ಕಪಟ ಕ್ರಿಕೆಟಿಗರಿಗೆ ನಿಷೇಧ ಶಿಕ್ಷೆ ಜಾರಿ
Team Udayavani, Mar 29, 2018, 6:55 PM IST
ಸಿಡ್ನಿ: ಕಾಂಗರೂ ನಾಡಿನ ಕಪಟ ಕ್ರಿಕೆಟಿಗರಿಗೆ ಶಿಕ್ಷೆ ಜಾರಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ಟೌನ್ ಟೆಸ್ಟ್ ಪಂದ್ಯದ ವೇಳೆ ಚೆಂಡಿನ ರೂಪ ಕೆಡಿಸಿ, ಕ್ರಿಕೆಟಿಗೆ ಕಳಂಕ ಮೆತ್ತಿದ ಪ್ರಕರಣದಲ್ಲಿ ಭಾಗಿಯಾದ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಿಗೆ “ಕ್ರಿಕೆಟ್ ಆಸ್ಟ್ರೇಲಿಯ’ ಒಂದು ವರ್ಷ ನಿಷೇಧ ಹೇರಿದರೆ, ಚೆಂಡನ್ನು ವಿರೂಪಗೊಳಿಸಿದ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಅವರಿಗೆ 9 ತಿಂಗಳ ನಿಷೇಧ ವಿಧಿಸಿದೆ.
“ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮುಂದಿನ 12 ತಿಂಗಳ ಕಾಲ ಎಲ್ಲ ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಲಿದ್ದಾರೆ. ಕ್ಯಾಮರೂನ್ ಬ್ಯಾನ್ಕ್ರಾಫ್ಟ್ 9 ತಿಂಗಳ ವರೆಗೆ ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ. ಆದರೆ ಕ್ರಿಕೆಟ್ ನಂಟನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಮೂವರಿಗೂ ಕ್ಲಬ್ ಕ್ರಿಕೆಟ್ನಲ್ಲಿ ಆಡಲು ಅನುಮತಿ ನೀಡಲಾಗಿದೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ತಂಡದ ನಾಯಕ ಸ್ಟೀವನ್ ಸ್ಮಿತ್ ಅವರ ವಿರುದ್ಧ ಹರಿ ಹಾಯ್ದಿರುವ ಕ್ರಿಕೆಟ್ ಆಸ್ಟ್ರೇಲಿಯ, ಚೆಂಡನ್ನು ವಿರೂಪ ಗೊಳಿಸುವ ಸಂಚು ತಿಳಿದಿದ್ದೂ ಇದನ್ನು ತಡೆಯಲು ಅವರು ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದಿದೆ. “ಸ್ಮಿತ್ ಇಡೀ ಪ್ರಕರಣವನ್ನು ಮುಚ್ಚಿಡಲು ಯತ್ನಿಸಿದ್ದಾರೆ. ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಇವರೆಲ್ಲರ ದಾರಿ ತಪ್ಪಿಸಲು ಯತ್ನಿಸಿದ್ದಾರೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.
ಶಿಕ್ಷೆಯ ಜತೆಗೆ ನಿಷೇಧದ ಅವಧಿಯಲ್ಲಿ ಈ ಮೂವರೂ ಆಟಗಾರರು ಕಡ್ಡಾಯವಾಗಿ 100 ಗಂಟೆ ಗಳ ಕಾಲ ಕ್ರಿಕೆಟ್ ಸೇವೆಯಲ್ಲಿ ತೊಡಗಬೇಕು ಎಂದೂ ಆಸ್ಟ್ರೇಲಿಯದ ಕ್ರಿಕೆಟ್ ಮಂಡಳಿ ಕಟ್ಟಪ್ಟಣೆ ವಿಧಿಸಿದೆ. ಬಹುಶಃ ಕ್ಲಬ್ ಪಂದ್ಯಗಳ ವೇಳೆ ಇವರು ಆಟಕ್ಕೆ ಹೊರತಾದ ಸೇವೆಯನ್ನು ಮಾಡಬೇಕಾಗಬಹುದು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.