ಮೆಟ್ರೋ ನಿಗಮದ ಮುನ್ನೆಚ್ಚರಿಕೆ ಮಂತ್ರ
Team Udayavani, Mar 27, 2018, 2:47 PM IST
ಬೆಂಗಳೂರು: ಮೆಟ್ರೋ ಸಿಬ್ಬಂದಿ ಮುಷ್ಕರ ಮುಂದೂಡಿದ ಬೆನ್ನಲ್ಲೇ ಮತ್ತಷ್ಟು ಎಚ್ಚೆತ್ತು ಕೊಂಡಿರುವ ಬಿಎಂಆರ್‌ಸಿಲ್, ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೂಂದು ಪರ್ಯಾಯ ಸಿಬ್ಬಂದಿ ಪಡೆಯನ್ನು ಸಜ್ಜುಗೊಳಿಸಲು ಮುಂದಾಗಿದೆ. ಒಂದೊಮ್ಮೆ ಸಿಬ್ಬಂದಿ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಮುಂದಾದರೂ ಸಾರ್ವಜನಿಕರ ಪ್ರಯಾಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೊಂದೆಡೆ ಯೋಜನಾ ವಿಭಾಗದ ನೂರಾರು ಎಂಜಿನಿಯರ್‌ಗಳನ್ನು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಎರವಲು ಪಡೆದರೆ ಒಟ್ಟಾರೆ ಯೋಜನೆ ಮೇಲೆ ಪರಿಣಾಮ ಬೀರುವ ಆತಂಕವೂ ಎದುರಾಗಿದೆ. ತಮ್ಮ ನಡುವಿನ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಬಿಎಂಆರ್ ಸಿಎಲ್ ಮತ್ತು ಮೆಟ್ರೋ ಸಿಬ್ಬಂದಿಗೆ 30 ದಿನಗಳ ಕಾಲಾವಕಾಶ ನೀಡಿ, ನ್ಯಾಯಾಲಯವು ಆದೇಶಿಸಿತ್ತು. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ನಿಗಮ, ಈಗಾಗಲೇ 90 ಜನ ಪರ್ಯಾಯ ಸಿಬ್ಬಂದಿಯನ್ನು ಸಿದ್ಧಪಡಿಸಿದೆ. ಜತೆಗೆ ಮತ್ತೆ 60ರಿಂದ 70 ಗುತ್ತಿಗೆ ಎಂಜಿನಿಯರ್‌ಗಳನ್ನು ಯೋಜನಾ ವಿಭಾಗದಿಂದ ಕರೆತಂದು ತರಬೇತಿ ನೀಡುತ್ತಿದೆ.
ಈ ಹೊಸ ತಂಡಕ್ಕೆ ಮೆಟ್ರೋ ರೈಲುಗಳ ಚಾಲನೆ, ನಿಲ್ದಾಣದ ನಿಯಂತ್ರಣ, ಮೇಲ್ವಿಚಾರಣೆ ಸೇರಿದಂತೆ ವಿವಿಧ ಕಾರ್ಯಗಳ ಕುರಿತು ತರಬೇತಿ ನೀಡಲು ಆಸಕ್ತರ ಪಟ್ಟಿ ಸಿದ್ಧಪಡಿಸಿದೆ. 30 ದಿನಗಳ ನಂತರ ಒಂದು ವೇಳೆ ಅನಿದಿಷ್ಟಾವಧಿ ಮುಷ್ಕರ ನಡೆದರೂ ಮೆಟ್ರೋ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಚ್ಚರವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಮುಷ್ಕರಕ್ಕೆ ಮುಂದಾಗಿರುವ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡುವ ತಂತ್ರವೂ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗೆ ತೊಡಕು: ಪ್ರಸ್ತುತ ವಿವಿಧ ಮಾರ್ಗಗಳಲ್ಲಿ ನಡೆಯುತ್ತಿರುವ “ನಮ್ಮ ಮೆಟ್ರೋ’ ಎರಡನೇ ಹಂತದ ಕಾಮಗಾರಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಯೋಜನಾ ವಿಭಾಗದ 150ರಿಂದ 160 ಸಹಾಯಕ, ಉಪ ಸಹಾಯಕ ಹಾಗೂ ಜೂನಿಯರ್ ಎಂಜಿನಿಯರ್‌ಗಳೇ ಪರ್ಯಾಯ ಪಡೆಯಲ್ಲಿದ್ದಾರೆ. ಇವರೆಲ್ಲಾ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗಕ್ಕೆ ಬಂದರೆ ಯೋಜನೆ ಪ್ರಗತಿ ಮೇಲೆ ನೇರ ಪರಿಣಾಮ ಉಂಟಾಗಿ, ಕಾಮಗಾರಿ ವಿಳಂಬವಾಗಲಿದೆ ಎಂದು ಹಿರಿಯ ಎಂಜಿನಿಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಒಂದೊಮ್ಮೆ ಕಾಮಗಾರಿ ವಿಳಂಬವಾಗದಿದ್ದರೂ, ಎಂಜಿನಿಯರ್‌ಗಳ ಅನುಪಸ್ಥಿತಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವರೇ ಎಂಬ ಪ್ರಶ್ನೆ ಎದುರಾಗಿದೆ. ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಕನಕಪುರ ರಸ್ತೆ ಸೇರಿ ವಿವಿಧೆಡೆ ನಡೆಯುತ್ತಿರುವ ಎರಡನೇ ಹಂತದ ಕಾಮಗಾರಿ ಮೇಲ್ವಿಚಾರಣೆ ನಡೆಸುತ್ತಿರುವ ಎಲೆಕ್ಟ್ರಿಕ್, ಸಿವಿಲ್ ವಿಭಾಗಗಳ 60ರಿಂದ 70 ಗುತ್ತಿಗೆ ಎಂಜಿನಿಯರ್‌ಗಳನ್ನು ಕರೆತಂದು ತರಬೇತಿ ನೀಡಲಾಗುತ್ತದೆ. ಮೆಟ್ರೋ ಸಿಬ್ಬಂದಿ ಸಾಮಾನ್ಯವಾಗಿ ಮೂರು ಪಾಳಿಗಳಲ್ಲಿ
ಕಾರ್ಯಾಚರಣೆ ನಡೆಸಲಿದ್ದು, ಈ ಸಿಬ್ಬಂದಿ ನಡುವೆ ಒಂದು ಪಾಳಿ ಸೇವೆಗೆ ಪರ್ಯಾಯ ತಂಡವನ್ನು ನಿಯೋಜಿಸಲಾಗುವುದು. ರೈಲು ಚಾಲನೆ ಜತೆಗೆ ಮೆಟ್ರೋ ಕಮಾಂಡೆಂಟ್, ಕಂಟ್ರೋಲರ್ ತರಬೇತಿ ನೀಡಲಾಗುತ್ತದೆ ಎಂದು ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರೊಬ್ಬರು ತಿಳಿಸಿದ್ದಾರೆ.
ಪತ್ರ ಬರೆಯುವ ಎಚ್ಚರಿಕೆ ನಮ್ಮ ಮುಷ್ಕರಕ್ಕೆ ಪರ್ಯಾಯವಾಗಿ ರಚಿಸಿರುವ ತುರ್ತು ತಂಡವನ್ನು ಹಿಂಪಡೆಯಬೇಕು. ಹಾಗೊಂದು ವೇಳೆ ಸುರಕ್ಷತೆ ನಿಯಮ ಉಲ್ಲಂಘಿಸಿ ಪರ್ಯಾಯ ಸಿಬ್ಬಂದಿಯನ್ನು ಸೇವೆಗೆ ಬಳಸಿಕೊಳ್ಳಲು ಮುಂದಾದರೆ ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲಾಗುವುದು,’ ಎಂದು ಬೆಂಗಳೂರು ಮೆಟ್ರೋ ರೈಲು ಸಿಬ್ಬಂದಿ ಒಕ್ಕೂಟದ ಉಪಾಧ್ಯಕ್ಷ ಎಸ್.ಮಂಜುನಾಥ್ ಎಚ್ಚರಿಸಿದ್ದಾರೆ.
ಹೆಚ್ಚುವರಿ ಸಿಬ್ಬಂದಿ ಇದ್ದಾರೆಯೇ?
ಯೋಜನಾ ವಿಭಾಗದಿಂದ ನೂರಾರು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಕರೆತರುತ್ತಿರುವ ಬೆನ್ನಲ್ಲೇ ಆ ವಿಭಾಗದಲ್ಲಿ ಹೆಚ್ಚುವರಿ ಎಂಜಿನಿಯರ್‌ಗಳು ಇದ್ದಾರೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಹಾಗಿದ್ದರೆ, ಲಕ್ಷಾಂತರ ರೂ. ವೇತನ ಕೊಟ್ಟು ಹೀಗೆ ನೂರಾರು ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಅನವಶ್ಯಕವಾಗಿ ಇಟ್ಟುಕೊಳ್ಳುವ ಅವಶ್ಯಕತೆ ಏನಿದೆ? ವಿನಾಕಾರಣ ಹಣ ಪೋಲಾದಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.
ಕಾಲಾವಕಾಶ ಕೋರಿದ ಮೆಟ್ರೋ ಆಡಳಿತ ಮಂಡಳಿ
ಬೆಂಗಳೂರು: ಮೆಟ್ರೋ ಸಿಬ್ಬಂದಿ ಮತ್ತು ಬಿಎಂಆರ್‌ಸಿ ಆಡಳಿತ ಮಂಡಳಿ ನಡುವೆ ಸೋಮವಾರ ನೌಕರರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಮುಷ್ಕರ ಮುಂದೂಡಿಕೆ ನಂತರ ನಡೆದ ಮೊದಲ ಸಭೆಯಲ್ಲಿ ಬೆಂಗಳೂರು ಮೆಟ್ರೋ ರೈಲ್ವೆ ಎಂಪ್ಲಾಯೀಸ್ ಯೂನಿಯನ್
ಮುಖಂಡರು, ಮೆಟ್ರೋ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಬೇಕು, 3ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು, ಮೂಲಸೌಲಭ್ಯ ಕಲ್ಪಿಸಬೇಕು, ಹೆಚ್ಚುವರಿ ಪಾಳಿ ಭತ್ಯೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಳಿ ಮುಂದಿಟ್ಟರು.
ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ಪಡೆದ ಮಂಡಳಿ, ಬುಧವಾರ ಮತ್ತೂಂದು ಸುತ್ತಿನ ಮಾತುಕತೆ ನಡೆಸಲಿದೆ. ನ್ಯಾಯಾಲಯದ ಸೂಚನೆ ಮೇರೆಗೆ ವಾರದಲ್ಲಿ ಎರಡು ಬಾರಿ ಸಭೆ ನಡೆಸಬೇಕಾಗಿದ್ದು, 30 ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಅದರಂತೆ ಸಭೆ ನಡೆಸಲಾಗುತ್ತಿದೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.