ಜೀವನ್ಮರಣದ ಮಧ್ಯೆ ಇದ್ದದ್ದು ಕೇವಲ 11 ಸೆಕೆಂಡು!
Team Udayavani, Mar 25, 2018, 6:00 AM IST
ಚಿರತೆಯನ್ನು ನಿಜ ಜೀವನದಲ್ಲಿ ನೋಡಿಯೇ ಇಲ್ಲದವರೂ ತಮ್ಮ “ಪರಿಣಿತ’ ಅಭಿಪ್ರಾಯಗಳನ್ನು ಚರ್ಚಿಸಿದರು. ಆಂಗ್ಲ ಪತ್ರಿಕೆಯೊಂದರಲ್ಲಿ “ಗುಬ್ಬಿಗೆ ಅದೃಷ್ಟವಿತ್ತು, ಚಿರತೆಗೆ ಎರಡು ಹಲ್ಲಿರಲಿಲ್ಲ, ಒಂದು ಕಣ್ಣು ಭಾಗಶಃ ಕಾಣುತ್ತಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ರಾಜಾರೋಷವಾಗಿ ಹೇಳಿಕೆ ಕೊಟ್ಟಿದ್ದರು. ಅವರಿಗೇನು ಗೊತ್ತು ನನ್ನ ನಿತಂಬದ ಮೇಲೆ ಚಿರತೆ ಎರಡು ಬಾರಿ ಕಚ್ಚಿದ ಕುರುಹಾಗಿ ಎಂಟು ಹಲ್ಲಿನ ಗುರುತಿತ್ತು ಎಂದು!
ಸ್ವಲ್ಪ ಸಮಯದ ನಂತರ ಡಾಕ್ಟರ್ ಹಿಂದಿರುಗಿದರು. “ಸರ್, ನನ್ನ ಮನೆಯವರು ಕೂಡ ಡಾಕ್ಟ್ರು. ಒಮ್ಮೆ ಅವರಿಗೆ ಫೋನ್ ಮಾಡಿ’ ಎಂದು ವಿನಂತಿಸಿದೆ. ಎಲ್ಲಿ ಕೆಲಸ ಮಾಡುತ್ತಾರೆ, ಅದು ಇದು ಎಲ್ಲಾ ವಿಚಾರಿಸಿಕೊಂಡ ಆ ವೈದ್ಯರು, ಫೋನ್ ಮಾಡುವ ಗೊಡ ವೆಗೇ ಹೋಗಲಿಲ್ಲ. ಸೂಜಿ ಚುಚ್ಚುವುದು-ಹೊಲಿಗೆ ಹಾಕುವುದು, ಬ್ಯಾಂಡೇಜ್ ಕಟ್ಟುವುದು-ಬಿಚ್ಚುವುದು ಇದರಲ್ಲೇ ಬ್ಯುಸಿ ಆಗಿ ಬಿಟ್ಟರು. “ನಾನು ಬೇರೆ ಆಸ್ಪತ್ರೆಗೆ ಹೋಗುತ್ತೇನೆ, ಕಳುಹಿಸಿಬಿಡಿ’ ಎಂದರೆ “ಬರೀ ಫಸ್ಟ್‌ಏಡ್ ಕೊಡುತ್ತೇವೆ ಆಮೇಲೆ ಹೋಗಿ’ ಎಂದು ಮತ್ತದೇ ರಾಗ. “ಸೊಂಟ ಸ್ವಲ್ಪ ನೋಡುತ್ತೀರಾ ಅಲ್ಲೂ ಗಾಯ ಆಗಿದೆ’ ಅಂದರೆ “ಏನು ಆಗಿಲ್ಲ ಎದ್ದೇಳಿ, ಡಾಕ್ಟ್ರು ನಾನೋ, ನೀವೋ?’ ಎಂದು ಆಜ್ಞಾಪಿಸಿದರು! ಕಷ್ಟ ಪಟ್ಟು ಬಲಕ್ಕೆ ತಿರುಗಿ ಅರ್ಧಕ್ಕೆ ಎದ್ದೆ. ಅಷ್ಟರಲ್ಲಿ ಪ್ರಥಮ ದೈವವಾದ ಕಾಂಪೌಂಡರ್ “ಸಾರ್ ಬೆಡಿಟ್ ಎಲ್ಲಾ ರಕ್ತ ಆಗಿದೆ, ಸೊಂಟದಲ್ಲೂ ಗಾಯ ಆಗಿದೆ ಸಾರ್’ ಎಂದು ಕೂಗಿದ. ಆಚೆ ಹೋಗಿದ್ದ ಡಾಕ್ಟ್ರರ್ ಹಿಂದಿರುಗಿದರು. “ಪ್ಯಾಂಟ್ ಕಟ್ ಮಾಡಪ್ಪ’ ಎಂದು ಆಜ್ಞಾಪಿಸಿದರು.
“ಅಯ್ಯೋ’ ಎಂದು ಕೂಗಿದೆ. ಏಕೆಂದರೆ ಅನಸ್ತೇಸಿಯಾ ಇಲ್ಲದೆ ಸೂಜಿ ಚುಚ್ಚಿದ್ದರು. ಇದು ಎಷ್ಟು ಬಾರಿ ನಡೆಯಿತೋ ಗೊತ್ತಿಲ್ಲ. ಪ್ರಾಣ ಹೋಗುವ ಹಾಗೆ ನೋವಾಗುತ್ತಿತ್ತು. ಯಮ ಎಂದರೆ ಇವರೇ ಇರಬೇಕು ಎಂದೆನಿಸಿತು! “ಮುಗೀತು ತಡೀರಿ’ ಅಂದರು ಕಾಂಪೌಂಡರ್ ಸಾಹೇಬ್ರು. ಅಷ್ಟರಲ್ಲಿ ಕರ್ಟನ್ ಸರಿಸಿ ಬಂದ ವ್ಯಕ್ತಿಯ ಮುಖ ನನಗೆ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಸಿಕ್ಕಿದ ಹಾಗೆ ಎಂಬ ಗಾದೆಯ ಅನುಭವ ತಂದುಕೊಟ್ಟಿತು. ನಮ್ಮ ವನ್ಯಜೀವಿ ಆಸಕ್ತ ಗಿರಿಧರ್ ಕುಲಕರ್ಣಿ ಆಗಮಿಸಿದ್ದರು. “ಯಾಕ್ರೀ ಒಳಗ್ ಬರ್ತಿದ್ದೀರಾ? ಆಚೆ ಹೋಗ್ರಿ’ ಎಂದು ಹೂಂಕರಿಸಿದರು ಡಾಕ್ಟ್ರರ್ ಸಾಹೇಬರು! “ಪೇಷಂಟ್ ಕಡೆಯವರು ಸರ್’ ಎಂದು ದಿಟ್ಟವಾಗಿ ಗಿರಿಧರ್ ಉತ್ತರಿಸಿದರು. ಕಣ್ಸ್ನ್ನೆಯಲ್ಲೇ ಹತ್ತಿರ ಕರೆದು ಉಸುರಿದೆ “ಗಿರಿಧರ್, ನಂಗ್ಯಾಕೋ ಇವರು ಮಾಡುತ್ತಿರುವುದು ಸರಿಯಿಲ್ಲ ಎನಿಸುತ್ತಿದೆ, ನನಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ದಯವಿಟ್ಟು ನನ್ನ ಮನೆಯವರಿಗೆ ಫೋನ್ ಮಾಡಿ’. “ಸರ್ ನಂಬರ್ ಕೊಡಿ’ ಎಂದರು. “ಹೂಂ..9914…9901….’ ಏನೇನೊ ಒದರುತ್ತಿದ್ದೇನೆ. ಅಯ್ಯೋ ನನ್ನ ಹೆಂಡ್ತಿ ನಂಬರ್ ಜ್ಞಾಪಕಕ್ಕೆ ಬರ್ತಿಲ್ಲ. ಏನು ಮಾಡುವುದು ಗೊತ್ತಾಗ್ತಿಲ್ಲ.
ಅಷ್ಟರಲ್ಲಿ ಇನ್ನೊಂದು ಪರಿಚಯದ ಮುಖ ಕಂಡಿತು. ಪ್ರಕಾಶ್. ಅವರೂ ಕೂಡ ವನ್ಯಜೀವಿ ಆಸಕ್ತರು. ಇನ್ನೂ ಸ್ವಲ್ಪ ಧೈರ್ಯ ಬರಲು ಪ್ರಾರಂಭವಾಯಿತು. ಪ್ರಕಾಶ್ ಕರೆದು ಮತ್ತದೇ ಹೇಳಿದೆ. “ಹೇಗಾದ್ರೂ ಮಾಡಿ ಇಲ್ಲಿಂದ ಹೋಗೋಣ, ಇಲ್ಲಿ ಇವರು ಮಾಡುತ್ತಿರುವುದು ನನಗೆ ಸರಿ ಕಂಡುಬರುತ್ತಿಲ್ಲ.’ “ಸರಿ ಸರ್’ ಅಂದು ಆಚೆ ಹೋದರು ಪ್ರಕಾಶ್. “ಡಾಕ್ಟ್ರೇ ಇವರ ಮನೆಯವರು ಮಾತನಾಡುತ್ತಿದ್ದಾರೆ ಫೋನ್ ತಗೊಳ್ಳಿ’ ಎಂದರು ಗಿರಿಧರ್. “ನರ್ಸ್ ನೀವೇ ಮಾತಾಡಿ, ನಾನು ಮಾತಾಡೋಲ್ಲ’ ಎಂದರು ಡಾಕ್ಟ್ರರ್. ಅಷ್ಟರಲ್ಲಿ ಹಿಂದಿನಿಂದ ಯಾರೋ “ಸಾರ್ ಬಿ.ಪಿ 180-240 ಇದೆ ಸಾರ್’ ಎಂದರು. “ನರ್ಸ್ ಅವರ ಮನೆಯವರು ಬಿ.ಪಿ ವಿಚಾರ ಕೇಳಿದರೆ ಎಲ್ಲಾ ನಾರ್ಮಲ್ ಇದೆ ಎನ್ನಿ’ ಎಂದು ಆಜ್ಞೆ ಕೊಟ್ಟಬಿಟ್ರಾ ವೈದ್ಯ ಮಹಾಶಯರು!
ಸುಮಾರು ಎರಡೂವರೆ ಗಂಟೆ ಕಳೆದಿರಬೇಕು ನಾನಿಲ್ಲಿಗೆ ಬಂದು. ಮನೆಯವರಿಗೆ ಗೊತ್ತಾಗಿರಬಹುದು, ಏನಾದರೂ ವ್ಯವಸ್ಥೆಯಾಗಿರುತ್ತದೆ ಎಂಬ ನನ್ನ ಆಸೆಗೆ ಅಸ್ತು ಅಂದಂತೆ ಗಿರಿಧರ್ ಬಂದು “ಸರ್, ಇನ್ನೊಂದು ಆಸ್ಪತ್ರೆಯಿಂದ ಆಂಬುಲೆನ್ಸ್ ಬರುತ್ತದೆ. ನಾವು ಹೋಗೋಣ’ ಅಂದರು. ನಾನು ಹೊರಡಲು ಎದ್ದರೆ “ಎಲ್ಲಾ ಬಿಲ್ ಸೆಟ್ಲ ಆಗೋವರ್ಗೆ ನೀವು ಹೋಗೋಹಾಗಿಲ್ಲ’ ಎಂದು ಖಡಕ್ ಆಗಿ ಹೇಳಿದರು ಡಾಕ್ಟ್ರರ್. “ಸರ್, ನನ್ನ ಸ್ನೇಹಿತರು ದುಡ್ಡು ಕೊಡುತ್ತಾರೆ, ನನ್ನ ಪರ್ಸ್ ಎಲ್ಲಾ ಕಳೆದು ಹೋಗಿದೆ’ ಎಂದರೆ “ಇಲ್ಲ ರೀ ಬಿಲ್ ಸೆಟ್ಲ ಮಾಡಿ ಹೋಗಿ’ ಎಂದು ಆದೇಶಿಸಿದರು. “ಸರ್ ಅವರನ್ನು ಕಳುಹಿಸಿ ನನ್ನ ಕ್ರೆಡಿಟ್ ಕಾರ್ಡಲ್ಲಿ ದುಡ್ಡು ಕಟ್ಟುತೇನೆ’ ಎಂದು ಹಿಂದಿನಿಂದ ಪ್ರಕಾಶ್ ಹೇಳುವುದು ಕೇಳಿಸಿತು. “ಇಲ್ಲ ಬಿಲ್ ಸೆಟ್ಲ ಮಾಡಿ ಪೇಷಂಟ್ ಕರ್ಕೊಂಡು ಹೋಗಿ’ ಎಂದು ಉತ್ತರ ಬಂದಿತು.
ಅಷ್ಟರಲ್ಲಿ ಯಾರೋ ಗಡ್ಡಧಾರಿ ನಾನು ಮಲಗಿದ್ದ ರೂಮ… ಒಳಗೆ ಬಂದು “ಹಲೋ ನಾನು ಡಾಕ್ಟರ್ ಸಯ್ಯದ್, ವೀ ಹ್ಯಾವ್ ಕಮ… ವಿಥ್ ಆನ್ ಆಂಬುಲೆನ್ಸ್ ಟು ಟೇಕ್ ಯು. ಡೊಂಟ್ ವರಿ, ಎವ್ರಿಥಿಂಗ್ ವಿಲ… ಬಿ ಆಲರೈಟ್. ಶೋ ಮಿ ವಾಟ್ ಹ್ಯಾಸ್ ಹ್ಯಾಪನ್x’ ಎಂದರು. ಅವರ ಮೃದು ನುಡಿಗಳಿಂದ ಇನ್ನಷ್ಟು ಧೈರ್ಯ ಬಂದಿತು. “ಯು ಕಾಂಟ್ ಟಾಕ್ ಟು ಹಿಮ… ಅಂಟಿಲ… ಹೀ ಲೀÊÕ… ಅವರ್ ಕ್ಲಿನಿಕ್’ ಎಂದು ನನಗೆ “ಫಸ್ಟ್ ಏಡ್’ ಕೊಟ್ಟ ಡಾಕ್ಟರ್ ಬಂದಿದ್ದ ಇನ್ನೊಂದು ಆಸ್ಪತ್ರೆಯ ವೈದ್ಯರಿಗೆ ಖಡಕ್ ಆಗಿ ಆಜ್ಞಾಪಿಸಿದರು.
ಇಪ್ಪತ್ತು ನಿಮಿಷದ ನಂತರ “ಬನ್ನಿ ಸರ್ ಹೋಗೋಣ’ ಅಂತ ಪ್ರಕಾಶ್ ಮತ್ತು ಗಿರಿಧರ್ ಅಂದರು. ಸ್ಟ್ರೆಚರ್ ಮೇಲೆ ಮಲಗಿ ಕ್ಲಿನಿಕ್ ಆಚೆ ಬಂದರೆ ಪರಿಚಯದ ಹತ್ತಾರು ಗಾಬರಿಗೊಂಡ ಮುಖಗಳು. ಐದಾರು ಟಿ.ವಿ ಕ್ಯಾಮೆರಾಗಳು. ಯಾರೋ ಮುಖದ ಹತ್ತಿರ ಟಿ.ವಿ ಕ್ಯಾಮೆರಾ ತಂದರು. ಯಾರೋ ಅವರಿಗೆ ಅಡ್ಡ ಬಂದು “ದಯವಿಟ್ಟು ಬಿಟ್ಟು ಬಿಡಿ. ಅವರಿಗೆ ತ್ವರಿತವಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು’ ಎಂದರು.
ಕಾಲು ಗಂಟೆಯಲ್ಲಿ ಯಾವುದೋ ದೊಡ್ಡ ಆಸ್ಪತ್ರೆಯ ಮುಂದೆ ಆ್ಯಂಬುಲೆನ್ಸ್ ಬಂದು ನಿಂತಿತು. ಸ್ಟ್ರೆಚರ್ ಆಚೆ ಬಂದರೆ ನನ್ನ
ಹೆಂಡತಿ ಸುಮ ಮತ್ತು ನನ್ನ ಸಹೋದ್ಯೋಗಿ ಪೂರ್ಣೇಶರ ಮುಖಗಳು ಕಂಡವು. ಆಸ್ಪತ್ರೆ ಒಳಗೆ ಹೋದಾಕ್ಷಣ ಮೂರ್ನಾಲ್ಕು ವೈದ್ಯರು ಸುತ್ತ ನಿಂತರು. ಅರೆ ಗಾಯಗೊಂಡ ಜಿಂಕೆಯ ಸುತ್ತ ಸೇರುವ ಸೀಳುನಾಯಿಗಳ ಹಾಗೆ ಕಂಡಿತು ಪರಿಸ್ಥಿತಿ. ಅರ್ಜೆಂಟ್ ಎಕ್ಸ್-ರೇ ಮಾಡಿಸಿ ಅಂದರು ಒಬ್ಬರು. ಇನ್ನೇನೋ ಪರೀಕ್ಷೆಗಳನ್ನು ಮಾಡಿ ಎಲ್ಲಾ ಮುಗಿದಾಗ ಇನ್ನರ್ಧ ಗಂಟೆ. ನೇರವಾಗಿ ಆಪ ರೇಷನ್ ಥಿಯೇಟರ್ ಒಳಗೆ ಕರೆದೊಯ್ದರು. ಸ್ನೇಹದಿಂದ ಮಾತ ನಾಡುತಿದ್ದ ವೈದ್ಯರುಗಳಿಂದ ಮನಸ್ಸು ಮತ್ತೆ ಶಾಂತವಾಗಿತ್ತು.
ಥಂಡಿ ಎನಿಸುವ ಹವೆ, ತಿಳಿ ನೀಲಿ ಮಿಶ್ರಿತ ಹಸಿರು ಬಣ್ಣದ ಬಟ್ಟೆ ಹಾಕಿರುವ ಹಲವಾರು ಜನ, ಕಣ್ಣು ಕೊರೆಯುವಷ್ಟು ದೊಡ್ಡ ದೀಪ ಮುಖದಿಂದ ಸ್ವಲ್ಪ ಮೇಲಿದೆ. ಅರಿವಳಿಕೆಗೆ ಯಾವ ಇಂಜೆಕ್ಷನ್ ಕೊಡುತ್ತೀರಾ ಎಂದು ಪಕ್ಕದಲ್ಲಿದ್ದ ವೈದ್ಯರೊಬ್ಬರನ್ನು ಪ್ರಶ್ನಿಸಿದೆ. ಕ್ಸೆ„ಲಸೈನ್ ಎಂದರು ವೈದ್ಯರು. “ನಾವು ಕೂಡ ಚಿರತೆ….’ ಎಂದದ್ದಷ್ಟೇ ಜ್ಞಾಪಕ.
“ಸರ್, ಸರ್’ ಎಂದು ಯಾರೋ ಕೆನ್ನೆಗೆ ಬಡಿಯುತ್ತಿರುವಂತೆ ಅನಿಸಿತು. ಕಷ್ಟಪಟ್ಟು ಸ್ವಲ್ಪ ಕಣ್ಣು ತೆರೆದೆ, ಎಲ್ಲವೂ ಮಬ್ಬು ಮಬ್ಬು. “ಹೇಗಿದ್ದೀರ?’ ಎಂದು ಯಾವುದೋ ಹೆಣ್ಣು ಧ್ವನಿ ದೂರದಲ್ಲಿ ಕೇಳಿದ ಹಾಗಾಯಿತು. “ಚೆನ್ನಾಗಿದ್ದೀನಿ ಮೇಡಂ…’ ಅಂದವನೇ ಮತ್ತೆ ಕಣ್ಣು ಮುಚ್ಚಿದೆ.
ಮತ್ತೆ ಕಣ್ಣು ತೆಗೆದಾಗ ಬೆಳಗಾಗಿತ್ತು. ತಿಳಿ ನೀಲಿ ಯೂನಿಫಾರ್ಮ್ ಹಾಕಿರುವ ನರ್ಸಗಳೆಲ್ಲ ಓಡಾಡುತ್ತಿದ್ದಾರೆ. ಬಲಗಾಲಿಗೆ ಅದೇನೋ ಬೆಲ್ಟ್ ಕಟ್ಟಿದ್ದಾರೆ, ಅದು ಎರೆಡೆರಡು ನಿಮಿಷಕ್ಕೆ ಊದಿ ಕೊಳ್ಳುತ್ತಿದೆ ಮತ್ತು ಗಾಳಿ ಆಚೆ ಬಿಡುತ್ತಿದೆ. ಏನಾಗುತ್ತಿದೆಯೆಂದು ತಿಳಿಯುತ್ತಿಲ್ಲ. ಒಂದರ್ಧ ಗಂಟೆಯ ನಂತರ ಚೇತರಿಸಿಕೊಂಡೆ. ಆಮೇಲೆ ತಿಳಿಯಿತು ಆಸ್ಪತ್ರೆಯ ಐ.ಸಿ.ಯುನಲ್ಲಿದ್ದೇನೆಂದು. ಪರಿಸ್ಥಿತಿ ಸ್ವಲ್ಪ ಸ್ಥಿಮಿತಕ್ಕೆ ಬಂದು ಆಸ್ಪತ್ರೆಯ ಮಾಮೂಲಿ ವಾರ್ಡಗೆ ನನ್ನನ್ನು ಸ್ಥಳಾಂತರಿಸಿದ ಮೇಲೆ ಆಚೆ ಪ್ರಪಂಚದಲ್ಲಿ ಏನಾ ಗುತ್ತಿದೆಯೆಂದು ಸ್ವಲ್ಪ-ಸ್ವಲ್ಪ ಅರಿವಾಗಲು ಪ್ರಾರಂಭವಾಯಿತು. ಹೊರ ಪ್ರಪಂಚ ದಲ್ಲಿ ಈ ಘಟನೆಯನ್ನು ಆಧರಿಸಿ ಬಹುದೊಡ್ಡ ನಾಟಕವೇ ನಡೆಯುತಿತ್ತು.
ಆಂಗ್ಲ ಪತ್ರಿಕೆಗಳಲ್ಲಿ, ಜೀವನದಲ್ಲಿ ಎಂದೂ ಈ ತರಹದ ಸನ್ನಿವೇಶಗಳನ್ನು ನಿಭಾಯಿಸದ, ಎದುರಿಸದ, ಹುಲಿ ಮತ್ತು ಚಿರತೆ ತಜ್ಞರೆಲ್ಲಾ ಉದ್ದುದ್ದ ಅಭಿಪ್ರಾಯಗಳನ್ನು ಕೊಡುತ್ತಿದ್ದರು. ಚಿರತೆ ಯನ್ನು ನಿಜ ಜೀವನದಲ್ಲಿ ನೋಡಿಯೇ ಇಲ್ಲದವರೂ ಕೂಡ ತಮ್ಮ “ಪರಿಣಿತ’ ಅಭಿಪ್ರಾಯಗಳನ್ನು ದೃಶ್ಯಮಾಧ್ಯಮಗಳಲ್ಲಿ ಚರ್ಚಿಸಿ ದರು. ಆಂಗ್ಲ ಪತ್ರಿಕೆಯೊಂದರಲ್ಲಿ “ಗುಬ್ಬಿಗೆ ಅದೃಷ್ಟವಿತ್ತು, ಚಿರತೆಗೆ ಎರಡು ಹಲ್ಲಿರಲಿಲ್ಲ, ಒಂದು ಕಣ್ಣು ಭಾಗಶಃ ಕಾಣುತ್ತಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ರಾಜಾರೋಷವಾಗಿ ಹೇಳಿಕೆ ಕೊಟ್ಟಿದ್ದರು. ಅವರಿಗೇನು ಗೊತ್ತು ನನ್ನ ನಿತಂಬದ ಮೇಲೆ ಚಿರತೆ ಎರಡು ಬಾರಿ ಕಚ್ಚಿದ ಕುರುಹಾಗಿ ಎಂಟು ಹಲ್ಲಿನ ಗುರುತಿತ್ತು ಎಂದು. ದರಿದ್ರದ ಚಿರತೆ ಕಚ್ಚುವುದಾದರೂ ಎದೆಯ ಮೇಲೋ, ಹೊಟ್ಟೆಯ ಮೇಲೋ ಕಚ್ಚಿದ್ದರೆ, ಹನುಮನ ಹಾಗೆ ಅಂಗಿಯ ನ್ನಾದರೂ ಹರಿದು ಪ್ರಪಂಚಕ್ಕೆ ತೋರಬಹುದಿತ್ತು ಎಂದು ಮನಸಿ ನಲ್ಲೇ ಬಯ್ದುಕೊಂಡು ನನ್ನ ಅದೃಷ್ಟಕ್ಕೆ ನಾನೇ ಛೀಮಾರಿ ಹಾಕಿ ಕೊಂಡೆ. ಆ ಭಾಗಗಳನ್ನು ಸಾರ್ವಜನಿಕವಾಗಿ ನಾನು ಎಲ್ಲರಿಗೂ ತೋರಲಾಗುತ್ತದೆಯೇ? ನೋಡಲು ಬೇಜಾರಿಲ್ಲದಿದ್ದರೆ ಮಾನ, ಮರ್ಯಾದೆ ಬಿಟ್ಟು ತೋರಬಹುದಿತ್ತು ಎಂದರೆ ಆ ವರದಿ ಗಾರರಾಗಲಿ ಅಥವಾ ಹೇಳಿಕೆ ಕೊಟ್ಟವರಾಗಲಿ ಆಸ್ಪತ್ರೆಯ ಕಡೆ ಮುಖ ಸಹ ಹಾಕಿ ನೋಡಲಿಲ್ಲ. ಅವರ ಹಣೆಯಲ್ಲಿ ನನ್ನ ನಿತಂಬಗಳನ್ನು ನೋಡುವ ಅದೃಷ್ಟವಿರಲಿಲ್ಲ ಎಂದುಕೊಂಡು ನನಗೆ ನಾನೇ ಸಾಂತ್ವನ ಹೇಳಿಕೊಂಡೆ! ಚಿರತೆಗಳನ್ನು ಹಿಡಿದು ಬೋನಿನಲ್ಲಿ ಹಾಕಿದ ನಂತರ ಅವು ಹಲವಾರು ಬಾರಿ ಬೋನಿಗೆ ಕಚ್ಚಿ ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುವುದು ಸರ್ವೇಸಾಮಾನ್ಯ. ಹಾಗಾಗಿ ಚಿರತೆಯನ್ನು ಹಿಡಿದ ನಂತರ ನೋಡಿದ ಅಧಿಕಾರಿಗಳು ಚಿರತೆಗೆ ಹಲ್ಲೇ ಇರಲಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು.
ಸಂಜಯ್ ಗುಬ್ಬಿ ಈಜು ಕೊಳಕ್ಕೆ ಹಾರಬೇಕಾಗಿತ್ತು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು, ಹೀಗೆ ಹಲವಾರು ಸಲಹೆಗಳು. ನಾನು ಅಲ್ಲಿ ವಿಡಿಯೋ ಗೇಮ… ಆಡುತ್ತಿರಲಿಲ್ಲ ಎಂದು ಎಷ್ಟು ಜನರಿಗೆ ಅರ್ಥವಾಗಿದೆಯೋ ಇಲ್ಲವೋ ಇಂದಿಗೂ ಗೊತ್ತಿಲ್ಲ. ಅದು ಜೀವನ್ಮರಣದ ಪ್ರಶ್ನೆಯಾಗಿತ್ತು. ಚಿರತೆ ಗರ್ಜಿಸಿ ಕಿಟಿಕಿಯಿಂದ ಆಚೆ ಹಾರಿದ್ದನ್ನು ನೋಡಿ, ಅದು ನನ್ನನ್ನು ಹಿಡಿಯುವವರೆಗೆ ನನಗೆ ಇದ್ದದ್ದು 11 ಸೆಕೆಂಡುಗಳು ಸಮಯ ಮಾತ್ರ. ಅಷ್ಟರೊಳಗೆ ನನ್ನ ಸುರಕ್ಷತೆಯೊಡನೆ, ಕಾಂಪೌಂಡಿನಾಚೆ ನಿಂತಿದ್ದ ಮಕ್ಕಳು, ಹೆಂಗಸರು, ಇನ್ನಿತರರ ಸುರಕ್ಷತೆಯ ಬಗ್ಗೆಯೂ ಯೋಚಿಸಬೇಕಾಗಿತ್ತು. ಜೀವನ್ಮರಣದ ಮಧ್ಯೆ ಇದ್ದ 11 ಸೆಕೆಂಡುಗಳನ್ನು ತಮ್ಮ ಜೀವನದಲ್ಲಿ ಊಹಿಸಿಕೊಂಡು ಇಂತಹ ಸನ್ನಿವೇಶಕ್ಕೆ ತಾವಾದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆವೆಂದು ಯೋಚಿಸದ ಜನರ ಬಗ್ಗೆ ಅನುಕಂಪ ಮೂಡಿತು. ದುರ್ಬೀನು ಮತ್ತು ಕ್ಯಾಮೆರಾಗಳ ಮಧ್ಯೆ ವ್ಯತ್ಯಾಸವೇ ತಿಳಿಯದ ವ್ಯಂಗ್ಯ ಚಿತ್ರಕಾರರೊಬ್ಬರು “ಬೈಟ್ ಪ್ಲೀಸ್’ ಎಂಬ ನಾಮಾಂಕಿತದಲ್ಲಿ ವ್ಯಂಗ್ಯಚಿತ್ರವನ್ನು ಬರೆದು ಯಾರದೋ ವೆಚ್ಚದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡರು. ಹೀಗೆ ಹಲವಾರು ಜನ ತಮ್ಮದೇ ಆದ ದೃಷ್ಟಿಕೋನಗಳಲ್ಲಿ ಸನ್ನಿವೇಶವನ್ನು ವ್ಯಾಖ್ಯಾನಿಸುತ್ತಿದ್ದರು. ಆದರೆ ನನಗೆ ಬಹು ಇಷ್ಟವಾದುದು ಖ್ಯಾತ ಹಾಸ್ಯ ಬರಹಗಾರ ಡುಂಡಿರಾಜ್ ಬರೆದ ಚುಟುಕು:
ಕಷ್ಟಪಟ್ಟು ಹಿಡಿದರಂತೆ ಬೆಂಗಳೂರಲ್ಲಿ
ಶಾಲೆಗೇ ಬಂದ ಚಿರತೆಯನ್ನು
ತಾನಾಗಿಯೇ ಓಡಿ ಹೋಗುತಿತ್ತು
ಯಾರಾದರೂ ತಿಳಿಸಿದ್ದರೆ
ಆ ಶಾಲೆಯ ಫೀಸು, ಡೊನೇಷನ್ನು!
ನಾಲ್ಕು ದಿನಗಳ ನಂತರ ಎದ್ದು ಕುಳಿತುಕೊಳ್ಳುವ ಹಾಗೆ ಆದಾಗ ಲ್ಯಾಪ್ ಟಾಪ್ ತೆರೆದರೆ 37 ನಿಮಿಷ 09 ಸೆಕೆಂಡ್‌ನಲ್ಲಿ “ಉಗ್ರಂ’ ಚಲನಚಿತ್ರ ನಿಂತಿತ್ತು. ಇಮೇಲ್ ಡೌನಲೋಡ್ ಮಾಡಿದರೆ ನೂರಾರು ಇಮೇಲ್‌ಗಳು. ಕೆಲವಂತೂ ಬಹು ಹಾಸ್ಯಕಾರಿ ಯಾಗಿದ್ದವು. ಆಂಧ್ರಪ್ರದೇಶದ ವನ್ಯಜೀವಿ ತಜ್ಞರೊಬ್ಬರು ಬರೆದಿದ್ದರು, “ಗುಬ್ಬಿಯವರೇ ನೀವು ತುಂಬು ತೋಳು ಅಂಗಿ ಹಾಕಿದ್ದರಿಂದ ನಿಮಗೇನು ಹೆಚ್ಚು ಏಟಾಗಿಲ್ಲ’ ಅಂತ ಕಾಣುತ್ತದೆ. ಅಯ್ಯೋ ತಜ್ಞರೇ, ಮನುಷ್ಯನ ಮೂಳೆಯನ್ನೇ ತುಂಡು ಮಾಡುವ ಚಿರತೆಯ ಕೋರೆ ಹಲ್ಲುಗಳಿಗೆ ಕಾಲು ಸೆಂಟಿಮೀಟರ್ ದಪ್ಪದ ನಮ್ಮ ಅಂಗಿ ಯಾವ ಲೆಕ್ಕ? ಎಂಬ ಸಾಮಾನ್ಯ ಜ್ಞಾನವಿಲ್ಲವಲ್ಲ ನಿಮಗೆ ಎಂದು ಕೊರಗಿದೆ.
ಸರಿಯಾಗಿ ಒಂದು ವಾರದ ನಂತರ, ಮತ್ತೆ ಇನ್ನೊಂದು ಭಾನು ವಾರ, ವಿಬ್‌ಗ್ಯಾರ್ ಶಾಲೆ ಹೊಕ್ಕು ನನ್ನನ್ನು ಆಸ್ಪತ್ರೆಗೆ ಸೇರಿಸಿ, ತಾನು ಬನ್ನೇರುಘಟ್ಟದ ಮೃಗಾಲಯ ಸೇರಿದ್ದ ಚಿರತೆ, ಬೋನಿನಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಿತ್ತು. ನನಗೆ ನಂಬಲೇ ಆಗಲಿಲ್ಲ, ಆದರೆ ಸ್ವಲ್ಪ ಅಸೂಯೆಯಾಯಿತು. ಚಿರತೆಗೆ ಸಿಕ್ಕ ವಿಮೋಚನೆ ಈ ಆಸ್ಪತ್ರೆಯಿಂದ ನನಗೆ ಸಿಗಲಿಲ್ಲವಲ್ಲ ಎಂದು. ಹೀಗೆ ವಿಶ್ರಮಿಸಲು ಎಣಿಸಿ ಪ್ರಾರಂಭಿಸಿದ್ದ ಭಾನುವಾರ, ಯಾವುದೋ ದಿಕ್ಕಿನಲ್ಲಿ ತಿರುಗಿ, ಎಲ್ಲೋ ಬಂದು ತಲುಪಿತ್ತು.
ನಂತರದ ಆಸ್ಪತ್ರೆಯಲ್ಲಿನ ದಿನಗಳು, ವಿಧವಿಧವಾದ ಚಿಕಿತ್ಸೆಗಳು, ವಿಮಾ ಕಂಪೆನಿಯವರೊಡನೆ ಹೋರಾಟ ಇನ್ನೆಲ್ಲವೂ ಇನ್ನೊಂದು ದೊಡ್ಡ ರಾಮಾಯಣ ಮತ್ತು ನಾಲ್ಕಾರು ಅಂಕಣಕ್ಕಾ ಗುವಷ್ಟಿದೆ. ಅನುಭವ ಅವರವರಿಗೇ ಆದಾಗ ಅರ್ಥವಾದೀತು. ಪರಿಸ್ಥಿಯನ್ನು ಎದುರಿಸುವುದೇ ವಾಸ್ತವ. ಕಾಲ್ಪನಿಕತೆ, ಊಹೆ, ಎಲ್ಲವೂ ಅಸಂಭವ.
ಲೇಖನ ಸಂಬಂಧಿ ವಿಡಿಯೋ ನೋಡಲು ಈ ಲಿಂಕ್ ಟೈಪ್ ಮಾಡಿ: bit.ly/2G0Pg24
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.