ಕಾಲಮಿತಿ ಇರಲಿ, ಗುಣಮಟ್ಟ ಹೆಚ್ಚಲಿ: ಕಂದಾವರ ರಘುರಾಮ ಶೆಟ್ಟಿ
Team Udayavani, Mar 24, 2018, 7:00 AM IST
ಕುಂದಾಪುರ: ನಮ್ಮ ಹೆಮ್ಮೆಯ ಯಕ್ಷಗಾನವು ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು. ಸಮರ್ಥ ಭಾಗವತರು, ಕಲಾವಿದರು ಸೃಷ್ಟಿಯಾಗಿ ಪ್ರದರ್ಶನದ ಗುಣಮಟ್ಟ ಹೆಚ್ಚಬೇಕು. ಕಾಲಮಿತಿಯ ಪ್ರದರ್ಶನ ಜಾರಿಗೆ ಬರಬೇಕು. ಯಕ್ಷಗಾನಕ್ಕಾಗಿ ಪ್ರತ್ಯೇಕ ಅಕಾಡೆಮಿ ರಚನೆಯಾಗಿ ಸರಕಾರದ ಅನುದಾನ ಹೆಚ್ಚಳವಾಗಬೇಕು ಎಂದು ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಹಾಗೂ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಆರಂಭವಾದ 13ನೇ ಅಖೀಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನ ಮಾ. 25ರವರೆಗೆ ನಡೆಯಲಿದೆ.
ಶುದ್ಧ ಶೈಲಿ ಬರಲಿ
ಯಕ್ಷಗಾನದಲ್ಲಿ ಪರಂಪರೆಯಾಗಿ ಬಂದಿರುವ ಸಂಪ್ರದಾಯಬದ್ಧ ಶೈಲಿಯಲ್ಲಿಯೇ ಹಾಡಬೇಕು. ಸಂಗೀತ ಶಾಸ್ತ್ರ ಕಲಿತರೂ ಅದನ್ನು ಭಾಗವತಿಕೆಯಲ್ಲಿ ತುರುಕಬಾರದು. ಯಕ್ಷಗಾನದ ಹಾಡುಗಳಿಗೆ ಅದರದ್ದೇ ಶೈಲಿಯಿದೆ; ಅತಿ ಆಲಾಪನೆ ಸಲ್ಲದು, ಅತಿ ಪುನರಾವರ್ತನೆಯೂ ಸರಿಯಲ್ಲ. ಸಿಳ್ಳು- ಚಪ್ಪಾಳೆಗಾಗಿ ಹಾಡಿದರೆ ಕಲಾಧರ್ಮ ಮರೆಯಾಗುತ್ತದೆ. ವೇಷಧಾರಿ ನಿವೃತ್ತಿಯವರೆಗೂ ಕಲಾ ಸಾಮರ್ಥ್ಯವನ್ನು ಉಳಿಸಿಕೊಂಡು ವೃತ್ತಿ ಧರ್ಮವನ್ನು ಕಾಪಾಡಬೇಕು. ಕಥಾಹಂದರ ಅರಿತಿದ್ದು, ಭಾಷಾ ಶೈಲಿ ಶುದ್ಧಿವಾಗಿರಬೇಕು. ಕಲಾವಿದರೆಲ್ಲ ಪಾತ್ರಗಳ ಔಚಿತ್ಯಕ್ಕನುಗುಣವಾಗಿ ಪ್ರದರ್ಶನ ನೀಡಬೇಕು ಎಂದರು.
ಪ್ರೇಕ್ಷಕರ ಗುಣಧರ್ಮ
ಪ್ರೇಕ್ಷಕರು ಕೀಳು ಅಭಿರುಚಿ ಹೊಂದಿರದೆ ಉತ್ತಮ ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಂಗದಲ್ಲಿ ಅಸಂಬದ್ಧ, ಅಶ್ಲೀಲ, ಅತಿರೇಕದ ವರ್ತನೆ, ಅಭಿನಯವನ್ನು ಸಿಳ್ಳು ಚಪ್ಪಾಳೆಯಿಂದ ಪ್ರೋತ್ಸಾಹಿಸಬಾರದು. ಕಲಾವಿದರಿಗೆ ಉತ್ತಮ ಸಂಭಾವನೆ, ಪಿಂಚಣಿ, ಜೀವವಿಮೆ ದೊರೆಯಬೇಕು ಎಂದು ರಘುರಾಮ ಶೆಟ್ಟಿ ಹೇಳಿದರು.
ಕಾಲಮಿತಿಗೆ ಆದ್ಯತೆ
ಈಗಾಗಲೇ ಧರ್ಮಸ್ಥಳ, ಇಡಗುಂಜಿ ಮೇಳಗಳು ಕಾಲಮಿತಿಯ ಪ್ರದರ್ಶನ ಅಳವಡಿಸಿಕೊಂಡು ಯಶಸ್ಸು ಕಂಡಿದ್ದು, ಇದನ್ನು ಎಲ್ಲ ಮೇಳಗಳಲ್ಲೂ ಅಳವಡಿಸಿದಲ್ಲಿ ಕಲಾವಿದರಿಗೆ ವಿಶ್ರಾಂತಿ ದೊರೆತು ಉತ್ತಮ ನಿರ್ವಹಣೆ ನಿರೀಕ್ಷಿಸಬಹುದು ಎಂದರು.
ಅವಿವೇಕಿಗಳಾಗಬಾರದು: ಸಾಣೆಹಳ್ಳಿ ಶ್ರೀ
ಸಮ್ಮೇಳನವನ್ನು ಉದ್ಘಾಟಿಸಿದ ಚಿತ್ರದುರ್ಗದ ಸಾಣೆಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಓದು ನಮ್ಮನ್ನು ಅವಿವೇಕಿಗಳಾಗಿ, ಭ್ರಷ್ಟರನ್ನಾಗಿ, ದುಷ್ಟರನ್ನಾಗಿ ಮಾಡುವ ಸಾಧ್ಯತೆಯಿದೆ. ಆದರೆ ನಮಗಿರುವ ಸಾಂಸ್ಕೃತಿಕ ಒಲವಿನಿಂದ ನಾವು ಸುಸಂಸ್ಕೃತರಾಗಲು ಸಾಧ್ಯ, ಅದು ಸೌಹಾರ್ದ ಮೂಡಿಸುತ್ತದೆ. ಜನಪದವು ಮಾಹಿತಿಯ ಕಣಜವಾಗಿರುತ್ತದೆ. ಮಾನವೀಯತೆಯನ್ನು ಮೈಗೂಡಿಸಿ ಅಹಂಕಾರ ಕಳೆದು ವಿನಯ ಬೆಳೆಸಿಕೊಳ್ಳಲು ಸಾಂಸ್ಕೃತಿಕ ರಸಗ್ರಹಣ ಕಾರಣವಾಗುತ್ತದೆ ಮತ್ತು ಕಲಾವಿದರು ದುಶ್ಚಟಮುಕ್ತರಾಗಬೇಕು ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಅಧ್ಯಕ್ಷ ಡಾ| ಎಚ್. ಶಾಂತಾರಾಮ್ ಮಾತನಾಡಿ, ಪಠ್ಯಪುಸ್ತಕದ ಓದು ಶಿಕ್ಷಣದ ಒಂದು ಅಂಗ ಮಾತ್ರ. ಕಲೆಯನ್ನು ಅರಿತು ಉಳಿಸುವ ಜವಾಬ್ದಾರಿ ಯುವಜನರ ಮೇಲಿರುವ ಕಾರಣ ಪುರಾಣ, ಇತಿಹಾಸದ ಅರಿವು ಮೂಡಿಸುವ ಕಲಾ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್. ಪಂಜಾಜೆ, ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಎ.ಎಸ್.ಎನ್. ಹೆಬ್ಟಾರ್, ಪ್ರಧಾನ ಕಾರ್ಯದರ್ಶಿ ರಮೇಶ್ ಚಿಂಬಾಲ್ಕರ್ ಉಪಸ್ಥಿತರಿದ್ದರು. ದಿವಾಕರ ಡೋಂಗ್ರೆ ಆಶಯ ಭಾಷಣ ಮಾಡಿದರು. ಕಾಲೇಜಿನ ಪ್ರಾಚಾರ್ಯ ಡಾ| ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿ, ಅರುಣ್ ಕುಮಾರ್ ನಿರ್ವಹಿಸಿ, ಯು.ಎಸ್. ಶೆಣೈ ವಂದಿಸಿದರು.
ಕಥೆಗಾರ ಪ್ರಸಂಗಕರ್ತನಲ್ಲ
ಈಚಿನ ದಿನಗಳಲ್ಲಿ ತಾನು ಕಥೆಯನ್ನಷ್ಟೇ ಬರೆದು, ಇನ್ಯಾರದೋ ಬಳಿ ಪದ್ಯ ಬರೆಯಿಸಿಕೊಂಡು ಪ್ರಸಂಗಕರ್ತ ಎಂದು ಹೆಸರು ಹಾಕಿಸಿಕೊಳ್ಳುವ ಪರಿಪಾಠ ಆರಂಭವಾಗಿದೆ. ಇದು ಸರಿಯಲ್ಲ, ಛಂದೋಬದ್ಧವಾಗಿ ಯಕ್ಷಗಾನ ಪದ್ಯ ಬರೆಯಬಲ್ಲವನೇ ನಿಜವಾದ ಪ್ರಸಂಗಕರ್ತ.
– ಕಂದಾವರ ರಘುರಾಮ ಶೆಟ್ಟಿ, ಸಮ್ಮೇಳನಾಧ್ಯಕ್ಷ
ಸಮ್ಮೇಳನದಲ್ಲಿ ಗೋಷ್ಠಿಗಳಲ್ಲದೆ ಅನಂತರ ಸಣ್ಣಾಟ, ದೊಡ್ಡಾಟ, ದೀವಟಿಗೆ ಬೆಳಕು- ಪುಂಗಿಯ ಶ್ರುತಿಯಲ್ಲಿ ಯಕ್ಷಗಾನ ಬಯಲಾಟ ಪೂರ್ವರಂಗ, ತೊಗಲು ಗೊಂಬೆಯಾಟ, ಬಡಗು ಮತ್ತು ತೆಂಕುತಿಟ್ಟು ಯಕ್ಷಗಾನ, ತಾಳಮದ್ದಳೆ, ಶ್ರೀಕೃಷ್ಣ ಪಾರಿಜಾತ, ಮೂಡಲಪಾಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.