ಅಭಿವೃದ್ಧಿ ಸಮತೋಲನ ಸಾಧಿಸಲು ಸೋತ ಜಯನಗರ
Team Udayavani, Apr 2, 2018, 12:33 PM IST
ಬೆಂಗಳೂರು: ರಾಜಧಾನಿಯ ದಕ್ಷಿಣ ಭಾಗದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಜಯನಗರ ವಿಧಾನಸಭಾ ಕ್ಷೇತ್ರದ ಬಹುಪಾಲು ಯೋಜಿತ ಪ್ರದೇಶ. ಬಡಾವಣೆಗಳು ಅಭಿವೃದ್ಧಿ ಕಂಡಿಯವೆಯಾದರೂ ಕ್ಷೇತ್ರದಲ್ಲಿರುವ 11 ಕೊಳೆಗೇರಿಗಳಲ್ಲಿ ಮೂಲಸೌಕರ್ಯ ಇನ್ನಷ್ಟು ಸುಧಾರಣೆ ಕಾಣಬೇಕಿದೆ.
ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಸಮತೋಲನ ಎದ್ದು ಕಾಣುತ್ತದೆ. ಬಹುತೇಕ ಕಡೆ ಉತ್ತಮ ರಸ್ತೆಗಳು, ಸಾಕಷ್ಟು ಕಡೆ ಸುಸಜ್ಜಿತ ಪಾದಚಾರಿ ಮಾರ್ಗಗಳು, ಸುಂದರವಾಗಿ ಅಭಿವೃದ್ಧಿಯಾದ ಉದ್ಯಾನಗಳು, ಆಕರ್ಷಕ ವಿನ್ಯಾಸದಲ್ಲಿ ರೂಪುಗೊಂಡ ಕ್ರೀಡಾಂಗಣಗಳು ಕ್ಷೇತ್ರದಲ್ಲಿ ಕಾಣುತ್ತವೆ.
ಮತ್ತೂಂದೆಡೆ ಕೆಲ ಸೌಲಭ್ಯಗಳಿಂದ ವಂಚಿತವಾದ ಕೊಳೆಗೇರಿಗಳು, ಅಲ್ಲಲ್ಲಿ ಕಾಡುವ ಕಸ ವಿಲೇವಾರಿ ಅವ್ಯವಸ್ಥೆ, ಭಾರಿ ಮಳೆ ಸುರಿದಾಗ ಕಾಲುವೆಯಲ್ಲಿ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗುವುದು, ಸುಧಾರಿತ ಸೌಲಭ್ಯಗಳ ನಿರ್ವಹಣೆ ಕೊರತೆ, ದಿಢೀರ್ ಸೃಷ್ಟಿಯಾಗುವ ಕಸದ ರಾಶಿಗಳು ಕ್ಷೇತ್ರದ ಕಪ್ಪು ಚುಕ್ಕೆಗಳೆನಿಸಿವೆ.
ಸುಂದರವಾಗಿ ಅಭಿವೃದ್ಧಿಯಾದ ಕೆಲ ಉದ್ಯಾನಗಳು ನಿರ್ವಹಣೆಯಿಲ್ಲದೆ ಸೊರಗಿರುವುದು, ಕೆಲವೆಡೆ ಪಾದಚಾರಿ ಮಾರ್ಗದ ಅವ್ಯವಸ್ಥೆ, ಕಿರು ಚರಂಡಿಗಳ ಹೂಳು ತೆರವುಗೊಳಿಸದ ಕಾರಣ ಸಮಸ್ಯೆಗಳಾಗುತ್ತಿದ್ದು, ಸಮರ್ಪಕ ನಿರ್ವಹಣೆಗೆ ಒತ್ತು ನೀಡಬೇಕಿದೆ ಎಂಬುದು ಜನರ ಅಭಿಪ್ರಾಯವೂ ಹೌದು.
ಬಿಸ್ಮಿಲ್ಲಾ ನಗರ, ಗುರಪ್ಪನಹಳ್ಳಿ, ಜಯನಗರ ಪೂರ್ವ, ಭೈರಸಂದ್ರದ ಕೊಳೆಗೇರಿ, ರಾಗಿಗುಡ್ಡ ಕೊಳೆಗೇರಿಗಳು ಅವ್ಯವಸ್ಥೆಯಿಂದ ಕೂಡಿದ್ದು, ನೈರ್ಮಲ್ಯ ಕಾಣದಾಗಿದೆ. ಹೀಗಾಗಿ ಅಭಿವೃದ್ಧಿಯಲ್ಲಿ ಏರುಪೇರು ಇರುವುದು ಕಾಣುತ್ತದೆ.
ಎರಡು ವಾರಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಡಾಲರ್ ಕಾಲೋನಿ, ಸಾರಕ್ಕಿ, ಜೆ.ಪಿ.ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಪ್ರತಿಷ್ಠಿತ ಜನರಿರುವ ಪ್ರದೇಶವೇ ಜಲಾವೃತವಾಗಿರುವುದು ಮಳೆ ನೀರು ಕಾಲುವೆ ಅವ್ಯವಸ್ಥೆಯನ್ನು ತೋರಿಸುತ್ತದೆ.
ಕ್ಷೇತ್ರವು ಏಳು ವಾರ್ಡ್‌ಗಳನ್ನು ಹೊಂದಿದ್ದು ಪಟ್ಟಾಭಿರಾಮನಗರ, ಬೈರಸಂದ್ರ, ಜಯನಗರ ಪೂರ್ವ, ಜೆ.ಪಿ.ನಗರ, ಸಾರಕ್ಕಿ, ಶಾಕಂಬರಿನಗರದಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ನಗರದ ದಕ್ಷಿಣ ಭಾಗದ ಪ್ರಮುಖ ಕ್ರೀಡಾಂಗಣವೆನಿಸಿದೆ. ಅಥ್ಲೆಟಿಕ್ ಟ್ರ್ಯಾಕ್ ಸೇರಿದಂತೆ ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್ ಇತರೆ ಅಂಕಣಗಳು ಒಂದೇ ಸೂರಿನಡಿ ಇದ್ದು, ಸಮಗ್ರ ಕ್ರೀಡಾ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಇತ್ತೀಚೆಗೆ ಆರ್.ವಿ.ರಸ್ತೆಯಿಂದ ಜಯದೇವ ಜಂಕ್ಷನ್‌ವರೆಗೆ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕ್ಷೇತ್ರದ ದೊಡ್ಡ ಸಮಸ್ಯೆ ಎರಡು ದಶಕಗಳ ಹಿಂದೆ ದಕ್ಷಿಣ ಭಾಗದ ಪ್ರಮುಖ ವಾಣಿಜ್ಯ ಸಂಕೀರ್ಣವೆನಿಸಿದ್ದ ಜಯನಗರ 4ನೇ ಬ್ಲಾಕ್‌ನ ವಾಣಿಜ್ಯ ಸಂಕೀರ್ಣ ಸದ್ಯ ವಿವಾದದ ಕೇಂದ್ರವಾಗಿದೆ.
ಕ್ಷೇತ್ರ ಮಹಿಮೆ: ಜನತಾದಳದಿಂದ ಸ್ಪರ್ಧಿಸಿ 1985ರಲ್ಲಿ ಆಯ್ಕೆಯಾಗಿದ್ದ ಎಂ.ಚಂದ್ರಶೇಖರ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಸತತ ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಜಯ ಗಳಿಸಿದ್ದಾರೆ. 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಎರಡೂ ಚುನಾವಣೆಗಳಲ್ಲಿ ಬಿಜೆಪಿಯ ಬಿ.ಎನ್.ವಿಜಯಕುಮಾರ್ ಆಯ್ಕೆಯಾಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಹಿಂದಿನ ಫಲಿತಾಂಶ
-ಬಿ.ಎನ್.ವಿಜಯ ಕುಮಾರ್ (ಬಿಜೆಪಿ)- 43,990
-ಎಂ.ಸಿ.ವೇಣುಗೋಪಾಲ್ (ಕಾಂಗ್ರೆಸ್)- 31678
-ಕೆ.ಎಸ್.ಸಮೀವುಲ್ಲಾ (ಜೆಡಿಎಸ್)- 12097
ಟಿಕೆಟ್ ಆಕಾಂಕ್ಷಿಗಳು
-ಬಿಜೆಪಿ- ಬಿ.ಎನ್.ವಿಜಯಕುಮಾರ್
-ಕಾಂಗ್ರೆಸ್- ಸೌಮ್ಯಾರೆಡ್ಡಿ, ವೇಣುಗೋಪಾಲ್
-ಜೆಡಿಎಸ್- ಸಮರ್ಥ ಅಭ್ಯರ್ಥಿಯ ಶೋಧ
ಪೈಪೋಟಿ: ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಚಾರ ಪ್ರಾರಂಭವಾಗಿದೆ. ಹಾಲಿ ಶಾಸಕ ಬಿ.ಎನ್.ವಿಜಯಕುಮಾರ್, ಬಿಜೆಪಿ ಪಾಲಿಕೆ ಸದಸ್ಯರೊಂದಿಗೆ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು, ಕೆಲ ತಿಂಗಳಿನಿಂದ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಎಂ.ಸಿ. ವೇಣುಗೋಪಾಲ್ ಸಹ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಜೆಡಿಎಸ್ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿರುವ ರವಿಕೃಷ್ಣಾ ರೆಡ್ಡಿ ಈಗಾಗಲೇ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ.
ಶಾಸಕರು ಏನಂತಾರೆ?
ಸುಮಾರು 20 ಮಾದರಿ ರಸ್ತೆ ನಿರ್ಮಾಣ. ಬೃಹತ್ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ಶೇ.70ರಷ್ಟು, ಕುಡಿಯುವ ನೀರು ಸೋರಿಕೆ ತಡೆ ಕಾಮಗಾರಿ ಶೇ.90ರಷ್ಟು ಮುಗಿದಿದೆ. 500 ಕಡೆ ಮಳೆ ನೀರು ಇಂಗುಗುಂಡಿ ನಿರ್ಮಾಣ. ಪ್ರತಿ ವರ್ಷ 500 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ 600 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲಾಗುತ್ತಿದೆ. ಕೊಳೆಗೇರಿಗಳಲ್ಲಿ 1800 ಮನೆಗಳನ್ನು ನಿರ್ಮಿಸಿ ಪಾರದರ್ಶಕವಾಗಿ ಹಂಚಿಕೆ ಮಾಡಿದ್ದು, 700 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆ ಕ್ಷೇತ್ರದಲ್ಲಿ ವೈವಿಧ್ಯದ ಅಭಿವೃದ್ಧಿ ಕಾರ್ಯ ಕೈಗೊಂಡ ತೃಪ್ತಿ ಇದೆ.
-ಬಿ.ಎನ್.ವಿಜಯಕುಮಾರ್
ಜನದನಿ
ಹೊಸ ಅಭಿವೃದಿ œ ಕಾರ್ಯ ಕಾಣುತ್ತಿಲ್ಲ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಅಭಿವೃದ್ಧಿ ಕಡಿಮೆ ಎನಿಸಿದರೂ ಅಗತ್ಯ ಸೌಲಭ್ಯಗಳಿವೆ. ಚರಂಡಿಗಳ ಹೂಳು ತೆರವು, ಉದ್ಯಾನ, ಪಾದಚಾರಿ ಮಾರ್ಗದ ನಿರ್ವಹಣೆಗೆ ಒತ್ತು ನೀಡಬೇಕಿದೆ.
-ರಂಗಪ್ಪ
ಬೈರಸಂದ್ರದಲ್ಲಿ ರಸ್ತೆ, ಕುಡಿಯುವ ನೀರು, ಪಾದಚಾರಿ ಮಾರ್ಗ ಸೇರಿ ಬಹುತೇಕ ಮೂಲ ಸೌಕರ್ಯಗಳಿವೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಬಳಿಕ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.
-ನಾಗೇಂದ್ರ
ಸಾರಕ್ಕಿಯಲ್ಲಿ ಕುಡಿಯುವ ನೀರು, ಒಳಚರಂಡಿ, ಸೌಲಭ್ಯ ಉತ್ತಮವಾಗಿದ್ದು, ಮಳೆ ನೀರು ಕಾಲುವೆಯನ್ನು ನಿರಂತರವಾಗಿ ಸ್ವತ್ಛಗೊಳಿಸುವುದರಿಂದ ಸಮಸ್ಯೆಯಿಲ್ಲ. ಕ್ಷೇತ್ರದ ಇತರೆ ವಾರ್ಡ್‌ಗಳಂತೆ ಸಾರಕ್ಕಿಯಲ್ಲಿ ಇನ್ನಷ್ಟು ಅಭಿವೃದ್ಧಿ ಅಗತ್ಯವಿದೆ.
-ಉಷಾರಾಣಿ
ಜಯನಗರ ಬಡಾವಣೆ ಉತ್ತಮವಾಗಿ ಅಭಿವೃದ್ಧಿಯಾಗಿದ್ದು, ಹೊಸ ಅಭಿವೃದ್ಧಿ ಕಾರ್ಯಗಳು ಕಾಣುತ್ತಿಲ್ಲ. ಹೊಸ ಯೋಜನೆಗಳಿಗಿಂತ ಈಗಾಗಲೇ ಕಲ್ಪಿಸಿರುವ ಸೌಲಭ್ಯಗಳ ಉತ್ತಮ ನಿರ್ವಹಣೆಗೆ ಅನುದಾನ, ಮೇಲ್ವಿಚಾರಣೆಗೆ ಒತ್ತು ನೀಡಬೇಕು.
-ಜನಾರ್ದನ್
* ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.