ಮನೆಯಲ್ಲಿ ಗರ್ಭಿಣಿ,ಜೈಲಿನಲ್ಲಿ ಯಜಮಾನ…
Team Udayavani, Apr 2, 2018, 6:55 AM IST
ಉಡುಪಿ: ನನ್ನ ತಂದೆ ಅಧ್ಯಾಪಕರು. ನಾನು ಹುಟ್ಟಿದ್ದು ಮೈಸೂರಿನಲ್ಲಾದರೂ ಬೆಳೆದದ್ದು ಕೊಡಗಿನ ತೀರಾ ಹಳ್ಳಿಯಲ್ಲಿ. ಡಾ| ವಿ.ಎಸ್. ಆಚಾರ್ಯ ಅವರ ಕೈ ಹಿಡಿದ ಬಳಿಕ ಅವರು ರಾಜಕೀಯದಲ್ಲಿದ್ದುಕೊಂಡು ಅನುಭವಿಸಿದ ಕಷ್ಟವನ್ನು ಕೂಡ ನೋಡುವಂತಾಯಿತು. ನನಗೆ ಕಷ್ಟ, ಶ್ರಮವೇನೆಂದರೆ ಮೊದಲೇ ಗೊತ್ತಿದ್ದರಿಂದ ನಾನು ಅವರ ರಾಜಕೀಯ ಜೀವನಕ್ಕೆ ಬೆಂಬಲವಾಗಿ ನಿಲ್ಲಲು ಸಾಧ್ಯವಾಯಿತು ಎನ್ನುತ್ತಾ ಶಾಂತಾ ವಿ. ಆಚಾರ್ಯ ಅವರು ನಿಟ್ಟುಸಿರು ಬಿಟ್ಟು ಒಂದರೆ ಕ್ಷಣ ಮೌನವಾದರು.
ರಾಜಕೀಯ ಮುತ್ಸದ್ದಿ , ಧೀಮಂತ ಆಡಳಿತಜ್ಞ ಎಂದು ಗುರುತಿಸಿಕೊಂಡಿದ್ದ ದಿ| ಡಾ| ವಿ.ಎಸ್. ಆಚಾರ್ಯ ಅವರ ಪತ್ನಿ ಶಾಂತಾ ವಿ. ಆಚಾರ್ಯ ಅವರು ನೆನಪುಗಳ ಸುರುಳಿ ಬಿಚ್ಚುವ ಪ್ರಯತ್ನ ಮಾಡಿದರು.
ತುರ್ತು ಪರಿಸ್ಥಿತಿ ವೇಳೆ ನಾನು ತುಂಬು ಗರ್ಭಿಣಿ. ಆಗ ಅವರು ಜೈಲಿನಲ್ಲಿದ್ದರು. 19 ತಿಂಗಳು ನಾನು ಬದುಕಿದ ರೀತಿ, ಅವರು ಪಟ್ಟಿರುವ ಕಷ್ಟ ನೆನಪಿಸಿಕೊಂಡರೆ ತುಂಬಾ ನೋವಾಗುತ್ತದೆ. ಡಾ| ಆಚಾರ್ಯ ಜತೆಗೆ ಇಲ್ಲಿನ ಅನೇಕ ಜನಸಂಘದ ನಾಯಕರೂ ಜೈಲಿನಲ್ಲಿದ್ದರು. ಆದರೆ ಕರಂಬಳ್ಳಿ ಸಂಜೀವ ಶೆಟ್ಟರಂಥ ಕೆಲವು ನಾಯಕರು ವೇಷ ಮರೆಸಿ ನಮ್ಮ ಕುಟುಂಬಕ್ಕೆ ನೆರವಾಗಿದ್ದರು. ಮಕ್ಕಳು ಬೆಳೆಯುತ್ತಲೇ ತಂದೆಯ ರಾಜಕೀಯದ ಕಷ್ಟಗಳನ್ನು ಗಮನಿಸುತ್ತಾ ಬಂದಿದ್ದಾರೆ. ಹಾಗಾಗಿಯೋ ಏನೋ ಮಕ್ಕಳಿಗೆ ರಾಜಕೀಯದ ಆಸಕ್ತಿಯೇ ಇಲ್ಲ.
ನಿಯಮದಲ್ಲಿ ಹರಿಶ್ಚಂದ್ರ!
ನಿಯಮ ಪಾಲನೆಯಲ್ಲಿ ಸತ್ಯಹರಿಶ್ಚಂದ್ರ ಅವರು. ಮೌನವೇ ಅವರ ದೊಡ್ಡ ಆಯುಧ. ಟೀಕೆಗಳು ಬಂದರೂ ನಿರ್ಲಿಪ್ತ ರಾಗಿರುತ್ತಿದ್ದರು. ಕೆಲವೊಮ್ಮೆ ರಾಜಕೀಯ ಬೆಳವಣಿಗೆಗಳನ್ನು ಕಂಡು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸುತ್ತಿದ್ದರು. ನಮ್ಮ ಮನೆಯಲ್ಲಿ ಅಶೋಕ್ ಸಿಂಘಲ್, ವಾಜಪೇಯಿ, ಜಗನ್ನಾಥ ರಾವ್ ಜೋಷಿ – ಹೀಗೆ ಅನೇಕ ಮಂದಿ ಗಣ್ಯರು ಉಳಿದು ಕೊಂಡಿದ್ದರು. ಎಲ್.ಕೆ. ಆಡ್ವಾಣಿ ಅವರು ಹಲವು ಬಾರಿ ಬಂದಿದ್ದರು. ಅವರಿಗೆ ಆತಿಥ್ಯ ಕಷ್ಟವಾಗಿತ್ತಾದರೂ ಯಥಾಶಕ್ತಿ ಒದಗಿಸಿದ ತೃಪ್ತಿ ಇದೆ. ಈಗ ನರೇಂದ್ರ ಮೋದಿಯವರು ಪ್ರಧಾನಿ ಯಾಗಿದ್ದಾರೆ ಎಂಬುದು ನನಗೂ ಸಮಾಧಾನದ ಸಂಗತಿ.
ಅಲ್ಲಿದ್ದು ಏನು ಮಾಡಲಿ ?
ಡಾ| ಆಚಾರ್ಯರಿಗೆ ಮನೆ ಮಂದಿ, ಗೆಳೆಯರೊಂದಿಗೆ ಕಾಲ ಕಳೆಯುವುದಕ್ಕಿಂತಲೂ ಪಕ್ಷದ ಕೆಲಸವೇ ಖುಷಿ ಕೊಡುತ್ತಿತ್ತು. ಸಚಿವರಾದ ಅನಂತರ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದುದೇ ಹೆಚ್ಚು. ನಾನು ಕೆಲವು ದಿನ ಮಾತ್ರ ಅಲ್ಲಿದ್ದೆ. ತಡರಾತ್ರಿಯ ವರೆಗೂ ಫೈಲುಗಳನ್ನು ನೋಡುತ್ತಿದ್ದರು. ನನಗೆ ಅಲ್ಲಿನ ಸಿಬಂದಿ, ಪೊಲೀಸರ ನಡುವೆ ಏನೂ ಕೆಲಸ ಇಲ್ಲ ಅನಿಸುತ್ತಿತ್ತು. ಹಾಗಾಗಿ ನಾನು ಉಡುಪಿಯಲ್ಲೇ ಉಳಿದುಕೊಂಡಿದ್ದೆ. ಅವರು ಶನಿವಾರ, ರವಿವಾರ ಕೂಡ ಬಿಡುವು ಮಾಡಿಕೊಳ್ಳುತ್ತಿರಲಿಲ್ಲ.
ಬಿಜೆಪಿಗಾಗಿ ರಾತ್ರಿ 9 ಗಂಟೆಯ ವರೆಗೂ ನಾವು ಮಹಿಳೆಯರು ಮತ ಯಾಚನೆ ಮಾಡಿದ್ದೆವು. ಇಂದಿರಾ ಗಾಂಧಿಯ ಪೋಸ್ಟರ್ ಬ್ಯಾನರ್ ನೋಡಿಯೇ ಎದೆ ಒಡೆದು ಹೋಗುವಂತಿತ್ತು. “ಸೋತರೂ ಮತ್ತೆ ಯಾಕೆ ಸ್ಪರ್ಧಿಸುತ್ತೀರಿ?’ ಎಂದು ಪ್ರಶ್ನಿಸಿದ್ದೆ. ಆಗ ಅವರು, “ನಾವು ಮತ್ತೆ ಮತ್ತೆ ಜನರ ಬಳಿ ಹೋಗಬೇಕು. ಅವರಿಗೆ ನಮ್ಮ ಪರಿಚಯವಾಗಬೇಕು. ನಮ್ಮ ಪಕ್ಷ ಜನರಿಗೆ ಹತ್ತಿರವಾಗಬೇಕು’ ಎನ್ನುತ್ತಿದ್ದರು. ಸಚಿವರಾದ ಮೇಲೆ ಮನೆ ಬಾಗಿಲಿಗೆ ಬರುತ್ತಿದ್ದ ನೂರಾರು ಜನರನ್ನು ಉತ್ತಮ ರೀತಿಯಲ್ಲಿ ಉಪಚರಿಸುವಂತೆ ಹೇಳುತ್ತಿದ್ದರು. “ಜನರ ಋಣ ನಮ್ಮ ಮೇಲಿದೆ’ ಎನ್ನುತ್ತಿದ್ದರು.
ನನ್ನದೂ ಅಳಿಲಸೇವೆ
ಡಾ| ಆಚಾರ್ಯರ ಜತೆಗೆ ಸಮಾಜಕ್ಕೆ ನನ್ನದೂ ಏನಾದರೂ ಕೊಡುಗೆ ಇರಬೇಕು ಎಂದುಕೊಂಡು ಕಳೆದ 44 ವರ್ಷಗಳಿಂದ ನನ್ನ ಮಕ್ಕಳನ್ನು ಶಾಲೆಗೆ ಸೇರಿಸಿದಾಗಿನಿಂದಲೇ ಗೈಡ್ಸ್ ಸಂಸ್ಥೆ ಯಲ್ಲಿ ಸಕ್ರಿಯವಾಗಿದ್ದೇನೆ. ಈಗ ಗೈಡ್ಸ್‌ನ ಜಿಲ್ಲಾ ಕಮಿಷನರ್ ಆಗಿದ್ದೇನೆ. ಒಮ್ಮೆ ರಾಜ್ಯ ಉಪಾಧ್ಯಕ್ಷೆಯೂ ಆಗಿದ್ದೆ. ಈಗೀಗ ವಯಸ್ಸಿನ ಕಾರಣ ಹೆಚ್ಚು ಕ್ರಿಯಾಶೀಲವಾಗಿ ಇರಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಡಾ| ಆಚಾರ್ಯರು ಸ್ಥಳವನ್ನು ಸರಕಾರದಿಂದ ದೊರಕಿಸಿಕೊಟ್ಟಿದ್ದಾರೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಇನ್ನು ಬರಬೇಕಾಗಿದೆ.
ಸರಕಾರ ಮಲಗುವುದೇ ಇಲ್ಲ ...
ಚಿಕ್ಕವನಿದ್ದಾಗ ನಾನು ಅಪ್ಪನ ಜತೆಗೆ ಉಡುಪಿ ನೀರು ವಿತರಣಾ ಯೋಜನೆಯ ಡ್ಯಾಮ್ ಸೈಟ್, ಪಂಪ್ ಹೌಸ್ ಸೈಟ್‌ಗಳಿಗೆ ಆಗಾಗ ಹೋಗುತ್ತಿದ್ದೆ. ಉಡುಪಿ ನೀರು ಪೂರೈಕೆ ಯೋಜನೆಯ ಸ್ವತ್ಛತೆ ಬಗ್ಗೆ ಅವರಿಗೆ ಎಂತಹ ವಿಶ್ವಾಸವಿತ್ತೆಂದರೆ, ಉಡುಪಿಯಲ್ಲಿರುವಾಗ ನಲ್ಲಿಯ ನೀರನ್ನು ಫಿಲ್ಟರ್ ಕೂಡ ಮಾಡದೇ ಹಾಗೆಯೇ ನೇರವಾಗಿ ಕುಡಿಯು ತ್ತಿದ್ದರು. ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅಂತಹ ಭರವಸೆ ಗಳನ್ನು ಅಪ್ಪ ನೀಡುತ್ತಲೇ ಇರಲಿಲ್ಲ. ನೀಡಿದ ಭರವಸೆ ಕಾರ್ಯರೂಪಕ್ಕೆ ಬರುವ ವರೆಗೂ ಅದರ ಬೆನ್ನು ಹತ್ತಿ ಕೆಲಸ ಮಾಡುತ್ತಿದ್ದರು.
ರಾಜ್ಯದ ಇಂಚಿಂಚೂ ಅವರಿಗೆ ಗೊತ್ತಿತ್ತು. ಸಹೋದ್ಯೋಗಿಗಳೇ ಇರಲಿ ಅಥವಾ ಮನೆಮಂದಿಯಾದ ನಮ್ಮಲ್ಲೇ ಇರಲಿ ಅವರು ಎಂದಿಗೂ ರಾಜ್ಯದ ಆಡಳಿತ ಗುಟ್ಟುಗಳನ್ನು ಹೇಳುತ್ತಿರಲಿಲ್ಲ.ರಾಜಕಾರಣದ ವಿಚಾರಗಳನ್ನು ಗೌಪ್ಯವಾಗಿಡುತ್ತಿದ್ದರು.ಸಾರ್ವಜನಿಕ ಜೀವನದ ಪ್ರಾರಂಭ ದಿಂದ ಕೊನೆಯ ವರೆಗೂ ಅವರು ಜನಸಾಮಾನ್ಯರೊಂದಿಗೆ ಬೆರೆಯುವುದನ್ನು ಇಷ್ಟಪಡುತ್ತಿದ್ದರು. ವೇದಿಕೆ ಅಥವಾ ಮೀಟಿಂಗ್‌ಗಳು ಹೊರತುಪಡಿಸಿದರೆ ಉಳಿದ ಯಾವುದೇ ಸಂದರ್ಭ ಅವರು ಫೋನ್ ಕರೆಗಳನ್ನು ತಾವೇ ಸ್ವೀಕರಿಸುತ್ತಿದ್ದರು. “ಸರಕಾರ ಮಲಗುವುದೇ ಇಲ್ಲ’ ಎನ್ನುವುದು ಅವರು ಯಾವಾಗಲೂ ಹೇಳುತ್ತಿದ್ದ ಮಾತು.
– ಡಾ| ರವಿರಾಜ ಆಚಾರ್ಯ,
ಡಾ| ವಿ.ಎಸ್. ಆಚಾರ್ಯ ಅವರ ಪುತ್ರ
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.