ಟಿಪ್ಪರ್ ಡಿಕ್ಕಿಯಾಗಿ ದೆಹಲಿಮೂಲದ ಯುವತಿ ಸಾವು
Team Udayavani, Mar 26, 2018, 12:44 PM IST
ಬೆಂಗಳೂರು: ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ದೆಹಲಿ ಮೂಲದ ಎಂಜಿನಿಯರಿಂಗ್ ಪದವೀಧರೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನಕಪುರ ಮುಖ್ಯರಸ್ತೆ ಬಳಿ ಶನಿವಾರ ತಡ ರಾತ್ರಿ ನಡೆದಿದೆ.
ದೆಹಲಿ ಮೂಲದ ಅಂಕಿತಾ (22) ಮೃತ ವಿದ್ಯಾರ್ಥಿನಿ. ಅಪಘಾತದಲ್ಲಿ ಬೈಕ್ ಸವಾರ ಪಂಜಾಬ್ ಮೂಲದ ಅನುಭವ್ ಎಂಬಾತನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದ ಅಂಕಿತಾ, ಒಂದು ವರ್ಷದಿಂದ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಟರ್ನ್ಷಿಪ್ ಪಡೆಯುತ್ತಿದ್ದು, ಮಾರತ್‌ಹಳ್ಳಿಯಲ್ಲಿ ನೆಲೆಸಿದ್ದಾರೆ. ಈಕೆಯ ಸ್ನೇಹಿತ ಪಂಜಾಬ್ ನ ಅನುಭವ್ ಕೂಡ ಇಂಟರ್ನ್ಷಿಪ್ ಪಡೆಯುತ್ತಿದ್ದಾನೆ.
ಶನಿವಾರ ರಾತ್ರಿ 12.30ರ ಸುಮಾರಿಗೆ ಅಂಕಿತಾ ಮತ್ತು ಅನುಭವ್ ಹಾಗೂ ಇತರೆ ಸ್ನೇಹಿತರು ಹೋಟೆಲ್‌ಗೆಂದು ಕಗ್ಗಲೀಪುರ ಕಡೆಗೆ ತೆರಳುತ್ತಿದ್ದರು. ಅನುಭವ್ ಬಾಡಿಗೆ ಬುಲೆಟ್‌ನಲ್ಲಿ ಅಂಕಿತಾಳನ್ನು ಕರೆದೊಯ್ಯುತ್ತಿದ್ದ. ಈ ವೇಳೆ ತಲಘಟ್ಟಪುರ ಠಾಣೆ ಬಳಿ ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಬುಲೆಟ್‌ಗೆ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಅಂಕಿತಾ ಮೇಲೆ ಟಿಪ್ಪರ್ ಲಾರಿ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಟಿಪ್ಪರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ಕುಮಾರ ಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.