ಸ್ಟೈಲೇ ಗೆಲುವಿನ ಸೋಪಾನ
Team Udayavani, Mar 27, 2018, 5:27 PM IST
ಅಲಂಕಾರ ಎನ್ನುವುದು ಕೇವಲ ಅಂದ- ಚೆಂದಕ್ಕೆ ಸೀಮಿತವಾದ ಸಂಗತಿಯಲ್ಲ. ಪ್ರತಿಷ್ಠೆಯ ಸಂಕೇತ ಅಂತಲೂ ಅದನ್ನು ಪರಿಗಣಿಸಬೇಕಿಲ್ಲ. ನಮ್ಮ ನ್ಯೂನತೆಗಳನ್ನು ಮುಚ್ಚಿ ಹಾಕುವ ತಂತ್ರ ಅದು ಅಂತಲೂ ಭಾವಿಸಬೇಕಿಲ್ಲ. ಚೆಂದವಾಗಿ ರೆಡಿ ಆಗುವುದು, ಆಕರ್ಷಕವಾಗಿ ಕಾಣುವುದು ಯಶಸ್ವಿ ವ್ಯಕ್ತಿಗಳ ಗುಟ್ಟೂ ಹೌದು. ಸ್ಟೈಲಿಷ್ ಆಗಿರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ…
ಇವತ್ತು ಕೆಲಸ ಸಿಕ್ಕೇ ಸಿಗುತ್ತೆ ಎನ್ನುವ ಕನಸು ಕಾಣುತ್ತಾ, ಅವರೆಲ್ಲ ಕುಳಿತಿದ್ದರು. ಏಕೆಂದರೆ, ಅದು ಒಳ್ಳೆಯ ಪಗಾರ ಕೊಡುವ ಕೆಲಸದ ಇಂಟರ್‌ವ್ಯೂ. ಕ್ಯಾಬೀನ್ ಹೊರಗೆ ಸಾಲಾಗಿ ಜೋಡಿಸಿಟ್ಟ ಕುರ್ಚಿಗಳಲ್ಲಿ ಹತ್ತಾರು ಅಭ್ಯರ್ಥಿಗಳು ಕುಳಿತಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಪುಸ್ತಕ. ವಾಚ್ ನೋಡುತ್ತಾ, ಮೊಗದ ಮೇಲೆ ಜಿನುಗುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಾ, ಮತ್ತೆ ಪುಸ್ತಕದ ಕಡೆಗೆ ದೃಷ್ಟಿ ನೆಡುತ್ತಿದ್ದರು.
ಆದರೆ, ಅಲ್ಲೊಬ್ಬಳು ಹುಡುಗಿಯ ವರ್ತನೆಯೇ ಬೇರೆಯಿತ್ತು. ಪುಸ್ತಕ ಹಿಡಿದು ತಯಾರಿ ನಡೆಸುವ ಬದಲು, ಚಿಕ್ಕದೊಂದು ಕನ್ನಡಿ ಹಿಡಿದು, ಮೊದಲೇ ಮೇಕಪ್ ಮಾಡಿದ್ದ ಮುಖಕ್ಕೆ ಮತ್ತೆ ಮತ್ತೆ ಟಚಪ್ ಮಾಡಿಕೊಳ್ಳುತ್ತಲೇ ಇದ್ದಳು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತೆ ಆತುರಾತುರವಾಗಿ ಕೊನೆಕ್ಷಣದ ತಯಾರಿಯಂತೆ ಓದಿಕೊಳ್ಳುತ್ತಿದ್ದ ನನಗೆ ಅವಳ ಆ ವರ್ತನೆ ನೋಡಿ ಅಚ್ಚರಿ.
ಮೊದಲೇ ಬಳಿದಿದ್ದ ಲಿಪ್‌ಸ್ಟಿಕ್‌ನ ಮೇಲೆ ಪುನಃ ಲಿಪ್‌ಸ್ಟಿಕ್ ಮೆತ್ತಿಕೊಳ್ಳುತ್ತಾ, ಕೂದಲನ್ನು ಸಾವರಿಸುತ್ತಾ, ತನ್ನ ಡ್ರೆಸ್ ಅನ್ನು ಸರಿಪಡಿಸಿಕೊಳ್ಳುತ್ತಾ ಇದ್ದ ಅವಳನ್ನು ವ್ಯಂಗ್ಯವಾಗಿ ಕೇಳಿಯೇ ಬಿಟ್ಟೆ: “ಶೂಟಿಂಗ್‌ಗೆ ಹೋಗುತ್ತಿರುವಂತೆ ಏಕೆ ಇಷ್ಟೊಂದು ಟಚಪ್ ಮಾಡಿಕೊಳ್ಳುತ್ತಿದ್ದೀಯಾ? ಒಳಗೆ ಫಿಲಂ ಆಡಿಷನ್‌ಗೂ ಕರೆದಿದ್ದಾರಾ?’.
ಅದಕ್ಕೆ ಅವಳು ನೀಡಿದ ಉತ್ತರದಲ್ಲಿ ಒಂದು ವಿಶೇಷತೆಯನ್ನು ಗಮನಿಸಿದೆ. “ಸರ್… ನಾನು ಕೇವಲ ಇಂಟರ್‌ವ್ಯೂ ಮಾತ್ರವಲ್ಲ, ಪರೀಕ್ಷೆ, ಭಾಷಣ ಅಥವಾ ಇನ್ನಾವುದೇ ವಿಶೇಷ ಸಂದರ್ಭದಲ್ಲಿ ನನಗೆ ಇಷ್ಟವಾಗುವಂತೆ ಅಲಂಕಾರ ಮಾಡಿಕೊಂಡರಷ್ಟೇ ನನ್ನೊಳಗೆ ಆತ್ಮವಿಶ್ವಾಸ ಮೂಡುತ್ತದೆ. ಇಲ್ಲದಿದ್ದರೆ ಕೈಕಾಲೆಲ್ಲ ಕಂಪಿಸುತ್ತದೆ. ಬೇಕಿದ್ದರೆ, ನೀವೂ ಇದನ್ನು ಪ್ರಯತ್ನಿಸಿ ನೋಡಿ’ ಎಂದಳಾಕೆ. ನಾನು ಪ್ರಯತ್ನಿಸಿಯೂ ಬಿಟ್ಟೆ. ಅವಳು ಹೇಳಿದ್ದು ನಿಜ ಅಂತನ್ನಿಸಿತು.
ಇಂದು ಅಲಂಕಾರ ಎನ್ನುವುದು ಕೇವಲ ಅಂದ-ಚೆಂದಕ್ಕೆ ಸೀಮಿತವಾದ ಸಂಗತಿಯಲ್ಲ. ಪ್ರತಿಷ್ಠೆಯ ಸಂಕೇತ ಅಂತಲೂ ಅದನ್ನು ಪರಿಗಣಿಸಬೇಕಿಲ್ಲ. ನಮ್ಮ ನ್ಯೂನತೆಗಳನ್ನು ಮುಚ್ಚಿ ಹಾಕುವ ತಂತ್ರ ಅದು ಅಂತಲೂ ಭಾವಿಸಬೇಕಿಲ್ಲ. ಚೆಂದವಾಗಿ ರೆಡಿ ಆಗುವುದು, ಆಕರ್ಷಕವಾಗಿ ಕಾಣುವುದು ಯಶಸ್ವಿ ವ್ಯಕ್ತಿಗಳ ಗುಟ್ಟೂ ಹೌದು. ಸ್ಟೈಲೀಷ್ ಆಗಿರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಅಲಂಕಾರವು, ಸೌಂದರ್ಯವನ್ನು ದುಪ್ಪಟ್ಟು ಮಾಡುವುದಷ್ಟೇ ಅಲ್ಲದೇ, ನಮ್ಮ ಮನಸ್ಸಿನಲ್ಲಿರುವ ಅಳಕು, ಕೀಳರಮೆಯನ್ನೂ ತೊಲಗಿಸುತ್ತದೆ. – ಆದರೆ, ಒಂದು ನೆನಪಿರಲಿ… ಸ್ಟೈಲಿಷ್ ಎನ್ನುವ ನೆಪದಲ್ಲಿ ಸಭ್ಯತೆಯ ಎಲ್ಲೆ ಮೀರುವುದು ಬೇಡ. ನಾಲ್ಕು ಜನ ಗೌರವ ಕೊಡುವಂತಿರಲಿ.
ಕೋಪ ಕಂಟ್ರೋಲ್ ಆಗುತ್ತೆ!
ಅತಿಯಾದ ಕೋಪ ಬಂದಾಗ ನಮ್ಮ ಕಣ್ಣಿಗೆ ಇಷ್ಟವಾಗುವಂತೆ ನಮ್ಮನ್ನು ನಾವು ಅಲಂಕರಿಸಿಕೊಂಡರೆ, ಕೋಪವನ್ನು ತಣಿಸಬಹುದು ಎನ್ನುತ್ತಾರೆ ಮನಃಶಾÏಸ್ತ್ರಜ್ಞರು. ಗೆಳತಿಯರ ಜೊತೆ ಮನಃಸ್ತಾಪ, ಸಹಕೆಲಸಗಾರರೊಂದಿಗೆ ಜಗಳ, ಕುಟುಂಬಸ್ಥರ ಜೊತೆ ವೈಮನಸ್ಸು ಅಥವಾ ಇನ್ನಾವುದೇ ಸಂದರ್ಭದಲ್ಲಿ ಕೋಪ ಬಂದಾಗ, ನಮ್ಮನ್ನು ನಾವು ಕಂಟ್ರೋಲ್ ಮಾಡಿಕೊಳ್ಳಲು ಇದು ಸರಳ ಉಪಾಯ. ಇಂಥ ಸಂದರ್ಭಗಳಲ್ಲಿ ಕನ್ನಡಿ ಮುಂದೆ ನಿಂತು ನಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬೇಕಂತೆ. ಕಿವುಚಿದ ಮುಖದ ಮೇಲೆ ಮೊದಲು ನಗುವನ್ನು ಮೂಡಿಸಿಕೊಳ್ಳಬೇಕು. ನಿಧಾನವಾಗಿ ಹುಬ್ಬು, ಕಣ್ಣು, ಮೂಗು, ತುಟಿಗಳನ್ನು ಸೂಕ್ಷ್ಮವಾಗಿ ನೋಡಬೇಕು. ಬಿಗಿಯಾದ ಮುಖವನ್ನು, ಸಡಿಲ ಮಾಡಿಕೊಳ್ಳುತ್ತಾ, ಹಾಗೇ ನಮ್ಮನ್ನು ನಾವು ನೋಡಿಕೊಳ್ಳುತ್ತಿರಬೇಕು.
ಅಷ್ಟರಲ್ಲಾಗಲೇ ಕೋಪ ಮುಕ್ಕಾಲು ಕರಗಿಹೋಗಿರುತ್ತೆ. ಇಷ್ಟೆಲ್ಲ ಮಾಡಿದ ಮೇಲೆ, ಮುಖಕ್ಕೆ ಪೌಡರ್ ಹಚ್ಚಿ, ಕೊಂಚ ಮೇಕಪ್ ಮಾಡಿಕೊಳ್ಳಿ. ಆಗ ನಿಮ್ಮ ಪ್ರತಿರೂಪದಲ್ಲಿ ಕೋಪದ ಎಳ್ಳಂಶವೂ ಇರುವುದಿಲ್ಲ. ಮುಖದಲ್ಲಿ ಏನೋ ಫ್ರೆಶ್‌ನೆಸ್, ಹೊಸದೇನೋ ಸಾಧಿಸಿದಂತೆ, ಏನೋ ಗೆಲ್ಲಲು ಹೊರಟಂತೆ ಭಾವಗಳು ಮೂಡುತ್ತವೆ.
ಇಂಟರ್‌ವ್ಯೂ ಇದ್ದಾಗಲೂ…
ನೀವು ಕೂಡ ಆ ಹುಡುಗಿಯ ನೀತಿಯನ್ನೇ ಅನುಸರಿಸಿದರೆ, ಖಂಡಿತಾ ಯಶಸ್ಸು ಸಿಗುತ್ತದೆ. ಸಂದರ್ಶನಕ್ಕೆ ಹೋಗುವಾಗ ಇಸ್ತ್ರೀ ಹಾಕಿದ ಗರಿಗರಿ ಬಟ್ಟೆ ಧರಿಸಿದರೆ ಸಹಜವಾಗಿ ಒಂದು ಕಾನ್ಫಿಡೆನ್ಸ್ ಮೂಡುತ್ತದೆ. ಮುಖದಲ್ಲಿ ಮಂದಹಾಸವೊಂದನ್ನು ಮುಂದಿಟ್ಟುಕೊಂಡರೆ, ಯಶಸ್ಸಿನ ಸಮೀಪದಲ್ಲಿಯೇ ನೀವಿದ್ದೀರಿ ಅಂತರ್ಥ. ಅಷ್ಟರಲ್ಲಾಗಲೇ, ನಿಮ್ಮ ಭಯಕ್ಕೂ ಗೇಟ್‌ಪಾಸ್ ಸಿಕ್ಕಿರುತ್ತೆ. ನಿಮ್ಮ ಮುಖದಲ್ಲಿ ಲವಲವಿಕೆ ಇದ್ದರೆ, ಇವನು ಕೊಟ್ಟ ಕೆಲಸವನ್ನು ಖುಷಿ ಖುಷಿಯಿಂದ ಮಾಡುತ್ತಾನೆಂಬ ಭರವಸೆ ಸಂದರ್ಶಕರೊಳಗೂ ಮೂಡುತ್ತದೆ.
ಸ್ಟೈಲಿಷ್ ಆಗಿದ್ದೀರಂದ್ರೆ, ಅಪ್‌ಡೇಟ್ ಆಗಿದ್ದೀರಂತ…
– ದೈನಂದಿನ ಜೀವನವು ಬೋರೆನಿಸಿದಾಗ ನಿಮ್ಮ ಹೇರ್‌ಸ್ಟೈಲ್ ಅನ್ನು ಬದಲಿಸಿಕೊಳ್ಳಿ. ಇಷ್ಟಪಟ್ಟು ಶಾಪಿಂಗ್ ಮಾಡಿದ್ದ ಬಟ್ಟೆಯನ್ನು ಹಾಕಿಕೊಳ್ಳಿ. ಆ ಖುಷಿ ನಿಮ್ಮ ಇಡೀ ದಿನದ ಲವಲವಿಕೆಯನ್ನು ಹೆಚ್ಚಿಸುತ್ತದೆ.
– ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಚೆನ್ನಾಗಿ ಓದುಕೊಳ್ಳುವುದರ ಜೊತೆಗೆ ನಿಮ್ಮ ಕಣ್ಣಿಗೆ ಸುಂದರವಾಗುವಂತೆ ಸಿಂಗರಿಸಿಕೊಂಡು ಪರೀಕ್ಷೆ ಬರೆಯಲು ಹೊರಡಿ. ಆಗ ನಿಮ್ಮ ಬಳಿ ಕೀಳರಿಮೆ ಎನ್ನುವುದು ಸುಳಿಯುವುದೇ ಇಲ್ಲ. ಧೈರ್ಯವೂ ಜತೆಗಿರುತ್ತದೆ.
– ಸ್ಟೇಜ್‌ನಲ್ಲಿ ಮಾತಾಡುವವರು ಸಭ್ಯ ಹಾಗೂ ಗೌರವಯುತ ಉಡುಗೆ ತೊಟ್ಟರೆ, ಆತ್ಮವಿಶ್ವಾಸ ಹೆಚ್ಚುತ್ತದೆ. ನಸುನಗುತ್ತಾ, ಸಂದರ್ಭಕ್ಕೆ ತಕ್ಕಂತೆ ಗಾಂಭೀರ್ಯದ ಹಾವಭಾವದಲ್ಲಿದ್ದರೆ ಬೇಕಾದಷ್ಟಾಯಿತು.
– ಫ್ಯಾಶನ್ ಟ್ರೆಂಡ್‌ಗಳಿಗೆ ಆದಷ್ಟು ನಿಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದರೆ, ಕಾಲ ಕಾಲಕ್ಕೆ ಅಪ್‌ಡೇಟ್ ಆಗುತ್ತಿದ್ದೀರಿ ಅಂತರ್ಥ.
– ಆಫೀಸ್ ಅಥವಾ ಕಾಲೇಜಿಗೆ ಹೋಗುವವರು ಸ್ಟೈಲಿಷ್ ಆಗಿದ್ದರೆ, ತುಸು ಮರ್ಯಾದೆ ಹೆಚ್ಚು.
– ಕಾವ್ಯಾ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.