ ಸೇರಿವೆ. ಕಲ್ಲಾನೆಯನ್ನು ಮೇಲಕ್ಕೆತ್ತಿ ಸುತ್ತಲೂ ಫೆನ್ಸಿಂಗ್ ಮಾಡಲು ನಿರ್ಧರಿಸಿದ್ದು, 15 ಲಕ್ಷ ರೂ. ಯೋಜನೆ
ರೂಪಿಸಲಾಗಿದೆ. ಕಾಟೆ ದರವಾಜ್ ದುರಸ್ತಿಗೆ 52 ಲಕ್ಷ ರೂ. ಯೋಜನೆ ರೂಪಿಸಿದ್ದು, ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಶೇಷೇಶ್ವರ್, ಪುರಾತತ್ವ ಇಲಾಖೆ ಮೇಲ್ವಿಚಾರಕ.
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.