ಬಪ್ಪನಾಡು: ಬ್ರಹ್ಮಕುಂಭ ಕಲಶಾಭಿಷೇಕ ಪುಣ್ಯೋತ್ಸವ
Team Udayavani, Mar 24, 2018, 8:45 AM IST
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ನವೀಕರಣ ಮತ್ತು ಬ್ರಹ್ಮಕುಂಭ ಕಲಶಾಭಿಷೇಕ ಪುಣ್ಯೋತ್ಸವವು ಶುಕ್ರವಾರ ಮುಂಜಾನೆ ನೆರವೇರಿತು. ಸುಮಾರು 880 ವರ್ಷಗಳ ಇತಿಹಾಸವಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 2006ರಲ್ಲಿ ಸಂಪೂರ್ಣ ನವೀಕರಣಗೊಂಡಿದ್ದು, ಧಾರ್ಮಿಕ ನಿಯಮ ಪ್ರಕಾರ ಎರಡನೇ ಬಾರಿಗೆ ಬ್ರಹ್ಮಕುಂಭ ಕಲಶಾಭಿಷೇಕ ನಡೆಯುತ್ತಿದೆ. ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಬ್ರಹ್ಮಶ್ರೀ ಪುತ್ತೂರು ಮಧುಸೂದನ ತಂತ್ರಿ ಅವರ ಉಪಸ್ಥಿತಿಯಲ್ಲಿ ಆಗಮೋಕ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನೆರವೇರಿತು.
ಮೂಲ್ಕಿ ಸೀಮೆಯ 32 ಗ್ರಾಮ ವ್ಯಾಪ್ತಿಯಲ್ಲದೆ ದ.ಕ., ಉಡುಪಿ, ಬೆಂಗಳೂರು, ಮುಂಬಯಿ ಮತ್ತು ಪರದೇಶಗಳಿಂದ ಆಗಮಿಸಿದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಹಗಲು ರಥೋತ್ಸವ ನಡೆದ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು. 60,000ಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ನೇತೃತ್ವ ವಹಿಸಿದ್ದರು.
1 ಲಕ್ಷಕ್ಕೂ ಅಧಿಕ ಚೆಂಡು ಮಲ್ಲಿಗೆ
ಕ್ಷೇತ್ರದಲ್ಲಿ ವಿಶೇಷವಾಗಿ ಶುಕ್ರವಾರ ರಾತ್ರಿ ನಡೆಯುವ ಶಯನೋತ್ಸವಕ್ಕೆ 1 ಲಕ್ಷಕ್ಕೂ ಹೆಚ್ಚು ಚೆಂಡು ಮಲ್ಲಿಗೆ ಹೂವನ್ನು ಭಕ್ತರು ಸೇವಾ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ. ಶನಿವಾರ ಮುಂಜಾನೆ ಕವಾಟೋದ್ಘಾಟನೆಯೊಂದಿಗೆ ಶಯನ ಹೂವಿನ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಬ್ರಹ್ಮ
ಕಲಶ ಉತ್ಸವದ ಮಹಾರಥೋತ್ಸವವು ಸಸಿಹಿತ್ಲು ಶ್ರೀ ಭಗವತಿಯರ ಆಗಮನದೊಂದಿಗೆ ರಾತ್ರಿ ನಡೆಯಲಿದೆ. ವಾರ್ಷಿಕ ಜಾತ್ರೆ ಎ. 6ರಂದು ಜರಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.