ಗ್ರಂಥಾಲಯಕ್ಕೆ ಹೋಗಲು ಹರಸಾಹಸದ ಕೆಲಸ!
Team Udayavani, Apr 3, 2018, 6:15 AM IST
ಗ್ರಂಥಾಲಯ ಚೆನ್ನಾಗಿದ್ದು,ಓದುಗರ ಮನ ತಣಿಸಲು ಸಶಕ್ತವೆನಿಸುವಷ್ಟು ಪುಸ್ತಕ,ಪತ್ರಿಕೆಗಳ ಸಂಗ್ರಹವೂ ಇಲ್ಲಿದೆ. ಆದರೆ ಇಲ್ಲಿಗೆ ಪ್ರವೇಶದ್ದೇ ಸಮಸ್ಯೆ.
ಉಡುಪಿ: ಓದುಗರಿಗೆ ಬೇಕಾದಷ್ಟು ಪುಸ್ತಕ, ಪತ್ರಿಕೆಗಳು ಈ ಗ್ರಂಥಾಲಯದಲ್ಲಿದೆ. ಕಟ್ಟಡವೂ ಚೆನ್ನಾಗಿದೆ. ಆದರೆ ಈ ಗ್ರಂಥಾಲಯಕ್ಕೆ ಪ್ರವೇಶಿಸುವುದೇ ಪ್ರಯಾಸದ ಕೆಲಸ!
ನಗರದ ಕೆ.ಎಂ. ಮಾರ್ಗದಲ್ಲಿ ನಗರಸಭಾ ಕಚೇರಿ ಕಟ್ಟಡಕ್ಕೆ ಹೊಂದಿ ಕೊಂಡಂತೆ ಇರುವ ನಗರ ಕೇಂದ್ರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರವೇಶ ಬಾಗಿಲಲ್ಲೇ ನಗರಸಭೆಯ ತೆರಿಗೆ ಸ್ವೀಕಾರ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದ ರಿಂದ ಗ್ರಂಥಾಲಯ ಪ್ರವೇಶಿಸುವವರಿಗೆ ಅಡ್ಡಿಯಾಗಿದೆ.
ಹಿರಿಯರ ಗೋಳು
ಲೈಬ್ರೆರಿ ಕಟ್ಟಡದಲ್ಲೇ ಹಿರಿಯ ನಾಗರಿಕರ ವಿಭಾಗವಿದೆ. ನಿತ್ಯ ಹಲವಾರು ಮಂದಿ ಹಿರಿಯ ನಾಗರಿಕರು ಇಲ್ಲಿಗೆ ಆಗಮಿಸುತ್ತಾರೆ. ವಾಹನ, ಜನ ಸಂದಣಿ ದಾಟಿಕೊಂಡು ಬರಲು ಅವರು ಹರಸಾಹಸ ಪಡಬೇಕಾಗಿದೆ. “ಮೆಟ್ಟಿಲು ಗಳನ್ನಾದರೂ ಏರಬಹುದು. ಆದರೆ ಜನ, ವಾಹನಗಳನ್ನು ದಾಟಿಕೊಂಡು ಬರುವುದು ಕಷ್ಟಸಾಧ್ಯ ವಾಗಿದೆ’ ಎನ್ನುತ್ತಾರೆ ಹಿರಿಯ ನಾಗರಿಕರಾಗಿರುವ ಜಗದೀಶ್ ಅವರು.
ಸ್ಪಂದನೆಯೇ ಇಲ್ಲ
ದಾರಿ ಸಮಸ್ಯೆ ಬಗ್ಗೆ ಈಗಾಗಲೇ ದೂರು ಕೊಟ್ಟಿದ್ದೇವೆ. ಆದರೆ ಅಧಿಕಾರಿಗಳು ಇದೊಂದು ಸಮಸ್ಯೆಯೇ ಅಲ್ಲ ಎಂಬಂತೆ ವರ್ತಿಸುತ್ತಾರೆ. ಇಲ್ಲಿನ ಮೆಟ್ಟಿಲುಗಳಲ್ಲಿಯೂ ಸಾಲಾಗಿ ಕುಳಿತು ಕೊಳ್ಳುವವರಿದ್ದಾರೆ. ಇಲ್ಲೇ ಉಗುಳುತ್ತಾರೆ. ಗ್ರಂಥಾಲಯವೆಂದರೆ ಇಷ್ಟೊಂದು ಅಸಡ್ಡೆ ಯಾಕೆ ಎಂಬುದು ಗ್ರಂಥಾಲಯದ ಬಳಕೆದಾರರಾದ ವಿಶಾಲಾಕ್ಷಿ ಅವರ ಪ್ರಶ್ನೆ.
ಕಚೇರಿ ಒಂದು,ಜನ ಹತ್ತಾರು
ಗ್ರಂಥಾಲಯ ಬಾಗಿಲಿನ ಎದುರಲ್ಲಿಯೇ ನಡೆದಾಡಲೂ ಜಾಗವನ್ನು ಬಿಡದೆ 2 ಮೇಜು, ಮೂರು-ನಾಲ್ಕು ಕುರ್ಚಿ ಹಾಕಿ ಕಚೇರಿ ಮಾಡಲಾಗಿದೆ. ಸಿಬಂದಿ, ಸಾರ್ವಜನಿಕರೆಲ್ಲ ಸೇರಿದಾಗ ದಾರಿ ಅಕ್ಷರಶಃ ಮುಚ್ಚಿಯೇ ಹೋಗುತ್ತದೆ. ಇದರ ಜತೆಗೆ ವಾಹನ ಪಾರ್ಕಿಂಗ್ ಭರಾಟೆ. ನಗರಸಭೆ ಕಟ್ಟಡದಲ್ಲಿ, ಹೊರಗಡೆ ಸ್ಥಳಾವಕಾಶ ಸಾಕಾಗದೇ ಇರುವುದರಿಂದ ವಾಹನಗಳನ್ನು ಕೂಡ ಲೈಬ್ರೆರಿ ದ್ವಾರದಲ್ಲಿಯೇ ಪಾರ್ಕಿಂಗ್ ಮಾಡಲಾಗುತ್ತದೆ. ಇವುಗಳ ಮಧ್ಯೆ ನುಸುಳಿ ಗ್ರಂಥಾಲಯ ಪ್ರವೇಶಿಸಬೇಕಾದ ಅನಿವಾರ್ಯ ಇಲ್ಲಿನದು.
ಭದ್ರತೆ,ಸ್ವಚ್ಛತೆಗೆ ಗಮನ
ಸಮಸ್ಯೆ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೆ ಪ್ರಯೋ ಜನವಾಗಿಲ್ಲ. ಮತ್ತೂಮ್ಮೆ ಆಯುಕ್ತರು ಮತ್ತು ನಗರಸಭೆ ಅಧ್ಯಕ್ಷರ ಜತೆಗೆ ಮಾತ ನಾಡುತ್ತೇನೆ. ಇಲ್ಲಿ ಭದ್ರತಾ ವ್ಯವಸ್ಥೆ, ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಆಗಬೇಕಾಗಿದೆ.
– ವಸಂತಿ ಶೆಟ್ಟಿ, ನಗರಸಭಾ ಸದಸ್ಯರು, ಗ್ರಂಥಾಲಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು
ಗ್ರಂಥಾಲಯ ಪ್ರವೇಶ ಕಷ್ಟ
ಬೆಳಗ್ಗೆ ಹೊತ್ತು ಹೆಚ್ಚು ಜನ ಇರುತ್ತಾರೆ. ಆಗ ಗ್ರಂಥಾಲಯ ಪ್ರವೇಶಿಸುವುದೇ ಕಷ್ಟ. ಒಂದೋ ಗ್ರಂಥಾಲಯವನ್ನು ಸ್ಥಳಾಂತರಿಸಲಿ, ಇಲ್ಲವೇ ಆ ಕಚೇರಿ ಸ್ಥಳಾಂತರಿಸಲಿ. ಗ್ರಂಥಾಲಯದ ಪ್ರಾಮುಖ್ಯವನ್ನು ಕೂಡ ಅಧಿಕಾರಿಗಳು ಅರಿತುಕೊಳ್ಳಬೇಕು.
– ರೇಣುಕಾ, ವಿದ್ಯಾರ್ಥಿನಿ
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.