ಹೈಟೆಕ್ ಆದ ಅಡ್ಕತ್ತಬೈಲು ಸರಕಾರಿ ಶಾಲೆ
Team Udayavani, Mar 24, 2018, 9:00 AM IST
ಕಾಸರಗೋಡು: ವಿಶ್ವವೇ ತಂತ್ರಜ್ಞಾನ ಬಳಕೆಯೊಂದಿಗೆ ಪ್ರತಿದಿನ ಸ್ಮಾರ್ಟ್ ಆಗುತ್ತಿರುವಾಗ ಅದರೊಂದಿಗೆ ಮಕ್ಕಳನ್ನು ಅಪ್‌ಡೇಟ್ ಮಾಡಿಸುವ ಸಲುವಾಗಿ ಕೇರಳದಲ್ಲಿ ಸಾರ್ವಜನಿಕ ಶಿಕ್ಷಣ ಕೇಂದ್ರಗಳನ್ನು ಹೈಟೆಕ್ ಮಾಡುವ ಬೃಹತ್ ಯೋಜನೆಯ ಅಂಗವಾಗಿ ಕಾಸರಗೋಡು ನಗರದ ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯ 32 ತರಗತಿ ಕೊಠಡಿಗಳನ್ನು 32 ದಿನಗಳಲ್ಲಿ ಹೈಟೆಕ್ ತರಗತಿಗಳನ್ನಾಗಿ ಮಾಡಲಾಗಿದೆ. ಅಧ್ಯಾಪಕರ, ಹೆತ್ತವರ ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ನಗರದ ಅಡ್ಕತ್ತಬೈಲು ಸರಕಾರಿ ಶಾಲೆಯ 32 ತರಗತಿ ಕೊಠಡಿಗಳನ್ನು ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಪ್ರಯುಕ್ತ ಸಂಘ ಸಂಸ್ಥೆಗಳ, ಸಾರ್ವಜನಿಕರ ಸಹಕಾರವನ್ನು ಪಡೆದುಕೊಂಡು ಹೈಟೆಕ್‌ಗೊಳಿಸಲಾಗಿದೆ.
ಶಾಲೆಯ ಪ್ರತಿಯೊಬ್ಬವಿದ್ಯಾರ್ಥಿಗೂ ಪಠ್ಯಪುಸ್ತಕಗಳ ಅರಿವು ಮಾತ್ರವಲ್ಲದೆ ಹೆಚ್ಚಿನ ಜ್ಞಾನ ಪಡೆಯುವುದಕ್ಕಾಗಿ ಮಕ್ಕಳನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ತರಗತಿ ಕೊಠಡಿಗಳನ್ನು ಹೈಟೆಕ್‌ಗೊಳಿಸುವ ಬೃಹತ್ ಯೋಜನೆಯನ್ನು ಆರಂಭಿಸಲಾಗಿದೆ. ಶೈಕ್ಷಣಿಕ ವಲಯದಲ್ಲಿ ಮತ್ತೂಂದು ಮೈಲುಗಲ್ಲಾಗುವ ಮೂಲಕ ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಸಂದರ್ಭದಲ್ಲಿ ಸಂಪೂರ್ಣ ಹೈಟೆಕ್ ಗೊಂಡ ಶಾಲೆಯಾಗಿ ಮಾರ್ಪಾಡಾಗಲಿದೆ.
ಪ್ರತಿ ತರಗತಿ ಕೊಠಡಿಯಲ್ಲಿ ಹೈಟೆಕ್ ಬಾಕ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ. ಎಲ್‌ಸಿಡಿ ಪ್ರಾಜೆಕ್ಟರ್, ಹೋಮ್ ಥಿಯೇಟರ್, ವೈ- ಫೈ ಸಂಪರ್ಕ, ಇಲೆಕ್ಟ್ರಿಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತರಗತಿಯ ಗೋಡೆಯಲ್ಲಿ ಆಟೋಮ್ಯಾಟಿಕ್ ಸ್ಕ್ರೀನ್ ಅಳವಡಿಸಲಾಗಿದೆ. ಶಿಕ್ಷಕರಿಗೆ ಸುಲಭವಾಗಿ ಉಪಯೋಗಿಸುವ ವಿಧಾನದಲ್ಲಿ ಬಾಕ್ಸ್ ಅಳವಡಿಸಲಾಗಿದೆ. ಲ್ಯಾಪ್‌ಟಾಪ್ ಸಹಿತ ಒಂದು ತರಗತಿ ಕೊಠಡಿಯಲ್ಲಿನ ಹೈಟೆಕ್ ಬಾಕ್ಸ್‌ಗಾಗಿ 75,000ರೂ. ವೆಚ್ಚ ಮಾಡಲಾಗಿದೆ. ಹೈಟೆಕ್ ಬಾಕ್ಸ್‌ಗೆ ವ್ಹೀಲ್‌ಗಳನ್ನು ಅಳವಡಿಸಲಾಗಿದ್ದು, ಸುಲಭವಾಗಿ ಅತ್ತಿತ್ತ ಕೊಂಡೊಯ್ಯಲು ಸಹಾಯಕವಾಗಲಿದೆ. ಈ ಬಾಕ್ಸ್‌ನೊಳಗೆ ಲ್ಯಾಪ್‌ಟಾಪ್, ಎಲ್‌ಸಿಡಿ ಪ್ರಾಜೆಕ್ಟರ್, ಹೋಮ್ ಥಿಯೇಟರ್, ಸೌಂಡ್ ಬಾಕ್ಸ್‌ಗಳನ್ನು ಜೋಡಿಸಲಾಗಿದೆ.
ಇದಕ್ಕೆ ಬೇಕಾಗಿರುವ ಲ್ಯಾಪ್‌ಟಾಪ್ ಗಳನ್ನು ಶಿಕ್ಷಕರು ಖರೀದಿಸಿದರೆ ಉಳಿದ ಮೊತ್ತವನ್ನು ಹಳೆ ವಿದ್ಯಾರ್ಥಿಗಳು, ಊರವರ ಪ್ರಾಯೋಜಕತ್ವದಲ್ಲಿ ಸಂಗ್ರಹಿಸಲಾಗಿದೆ. ಈಗಾಗಲೇ ಹೈಟೆಕ್ ವ್ಯವಸ್ಥೆಯೊಂದಿಗೆ ಪ್ರಾಯೋಗಿಕ ತರಗತಿಗಳು ಆರಂಭಗೊಂಡಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ಹೈಟೆಕ್ ತರಗತಿಯೊಂದಿಗೆ ಶಾಲೆ ಪ್ರಾರಂಭಿಸುವ ಯೋಜನೆಯನ್ನು ಹೊಂದಲಾಗಿದೆ. ಹೈಟೆಕ್ ಗೊಂಡ ಕೊಠಡಿಯ ಪ್ರಾಯೋಗಿಕ ತರಗತಿಯಲ್ಲಿ ವಿದ್ಯಾರ್ಥಿಗಳು ಬಹಳ ಕೌತುಕದಿಂದ ಭಾಗವಹಿಸುತ್ತಿದ್ದಾರೆ.
ಮಕ್ಕಳ ಸಾಧನೆಗೆ ಹೈಟೆಕ್ ಪೂರಕ
ಹೊಸ ತಂತ್ರಜ್ಞಾನದ ಅರಿವಿನೊಂದಿಗೆ ಅದರ ಬಳಕೆಯು ಮಕ್ಕಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕಾಸರಗೋಡು ನಗರದ ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಿಂದ ಏಳನೇ ತರಗತಿವರೆಗೆ ಕನ್ನಡ, ಮಲೆಯಾಳ, ಇಂಗ್ಲಿಷ್ ಮಾಧ್ಯಮಗಳಲ್ಲಿ 816 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕ್ರೀಡೆ ಸಹಿತ ಪಠ್ಯೇತರ ವಿಷಯಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಇನ್ನು ಶಾಲೆಯು ಹೈಟೆಕ್‌ಗೊಳ್ಳುವ ಮೂಲಕ ಇನ್ನಷ್ಟು ಪ್ರಸಿದ್ಧಿ ದೊರಕಲಿದೆ. ಆದ್ದರಿಂದ ಶಾಲೆಯು ಹೈಟೆಕ್‌ಗೊಂಡಿರುವುದು ಮಕ್ಕಳ ಸಾಧನೆಗೆ ಪೂರಕವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.