ಕೆಂಪು ಎದೆಯ ಮರಗುಬ್ಬಿ
Team Udayavani, Mar 31, 2018, 12:31 PM IST
ಈ ಹಕ್ಕಿಯನ್ನು ಕೆಂಪು ಮರಗುಬ್ಬಿ ಎಂದೂ ಕರೆಯುವರು. ಶಿರಾ, ಕಟ್ ಫೋರಿಯಾ ಎಂದು ಪ್ರಾದೇಶಿಕ ಭಾಷೆಯಲ್ಲಿ ಇದನ್ನು ಗುರುತಿಸುತ್ತಾರೆ. ಇದು ಗುಬ್ಬಚ್ಚಿಯಷ್ಟು ಪುಟ್ಟದು. ಮೋಟು ಬಾಲ ಇದ್ದರೂ ಉದ್ದ ಚುಂಚು ಹೊಂದಿದೆ. chestnut bellied nuthatch (Sitta castanea Lesson R sparrow +ದುಂಡಗಿರುವ ಈ ಹಕ್ಕಿಯ ಹೊಟ್ಟೆ ಮತ್ತು ಎದೆ, ಇಟ್ಟಿಗೆ ಕೆಂಪು ಬಣ್ಣದಿಂದ ಕೂಡಿದೆ. ಹೆಣ್ಣು ಹಕ್ಕಿಯ ಎದೆ ಸ್ವಲ್ಪ ತಿಳಿ ಇಟ್ಟಿಗೆ ಬಣ್ಣದಲ್ಲಿದೆ. ಬೆನ್ನು ನೀಲಿ ಮಿಶ್ರಿತ ಬೂದು ಬಣ್ಣ ಎದ್ದು ಕಾಣುತ್ತದೆ. ಬಿಸಿಲಿನಲ್ಲಿ ಈ ಬಣ್ಣ ಹಲವಾರು ಬಣ್ಣದ ಛಾಯೆಯನ್ನು ಹೊಮ್ಮಿಸಿ ಹೊಳೆಯುತ್ತದೆ. ದಟ್ಟಕಾಡು, ಅದರ ಪಕ್ಕದಲ್ಲಿರುವ ತೋಟ ಪಟ್ಟಿ ಮತ್ತು ಮರಗಳಿರುವ ಭಾಗದಲ್ಲಿ ಇದು ತನ್ನ ಇರುನೆಲೆ ಮಾಡಿಕೊಂಡಿರುತ್ತದೆ. ಮರ, ಮರದ ಟೊಂಗೆಗಳಲ್ಲಿ, ಅಳಿಲು, ಕೆಂಪು ಅಳಿಲು, ಇಲಿಗಳಂತೆ ಮೇಲೆ, ಕೆಳಗೆ, ತಲೆಕೆಳಗಾಗಿ, ಮರದ ಟೊಂಗೆಯ ಅಡಿಭಾಗದಲ್ಲೂ ಓಡಾಡುವುದು. ಇದರ ಕಾಲು ಬಲವಾಗಿದ್ದು, ತುದಿಯಲ್ಲಿ ಚೂಪಾದ ಉಗುರುಗಳಿರುತ್ತದೆ. ಬೇರೆ ಹಕ್ಕಿಗಳು ಕೊರೆದು ಬಿಟ್ಟ ಗೂಡಿಗೆ ಮಣ್ಣನ್ನು ಮೆತ್ತಿ ತನಗೆ ಬೇಕಾದ ವಿನ್ಯಾಸ ಮಾಡಿ ಅದನ್ನೇ ತನ್ನ ಕೂಡಾಗಿ ಬದಲಿಸಿಕೊಳ್ಳುವ ಜಾಣತನ ಇದಕ್ಕಿದೆ. ಈ ಕಾರಣದಿಂದಲೇ ಇದಕ್ಕೆ ನಟ್ ಹ್ಯಾಚ್ ಎಂಬ ಹೆಸರು ಬಂದಿದೆ. ಇದರ ಪ್ರಧಾನ ಆಹಾರ ಹುಳು.
ಈ ಪಕ್ಷಿಯು ಮರದ ಟೊಂಗೆಯ ಮೇಲೆ ಸಲೀಸಾಗಿ ಓಡಾಡಿ ಹುಳುಗಳ ಬೇಟೆಯಾಡುತ್ತದೆ. ಹೀಗೆ ಓಡಾಡುವಾಗ ಇದು ಹಕ್ಕಿಗಿಂತ ಭಿನ್ನವಾಗಿರುತ್ತದೆ. ಮರ ಏರಿ ಇಳಿಯುವಾಗ ಇದು ಮರಕುಟಕ ಹಕ್ಕಿಯ ನಡತೆಯನ್ನು ನೆನಪಿಗೆ ತರುತ್ತದೆ. ಇದರ ಚುಂಚು ತುಂಬಾ ದೊಡ್ಡದಿದೆ. ನೆತ್ತಿ ಮತ್ತು ತಲೆ ಒಂದೇ ಬಣ್ಣದಿಂದ ಕೂಡಿದೆ. ಇದರ ರೆಕ್ಕೆ ಮತ್ತು ಬಾಲದಲ್ಲಿರುವ ಗೆರೆ ದಟ್ಟ ಬಣ್ಣದಿಂದ ಕೂಡಿರುತ್ತದೆ. ಇದರ ರೆಕ್ಕೆಯ ಪ್ರಾಥಮಿಕ ಗರಿಗಳಲ್ಲಿ ಬೆಳ್ಳಿ ವರ್ಣದ ರೇಖೆ ಎದ್ದು ಕಾಣುತ್ತದೆ. ಒಳ ಭಾಗದ ಗರಿ ಮತ್ತು ಬಾಲದಲ್ಲಿ ದೊಡ್ಡ ಬಿಳಿ ಚುಕ್ಕೆಯು ಹಾರುವಾಗ ಎದ್ದು ಕಾಣುತ್ತದೆ.
ಹಿಮಾಲಯದ ಪೂರ್ವ ಭಾಗದಲ್ಲಿ ಕಾಣುವ ಈ ತಳಿಯ ಹಕ್ಕಿಯಲ್ಲಿ ಹೆಣ್ಣು ಹಕ್ಕಿಯ ಎದೆ ಮತ್ತು ಹೊಟ್ಟೆ ಹೆಚ್ಚು ಕೆಂಪಿದೆ. ಉತ್ತರಾಂಚಲದ ಪರ್ವತದ ಆರಂಭದ ಭಾಗ, ಅಸ್ಸಾಂ ಕಣಿವೆಯಿಂದ ಅರುಣಾಚಲ ಪ್ರದೇಶದವರೆಗೂ ಕಾಣುತ್ತದೆ. ದೊಡ್ಡ ತಲೆ , ಚಿಕ್ಕ ಬಾಲ, ಮರ ಕೊರೆಯಲು ಅನುಕೂಲವಾದ ದೊಡ್ಡ ಮತ್ತು ಚೂಪಾದ ಚುಂಚು ಇದರ ಅಂದ ಹೆಚ್ಚಿಸಿದೆ. ದೊಡ್ಡ ಮತ್ತು ಮೆಲುವಾದ ದನಿಯನ್ನು ಹೊರಡಿಸಿ ತನ್ನ ಇರುನೆಲೆ ವ್ಯಾಪ್ತಿಯನ್ನು ಘೋಷಿಸುತ್ತದೆ. ಜಗತ್ತಿನ ವಿವಿಧ -ಭಾಗಗಳಲ್ಲಿ ಭಿನ್ನ ಪ್ರದೇಶದಲ್ಲಿ ವಾಸಿಸುವ -ವಿವಿಧ ಬಣ್ಣ ಇರುವ ಸುಮಾರು 21 ಬಗೆಯ ಮರಗುಬ್ಬಿಗಳನ್ನು ಪಟ್ಟಿ ಮಾಡಲಾಗಿದೆ. ಈ ಹಕ್ಕಿಯ ಅಧ್ಯಯನಕ್ಕೆ ವಿಫುಲ ಅವಕಾಶ ಜಗತ್ತಿನ ತುಂಬೆಲ್ಲಾ ಇದೆ. ಏಷಿಯಾ ಮತ್ತು ಭಾರತ, ಪಶ್ಚಿಮ ಘಟ್ಟದ ಬೆಟ್ಟ ಮತ್ತು ಸಮಶೀತೋಷ್ಣ ಕಾಡಿನಲ್ಲಿ ಬದನೆ ಕಾಯಿ ಬಣ್ಣದ ಮುಂಭಾಗ ಇರುವ ಮತ್ತು ಇಟ್ಟಿಗೆ ಗೆಂಪು ಬಣ್ಣದ ಪ್ರಧಾನ ತಳಿ ಮತ್ತು ಉಪ ತಳಿಗಳು ಇಲ್ಲಿಯ ಪ್ರಾದೇಶಿಕ ಹಕ್ಕಿಗಳು. ಪಶ್ಚಿಮ ದೇಶದ ಕೆಲವು ತಳಿಗಳು ಚಳಿಗಾಲದಲ್ಲಿ ವಲಸೆ ಹೋಗುತ್ತವೆ. ಕಾಡಿನ ಮರಕೊರೆವ ಹುಳು, ಜೇಡ, ಏಡಿ, ಏಡಿ ಮರಿ, ಗೆದ್ದಲು ಲಾರ್ವಾ ಇದರ ಪ್ರಧಾನ ಆಹಾರ. ಕೆಲವೊಮ್ಮ ಕಾಳು, ಹುಲ್ಲು ಬೀಜಗಳನ್ನು ತಿನ್ನುವುದುಂಟು. ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ಕಾಡಿನಲ್ಲಿ, ಕಾಡಿನ ಪಕ್ಕದ ನೆಡು ತೋಪು , ತೋಟ ಪಟ್ಟಿಗಳಲ್ಲಿ ಕೆಲವೊಮ್ಮ ವಿವಿಧ ಜಾತಿಯ ಮರಕುಟುಕಗಳ ಜೊತೆ ಸಹ ಇರುತ್ತದೆ.
ಈ ಹಕ್ಕಿ ಬಿಟ್ಟ ಗೂಡನ್ನು ತನ್ನ ಮೊಟ್ಟೆ ಇಡಲು ಆರಿಸಿಕೊಳ್ಳುತ್ತದೆ. ಆ ಗೂಡಿನ ಬಾಯಿಗೆ ಮತ್ತು ಒಳ ಮೈಗೆ ಮಣ್ಣು ಲೇಪಿಸಿ, ತನ್ನ ಗೂಡಿಗೆ ವಿಶಿಷ್ಟ ಆಕಾರವನ್ನು ರೂಪಿಸುತ್ತದೆ. ತನ್ನ ಗೂಡನ್ನು ಭದ್ರ ಪಡಿಸಲು ಹೊರಗಡೆ ಜೇಡದ ಬಲೆ, ನಾರನ್ನು ಅಂಟಿಸುತ್ತದೆ. ಒಳಗೆ ಹೋಗಿ ಬರಲು ವರ್ತುಲಾಕಾರದ ಗೂಡಿನ ಬಾಯಿ ನಿರ್ಮಿಸುತ್ತದೆ. ಇದು 30 ದಿನಗಳ ಕಾಲ ಕಾವು ಕೊಟ್ಟು ಮರಿಮಾಡುತ್ತವೆ. ಗೂಡಿನಲ್ಲಿ ಚಿಕ್ಕ ಕಲ್ಲನ್ನು ಇಡುವಂಥ ಜಾಣತನವನ್ನು ಈ ಹಕ್ಕಿ ಪ್ರದರ್ಶಿಸುತ್ತದೆ. ಆದರೆ ಯಾವ ಉದ್ದೇಶದಿಂದ ಹಾಗೇ ಕಲ್ಲಿಡುತ್ತದೆ ಎಂಬುದು ತಿಳಿದಿಲ್ಲ.
ಇದು ಮರಿ ಮಾಡುವ ಸಮಯದಲ್ಲಿ ಹೊರಡಿಸುವ ಸಿಳ್ಳೆ, ದೀರ್ಘ ಕೂಗನ್ನು ಸಹ ಕೆಂಪು ಹೊಟ್ಟೆಯ ಮರಗುಬ್ಬಿ ಸೂಕ್ಷ್ಮವಾಗಿ ತಿಳಿಯುತ್ತದೆ. ವೈರಿಗಳು ಬಂದಾಗ ತನ್ನ ದನಿಯಿಂದ ಇತರ ಹಕ್ಕಿಗಳಿಗೆ ಸೂಚನೆ ನೀಡುತ್ತದೆ. ಈ ಗುಂಪಿನ ಬೇರೆ ಬೇರೆ ತಳಿ ಹೊರಡಿಸುವ ದನಿ, ವೈರಿಗಳಿಂದ ರಕ್ಷಣೆಗಾಗಿ ಹೊರಡಿಸುವ ದನಿಗಳ ವ್ಯತ್ಯಾಸ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.