ಸರಕಾರಿ ಹಾಸ್ಟೆಲ್‌ ಎಂಬ ಬಿಳಿಯಾನೆ


Team Udayavani, Mar 28, 2018, 7:55 AM IST

bikliyane.jpg

ದುರಂತವೆಂದರೆ ಬಹುತೇಕ ಹಾಸ್ಟೆಲುಗಳಲ್ಲಿ ಶೌಚಾಲಯಗಳು ಎಂತಹ ಕೆಟ್ಟ ಸ್ಥಿತಿಯಲ್ಲಿವೆ ಎಂದರೆ, ನೀರು ಸರಾಗವಾಗಿ ಹರಿಯುವುದಿರಲಿ, ಕೆಟ್ಟು ನಿಂತ ಕೊಳಚೆ ತೊಳೆಯುವ ವ್ಯವಸ್ಥೆಯೇ ಇಲ್ಲ.

ರಾಜ್ಯದಲ್ಲಿರುವ ಎಲ್ಲ ಸರಕಾರಿ ಹಾಸ್ಟೆಲ್‌ಗ‌ಳು ನರಕ ಸದೃಶವಾಗಿದ್ದು, ಅವುಗಳನ್ನು ಖುದ್ದು ತಪಾಸಣೆ ನಡೆಸಿ ಸೂಕ್ತ ವರದಿ ಮಂಡಿಸಲು ಸದನ ಸಮಿತಿಯೊಂದನ್ನು ರಚಿಸಬೇಕೆಂದು ಆಗ್ರಹಿಸಿ ನಾವೆಲ್ಲಾ ಅಂದು ಮೇಲ್ಮನೆಯ ಸದನದಲ್ಲಿ ಬಾವಿಗಿಳಿ ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರಕ್ಕೂ ವಿಪಕ್ಷದ ಸದಸ್ಯರಾದ ನಮಗೂ ವಾದ ವಿವಾದಗಳ ಸಮರ ಏರ್ಪಟ್ಟಿತು. ಸಾಮಾಜಿಕ ನ್ಯಾಯವೆಂದರೆ ರಾಜ್ಯದಲ್ಲಿರುವ ಸರಕಾರಿ ಹಾಸ್ಟೆಲ್‌ನಲ್ಲಿ ಬದುಕುತ್ತಿರುವ ಎಳೆಯ ಮಕ್ಕಳಿಗೆ ಉಣ್ಣುವ ಅನ್ನ ಕೊಡುವಲ್ಲಿ ವಂಚನೆ ಮಾಡಿದರೆ ಕಲಿಯುತ್ತಿರುವ ಮಕ್ಕಳ ಬದುಕು ನರಕವಾಗುತ್ತದೆ. ಮಕ್ಕಳಿಗೆ ಕೊಡಬೇಕಾದ ನಿತ್ಯದ ಊಟ – ಉಪಹಾರ, ಕುಡಿಯುವ ನೀರು, ತೊಡುವ ಸಮವಸ್ತ್ರದಲ್ಲಿ ವಂಚನೆ ಯಾಗುತ್ತದೆ ಎಂದು ಆಪಾದಿಸಿದ್ದೆವು. ವಿದ್ಯಾರ್ಥಿಗಳಿಗೆ ಸರಬರಾಜು ಆಗುತ್ತಿರುವ ಆಹಾರ ವಸ್ತುಗಳು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಆರೋಪಿಸಿ ಹಾಸ್ಟೆಲಿನ ಪರಿಶೀಲನೆಗೆ ಸದನ ಸಮಿತಿಗಾಗಿ ಒತ್ತಾಯ ಮಾಡಿದ್ದೆವು. ಆದರೆ ಅಂದು ವಿಪಕ್ಷ ಸದಸ್ಯರಾದ ನಮ್ಮ ಒತ್ತಾಯಕ್ಕೆ ಸರಕಾರ ಮಣಿಯಲೇ ಇಲ್ಲ.

ಸರಕಾರದ ಸಹಮತ ಸಿಗದೆ ವಿಪಕ್ಷದ ಒತ್ತಾಯ ಮುಂದುವರೆದಾಗ ಎರಡು ಬಾರಿ ಸದನವನ್ನು ಸಭಾಪತಿಗಳು ಮುಂದೂಡಿದ್ದರು. ಅದ್ಯಾಕೊ ಸದನ ಸಮಿತಿ ಮಾಡಲೊಪ್ಪದ ಸರಕಾರ ದೃಢ ನಿಲುವಿನಿಂದ ಸದನದ ಸಮಯ ವ್ಯಯ ವಾಗುವುದರಿತ ನಾವು ಆಳುವವರೊಡನೆ ವಾದ ವ್ಯರ್ಥವೆನಿಸಿ ಸಭಾತ್ಯಾಗ ಮಾಡಿ ಹೊರ ಬಂದೆವು. ಆಗ ನಾವೆಲ್ಲಾ ಸಭಾಪತಿ ಶಂಕರಮೂರ್ತಿಯವರಿಗೆ ಹೇಳಿದ್ದೇನೆಂದರೆ, ಕರ್ನಾಟಕ ರಾಜ್ಯದ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ ಅಲ್ಲದೇ ಮಹಿಳಾ ಹಾಸ್ಟೆಲ್‌ಗ‌ಳಲ್ಲಿ ಹಿಂದುಳಿದ ವರ್ಗಗಳ ಮಕ್ಕಳ ದಾರುಣ ಬದುಕನ್ನು ನಮ್ಮ ಪಕ್ಷದ ಸಮಿತಿಯ ಮೂಲಕ ಸಮೀಕ್ಷೆ ಮಾಡುತ್ತೇವೆ. ಮಾತ್ರವಲ್ಲ ನಾವು ಮಾಡಿದ ಅಧ್ಯಯನದ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಳೆಯ ಮಕ್ಕಳ ಬಗ್ಗೆ ಸರಕಾರದ ಬೇಜವಾಬ್ದಾರಿ ಎತ್ತಿ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದೆವು. ಇದೀಗ ಇತ್ತೀಚೆಗೆ ಸರಕಾರಿ ಹಾಸ್ಟೆಲ್‌ಗ‌ಳ ದುಸ್ಥಿತಿ ಹೆಣ್ಣು ಗಂಡೆನ್ನದೆ ಅಲ್ಲಿ ಕಲಿಯುತ್ತಿರುವ ಮಕ್ಕಳ ದಾರುಣ ಬದುಕಿನ ನೈಜ ಚಿತ್ರಣ ಮಾತ್ರ ವಲ್ಲ, ಅಧಿಕಾರಿಗಳು ಮತ್ತು ಆಳುವ ಪಕ್ಷದ ರಾಜ ಕಾರಣಿಗಳ ಪಾಲಿಗೆ ಆದಾಯದ ಸ್ವರ್ಗವಾದ ಪರಿಯನ್ನೊಳ ಗೊಂಡ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ ದ್ದೇವೆ. ನನ್ನ ನೆನಪಿನ ಮಟ್ಟಿಗೆ ಒಂದು ರಾಜಕೀಯ ಪಕ್ಷ ತನ್ನೆಲ್ಲಾ ಸಂಘಟನೆಗಳನ್ನು ಬಳಸಿಕೊಂಡು ರಾಜ್ಯದಲ್ಲಿರುವ ಬಡವರ ಮಕ್ಕಳ ಪ್ರತಿ ಹಾಸ್ಟೆಲ್‌ಗೆ ಭೇಟಿ ನೀಡಿ ಮಕ್ಕಳ ಊಟ ತಿಂಡಿ, ಕುಡಿಯುವ ನೀರು, ವಾಸ್ತವ್ಯದ ಕೊಠಡಿ, ಮಲಗುವ ಮಂಚ, ಶೌಚಾಲಯಗಳನ್ನೆಲ್ಲಾ ಖುದ್ದು ಕಂಡು ವರದಿ ಸಿದ್ಧಪಡಿಸುವುದು ಸುಲಭವಲ್ಲ. ಅಚ್ಚರಿಯೆಂದರೆ ಒಂದೊಂದು ವಿದ್ಯಾರ್ಥಿ ನಿಲಯಗಳಿಗೂ ಭೇಟಿ ನೀಡಿದಾಗಲೂ ನಮ್ಮ ಸಂಘಟನೆಗಾದ ಅನುಭವ ಸಣ್ಣದಲ್ಲ.ಸಿದ್ದರಾಮಯ್ಯನವರ ಸರಕಾರದ ಜೊತೆ ನಮಗೆ ತಾತ್ವಿಕ ಬಿನ್ನಾಭಿಪ್ರಾಯವಿರುವುದೇ ಹೊರತು ವ್ಯಕ್ತಿಗತವಲ್ಲ. ಆದರೆ ಸರಕಾರಿ ಹಾಸ್ಟೆಲ್‌ಗ‌ಳನು,° ಅಲ್ಲಿನ ಮಕ್ಕಳ ನರಕ ಸದೃಶ ಬದುಕನ್ನು ಕಂಡ ನಂತರ ವಿಪಕ್ಷದವರಾದ ನಮಗನಿಸಿದ್ದು ಈ ರಾಜ್ಯದಲ್ಲಿ ಸರಕಾರಿ ಹಾಸ್ಟೆಲ್‌ ನಡೆಸುವವರು ಖಂಡಿತ ಮನುಷ್ಯರಲ್ಲ, ಬದಲಾಗಿ ಲೂಟಿಕೋರರು. ಒಂದು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಅನುಪಾತಕ್ಕನುಗುಣವಾಗಿ ಕೊಠಡಿಗಳು, ಸ್ನಾನಗೃಹಗಳು ಶೌಚಾಲಯಗಳಿರಬೇಕು. ವಿದ್ಯಾರ್ಥಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು, ಶಿಕ್ಷಕರು, ವಾರ್ಡನ್‌ಗಳು, ಮಹಿಳಾ ಹಾಸ್ಟೆಲ್‌ ಆಗಿದ್ದರೆ, ಕನಿಷ್ಠ ಆವರಣ ಗೋಡೆ, ಭದ್ರತಾ ವ್ಯವಸ್ಥೆಗಳಿರಬೇಕು.

ದುರಂತವೆಂದರೆ ಬಹುತೇಕ ಹಾಸ್ಟೆಲುಗಳಲ್ಲಿ ಶೌಚಾಲಯಗಳು ಎಂತಹ ಕೆಟ್ಟ ಸ್ಥಿತಿಯಲ್ಲಿವೆ ಎಂದರೆ, ನೀರು ಸರಾಗವಾಗಿ ಹರಿಯುವುದಿರಲಿ, ಕೆಟ್ಟು ನಿಂತ ಕೊಳಚೆ ತೊಳೆಯುವ ವ್ಯವಸ್ಥೆಯೇ ಇಲ್ಲ. ಮಾತ್ರವಲ್ಲ ಹೆಣ್ಣು ಮಕ್ಕಳ ಶೌಚಾಲಯಕ್ಕೆ ಬಾಗಿಲೇ ಇಲ್ಲದ ಸ್ಥಿತಿ. ಸ್ನಾನಗೃಹದ ಚಿಲಕಗಳು ಕಿತ್ತು ಹೋಗಿದ್ದು, ಕೇಳುವವರೇ ಇಲ್ಲ. ಇದಕ್ಕೆಲ್ಲಾ ಕಾರಣೀ ಕರ್ತರಾದ ಇಲಾಖೆ ಸಂಬಂಧವೇ ಇಲ್ಲದಂತಿದೆ. ಕೋಲಾರ ಜಿಲ್ಲೆಯ ಒಂದು ಹಾಸ್ಟೆಲ್‌ನಲ್ಲಿ ಶೌಚಾಲಯದಲ್ಲೇ ನೀರು ಸಂಗ್ರಹಣ ತೊಟ್ಟಿ ಇಡಲಾಗಿದ್ದು, ಅದೇ ಜಾಗದಲ್ಲಿ ಮಕ್ಕಳಿಗೆ ವಿತರಿಸಬೇಕಾದ ಪಠ್ಯ ಪುಸ್ತಕಗಳ ಕಟ್ಟು ತುಂಬಿಸಿ ಡಲಾಗಿದೆ. ಶೌಚಾಲಯದೊಳಗೆ ನೀರಿನ ತೊಟ್ಟಿ, ಪುಸ್ತಕದ ಕಟ್ಟುಗಳನಿಟ್ಟರೇ ಇನ್ನು ಸ್ನಾನ ಗೃಹ ಅಡುಗೆ ಕೋಣೆಗಳ ಕಥೆಯೇನು? ಕಲಬುರ್ಗಿ ಮತ್ತು ಗದಗ ಜಿಲ್ಲೆಯ ಹಾಸ್ಟೆಲ್‌ಗ‌ಳಲ್ಲಿ ಕೊಠಡಿಗಳನ್ನು ಕಂಡರೆ ಉಗ್ರಾಣದ ಮತ್ತು ಪಾಠದ ಕೊಠಡಿಗಳು ಬೇರೆ ಬೇರೆಯಾಗಲೂ ಸಾಧ್ಯವೇ ಇಲ್ಲ. ದೇಶಕ್ಕೆ ಪ್ರಧಾನಿಯನ್ನು ನೀಡಿದ ಪುಣ್ಯ ನೆಲ ಹಾಸನದ ಶೇಕಡಾ 45ರಷ್ಟು ಮಕ್ಕಳ ಸ್ನಾನ ಗೃಹಗಳು ಒಡೆದು ಹೋಗಿ ಬಾಗಿಲುಗಳಿಲ್ಲದೆ ಉಪಯೋಗಿಸಲು ಸಾಧ್ಯವಿಲ್ಲವೆಂದು ಪೋಟೊ ಸಹಿತ ದಾಖಲಾಗಿದೆ. ನಾಡಿನ ದೊರೆ ಸಿದ್ದರಾಮಯ್ಯನವರ ತವರು ಮೈಸೂರು ಜಿಲ್ಲೆಯಲ್ಲಿ ಶೇಕಡಾ 65ರಷ್ಟು ಸ್ನಾನಗೃಹ ಹಾಗೂ ಶೌಚಾಲಯಗಳ ಬಳಸಲಿಕ್ಕೆ ಸಾಧ್ಯವಿಲ್ಲದಿರುವುದು ಶೋಚ ನೀಯ ಸಂಗತಿ. ಕಾರಾವಾರದ ವಿದ್ಯಾರ್ಥಿ ನಿಲಯದಲ್ಲಿ ಕುಡಿಯಲು ಮತ್ತು ಅಡುಗೆ ಮಾಡಲು ಉಪಯೋಗಿಸುವ ನೀರು ಕಲಗಚ್ಚು ಬಣ್ಣದಾಗಿದ್ದು, ಮಕ್ಕಳ ಆರೋಗ್ಯವನ್ನು ದೇವರೆ ರಕ್ಷಿಸಬೇಕು. ಮಕ್ಕಳ ಸ್ನಾನಕ್ಕೆ ಬಿಸಿ ನೀರು ಕೊಡಬೇಕೆಂಬ ನಿಯಮವಿದ್ದರೂ, ಯಾದಗಿರಿ, ರಾಯಚೂರು, ಕೊಪ್ಪಳ, ಚಿಕ್ಕೋಡಿ, ಧಾರವಾಡ, ಬಳ್ಳಾರಿ, ವಿಜಯಪುರ, ಗದಗ ಮತ್ತು ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ಶೇಕಡಾ 80ರಷ್ಟು ಮಕ್ಕಳಿಗೆ ತಣ್ಣೀರೆ ಗತಿ ಎಂದು ದಾಖಲೆ ಸಹಿತ ಸ್ಪಷ್ಟಪಡಿಸಿದ್ದೇವೆ. ಹೊಗೆ ಮುಕ್ತ ಗ್ರಾಮಗಳನ್ನು ಸೃಷ್ಟಿ ಮಾಡಬೇಕೆಂದು ದೇಶವೇ ಟೊಂಕ ಕಟ್ಟಿ ನಿಂತಿದ್ದರೆ ನಮ್ಮ ರಾಜ್ಯದ 123 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್‌ಗ‌ಳು ಹಾಗೂ 282 ಹಿಂದುಳಿದ ವರ್ಗದ ಹಾಸ್ಟೆಲ್‌ಗ‌ಳಲ್ಲಿ ಬಿಸಿ ನೀರಿಗಾಗಿ ಈ ಕ್ಷಣದವರೆಗೂ ಸೌದೆ ಒಲೆ ಬಳಸಲಾಗುತ್ತದೆ. ನಿಜಕ್ಕೂ ಬಡವರ ಮಕ್ಕಳು ಹೊಟ್ಟೆ ತುಂಬಾ ಊಟ ಮಾಡಿ ಶ್ರದ್ಧೆಯಿಂದ ಪಾಠ ಕಲಿಯಲಿ ಎಂಬ ಉದ್ದೇಶದಿಂದ ಸರಕಾರಿ ಹಾಸ್ಟೆಲ್‌ಗ‌ಳನ್ನು ನಿರ್ಮಿಸಲಾಗಿ ದ್ದರೆ, ಧರಿಸಿದ ಕೊಳೆ ಬಟ್ಟೆಯನ್ನು ಒಗೆಯಲು ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ಸೌಲಭ್ಯಗಳಿಲ É ದಿರುವುದರಿಂದ ಮಕ್ಕಳು ಬಟ್ಟೆ ಒಗೆದು ತರಲು ಊರಿಗೆ ಹೋಗಿ ಬರುವುದು ಕಂಡು ಬಂದಿದೆ.

ಹಾಸಿಗೆ ದಿಂಬಲ್ಲೂ ಲಂಚ

ಒಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಹೊಂದಿ ರುವ 1080 ಹಾಸ್ಟೆಲ್‌ಗ‌ಳಲ್ಲಿ ಹಾಗೂ ಹಿಂದುಳಿದ ವರ್ಗಗಳ ಪೈಕಿ 1510 ಹಾಸ್ಟೆಲ್‌ಗ‌ಳಲ್ಲಿ ಶೇಕಡಾ 55ರಷ್ಟು ಮಕ್ಕಳಿಗೆ ಮಲಗಲು ಮಂಚ ಒದಗಿಸಿಲ.É ನಾವೆಲ್ಲಾ ಸರಕಾರವನ್ನು ತರಾ ಟೆಗೆ ತೆಗೆದುಕೊಂಡಂತೆ, ಹಾಸಿಗೆ ದಿಂಬುಗಳನ್ನು ಕೆಲವೊಂದು ಕಡೆ ಕೊಟ್ಟಿಲ್ಲ, ಕೊಟ್ಟರೂ ಅನೇಕ ಕಡೆಗಳಲ್ಲಿ ಕಳಪೆ ಮಟ್ಟದಾಗಿದ್ದು, ಹಾಸಿಗೆ ದಿಂಬಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮಗ್ಗಲು ಮಗುಚಿತು ಎಂಬ ವರದಿಯನ್ನು ತನಿಖೆ ಮಾಡ ಬೇಕೆಂದರೂ ಸರಕಾರವು ಒಂದು ಹೆಜ್ಜೆ ಮುಂದಡಿ ಇಡಲಿಲ್ಲ. ಕುತೂಹಲದ ಸಂಗತಿಯೆಂದರೆ ವೀರಪ್ಪ ಮೊಯ್ಲಿಯವರು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿದಾಗ ಶೇಕಡಾ 75ರಷ್ಟು ಎಸ್‌.ಸಿ, ಎಸ್‌.ಟಿ ಮಕ್ಕಳಿಗೆ ಮಲಗಲು ಮಂಚವನ್ನು ಒದಗಿಸಲಾಗಿಲ್ಲ. ಶಿವಮೊಗ್ಗ ವಿದ್ಯಾರ್ಥಿ ನಿಲಯದಲ್ಲಿ ಶೌಚಾಲಯ ಬಾಗಿಲು ನಾಪತ್ತೆಯಾ ಗಿದ್ದು, ಹುಡುಕುವುದೇ ಕಷ್ಟದ ಪರಿಸ್ಥಿತಿ ಇದ್ದರೆ ಗುಲ್ಬರ್ಗದ ನಿಲಯದಲ್ಲಿ ಮಲಗುವ ಮಂಚಗಳು ಕಾಲು ಮೇಲೆ ತಲೆಕೆಳ ಗಾಗಿ ಬಿದ್ದು ವರ್ಷಗಳೇ ಸಂದಂತಿದೆ. ಯಾದಗಿರಿ ಜಿಲ್ಲೆಯಲ್ಲಿ ರುವ ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ಮಕ್ಕಳಿಗೆ ಮಂಚವಿರುವುದೇ ಗೊತ್ತಿಲ್ಲ ಏಕೆಂದರೆ ಇಲ್ಲಿಯವರೆಗೆ ಒಂದೂ ಮಂಚ ವಿತರಣೆ ಯಾಗಿಲ್ಲ. ಪೊಡವಿಗೊಡೆಯ ಶ್ರಿ ಕೃಷ್ಣನ ನಾಡಿನಲ್ಲಿ ಮಂಚವಿಲ್ಲದೆ ಮಕ್ಕಳು ಮುರುಟಿ ಮಲಗಿರುವುದು ಫೋಟೊ ಸಹಿತ ದಾಖಲಿಸಿ ಸರಕಾರಕ್ಕೆ ಕಳುಹಿಸಲಾಗಿದೆ.

ಶುದ್ಧ ನೀರಿಗೂ ಸಂಕಷ್ಟ

ಹಿಂದುಳಿದ ಮತ್ತು ದಲಿತ ಮಕ್ಕಳ ಹಾಸ್ಟೆಲ್‌ಗ‌ಳಲ್ಲಿ ಶುದೀœಕೃತ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಒಟ್ಟು 2600 ಹಾಸ್ಟೆಲ್‌ಗ‌ಳ ಪೈಕಿ 1000 ಹಾಸ್ಟೆಲ್‌ಗ‌ಳಲ್ಲಿ ಮಕ್ಕಳಿಗೆ ಕುಡಿ ಯುವ ನೀರಿನ ಸೌಲಭ್ಯವನ್ನು ಕಡೆಗಣಿಸಲಾಗಿದೆ. ಒಂದು ವೇಳೆ ನೀರು ಒದಗಿಸಿದ್ದರೂ ನೀರನ್ನು ಶುದ್ಧೀಕರಿಸಿಲ್ಲ. ಚಾಮರಾಜ ನಗರ ಮತ್ತು ಕಲಬುರ್ಗಿಯಲ್ಲಿ ಶೇಕಡಾ 50ರಷ್ಟು ಹಾಸ್ಟೆಲ್‌ಗ‌ಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಒದಗಿಸಲಾಗಿಲ್ಲ. ಸರಕಾರವೊಂದು ತಮ್ಮದೇ ಹಾಸ್ಟೆಲ್‌ನಲ್ಲಿ ಮಕ್ಕಳ ಕುಡಿಯುವ ನೀರನ್ನು ಒದಗಿಸಿಲ್ಲ ಎಂದರೆ ಇದನ್ನು ಆಡಳಿತದ ಇಚ್ಛಾಶಕ್ತಿ ಯೆಂದು ಕರೆಯುವುದಾದರೂ ಹೇಗೆ? ಒಂದೆಡೆ ಮುಂದಿನ ಪ್ರಜೆಗಳ ನೀರಿನ ದಾಹ ಮತ್ತೂಂದೆಡೆ ಸಮಸ್ಯೆಗಳನ್ನು ಮರೆತು ಆಳುವವರಿಗೆ ಅಧಿಕಾರದ ದಾಹ… ಒಟ್ಟಾರೆ ಕೆಲವು ಕೇಂದ್ರಗಳಲ್ಲಿ ಮಕ್ಕಳು ಪಾತ್ರೆಗಳಲ್ಲಿ ನೀರು ಹೊತ್ತು ತರುವ ವ್ಯವಸ್ಥೆಗಳಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಒದಗಿಸಿದ ನೀರಿನ ಪೈಕಿ ಶೇಕಡಾ 75ರಷ್ಟು ಅಶುದ್ಧ ನೀರು ಸರಬರಾಜು ಆಗುತ್ತಿದೆ. ವರ್ಷಕ್ಕೆ ಸಾವಿರ ಶುದ್ಧ ನೀರಿನ ಘಟಕ ಮಾಡುವ ಭರವಸೆ ನೀಡುವ ಸರಕಾರ ಹಾಸ್ಟೆಲಿನಲ್ಲಿ ಅಶುದ್ಧ ನೀರು ಸರಬರಾಜು ಮಾಡಿದರೆ ಯಾರನ್ನು ಪ್ರಶ್ನಿಸಬೇಕು? ಯಾರು ಉತ್ತರಿಸಬೇಕು?

ಊಟದಲ್ಲಿಯೂ ತಾತ್ಸಾರ

ಪ್ರತಿ ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆ ಮತ್ತು ಗುರಿಯಂತೆ ಸಾಂಬಾರು, ಪಲ್ಯ ವಾರಕ್ಕೆರಡು ದಿನ ಮಾಂಸಹಾರ, ಮೊಟ್ಟೆ ಇವೆಲ್ಲಾ ಮಕ್ಕಳಿಗೆ ತೃಪ್ತಿಯಾಗಿ ಕೊಡಬೇಕೆಂದು ನಿಯಮವಿದೆ. 2500ಕ್ಕೂ ಹೆಚ್ಚಿನ ಹಾಸ್ಟೆಲ್‌ಗ‌ಳಲ್ಲಿ ಕಲಿಯುತ್ತಿರುವ 2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ನೆಮ್ಮದಿಯ ಊಟವಾಗಲಿ, ಉಪಹಾರವಾಗಲಿ ಸಿಗುತ್ತಿಲ್ಲ. ಶೇಕಡಾ 13ರಷ್ಟು ಶಾಲೆಗಳಲ್ಲಿ ರಾತ್ರಿ ಊಟ ಕೊಡುತ್ತಿಲ್ಲ ಎಂಬ ದೂರುಗಳನ್ನು ಮಕ್ಕಳು ಹೇಳಿದರೆ ಅಷ್ಟೇ ಪ್ರಮಾಣದ ಶಾಲೆಗಳಲ್ಲಿ ಬೆಳಗ್ಗಿನ ತಿಂಡಿಯೂ ಕೊಡುತ್ತಿಲ್ಲ ಎಂಬ ಹಾಲು ಗಲ್ಲದ ಮಕ್ಕಳು ಪಿಸುಮಾತಿನಲ್ಲಿ ದೂರುತ್ತಾರೆ. ಸುಮಾರು 500ಕ್ಕೂ ಹೆಚ್ಚು ಹಾಸ್ಟೆಲ್‌ಗ‌ಳ ಮಕ್ಕಳು ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ ಎಂದು ಕೊರಗುತ್ತಾರೆ. ಉತ್ತರ ಕರ್ನಾಟಕದ ಭಾಗ ದಲ್ಲಿ ಶೇಕಡಾ 88ರಷ್ಟು ಹಾಸ್ಟೆಲ್‌ಗ‌ಳಲ್ಲಿ ಸರಿಯಾದ ಊಟವೇ ಕೊಡುತ್ತಿಲ್ಲ ಎಂದ ಮೇಲೆ “ರಾಜ್ಯವಿಡೀ ಅನ್ನಭಾಗ್ಯ-ಮಕ್ಕಳಿಗೆ ಮಾತ್ರ ಹಸಿವಿನ ಭಾಗ್ಯ’ ಎಂದಂತಾಯ್ತು. ಆತಂಕಕಾರಿ ವಿಷಯವೆಂದರೆ ಕಲಬುರ್ಗಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇಖಡಾ 40ರಷ್ಟು ಶಾಲೆಗಳಲ್ಲಿ ಊಟ ಮತ್ತು ಉಗ್ರಾಣದ ಕೊಠಡಿಗಳೇ ಕಂಡು ಬರುತ್ತಿಲ್ಲ. ಕಸದ ತಿಪ್ಪೆಯ ಪ್ರಮಾಣವೆ ಹಂದಿಗಳನ್ನು ಕೈ ಬೀಸಿ ಕರೆಯುತ್ತಿವೆ. ಕೊಪ್ಪಳದ ಅನೇಕ ಸರಕಾರಿ ಹಾಸ್ಟೆಲುಗಳು ಖಾಯಂ ಹಂದಿಗಳ ನಿವಾಸವಾಗಿದೆ. ಹಾಸ್ಟೆಲ್‌ಗ‌ಳಲ್ಲಿ ಶಾಶ್ವತವಾಗಿ ಸಿಬ್ಬಂದಿಗಳೆ ಇಲ್ಲದಿರುವ ಸ್ಥಿತಿಯಿಂದಾಗಿ ಕೆಲವೊಮ್ಮೆ ಮಕ್ಕಳೆ ಸ್ವತ್ಛತೆ ಕೆಲಸ ಮಾಡುತ್ತಾರೆ. ರಾಜ್ಯದ 288 ದಲಿತ ಮಕ್ಕಳ ವಸತಿ ಶಾಲೆ ಮತ್ತು 648 ಒಬಿಸಿ ಹಾಸ್ಟೆಲುಗಳಲ್ಲಿ ಸ್ವತ್ಛತಾ ಕಾರ್ಮಿಕರ ನೇಮಕವಾಗಿಲ್ಲ ಅಥವಾ ನೇಮಕ ಗೊಂಡವರು ಕರ್ತವ್ಯ ನಿರ್ವಹಿಸದಿರು ವುದರಿಂದ ದುರ್ವಾಸನೆ, ನೊಣ, ತಿಗಣೆ, ಸೊಳ್ಳೆಗಳ ಕಾಟದಿಂದಾಗಿ ಕೊಳಕು ಕೊಂಪೆಯಾಗಿದ್ದು, ರೋಗ ರುಜಿನಗಳ ಮನೆಗಳಾಗಿವೆ. ನಿತ್ಯ ಬೇಡ ಕನಿಷ್ಠ ವಾರಕ್ಕೊಮ್ಮೆಯಾದರೂ ಸರಿಯಾದ ಸ್ವತ್ಛತೆ ಕಾಣಬೇಕಾದ ಹಾಸ್ಟೆಲ್‌ಗ‌ಳು ಅಕ್ಷರಶಃ ಹಂದಿ ಗೂಡುಗಳಾಗಿವೆ.

ಇದ್ದೂ ಇಲ್ಲದಂತ ಸೌಕರ್ಯ

ಮಕ್ಕಳ ಶಿಕ್ಷಣಕ್ಕಾಗಿ ಕಂಪ್ಯೂಟರ್‌ಗಳು, ವಿದ್ಯುತ್‌ ಇಲ್ಲದಿದ್ದಾಗ ಬಳಸಲು ಸೋಲಾರ್‌ಗಳು ಅಥವಾ ಜನರೇಟರ್‌ಗಳು ಟಿ.ವಿ ಸೌಲಭ್ಯ, ದಿನಪತ್ರಿಕೆಗಳು ಸೇರಿದಂತೆ ಗ್ರಂಥಾಲಯಗಳಲ್ಲಿ ಶೇಕಡಾ 50ರಷ್ಟು ಅನುಕೂಲಗಳೇ ಲಭ್ಯವಿಲ್ಲ. ಒಟ್ಟಾರೆ ಶೇ. 75ರಷ್ಟು ಅಂದರೆ ಸುಮಾರು 1700ಕ್ಕೂ ಮೀರಿದ ಹಾಸ್ಟೆಲ್‌ಗ‌ಳಲ್ಲಿ ಗ್ರಂಥಾಲಯಗಳು ಕಂಡು ಬರುತ್ತಿಲ್ಲ. ಸಹಜವಾಗಿಯೆ ಇಂತಹ ಹಾಸ್ಟೆಲ್‌ಗ‌ಳಲ್ಲಿ ಬದುಕಿಗೆ ಅಗತ್ಯಕ್ಕೆ ಬೇಕಾದ ಯಾವುದೂ ಇಲ್ಲ. ಸೇವಾನ್ಯೂನತೆಯೆಂದರೆ ಏನೆಂದು ಹಾಸ್ಟೆಲ್‌ ನಡೆಸುವವರಿಗೆ ಗೊತ್ತಿಲ್ಲ. ಶಿಕ್ಷಕರ ಕಥೆಯಿರಲಿ 400ಕ್ಕೂ ಹೆಚ್ಚು ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌ಗಳೇ ಇಲ್ಲ. ಹೆಣ್ಣು ಮಕ್ಕಳ ವಸತಿ ನಿಲಯವೂ ಸೇರಿದಂತೆ ಸಾವಿರ ವಿದ್ಯಾರ್ಥಿ ನಿಯರಿಗೆ ರಾತ್ರಿ ಕಾವಲುಗಾರರಾಗಲಿ ಹಗಲು ಕಾವಲು ಗಾರರಾಗಲಿ ಕಾಣ ಸಿಗಲು ಸಾಧ್ಯವಿಲ್ಲ. ಅಡುಗೆ ಸಹಾಯಕರ ಕತೆ ದೇವರಿಗೇ ಪ್ರೀತಿ.

ಹಾಗಾದರೆ ಸರಕಾರದಿಂದ ಬಿಡುಗಡೆಯಾದ ಹಣ ಎಲ್ಲಿಗೆ ಹೋಗುತ್ತದೆ?

ಅತ್ಯಂತ ನೋವಿನ ಸಂಗತಿಯೆಂದರೆ ಒಂದೊಂದು ಸರ್ಕಾರಿ ಹಾಸ್ಟೆಲ್‌ನ ಕಟ್ಟಡದಿಂದ ಆರಂಭವಾಗಿ ಮಕ್ಕಳಿಗೆ ಕೊಡುವ ಶೂ ವರೆಗೆ ಕಮೀಷನ್‌ ದಂಧೆ ತಾಂಡವಾಡುತ್ತಿದೆ. ತರಕಾರಿ, ಮಾಂಸ ಖರೀದಿಯಿಂದ ಆರಂಭವಾಗಿ ಹಾಸಿಗೆ ದಿಂಬಿನವರೆಗೆ ಭ್ರಷ್ಟಚಾರ ನಡೆದಿದೆಯೆಂದು ಸ್ವತಃ ಸಮಾಜ ಕಲ್ಯಾಣ ಮಂತ್ರಿಗಳೆ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಸಮವಸ್ತ್ರದಲ್ಲೂ ಎಂತಹ ಭ್ರಷ್ಟಾಚಾರ ನಡೆದಿದೆಯೆಂದರೆ ಒಂದು ಜೊತೆ ಕೊಟ್ಟು ಎರಡು ಜೊತೆ ಕೊಟ್ಟ ಬಗ್ಗೆ ದಾಖಲೆಗಳಲ್ಲಿ ಸಹಿ ಪಡೆಯಲಾಗಿದೆ. ಬಡವರ ಮಕ್ಕಳ ನೋವಿನ ನುಡಿ ಕೇಳಿದರೆ ದೇವರು ಕೂಡ ಈ ಸಮಾಜ ಕಲ್ಯಾಣ ಇಲಾಖೆಯೆಂಬ ಭ್ರಷ್ಟ ಬಕಾಸುರನನ್ನು ಕ್ಷಮಿಸಲಾರ. ಕಂಪ್ಯೂಟರ್‌ ಖರೀದಿಯಲ್ಲಿ ಕಮಿಶನ್‌, ಸೋಲಾರ್‌ ಖರೀದಿಯಲ್ಲಿ ಲಂಚ, ಶೂ, ಸಾಕ್ಸ್‌, ಬೆಲ್ಟಾ, ಬ್ಯಾಗುಗಳೆಲ್ಲಾ ರಾಜ್ಯ ಚರ್ಮ ಕೈಗಾರಿಕಾ ನಿಗಮದ ಮೂಲಕ ನೇರ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಲಂಚವಿಲ್ಲದೆ ವ್ಯವಹಾರವಿಲ್ಲ ಎಂಬ ಮಾತಿಗೆ ಪುಷ್ಟಿ ನೀಡಿದಂತಾಗಿದೆ. ಈ ಬಗ್ಗೆ 2014-15ರಲ್ಲಿ ಶಾಸಕ ನರೇಂದ್ರ ಸ್ವಾಮಿಯವರು ಸರಕಾರಕ್ಕೆ ಸಲ್ಲಿಸಿದ ವರದಿಯೊಂದು ಏನು ಹೇಳುತ್ತೆಯೆಂದರೆ, ಕಂಪ್ಯೂಟರ್‌, ಸಮವಸ್ತ್ರ, ಪಾತ್ರೆ ಪರಿಕರಗಳು ಇವುಗಳ ನಿಯಮ ಬಾಹಿರ ಖರೀದಿ, ಬರೀ ಕಟ್ಟಡಗಳಿಗೆ ಬಿಡುಗಡೆ ಮಾಡಿದ 1400 ಕೋಟಿ ರೂಪಾಯಿ ಮತ್ತು ಆಹಾರ ಸಾಮಾಗ್ರಿಗಳಿಗಾಗಿ ಖರ್ಚಾದ 700 ಕೋಟಿ ರೂಪಾಯಿ ಸೇರಿದಂತೆ ವೆಚ್ಚವಾದ 2157 ಕೋಟಿ ರೂ. ಗಳಲ್ಲಿ ಮೇಲ್ನೋಟಕ್ಕೆ 690 ಕೋಟಿ ಅವ್ಯವಹಾರವಾಗಿದೆ ಎಂಬ ಸುದ್ದಿ ಊಹಿಸಿದರೆ ದಿಗ್ಭ್ರಮೆ ಯಾಗುತ್ತದೆ. ಸದನದಲ್ಲಿ ಹಾಸ್ಟೆಲ್‌ ದುಸ್ಥಿತಿಯ ಬಗ್ಗೆ ನಾನು ಮಾತನಾಡುತ್ತಾ ಕನ್ನಡದ ಕವಯತ್ರಿ ಹೇಳಿದ ಸಾಲೊಂದನ್ನು ಉಲ್ಲೇಖೀಸಿದೆ.

ಗುರು ದ್ರೋಣಾಚಾರ್ಯ ದಕ್ಷಿಣೆಗಾಗಿ ಏಕಲವ್ಯನಲ್ಲಿ ಕೋರಿಕೆ ಸಲ್ಲಿಸಿದ್ದನ್ನು ಗಮನಿಸಿದ ಕಾಡು ಕೋಣವೊಂದು ಉದ್ಗರಿಸಿತಂತೆ,

ವಿದ್ಯೆಯನ್ನು ಕೊಡಲಿಲ್ಲ

ಹೆಬ್ಬೆರಳನ್ನು ಬಿಡಲಿಲ್ಲ

ವಿದ್ಯೆಯನ್ನು ಕೊಡಲಿಲ್ಲ, ಹೆಬ್ಬೆರಳನ್ನು ಬಿಡಲಿಲ್ಲ,

ಹೇಳು ದ್ರೋಣ, ಇದೇ ಏನು ನಾಡಿನ ನ್ಯಾಯ?

ಒಂದೊಮ್ಮೆ ಹಾಸ್ಟೆಲ್‌ಗ‌ಳ ಎದುರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾದು ಹೋದರೆ ಹಾಲುಗಲ್ಲದ ಎಳೆಯ ಮಕ್ಕಳು,

ಅನ್ನದ ತಟ್ಟೆಯನ್ನು ಕೊಡಲಿಲ್ಲ

ಊಟ, ಮಂಚವನ್ನು ನೀಡಿಲ್ಲ

ಹಾಸಿಗೆ ದಿಂಬಲ್ಲೂ ಲಂಚ ಪಡೆಯದೇ ಬಿಡಲಿಲ್ಲ

ಹೇಳಿ ಸಿದ್ದರಾಮಯ್ಯ ಸರಕಾರದ ಸಾಮಾಜಿಕ ನ್ಯಾಯ ಇದೆಯೇನು?

ಎಂದು ಪ್ರಶ್ನಿಸುತ್ತಾರೆ ಎಂದಿದ್ದೆ. ಸಮಾಜ ಕಲ್ಯಾಣ ಇಲಾ ಖೆಯ ಮೂಲಕ 6500 ಕೋಟಿಯಷ್ಟು ವಾರ್ಷಿಕ ವೆಚ್ಚ ಮಾಡುವ ಸರಕಾರಕ್ಕೆ ಕನಿಷ್ಟ ಸರಕಾರಿ ಹಾಸ್ಟೆಲ್‌ಗ‌ಳಲ್ಲಿ ಬದು ಕುವ ಮಕ್ಕಳನ್ನು ಸಂತೃಪ್ತಿ ಪಡಿಸಲಾಗದಿದ್ದರೆ, “ಅನ್ನವನ್ನು ಕೊಡು ಮೊದಲು, ಬಟ್ಟೆಯನ್ನು ಕೊಡು ಉಡಲು, ಸೂರನ್ನು ಕಟ್ಟಿಕೊಡು ಇರಲು, ಆಮೇಲೆ ಉಳಿದುದೆಲ್ಲ’ ಎಂಬ ಗಾದೆಗೆ ಅರ್ಥವೇ ಇಲ್ಲ. ಆಳುವ ಸರಕಾರ ಬಡವರ ಮಕ್ಕಳ ಬಗ್ಗೆ ಕರುಣೆಯೇ ಇಲ್ಲದಂತೆ ವರ್ತಿಸುತ್ತಿದೆ. ಬಿಜೆಪಿ ಬಿಡುಗಡೆ ಮಾಡಿದ ಹಾಸ್ಟೆಲ್‌ ಅಧ್ಯಯನದ ವರದಿ ರಾಜಕಾರಣದ ವಿಷಯವಲ್ಲ, ಬದಲಾಗಿ ಸರಕಾರದ ಕಿವಿ ಹಿಂಡಿ ಮುಖಕ್ಕೆ ಹಿಡಿದ ವೈಫ‌ಲ್ಯದ ಕನ್ನಡಿ. ವರದಿಯ ಬಗ್ಗೆ ಸಿದ್ದರಾಮಯ್ಯನವರ ಸರಕಾರ ಕಲ್ಲಾಗುತ್ತೋ ಅಥವಾ ಮಂತ್ರಿ ಆಂಜನೇಯರಂತೆ ಮೌನ ಮುರಿಯದೇ ನಿರುತ್ತರದ ನೈಪುಣ್ಯತೆ ಪ್ರದರ್ಶಿ ಸುತ್ತದೊ ಕಾಲವೇ ಉತ್ತರ ಹೇಳಬೇಕು

– ಕೋಟ ಶ್ರೀನಿವಾಸ ಪೂಜಾರಿ (ಎಂಎಲ್‌ಸಿ)

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.