ಸಮಾಜಕ್ಕೆ ಕೈಗನ್ನಡಿ ಹಿಡಿದ ಪ್ರತ್ಯುಪಕಾರ
Team Udayavani, Mar 30, 2018, 6:00 AM IST
ಯಾಂತ್ರಿಕ ಜೀವನ, ಸ್ವಾರ್ಥ, ಉದ್ಯೋಗ ಪಟ್ಟಣ ವಾಸವೇ ಮೊದಲಾದ ಕಾರಣಗಳಿಂದ ಈಗ ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಮಕ್ಕಳಿಗೆ ಅಜ್ಜ ಅಜ್ಜಿಯರ ಒಡನಾಟ ಸಿಗುತ್ತಿಲ್ಲ. ಚಿಕ್ಕಪುಟ್ಟ ಕಾರಣಗಳನ್ನು ನೀಡಿ ಹಿರಿಯರನ್ನು ನೋಡಿಕೊಳ್ಳುವ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯುವಜನಾಂಗವನ್ನು ಕಾಣುತ್ತೇವೆ. ಬಹುತೇಕ ಪ್ರತಿ ಕುಟುಂಬದಲ್ಲಿ ಕಾಣುತ್ತಿರುವ ವಿದ್ಯಮಾನವಿದು.ಹಿರಿಯ ಜೀವಗಳ ಹೊರೆ ಎಂದು ಭಾವಿಸುವ ಅವರನ್ನು ನಿಕೃಷ್ಟವಾಗಿ ಕಾಣುವ ಮನೋಭಾವವನ್ನು ಪ್ರತಿಬಿಂಬಿಸಿದ ಕಿರು ನಾಟಕ “ಪ್ರತ್ಯುಪಕಾರ’ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿತು. ಕಾರ್ಪೊರೇಶನ್ ಬ್ಯಾಂಕಿನ “ಸಿರಿಗಂಧ’ ಬಳಗದ ಸದಸ್ಯರು ಈ ನಾಟಕವನ್ನು ಪ್ರದರ್ಶಿಸಿದರು. ನೀಡಿದ ಸಮಯದ ಒಳಗಡೆಯೇ ನಡೆದ ಈ ಚಿಕ್ಕ ಚೊಕ್ಕ ಸರಳ ನಾಟಕ ಪ್ರೇಕ್ಷಕರ ಮನದಲ್ಲಿ ತುಮುಲವುಂಟು ಮಾಡಿ ಕಣ್ಣೀರು ತರಿಸಿದ್ದಂತೂ ನಿಜ.
ನಾಟಕವನ್ನು ಗೋಪಾಲಕೃಷ್ಣ ಬೊಳುಂಬು ರಚಿಸಿ, ನಿರ್ದೇಶಿಸಿ ವೃದ್ಧ ತಂದೆ “ಗೋಪಜ್ಜ’ನಾಗಿ ನಟಿಸಿ ಮೆಚ್ಚುಗೆ ಪಡೆದರು. ಅವರ ಅಭಿನಯ,ಮಾತಿನ ಏರಿಳಿತ ಎಲ್ಲವೂ ನಾಟಕಕ್ಕೆ ಕಳೆಯನ್ನು ಕೊಟ್ಟು ನೆನಪಲ್ಲಿ ಉಳಿವಂತೆ ಮಾಡಿತು. ತನ್ನ ನೋವನ್ನು ನುಂಗಿಕೊಂಡು ಮಗನ ಏಳಿಗೆಯನ್ನೇ ಬಯಸುವ ಮುಗ್ಧತನ, ಮಗ-ಸೊಸೆಯನ್ನು ದೂರದೆ ಇರುವ ಅವರ ಒಳ್ಳೆಯತನ ಓರ್ವ ಮಾದರಿ ಅಪ್ಪನನ್ನು ನೆನಪಿಸಿತು.
ಎರಡು ವರ್ಷ ಹಿಂದೆಯೇ ಹೆಂಡತಿ ಗತಿಸಿಹೋಗಿದ್ದು ಒಬ್ಬಂಟಿಯಾಗಿದ್ದರೂ, ನೆರೆಹೊರೆಯ ಮಕ್ಕಳೊಂದಿಗೆ ನಲಿಯುತ್ತಾ, ಅವಳನ್ನು ನೆನಪಿಸಿಕೊಂಡು ಅಜ್ಜಿಯೂ ವೇದಿಕೆಗೆ ಬರುವಂತೆ ಮಾಡಿದ ತಂತ್ರ ಖುಷಿ ಕೊಟ್ಟಿತು. ಅಜ್ಜಿಯಾಗಿ ಉಷಾ ಎಸ್. ಅವರು ಸಮರ್ಥವಾಗಿ ನಟಿಸಿದರು. ಅಜ್ಜನ ಆತ್ಮೀಯ ಸ್ನೇಹಿತ ಅಡುಗೆ ಸತ್ಯಣ್ಣನಾಗಿ ಪ್ರಕಾಶ್ ರಾವ್ ತಮ್ಮ ವಿದೇಶ ಪ್ರವಾಸದ ಸುದ್ದಿಯನ್ನು ಬಿಚ್ಚಿಟ್ಟು ನಗೆಯುಕ್ಕಿಸಿದರು. ನೆರೆಹೊರೆಯ ಮಕ್ಕಳಾಗಿ ಧೃತಿ, ಮಹತಿ ಹಾಗೂ ಜಗತಿ ಅಜ್ಜನೊಂದಿಗೆ ಕುಣಿದರು.
ಹೆಂಡತಿಯನ್ನು ಓಲೈಸಲು ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಅನುವಾಗುವ ಬ್ಯಾಂಕ್ ಮ್ಯಾನೇಜರ್ ಮಗ ಹರಿಯ ಪಾತ್ರವನ್ನು ಸೋಮಶೇಖರ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಗಂಡನಿಗೆ ಕುಮ್ಮಕ್ಕು ನೀಡುವ ಸೊಸೆ ಸೌಮ್ಯಳಾಗಿ ಕುಮಾರಿ ಸೌಮ್ಯ ಅಭಿನಯಿಸಿದರು.
ಗಂಡನ ಬ್ಯಾಂಕಿನ ಬಗ್ಗೆ, ಮನೆ ಕೆಲಸ, ಆ ಗಡಿಬಿಡಿ, ಹುಸಿ ಮುನಿಸು, ಹಾಡುಗಳೊಂದಿಗೆ ಅವರಿಬ್ಬರ ನವಿರಾದ ಹಾಸ್ಯ ರಂಜಿಸಿತು. ವೃದ್ಧಾಶ್ರಮದ ಸಂಚಾಲಕರಾಗಿ ಶ್ರೀನಿವಾಸ ರಾವ್ ಮನ ಸೆಳೆದರು. ಮಕ್ಕಳಿಲ್ಲದ ಗೋಪಜ್ಜ ದಂಪತಿ ಅದೇ ಆಶ್ರಮದಿಂದ ಗಂಡು ಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸಿ ಆ ಹುಡುಗ ಉದ್ಯೋಗವಂತನಾಗುತ್ತಾನೆ. ಅವನ ಮದುವೆಯೂ ಆಗುತ್ತದೆ. ಆ ಮಗನೇ ತನ್ನ ಅಸಹಾಯಕ ವೃದ್ಧ ತಂದೆಯನ್ನು ಅದೇ ಆಶ್ರಮಕ್ಕೆ ಸೇರಿಸಲು ಕರೆತರುವ ಕತೆ ಮನ ಕಲಕುತ್ತದೆ. ಹಿಂದಿನ ಕತೆಯನ್ನು ತಿಳಿದ ಮಗ ಸೊಸೆಯರಿಗೆ ಪಶ್ಚಾತ್ತಾಪವಾಗಿ ಕ್ಷಮೆ ಕೇಳುತ್ತಾ ತಂದೆಯು ತಮ್ಮೊಂದಿಗೆ ಇರಬೇಕು ಅನ್ನುವಲ್ಲಿಗೆ ಸುಖಾಂತ್ಯವಾಗುತ್ತದೆ. ಕೊನೆಯಲ್ಲಿ ಬರುವ ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯದಾನವ ಮಾಡಿ ಫಲವೇನು… ಹಾಡು ನಾಟಕಕ್ಕೆ ಪೂರಕವಾಗಿತ್ತು. ಹಿನ್ನೆಲೆ ಧ್ವನಿಯನ್ನು ರೇಖಾ ಮಂಜುನಾಥ್ ಒದಗಿಸಿಕೊಟ್ಟರು. ಶ್ರೀರಂಗ ಹೊಸಬೆಟ್ಟು ಹಾಗೂ ಪ್ರಶಾಂತ್ ಸಹಕರಿಸಿದರು.
ನಾಟಕದ ನಂತರ ಎ. ಆರ್. ರಾಘವೇಂದ್ರ, ಎಸ್.ವಿ.ಎಸ್. ದತ್ತಾತ್ರೇಯ, ಪ್ರಕಾಶ ರಾವ್, ಎಸ್. ನಾಗರಾಜ್, ಜಯರಾಮ ಶೆಣೈ, ಶಶಾಂಕ್, ಗೋಪಾಲ್ , ರೇಖಾ, ನಾಗಮಣಿ, ಕು| ಸೌಮ್ಯಾ ಅವರಿಂದ ವೈವಿಧ್ಯಮಯ ಹಾಡುಗಳ ಕಾರ್ಯಕ್ರಮವೂ ನಡೆಯಿತು.ವಿಶೇಷ ಬೆಳಕಿನ ವ್ಯವಸ್ಥೆ, ಹಿನ್ನೆಲೆ ದೃಶ್ಯಗಳು, ಪೂರಕ ವಾದ್ಯ ಸಂಗೀತಗಳು ಇರುತ್ತಿದ್ದರೆ, ಪೂರ್ಣ ಪ್ರಮಾಣದಲ್ಲಿ ನಾಟಕವು ಯಶಸ್ವಿಯಾಗುತ್ತಿತ್ತು. ಸಿಕ್ಕಿದ ಕಾಲಾವಕಾಶ, ಸರಳ ಹಿನ್ನೆಲೆ ಧ್ವನಿ ಪರಿಕರಗಳೊಂದಿಗೆ ನಾಟಕ ನಡೆದರೂ ಸುಂದರವಾಗಿ ಮೂಡಿ ಬಂತು.
ಸಾವಿತ್ರಿ ರಾಮರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.