ವಾಗ್ದೇವಿಯ ಪೂಜೆಯೇ ಸಾಹಿತ್ಯ ಸಮ್ಮೇಳನ : ಡಾ|ಯು.ರಾಮ ಭಟ್
Team Udayavani, Apr 1, 2018, 6:50 AM IST
ಮುಳ್ಳೇರಿಯ: ಗೌರವದ ಸ್ಥಾನಮಾನ ಪಡೆದಿರುವ ಭಾಷೆಗೆ ದಿವ್ಯವಾದ ಶಕ್ತಿಯಿದೆ. ಭಾಷೆಯಲ್ಲಿಯೇ ಸರ್ವವೂ ಅಡಗಿದೆ. ಜ್ಞಾನಪ್ರದ ಪುಸ್ತಕಕ್ಕೆ ಗೌರವದ ಸ್ಥಾನಮಾನವಿದೆ. ವಾಗ್ದೇವಿಯ ಪೂಜೆಯೇ ಸಾಹಿತ್ಯ ಸಮ್ಮೇಳನ ಎಂದು ಖ್ಯಾತ ಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ ಡಾ|ಯು.ರಾಮ ಭಟ್ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರ(ಗಣೇಶ ಮಂದಿರ)ದಲ್ಲಿ ಆಯೋಜಿಸಿದ ಕಾಸರಗೋಡು ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೇಳನಗಳಿಂದ ಭಾಷೆ, ಸಂಸ್ಕೃತಿಯನ್ನು ಯುವ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯದ ಜೊತೆಗೆ ಜ್ಞಾನದ ಆರಾಧನೆಯೂ ನಡೆಯುತ್ತದೆ. ತಿಳಿವಳಿಕೆಯ ಬೆಳಕಿನಲ್ಲಿ ಬೆಳೆದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಸಮ್ಮೇಳನವು ಭಾಷೆ, ಸಾಹಿತ್ಯ, ಆಡು, ನುಡಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದರು.
ಹಕ್ಕಿಗಾಗಿ ಹೋರಾಟ : ರವೀಶ ತಂತ್ರಿ
ಸಂವಿಧಾನಬದ್ಧವಾಗಿ ಭಾಷಾ ಅಲ್ಪಸಂಖ್ಯಾಕರಿಗೆ ನೀಡಿದ ಹಕ್ಕು, ಸವಲತ್ತುಗಳನ್ನು ಉಳಿಸಿಕೊಳ್ಳಬೇಕಾದರೆ ನಿರಂತರವಾದ ಹೋರಾಟ ಅನಿವಾರ್ಯ.ಸಮಾಜ ಸೇವಕ ರವೀಶ ತಂತ್ರಿ ಕುಂಟಾರು ಅವರು ಹೇಳಿದರು.ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳು, ಸಂಕಷ್ಟಗಳ ಪರಿಹಾರಕ್ಕೆ ಕಾಸರಗೋಡಿನ ಕನ್ನಡಿಗರೇ ಹೋರಾಟದ ಕಣಕ್ಕೆ ಇಳಿಯಬೇಕು. ಹೋರಾಟದಿಂದ ಮಾತ್ರವೇ ನಮ್ಮ ಹಕ್ಕು, ಸವಲತ್ತುಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯ.ಇದಕ್ಕಾಗಿ ಕನ್ನಡಿಗರೆಲ್ಲರೂ ಒಂದೇ ಸೂರಿನಡಿನಲ್ಲಿ ಒಗ್ಗೂಡಿ ಹೋರಾಟದ ಮೂಲಕ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಸಮಾಜವನ್ನು ಒಗ್ಗೂಡಿಸಿ ತನ್ನತನವನ್ನು ಉಳಿಸಿಕೊಳ್ಳಲು ಮತ್ತು ಭವಿಷ್ಯತ್‌ನಲ್ಲಿ ನಮ್ಮ ಹೋರಾಟಕ್ಕೆ ಬಲ ಲಭಿಸಲು ಈ ಸಮ್ಮೇಳನ ವೇದಿಕೆಯಾಗಿದೆ ಎಃದವರು ಹೇಳಿದರು.
ಹೋರಾಟ ಮಾಡದಿದ್ದರೆ, ನಮ್ಮನ್ನು ನಾವು ಸಮರ್ಪಿಸಿಕೊಳ್ಳದಿದ್ದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕಷ್ಟ. ಭಾಷಣಕ್ಕೆ ಮಾತ್ರ ನಮ್ಮ ಹೋರಾಟ ಸಾಲದು. ವಿಧಾನಸಭೆಯಲ್ಲೂ ಕನ್ನಡ ಪರ ಘರ್ಜಿಸುವಂತಾಗಬೇಕು. ನಾವು ಯಾರನ್ನು ವಿರೋಧಿಸುವುದಿಲ್ಲ. ಆದರೆ ಕನ್ನಡಕ್ಕೆ ಧಕ್ಕೆ ಎದುರಾದಾಗ ಹೋರಾಟ ನಡೆಸುವುದು ಸತ್ಯ. ಈಗಿಂದೀಗಲೇ ನಾವೆಲ್ಲಾ ಪ್ರತಿಜ್ಞೆಗೈಯೋಣ ಎಂದು ರವೀಶ ತಂತ್ರಿ ಕುಂಟಾರು ಅವರು ಹೇಳಿದರು.
ಕನ್ನಡ ಪರ ಚಿಂತನೆ, ಕೆಲಸ
ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾರನ್ನೂ ಬೊಟ್ಟು ಮಾಡಬೇಕಾದ ಅಗತ್ಯವಿಲ್ಲ. ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆಯಾದಾಗ ನಾವೆಲ್ಲ ಹೋರಾಟ ಕಣಕ್ಕೆ ಧುಮುಕಿ ಸರಕಾರದ ವಿರುದ್ಧ ಘರ್ಜಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮನ್ನು ನಾವು ಕನ್ನಡ ಪರ ಚಿಂತನೆ, ಕೆಲಸದಲ್ಲಿ ತೊಡಗಿಸಿಕೊಳ್ಳೋಣ ಎಂದು ಕೇರಳ ಪ್ರಾಂತ್ಯ ಕನ್ನಡ ಮಾದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಬಲ್ಲಾಳ್ ಅವರು ಹೇಳಿದರು.
ಹಿರಿಯ ಸಾಹಿತಿ ಡಾ|ಯು.ರಾಮ ಭಟ್ ಅವರು ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಪಿ.ರಾಜಗೋಪಾಲ ಪುಣಿಂಚತ್ತಾಯ ವಿರಚಿತ “ಅಮೇರಿಕಾದಲ್ಲಿ ನಾವು’ ಪ್ರವಾಸ ಕಥನ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಿದರು. ಪತ್ರಕರ್ತ ವಿರಾಜ್ ಅಡೂರು ಕೃತಿಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸ್ಮಿತಾ ಪಿ., ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂಘಟನಾ ಸಮಿತಿ ಕಾರ್ಯದರ್ಶಿ ಕೆ.ರಂಗನಾಥ ಶೆಣೈ, ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಪ್ರಾಸ್ತಾವಿಕ ಮಾತನಾಡಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ಸ್ವಾಗತಿಸಿದರು.
ಕಾರ್ಯಕ್ರಮ ಸಂಯೋಜನಾ ಸಮಿತಿ ಸದಸ್ಯ ಗುರುಮೂರ್ತಿ ನಾಯ್ಕಪು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ನವೀನ್‌ಚಂದ್ರ ಎಂ.ಎಸ್. ವಂದಿಸಿದರು.
ಚಿತ್ರಗಳು: ಶ್ರೀಕಾಂತ್ ಕಾಸರಗೋಡು
– ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.