ಕಾಂಗ್ರೆಸ್ ಬಲವರ್ಧನೆಯ ಪ್ರತೀಕ: ಸಚಿವ ರೈ
Team Udayavani, Mar 25, 2018, 6:00 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ. 20ರಂದು ಜರಗಿದ ಜನಾಶೀರ್ವಾದ ಯಾತ್ರೆಗೆ ವ್ಯಕ್ತವಾಗಿರುವ ಭಾರೀ ಜನಬೆಂಬಲವು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಶಕ್ತಿ ಕ್ರೋಡೀಕರಣದ ಪ್ರದರ್ಶನ ಎಂದು ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾತ್ಯತೀತ ಶಕ್ತಿಗಳು ಬಲಗೊಳ್ಳುತ್ತಿವೆ ಎಂಬುದಕ್ಕೆ ರಾಹುಲ್ ಗಾಂಧಿ ಕಾರ್ಯಕ್ರಮ ಉದಾಹರಣೆಯಾಗಿದೆ. ಜನಾಶೀರ್ವಾದ ಯಾತ್ರೆಯ ನಿರೀಕ್ಷೆಗೂ ಮೀರಿದ ಯಶಸ್ಸು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಯ ಪ್ರದರ್ಶನ ಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಯ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮನೆಮನೆ ಭೇಟಿ, ಬೂತ್ ಸಮಿತಿ ರಚನೆ ಸೇರಿದಂತೆ ಹಮ್ಮಿಕೊಂಡಿರುವ ಅನೇಕ ಕ್ರಮಗಳು ಕಾಂಗ್ರೆಸ್ ನೆಲೆಯನ್ನು ಭದ್ರಪಡಿಸಿವೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿರುವುದು ಗೋಚರಿಸುತ್ತಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳು ಮತೀಯ ಭಾವನೆಗಳನ್ನು ಕೆರಳಿಸುತ್ತಾ ಶಾಂತಿಯನ್ನು ಕದಡಿ ಭೀತಿಯ ವಾತಾವರಣವನ್ನು ಸೃಷ್ಟಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ಜಾತೀಯ, ಮತೀಯ ಶಕ್ತಿಗಳ ವಿರುದ್ಧ ಶಾಂತಿಯುತ ಹೋರಾಟವನ್ನು ಮಾಡುತ್ತಾ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದವನ್ನು ಭದ್ರಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಜನಾರ್ದನ ಪೂಜಾರಿಯವರಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಹೊಣೆಗಾರಿಕೆಯನ್ನು ವಹಿಸಿಕೊಡಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ, ರಾಹುಲ್ ಗಾಂಧಿಯವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಹೋದಾಗ ಅಲ್ಲಿ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ್ದಾರೆ. ಪಕ್ಷಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ವರಿಷ್ಠ ಮಂಡಳಿ ಕೈಗೊಳ್ಳುತ್ತದೆ ಮತ್ತು ಅದಕ್ಕೆ ನಾವೆಲ್ಲರೂ ಬದ್ಧರಾಗುತ್ತೇವೆ ಎಂದರು. ರಾಹುಲ್ ಗಾಂಧಿಯವರು ಇನ್ನೊಮ್ಮೆ ದ. ಕನ್ನಡ ಜಿಲ್ಲೆಗೆ ಬಂದು ಬಾಕಿಯುಳಿದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ ಎಂದವರು ವಿವರಿಸಿದರು.
ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯ ಭಾರೀ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಜಿಲ್ಲಾ ಕಾಂಗ್ರೆಸ್ ಕೃತಜ್ಞತೆಗಳನ್ನು ಅರ್ಪಿಸುತ್ತದೆ ಎಂದು ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು. ಮೇಯರ್ ಭಾಸ್ಕರ್ ಕೆ., ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಬಿ. ಎಚ್. ಖಾದರ್, ಶಶಿಧರ ಹೆಗ್ಡೆ, ಯು.ಕೆ. ಮೋನು, ಮಮತಾ ಗಟ್ಟಿ, ಕವಿತಾ ಸನಿಲ್, ಸಂತೋಷ್ ಶೆಟ್ಟಿ, ಪದ್ಮನಾಭ ನರಿಂಗಾನ, ಸಲೀಂ, ನಜೀರ್ ಬಜಾಲ್, ನೀರಜ್‌ಪಾಲ್, ಜಯಶೀಲ ಅಡ್ಯಂತಾಯ ಉಪಸ್ಥಿತರಿದ್ದರು.
ಜನ ಲೆಕ್ಕ ಕೇಳುತ್ತಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಲೆಕ್ಕ ಕೊಡುವಂತೆ ರಾಜ್ಯ ಸರಕಾರವನ್ನು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಆದರೆ ಕೇಂದ್ರ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸದೆ ನುಡಿದಂತೆ ನಡೆಯದ ಸರಕಾರ ಎನಿಸಿಕೊಂಡಿದೆ. ನರೇಂದ್ರ ಮೋದಿಯವರು ನೀಡಿರುವ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎಂಬುದಾಗಿ ಜನ ಇದೀಗ ಲೆಕ್ಕ ಕೇಳುತ್ತಿದ್ದು, ಇದಕ್ಕೆ ಅವರು ಉತ್ತರಿಸಲಿ ಎಂದು ಸಚಿವ ರೈ ಸವಾಲೆಸೆದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರು ಎಂದವರು ಹೇಳಿದರು.