ಸಮಬಲದ ಹೋರಾಟ ನೀಡಲು ಸಿಪಿಐಎಂ ಸಿದ್ಧ
Team Udayavani, Mar 30, 2018, 12:32 PM IST
ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಲೆಯ ನಡುವೆ ಮೂರನೇ ಪಕ್ಷವಾಗಿ ಸಮಬಲದ ಹೋರಾಟಕ್ಕೆ ನಾವು ತಯಾರಾಗಿದ್ದೇವೆ. ಇದಕ್ಕೆಂದೇ ಬೂತ್, ವಾರ್ಡ್ ಮಟ್ಟದಲ್ಲಿ ಕಮಿಟಿ ರಚನೆಯಾಗಿ ಪ್ರಚಾರದ ಕುರಿತು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಾರೆ ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ್ ಆಚಾರಿ.
ಸಿಪಿಐಎಂ ರಾಜ್ಯದ ಕರಾವಳಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಬಜಾಲ್, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮುನೀರ್ ಕಾಟಿಪಳ್ಳ, ಮಂಗಳೂರು ಕ್ಷೇತ್ರದಲ್ಲಿ ನಿತಿನ್ ಕುಮಾರ್ ಕುತ್ತಾರ್ ಮತ್ತು ಮೂಡಬಿದಿರೆ-ಮೂಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಯಾದವ ಶೆಟ್ಟಿ ಅವರ ಹೆಸರುಗಳು ಅಂತಿಮವಾಗಿವೆ.
ಸಿಪಿಐಎಂ ಕಳೆದ ಐದು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಕನಿಷ್ಠ ಕೂಲಿ ಮತ್ತು ಸಾರ್ವಜನಿಕ ಭದ್ರೆತೆಗಾಗಿ ಹೋರಾಡಿದ್ದೇವೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ 18,000 ರೂ. ವೇತನ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ರೈತರ ಸೌಲಭ್ಯಗಳಿಗೆ ದನಿ ಎತ್ತಿದ್ದೇವೆ. ರಾಜ್ಯ ಸರಕಾರ ಸಹಕಾರಿ ಬ್ಯಾಂಕ್‌ಗಳ ಸಾಲವನ್ನು ಮಾತ್ರ ಮನ್ನಾ ಮಾಡಿದ್ದು, ಇತರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನೂ ಮನ್ನಾ ಮಾಡಬೇಕು. ರೈತರ ಮೂಲ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಗಮನ ನೀಡಬೇಕು ಎಂಬ ಬೇಡಿಕೆಯನ್ನು ಸಿಪಿಐಎಂ, ಕಾರ್ಮಿಕ ಸಂಘಟನೆಗಳು ಮಾಡುತ್ತಾ ಬಂದಿವೆ ಎಂದು ವಸಂತ ಆಚಾರಿ ಅವರು ಹೇಳುತ್ತಾರೆ.
ಗಲಭೆ ನಿಯಂತ್ರಣಕ್ಕೆ ಶ್ರಮ
ರಾಜ್ಯದ ವಿವಿಧೆಡೆ ಕೋಮು ಗಲಭೆ ಸಂಭವಿಸಿದಾಗ ಸಿಪಿಐಎಂ ಪಕ್ಷವು ಗಲಭೆಯ ನಿಯಂತ್ರಣಕ್ಕೆ ನಿರಂತರ ಶ್ರಮಿಸಿದೆ. ದ.ಕ. ಜಿಲ್ಲೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ರ‍್ಯಾಲಿ, ಮಾಣಿಕ್ ಸರ್ಕಾರ್ ಕಾರ್ಯಕ್ರಮ ಸಹಿತ ಅನೇಕ ಕಡೆ ಸಾಮರಸ್ಯ ಸ್ಥಾಪಿಸುವ ದೃಷ್ಟಿಯಿಂದ ಕೆಲಸ ಮಾಡಿದೆ.
ಮೋದಿ ನೇತೃತ್ವದ ಕೇಂದ್ರ ಸರಕಾರದ ಆಳ್ವಿಕೆಯಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇತ್ತ ರಾಜ್ಯ ಸರಕಾರದ ನೀತಿಯನ್ನೂ ಗಮನಿಸಿದ್ದಾರೆ. ಎರಡೂ ಪಕ್ಷಗಳ ತಪ್ಪು ನೀತಿಯನ್ನು ಸಿಪಿಐಎಂ ಕಾಲಕಾಲಕ್ಕೆ ಪ್ರತಿಭಟಿಸಿದೆ. ಕೇಂದ್ರ, ರಾಜ್ಯ ಸರಕಾರದ ನೀತಿಗಳಿಂದ ಸಾಮಾನ್ಯ ಮಂದಿ ಭ್ರಮನಿರಸನಕ್ಕೊಳಗಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಡುವೆ ಮೂರನೇ ಶಕ್ತಿಯಾಗಿ ಕರಾವಳಿಯಲ್ಲಿ ಗೆಲ್ಲಲು ಎಲ್ಲ ರೀತಿಯ ಪ್ರಯತ್ನಗಳನ್ನು ಸಿಪಿಐಎಂ ನಡೆಸುತ್ತಿದೆ. ವಿಧಾನಸಭೆಯ ಒಳಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಸ್ಪಂದನೆ ಮಾಡಲು ಮತದಾರರು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಅವರು.
ಮಂಗಳೂರು ಮತ್ತಷ್ಟು ಬೆಳೆಯಬೇಕು
ಮಂಗಳೂರಿಗೆ ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಇದ್ದರೂ ಯೋಜನಾ ಬದ್ಧವಾಗಿ ಕೆಲಸ ನಿರ್ವಹಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಗರ ಕೇಂದ್ರೀಕೃತವಾಗಿ ಸಮುದ್ರದ ಕಿನಾರೆಯ ಅಭಿವೃದ್ಧಿ ಆಗಬೇಕಿದೆ. ಜನಸಾಮಾನ್ಯರು ತಮ್ಮ ಎಲ್ಲ ಕೆಲಸಗಳಿಗೆ ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಲು ಜಿಲ್ಲಾಧಿಕಾರಿ ಕಚೇರಿ ಸಹಿತ ಸರಕಾರದ ಪ್ರಮುಖ ಕಚೇರಿಗಳನ್ನು ನಗರದ ಹೊರಕ್ಕೆ ಸ್ಥಳಾಂತರಿಸಬೇಕಾಗಿದೆ. ಇದರಿಂದಾಗಿ ನಗರದಲ್ಲಿ ಜನ, ವಾಹನಗಳ ದಟ್ಟಣೆ ಕಡಿಮೆಯಾಗಿ ನಗರವಾಸಿಗಳು ನೆಮ್ಮದಿಯ ಜೀವನ ನಡೆಸಬಹುದಾಗಿದೆ. ನಗರದಲ್ಲಿ ದಟ್ಟಣೆ ಕಡಿಮೆಯಾದಾಗ ನಗರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಮಂಗಳೂರು ನಗರದಲ್ಲಿ ಅನೇಕ ಕಡೆಗಳಲ್ಲಿ ಸಮರ್ಪಕ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಅಗತ್ಯವಿದೆ.
ಇತ್ತೀಚೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳು ನಶಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳಾಗಿ ಪರಿವರ್ತನೆಯಾಗುತ್ತಿವೆ. ಹೀಗಾಗಬಾರದು. ಸರಕಾರ ತನ್ನ ಶಿಕ್ಷಣ ಸಂಸ್ಥೆಗಳ ಮೂಲಕವೇ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವಂತಾಗಬೇಕು. ನಗರದಲ್ಲಿ ಸರಕಾರಿ ಕಾಲೇಜುಗಳು, ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿರುವ ಮೂಲಭೂತ ಸಮಸ್ಯೆ ನಿವಾರಿಸಲು ಸಾಧ್ಯವಾದರೆ ಮುಂದಿನ ನಗರ ಜನಸಾಮಾನ್ಯರಿಗೂ ಮಧ್ಯಮ ವರ್ಗದವರಿಗೆ ಪೂರಕವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ವಸಂತ ಆಚಾರಿ ವಿವರಿಸುತ್ತಾರೆ.
ಮನೆಮನೆಗೆ ಪ್ರಚಾರ
ಈ ಬಾರಿ ಸಿಪಿಐಎಂ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವ್ಯವಸ್ಥಿತ ಯೋಜನೆಗಳು ರೂಪುಗೊಂಡಿವೆ. ಪ್ರಚಾರದ ವೇಳೆಯಲ್ಲಿ ಮತದಾರನಿಗೆ ಸಿಪಿಐಎಂ ಪಕ್ಷದ ಬಗ್ಗೆ, ಪಕ್ಷದ ಅಭ್ಯರ್ಥಿಯ ಬಗ್ಗೆ ಮತ್ತು ವಿರೋಧ ಪಕ್ಷಗಳ ಜನ ವಿರೋಧಿ ನೀತಿಯನ್ನು ಹೇಳಲಿದ್ದೇವೆ ಎನ್ನುತ್ತಾರೆ ವಸಂತ ಆಚಾರಿ.
ಈಗಿನ ಶಾಸಕರದ್ದು ಕೆಲಸಕ್ಕಿಂತ ಪ್ರಚಾರವೇ ಹೆಚ್ಚು
ಮಂಗಳೂರು ನಗರದಲ್ಲಿ ಈಗಿರುವ ಶಾಸಕರ ಸಾಧನೆ ಸ್ವಲ್ಪವೂ ತೃಪ್ತಿ ತಂದಿಲ್ಲ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಶಾಸಕ ಜೆ.ಆರ್. ಲೋಬೊ ಅವರು ಮೂಲಭೂತವಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಅದರ ಬದಲಾಗಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಮಾತ್ರ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಗರದ ವಾರ್ಡ್‌ಗಳ ಸಮಸ್ಯೆ, ಶುಚಿಯಾದ ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ ವಿಚಾರ, ರಸ್ತೆ ಸಂಪರ್ಕದೊಡನೆ ಅನೇಕ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕಿದೆ. ಮಂಗಳೂರಿನ ದಕ್ಕೆಯಲ್ಲಿ ನಡೆದಾಡಲು ಕಷ್ಟ ಪಡುವ ಸ್ಥಿತಿಯಲ್ಲಿ ಅಲ್ಲಿನ ಮಂದಿ ಇದ್ದಾರೆ. ಅಲ್ಲಿನ ಮೀನಿನ ಲಾರಿಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದು ಶಾಸಕರ ಕಣ್ಣಿಗೆ ಕಾಣುತ್ತಿಲ್ಲ.
ನಗರದಲ್ಲಿ ಒಳಚರಂಡಿ ಸಂಪೂರ್ಣ ಹದಗೆಟ್ಟಿದೆ. ಮಂಗಳೂರು ನಗರ ಕೊಳೆತ ವಾಸನೆಯಿಂದ ನರಳುತ್ತಿದೆ. ಮೂಲಭೂತ ಸೌಕರ್ಯವನ್ನು ನಿಭಾಯಿಸುವಲ್ಲಿ ಮಂಗಳೂರಿನ ಶಾಸಕರು ವಿಫಲರಾಗಿದ್ದಾರೆ. ಈ ಬಗ್ಗೆ ಸಿಪಿಐಎಂ ಘಟಕಗಳು ಈಗಾಗಲೇ ಅನೇಕ ಕಡೆಗಳಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಸರಕಾರದ ಗಮನ ಸೆಳೆದಿದೆ. ಆದರೂ, ಇಲ್ಲಿನ ಶಾಸಕರಿಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಂಗಳೂರಿಗೆ ಹೊಸ ನಾಯಕನ ಆವಶ್ಯಕತೆ ಇದೆ. ನಮ್ಮ ಪಕ್ಷ ಕಾರ್ಮಿಕ ವರ್ಗದ ಪಕ್ಷವಾಗಿದ್ದುಕೊಂಡು, ಎಲ್ಲ ವರ್ಗಗಳನ್ನು ಪರಿಗಣಿಸಿ ಕೆಲಸ ನಿರ್ವಹಿಸಿದ್ದೇವೆ. ಕಾರ್ಮಿಕರ ಮೂಲಭೂತ ಪ್ರಶ್ನೆಯ ಜತೆ, ಮಧ್ಯಮ ವರ್ಗದ ಮಂದಿಗೂ ಸ್ಪಂದಿಸಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.