ಜೀವನದ ಪಾಠ ಹೇಳುವ ಉರುಗಲು ಮರ


Team Udayavani, Apr 1, 2018, 6:00 AM IST

18.jpg

ತೊಗಟೆಯೇ ಈ ಮರದ ವಿಶೇಷತೆ. ದಿಂಡಿಲು, ಕಕ್ಕೆ, ಕಾರಚ್ಚಿ ಮರಗಳ ಹಾಗೆ ಈ ಮರಕ್ಕೂ ಅದ್ಭುತವಾದ ಬೆಂಕಿ ನಿರೋಧಕ ಗುಣವಿದೆ. ನೋಡುವುದಕ್ಕೆ ಮರದ ಹೊರಮೈಯೆಲ್ಲ ಕಾಗೆಯಂತೆ ಕಪ್ಪಗಾಗಿದ್ದರೂ ಅದರ ತೊಗಟೆಯನ್ನು ಸ್ವಲ್ಪ ಉಜ್ಜಿದರೆ ಒಳಗೆ ಆಶ್ಚರ್ಯಕರವಾಗಿ ಮರವಿನ್ನೂ ಹಸಿರಿರುತ್ತದೆ. 

ಮರಗಳು ನಿಸರ್ಗದ ಒಂದು ಅವಿಭಾಜ್ಯ ಅಂಗ. ಅವುಗಳಿಲ್ಲದೆ ಕಾಡಿಲ್ಲ, ಪ್ರಾಣಿಪಕ್ಷಿಗಳು ಬದುಕಲು ಅಸಾಧ್ಯ. ಅವುಗಳು ಒಂದು ಸಮುದಾಯವಿದ್ದಂತೆ. ಜೀವಸಂಕುಲಕ್ಕೆ ಆಹಾರವಾಗಿ, ನೆರಳಾಗಿ, ಆಸರೆಯಾಗಿ ತಮ್ಮ ಜೀವನವನ್ನೇ ತೇಯ್ದು ಇತರ ಜೀವಿಗಳಿಗೆ ಜೀವ ಕೊಡುವ ಮರಗಳು ಪ್ರಾಣಿಪಕ್ಷಿಗಳಿಗೆ ಒಂದು ತರಹ ಒಡಹುಟ್ಟಿದವರ ಹಾಗೆ. ಸಹೃದಯತೆಯ ಬಾಳು ಈ ಜೀವಿಗಳದು. ಬೇರೆ ಪ್ರಾಣಿಪಕ್ಷಿ ಗಳಿಗಷ್ಟೇ ಅಲ್ಲ ತಮ್ಮ ಸುತ್ತಮುತ್ತಲಿರುವ ಮರಗಿಡಗಳಿಗೆ ಒಂದೇ ಕುಟುಂಬದವರ ಹಾಗೆ ವೃಕ್ಷಗಳು ಸಹಾಯ ಮಾಡುತ್ತವೆಂದು ವಿಜ್ಞಾನ ಹೇಳುತ್ತದೆ. ತಮ್ಮ ಸಮುದಾಯದ ಇತರ ಮರಗಳೊಡನೆ ತಮ್ಮ ಬೇರುಗಳ ಮೂಲಕ ಸಂಪರ್ಕ ಸಾಧಿಸುತ್ತವೆ, ಮತ್ತು ಕಷ್ಟದಲ್ಲಿ ರುವ ಮರಗಳಿಗೆ ಪೌಷ್ಠಿಕಾಂಶಗಳನ್ನು ಆರೋಗ್ಯಕರ ಮರಗಳು ವರ್ಗಾ ಯಿಸುತ್ತವೆ. ಇಂತಹ ನಂಬಲಸಾಧ್ಯ ಗುಣಗಳನ್ನು ಹೊಂದಿ ರುವ ಸಸ್ಯಜಾತಿ, ನಿಸರ್ಗದ ಬಹು ಕೌತುಕದ ಒಂದು ಕೊಂಡಿ.  

ಮಾನವನ ಹಾಗೆ ಮರಗಳು ಕೂಡ ತಮ್ಮ ತಂದೆ, ತಾಯಿ, ಮಕ್ಕಳೊಡನೆ ಜೀವಿಸುತ್ತವೆ, ಕುಟುಂಬ ವರ್ಗದವರೊಡನೆ ಸಂಪರ್ಕದಲ್ಲಿರುತ್ತವೆ ಮತ್ತು ಸಸಿಗಳು ಬೆಳೆಯುವಾಗ ಅವುಗಳನ್ನು ಬೆಂಬಲಿಸುತ್ತವೆ ಎನ್ನುತ್ತಾರೆ ತಮ್ಮ “ದಿ ಹಿಡನ್‌ ಲೈಫ್ ಆಫ್ ಟ್ರೀಸ್‌’ ಪುಸ್ತಕದಲ್ಲಿ ಲೇಖಕ ಪೀಟರ್‌ ವಲ್ಲೆ ಬೆನ್‌. ಹಾಗಾಗಿ, ಸಮುದಾಯ ದಲ್ಲಿ ಬೆಳೆಯುವ ಮರಗಳು ದೀರ್ಘಾಯುವಾಗಿದ್ದು, ಒಂಟಿಯಾಗಿ ಬೆಳೆಯುವ ಮರಗಳು ಬೇಗನೆ ಸಾಯುತ್ತವೆ ಎಂದು ಕೂಡ ಹೇಳುತ್ತಾರೆ.   

ಮಾನವನಿಗೆ ಮರಗಳು ಪ್ರಕೃತಿಯ ಕನೆಕ್ಟರ್‌ಗಳು. ಮರಗಿಡಗಳೇ ಬಹುಶಃ ಮಾನವನಿಗೆ ನಿಸರ್ಗದೊಡನೆ ಇರುವ ಅತ್ಯಂತ ನಿಕಟವಾದ ಭಾವನಾತ್ಮಕ ಕೊಂಡಿ. ಮನುಷ್ಯನಿಗೆ ಅವುಗಳೊಂದಿಗೆ ಸಾಂಸ್ಕೃತಿಕ ಬಾಂಧವ್ಯ ಕೂಡ ಇದೆ. ಅನಾದಿಕಾಲದಿಂದಲೂ ಮನುಷ್ಯರು ಕಥೆ-ವ್ಯಥೆ, ನೋವು-ನಲಿವು, ಆಚಾರ-ವಿಚಾರ, ಪ್ರೀತಿ-ಪ್ರೇಮ, ಸುಖ-ದುಃಖಗಳನ್ನು ಹಂಚಿಕೊಂಡಿರುವುದೇ ಮರಗಳ ಕೆಳಗೆ. ಇದನ್ನೇ ದೃಷ್ಟಿ ಪರಿಹಾರಕ್ಕೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸಾಂಕೇತಿಕವಾಗಿ “ಟಚ್‌ ವುಡ್‌’ ಎಂದು ಹೇಳಿ ಕೈಗೆಟುಕುವ ಮರದ ಸಾಮಗ್ರಿಯನ್ನು ಮುಟ್ಟುತ್ತಾರೆ. “ಮರ ಮಾನವನಿಗೆ ವರ’, ಒಂದಲ್ಲ ಒಂದು ವಿಧದಲ್ಲಿ ಒಡನಾಡಿಗಳಾಗಿ ಮರಗಿಡಗಳು ನಮ್ಮ ಜೀವನದಲ್ಲಿ ಬಂದು ಹೋಗಿರುತ್ತವೆ.

ಪಕ್ಷಿಗಳ ಕೂಗನ್ನು ಆಧರಿಸಿ ಅವುಗಳನ್ನು ಗುರುತಿಸಿದಂತೆಯೇ, ಪ್ರತಿ ಮರದ ರೆಂಬೆ, ಎಲೆ, ಕಾಯಿಗಳು ಗಾಳಿಗೆ ಅಲ್ಲಾಡುತ್ತ ಮಾಡುವ ಶಬ್ದವನ್ನು ಗಮನವಿಟ್ಟು ನಮ್ಮ ಕಿವಿ ಎಂಬ ಪ್ರಿ-ಇನ್ಸಾಲ್ಡ್‌ ಆ್ಯಪ್‌ ಉಪಯೋಗಿಸಿ ಕೇಳಿದರೆ ಮರಗಳನ್ನು ಗುರುತಿಸಬಹುದು. ಅದೊಂದು ಧ್ಯಾನ ಮಾಡಿದಂತಹ ಅನುಭವ.   

ಬಹುಶಃ ಮರಗಳೇ ಮಾನವನಿಂದ ಅತಿ ಹೆಚ್ಚು ಬಳಕೆಯಾಗುವ ನೈಸರ್ಗಿಕ ವಸ್ತು ಇರಬೇಕು ಮತ್ತು ಮಾನವನ ಕೆಲ ಚಟುವಟಿಕೆಗಳಿಂದ ಅತಿ ಹೆಚ್ಚು ದುಷ್ಪರಿಣಾಮವಾಗುವುದೂ ಮರಗಳ ಮೇಲೆಯೇ. ಕಡಿತ, ಬೆಂಕಿ, ಇನ್ನಿತರ ಮಾನವನ ಕ್ರಿಯೆಗಳಿಂದ ಅವುಗಳ ಉಳಿವು ಅಥವಾ ಬೆಳವಣಿಗೆಗಳ ಮೇಲೆ ಸಾಕಷ್ಟು ಪರಿಣಾಮವಾಗುತ್ತದೆ. ಉದಾಹರಣೆಗೆ ಬೆಂಕಿಯಿಂದ ಹಲವಾರು ಮರಗಿಡಗಳು ಸುಟ್ಟು ಕರಕಲಾಗುತ್ತವೆ. ಬೆಂಕಿಯಿಂದ ಸಸಿಗಳು, ಮೊಳಕೆಯೊಡೆಯಲು ಕಾಯುತ್ತಿರುವ ಬೀಜಗಳೆಲ್ಲ ಸುಟ್ಟು ಮುಂದೊಂದು ದಿನ ರಂಬೆಗೆದರಿ ವೃಕ್ಷವಾಗುವ ಸಂಭಾವ್ಯತೆಯುಳ್ಳ ಜೀವವನ್ನು ಮೊಳಕೆಯಲ್ಲೇ ಚಿವುಟಿ ಹಾಕುತ್ತೇವೆ. 

ಆದರೆ ಮಾನವನ ಕೆಲ ಒತ್ತಡಗಳೆದುರು ಹೋರಾಡುವುದಕ್ಕೆ ಪ್ರಕೃತಿ ತನ್ನದೇ ಚತುರ ತಂತ್ರಗಳನ್ನು ಕಂಡುಕೊಂಡಿದೆ. ಮರದಂತಹ ಅದ್ಭುತ ಜೀವಿಗಳು ಕೆಲವೊಮ್ಮೆ ವಿಕಸನದ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಲ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ. ಈ ನಿಟ್ಟಿನಲ್ಲಿ ಒಂದು ಮರ ಬಹು ಗಮನ ಸೆಳೆಯುತ್ತದೆ.   

ಅದೇ ದಕ್ಷಿಣ ಭಾರತ, ಶ್ರೀಲಂಕಾ, ಮತ್ತು ಮಡಗಾಸ್ಕರ್‌ ದೇಶಗಳಲ್ಲಿ ಕಂಡುಬರುವ “ಉರಗಲು’ ಮರ. ಸುಮಾರು ಹದಿನೈದು ಮೀಟರ್‌ನಷ್ಟು ಎತ್ತರ ಬೆಳೆಯುವ ಈ ಮರಕ್ಕೆ ಆಂಗ್ಲ ಭಾಷೆಯಲ್ಲಿ ಈಸ್ಟ್‌ ಇಂಡಿಯನ್‌ ಸ್ಯಾಟಿನ್‌ ವುಡ್‌ ಟ್ರೀ ಎಂದು ಕರೆಯುತ್ತಾರೆ. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಈ ಮರದ ಹಸಿರು ಎಲೆ ಸಂಪೂರ್ಣವಾಗಿ ಹಳದಿಯಾಗಿ ಇದು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಕಾಡೆಲ್ಲಾ ಹಳದಿಯಾಗಿ ಕಾಣುವಂತೆ ಮಾಡುತ್ತದೆ. ಫೆಬ್ರವರಿ-ಮಾರ್ಚ್‌ ತಿಂಗಳುಗಳಲ್ಲಿ ಈ ಮರದ ಎಲೆಗಳೆಲ್ಲ ಸಂಪೂರ್ಣವಾಗಿ ಉದುರಿ, ಗೊಂಚಲುಗಳಲ್ಲಿ ಪುಟ್ಟ-ಪುಟ್ಟ ತಿಳಿ ಹಳದಿ ಬಣ್ಣದ ಹೂವುಗಳಿಂದ ಉರುಗಲು ಮರ ತನ್ನನ್ನು ಶೃಂಗರಿಸಿಕೊಂಡಿರುತ್ತದೆ. ಒಂದೊಂದು ಎಲೆಗುತ್ತಿಗೂ ಒಂದೊಂದು ಹೂಗೊಂಚಲು. ಹೂ ತುಂಬಿಕೊಂಡ ರೆಂಬೆ ಕೊಂಬೆಗಳು, ಸ್ವಲ್ಪ ದಿನಗಳ ಹಿಂದೆ ಒಣಗಿದ ಎಲೆಗಳಿಂದ ಗಾಢ ಹಳದಿಯಾಗಿದ್ದವು ಈಗ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಮರಕ್ಕೆ ಜೇನು ನೊಣಗಳೇ ಪರಾಗಸ್ಪರ್ಶ ಮಾಡಿ ಮುಂದಿನ ಪೀಳಿಗೆಗೆ ಅಡಿಪಾಯ ಹಾಕುವುದು. 

ಬಣ್ಣಗಳೇ, ಗಿಡಗಳು ತಮ್ಮ ಪರಾಗಸ್ಪರ್ಶಿಗಳನ್ನು ಆಕರ್ಷಿಸುವ ವಿಧಾನ. ದೂರದಿಂದಲೇ ಕಾಣುವ ಬಣ್ಣಗಳು ಪ್ರಾಣಿಗಳನ್ನು ಗಿಡಗಳತ್ತ ಸೆಳೆಯುತ್ತವೆ. ಆದರೆ ಬೇರೆ ಬೇರೆ ವರ್ಗದ ಪ್ರಾಣಿಗಳಿಗೆ ಬೇರೆ ಬೇರೆ ಬಣ್ಣಗಳನ್ನು ನೋಡುವ ಶಕ್ತಿಯಿದೆ. ಉದಾಹರಣೆಗೆ ಜೇನ್ನೊಣಗಳಿಗೆ ನೀಲಿ, ಹಸಿರು ಮತ್ತು ಹಳದಿ ಬಣ್ಣಗಳು ಕಾಣುತ್ತವೆ. ಆದರೆ ಅವುಗಳಿಗೆ ಕೆಂಪು ಬಣ್ಣ ಕಾಣುವುದಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಪಕ್ಷಿಗಳು ನೀಲಿ, ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳನ್ನು ನೋಡುವ ಶಕ್ತಿ ಹೊಂದಿವೆ. ಹಾಗಾಗಿ ಉರುಗಲು ಮರಕ್ಕೆ ಜೇನ್ನೊಣವೇ ಬಹುಮುಖ್ಯ ಪರಾಗಸ್ನೇಹಿತ. ಒಮ್ಮೊಮ್ಮೆ ಪುಟ್ಟ ಸೂರಕ್ಕಿ, ಮಧುರಕಂಠ ಪಕ್ಷಿಗಳು ಇದರ ಹೂವಿನ ಮಕರಂದ ವನ್ನು ಹೀರುವುದು ನೋಡಿದ್ದೇನೆ. ಬಹುಶಃ ದೊಡ್ಡ ಪ್ರಾಣಿಪಕ್ಷಿಗಳ ತೂಕವನ್ನು ಉರುಗಲಿನ ನಾಜೂಕಾದ ಹೂಗೊಂಚಲುಗಳು ಮತ್ತು ರೆಂಬೆಗಳು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ.  

ಪ್ರಕೃತಿಯ ವೈಶಿಷ್ಟ್ಯ ಎಷ್ಟು ಸುಂದರವಾಗಿದೆ. ಬೇಸಿಗೆ ಪ್ರಾರಂಭವಾಗುವ ಹೊತ್ತಿಗೆ ಉರುಗಲು ಮರ (ಇತರ ಕೆಲ ಜಾತಿಯ ಮರಗಿಡಗಳು ಕೂಡ) ಹೂಬಿಟ್ಟು ಜೇನ್ನೊಣಗಳಿಗೆ ಆಹಾರವಾಗಿ ಮಕರಂದ ಕೊಟ್ಟು, ಅವು ಪಾರಾಗ ಸ್ಪರ್ಶ ಮಾಡಿ, ಮಳೆಗಾಲ ಪ್ರಾರಂಭವಾಗುವ ಮುನ್ನವೇ ಕಾಯಿಬಿಟ್ಟು, ನೀರು ಯಥೇತ್ಛವಾಗಿ ಸಿಗುವ ಹೊತ್ತಿಗೆ ಹೊಸ ಸಸಿಗಳು ನೆಲದಲ್ಲಿ ಉದ್ಭವವಾಗುವ ಹಾಗೆ ಮಾಡಿದೆ.  

ಆಯುರ್ವೇದ, ಸಿದ್ಧ ಮತ್ತು ನಾಡಿ ಔಷಧ ಪದ್ಧತಿಗಳಲ್ಲಿ ಇದನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಇದರ ಒಣಗಿದ ಎಲೆಗಳನ್ನು ಗಾಯಗಳನ್ನು ಬೇಗ ಗುಣಪಡಿಸಲು ಹಾಗೂ ಸಂಧಿವಾತಕ್ಕೆ ಉಪಯೋಗಿಸುತ್ತಾರೆ. ಈ ಮರಕ್ಕೆ ಸುಲಭವಾಗಿ ಗೆದ್ದಲು ಹಿಡಿಯದಿರುವುದರಿಂದ ಇದರ ಚೌಬೀನೆಯನ್ನು ಮನೆಯ ತೊಲೆ, ಕಂಬ, ಕೃಷಿ ಸಲಕರಣೆ ಮತ್ತು ಇನ್ನಿತರ ಬಳಕೆಗಳಿಗೆ ಉಪಯೋಗಿಸುತ್ತಾರೆ. ಹಿಂದೆ ರೈಲ್ವೆ ಹಳಿಗಳು, ದೋಣಿಗಳನ್ನು ಮಾಡಲು ಸಹ ಈ ಮರದ ಚೌಬೀನೆಯನ್ನು ಉಪಯೋಗಿಸುತ್ತಿದ್ದರು. ಈ ಮರ, ಚಿನ್ನದ ಬಣ್ಣದ ಹಾಗೆ ಪ್ರತಿಫ‌ಲಿಸುವ ಹೊಳಪು ಕೊಡುವುದರಿಂದ ಇದನ್ನು ಕೆಲ ಚಿಕ್ಕಪುಟ್ಟ, ದುಬಾರಿ ಪೀಠೊಪಕರಣಗಳಿಗೆ ತೆಳುಹೊದಿಕೆಯಾಗಿ (ವಿನೀರ್‌) ಉಪಯೋಗಿಸಲಾಗುತ್ತದೆ. ಉರುವಲಿಗಾಗಿ ಕೂಡ ಇದನ್ನು ವ್ಯಾಪಕವಾಗಿ ಬಳಸುತ್ತಾರೆ. ಈ ವೃಕ್ಷಪ್ರಭೇದದ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಇಂಟನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್ ನೇಚರ್‌ ಸಂಸ್ಥೆ (IUCN) ಇದನ್ನು “ನಶಿಸಿಹೋಗುವ ಸಾಧ್ಯತೆ’ (Vulnerable) ಪಟ್ಟಿಯಲ್ಲಿ ಸೇರಿಸಿದೆ.   

ನಮ್ಮಲ್ಲಿ ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ ರಾಜ್ಯಗಳ ಒಣಪ್ರದೇಶಗಳಲ್ಲಿ ಈ ಮರ ಕಂಡುಬರುತ್ತದೆ. ಒಣ ಪ್ರದೇಶವೆಂದ ಮೇಲೆ ಇಲ್ಲಿ ಗಿಡಮರಗಳು ನೀರಿನ ಅಭಾವದಿಂದ ಬೆಳೆಯುವುದು ಸಹ ನಿಧಾನ. ಗಾಳಿ ಬೀಸಿದಾಗ ಎಲೆ ಮತ್ತು ರೆಂಬೆಗಳ ಮೂಲಕ ಮಾತನಾಡುವ ಈ ಮರಕ್ಕೆ ನೀರಿನ ಅಭಾವವನ್ನು ತಡೆದುಕೊಳ್ಳುವುದಕ್ಕೆ ಮತ್ತು ಒಣ, ಗಟ್ಟಿ ನೆಲದಲ್ಲಿ ಬೆಳೆಯುವುದಕ್ಕೆ ಪ್ರಕೃತಿ ವಿಸ್ಮಯಕಾರಿ ಶಕ್ತಿ ಕೊಟ್ಟಿದೆ. ಒಂದು ತರಹ ನಿಸರ್ಗ ಈ  ಮರವನ್ನು ಬಲಿಷ್ಠ ಹುಡುಗರ ಹಾಗೆ ವಿನ್ಯಾಸಗೊಳಿಸಿದೆ. ಕೆಲ ಪ್ರದೇಶಗಳಲ್ಲಿ ನೀರು ಹೆಚ್ಚಿರುವುದು, ಕೆಲವು ಪ್ರದೇಶಗಳಲ್ಲಿ ಕಡಿಮೆಯಿರುವುದು ಪ್ರಕೃತಿ ನಿಯಮ. ಆದರೆ ಪ್ರಕೃತಿ ನಿಯಮವನ್ನು ಮೀರಿ ಈ ಮರಕ್ಕೆ ಇರುವ ಸಂಕಷ್ಟವೆಂದರೆ ಈ ಮರವಿರುವ ಪ್ರದೇಶಗಳಲ್ಲಿ ಪ್ರತಿವರ್ಷವೂ ಕಾಡಿಗೆ ಬೆಂಕಿ ಹಾಕುವ ಪದ್ಧತಿ ರೂಢಿಯಾಗಿರುವುದು. 

ಮರದ ತೊಗಟೆಯ ಕಥೆಯೇ ಬೇರೆ. ಪ್ರಕೃತಿಯೆಂಬ ಫ್ಯಾಷನ್‌ ಡಿಸೈನರ್‌ ಬಹಳ ತಾಳ್ಮೆಯಿಂದ ಸಿದ್ಧಪಡಿಸಿ ಈ ಮರಕ್ಕೆ ಹೊದ್ದಿಸಿರುವ ವಿಶೇಷವಾದ ತೊಗಟೆ. ಪಾದಗಳಲ್ಲಿ ಚಳಿಗೆ ಬಿರುಕು ಬಿಟ್ಟ ಹಾಗೆ ಆಳವಾದ, ವಜ್ರಾಕಾರದ, ದಪ್ಪನೆಯ ಆದರೆ ಮೆತ್ತನೆಯ, ಬೂದು ಬಣ್ಣದ ತೊಗಟೆಯನ್ನು ಉರುಗಲು ಮರದ ಕಾಂಡ ಮತ್ತು ರೆಂಬೆಗಳು ಹೊಂದಿವೆ. ಈ ಮರದ ತೊಗಟೆಯ ಮೇಲೆ ಉಗುರಿನಿಂದ ಒತ್ತಿದರೆ ಸ್ವಲ್ಪ ಗಟ್ಟಿಯಾಗಿರುವ ಸ್ಪಂಜಿನೊಳಗೆ ಉಗುರು ಹೋದ ಅನುಭವಾಗುತ್ತದೆ. 

ಈ ತೊಗಟೆಯೇ ಈ ಮರದ ವಿಶೇಷತೆ ಮತ್ತು ಇದಕ್ಕೆ ಬೆಂಕಿಗೆ ನಿರೋಧಕ ಶಕ್ತಿಕೊಟ್ಟಿರುವುದು. ದಿಂಡಿಲು, ಕಕ್ಕೆ, ಕಾರಚ್ಚಿ ಮರಗಳ ಹಾಗೆ ಈ ಮರಕ್ಕೂ ಅದ್ಭುತವಾದ ಬೆಂಕಿ ನಿರೋಧಕ ಗುಣವಿದೆ. ಬೆಂಕಿಯಿಂದ ತೊಗಟೆಯ ಮೇಲೆಲ್ಲಾ ಕರಕಲಾಗಿದ್ದರೂ, ಮರಕ್ಕೆ ಮಾತ್ರ ಯಾವುದೇ ಹಾನಿಯಾಗಿರುವುದಿಲ್ಲ. ನೋಡುವುದಕ್ಕೆ ಮರದ ಹೊರಮೈಯೆಲ್ಲ ಕಾಗೆಯಂತೆ ಕಪ್ಪಗಾಗಿದ್ದರೂ ಅದರ ತೊಗಟೆಯನ್ನು ಸ್ವಲ್ಪ ಉಜ್ಜಿದರೆ ಒಳಗೆ ಆಶ್ಚರ್ಯಕರವಾಗಿ ಮರವಿನ್ನೂ ಹಸಿರಿರುತ್ತದೆ. ಕೆಲವೊಮ್ಮೆ ಒಂದೆರೆಡು ವರ್ಷವಾದರೂ ತೊಗಟೆಯು ಕರಕಲಾಗಿರುತ್ತದೆ ಆದರೆ ಸ್ವಲ್ಪ ಒರೆಸಿದರೆ ಕರಕಲು ಹೋಗಿ ಜೀವಂತವಾಗಿರುವ ಮರ ಕಾಣುತ್ತದೆ. ಈ ಮರ ನನ್ನ ದೃಷ್ಟಿಯಲ್ಲಿ ಪ್ರಕೃತಿಯಲ್ಲಿನ ಅದ್ಬುತ ಸೃಜನೆಗಳಲ್ಲಿ ಒಂದು.        

ವಿಕಸನದ ಈ ಸ್ಪರ್ಧೆಯಲ್ಲಿ ಮರಗಿಡಗಳು ತಮ್ಮನ್ನು ಸ್ವಲ್ಪ ಮಟ್ಟಿಗೆ ರಕ್ಷಿಸಿಕೊಳ್ಳುವುದನ್ನು ಕಲಿತಿವೆ. ಆದರೆ ಕಡಿತಲೆಯಂತಹ ವ್ಯತಿರಿಕ್ತ ಪರಿಣಾಮಗಳನ್ನು ತಡೆಯುವುದು ಅವುಗಳಿಂದಾಗುವುದಿಲ್ಲ. ಬೆಂಕಿಯಿಂದ ಸುಟ್ಟರೂ ದೃಢವಾಗಿ ನಿಲ್ಲುವ ಮಾತು ಬಾರದ ಈ ಜೀವವು ತನ್ನದೇ ಭಾಷೆಯಲ್ಲಿ ನಮಗೆಲ್ಲ ಜೀವನದ ಪಾಠ ಹೇಳುತ್ತದೆ. ಕನ್ನಡದಲ್ಲಿ ಮರಗಳ ಬಗ್ಗೆ ಹೆಚ್ಚು ತಿಳಿಯಲು ಉತ್ತಮವಾದ ಪುಸ್ತಕವೆಂದರೆ ಬಿ.ಜಿ.ಎಲ್‌ ಸ್ವಾಮಿಯವರ “ಹಸುರು ಹೊನ್ನು’. ಎಲ್ಲರ ಮೆಚ್ಚುಗೆ ಪಡೆದ ಕೃತಿ. 1976ರಲ್ಲಿ ಮೊದಲ ಮುದ್ರಣ ಕಂಡು ಇಂದಿಗೂ ಬಹು ಜನಪ್ರಿಯವಾಗಿರುವ ಈ ಪುಸ್ತಕ ಮರಗಿಡಗಳ ಬಗ್ಗೆ ತೀವ್ರ ಆಸಕ್ತಿ ಹುಟ್ಟಿಸುವಂತಹುದು. ಆಂಗ್ಲದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಡೇವಿಡ್‌ ಹಸ್ಕೆಲ್‌ರ “ದಿ ಸಾಂಗ್ಸ್‌ ಆಫ್ ಟ್ರೀಸ್‌’ ಮತ್ತು ಪೀಟರ್‌ ವಲ್ಲೆ ಬೆನ್‌ರವರ  “ಡಿ ಹಿಡನ್‌ ಲೈಫ್ ಆಫ್ ಟ್ರೀಸ್‌’ ಪುಸ್ತಕಗಳು ಮರಗಿಡಗಳ ಬಗ್ಗೆ ವಿಶೇಷ ಆಯಾಮವನ್ನು ಕೊಡುತ್ತವೆ. 

ಲೇಖನ ಕುರಿತ ವಿಡಿಯೋ ನೋಡಲು  ಈ ಲಿಂಕ್‌ ಟೈಪ್‌ ಮಾಡಿ: bit.ly/2Goc106

ಟಾಪ್ ನ್ಯೂಸ್

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.