ಪೂಲಿಂಗ್ ಲೊಕೇಟರ್ ಬರುತ್ತಿದೆ ಕೂಲಾಗಿರಿ
Team Udayavani, Mar 31, 2018, 12:02 PM IST
ಬೆಂಗಳೂರು: ರಾಜಧಾನಿಯಲ್ಲಿ ಮತದಾನ ಪ್ರಮಾಣ ವೃದ್ಧಿಗೆ ಹಲವು ಪ್ರಚಾರಾಂದೋಲನಗಳಲ್ಲಿ ತೊಡಗಿರುವ ಚುನಾವಣಾ ಆಯೋಗ, ಇದೀಗ ದೇಶದಲ್ಲೇ ಮೊದಲ ಬಾರಿ ಮತದಾರರಿಗೆ ಮತಗಟ್ಟೆಗಳ ಮಾಹಿತಿ ಒದಗಿಸುವ “ಪೋಲಿಂಗ್ ಸ್ಟೇಷನ್ ಲೊಕೇಟರ್’ ಆ್ಯಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 8287 ಮತಗಟ್ಟೆಗಳು ತೆರೆದುಕೊಳ್ಳಲಿವೆ. ಹೀಗಾಗಿ ಮತದಾರರಿಗೆ ತಾವು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ದೊರೆಯದೆ ಹಲವರು ಮತದಾನದಿಂದಲೇ ದೂರ ಉಳಿಯುತ್ತಿದ್ದಾರೆ.
ಆ ಹಿನ್ನೆಲೆಯಲ್ಲಿ ಮತದಾರರು ತಮ್ಮ ಮತಗಟ್ಟೆ ಯಾವುದೆಂದು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಆಯೋಗ ಈ ಆ್ಯಪ್ ಅಭಿವೃದ್ಧಿ ಪಡಿಸಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಕೇವಲ ಶೇ.52ರಷ್ಟು ಮತದಾನವಾಗಿದ್ದು, ಈ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪಾಲಿಕೆಯಿಂದ ಅಭಿವೃದ್ಧಿಪಡಿಸಿರುವ “ಪೋಲಿಂಗ್ ಸ್ಟೇಷನ್ ಲೊಕೇಟರ್’ ಆ್ಯಪ್, ಈಗಾಗಲೇ ಬಳಕೆಗೆ ಸಿದ್ಧವಾಗಿದ್ದು, ಹಲವು ಬಾರಿ ಪರೀಕ್ಷೆ ನಡೆಸಿದಾಗ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನಗರಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಆ್ಯಪ್‌ಗೆ ಚಾಲನೆ ದೊರೆಯುವ ಸಾಧ್ಯತೆಯಿದೆ.
ಆ್ಯಪ್ ಕಾರ್ಯನಿರ್ವಹಣೆ ಹೇಗೆ?: ಮತದಾರರು ಮೊದಲಿಗೆ ಗೂಗಲ್ ಪ್ಲೇಸ್ಟೋರ್‌ನಿಂದ ಪೋಲಿಂಗ್ ಸ್ಟೇಷನ್ ಲೊಕೇಟರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ತೆರೆದುಕೊಂಡ ಕೂಡಲೇ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಕೇಳುತ್ತದೆ. ಈ ವೇಳೆ ಮತದಾರರು ತಮ್ಮ ಗುರುತಿನ ಚೀಟಿಯಲ್ಲಿರುವ ಸಂಖ್ಯೆ ನಮೂದಿಸಿದರೆ ಸಾಕು, ತಮ್ಮ ಮತಗಟ್ಟೆ ಯಾವುದು ಎಂಬ ಮಾಹಿತಿಯೊಂದಿಗೆ ಗೂಗಲ್ ಮ್ಯಾಪ್ ಮೂಲಕ ಮತದಾರರನ್ನು ಮತಗಟ್ಟೆ ರುವ ಸ್ಥಳಕ್ಕೆ ಕರೆದುಕೊಂಡು ಹೋಗಲಿದೆ.
ಗೈಡ್‌ನಲ್ಲಿ ಮಾಹಿತಿ ಲಭ್ಯ: ದೇಶದಲ್ಲಿ ಇದೇ ಮೊದಲ ಬಾರಿ ರಾಜ್ಯದಲ್ಲಿ ಮತದಾರರಿಗೆ ಚುನಾವಣಾ ಕೈಪಿಡಿ ನೀಡಲಾಗುತ್ತಿದೆ. ಕೈಪಿಡಿಯನ್ನು ಬೆಂಗಳೂರಿನಲ್ಲಿ ವಿತರಿಸಲಿದ್ದು, ಪೋಲಿಂಗ್ ಸ್ಟೇಷನ್ ಲೊಕೇಟರ್ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ ಹಾಗೂ ಹೇಗೆ ಬಳಸಬೇಕು ಎಂಬ ಮಾಹಿತಿ ಕೈಪಿಡಿಯಲ್ಲಿರಲಿದೆ.
ನಗರದಲ್ಲಿ ಮತದಾರರು ಮತಗಟ್ಟೆ ಹುಡುಕಲಾಗದೆ ಮತದಾನದಿಂದಲೇ ದೂರ ಉಳಿಯುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿ ಮತಗಟ್ಟೆ ಮಾಹಿತಿ ತಿಳಿಸಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಬಳಕೆದಾರರ ಸ್ನೇಹಿ ಆ್ಯಪ್ ಆಗಿರಲಿದೆ.
-ಎನ್.ಮಂಜುನಾಥ ಪ್ರಸಾದ್, ನಗರ ಜಿಲ್ಲಾ ಚುನಾವಣಾಧಿಕಾರಿ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.