ನಿಯಮ ಬದಲಾವಣೆ ಶ್ಲಾಘನೀಯ: ನಂಬರ್ ಪ್ಲೇಟ್‌ಗಳಲ್ಲಿ ಏಕರೂಪತೆ
Team Udayavani, Apr 3, 2018, 7:00 AM IST
ಕೆಲವು ದೇಶಗಳಲ್ಲಿ ವಾಹನ ನೋಂದಣಿ ಆಗುವಾಗಲೇ ಯಾವ ರೀತಿಯಲ್ಲೂ ತಿರುಚಲಾಗದಂತಹ ನಂಬರ್‌ಪ್ಲೇಟ್ ಅಳವಡಿಸುವ ಕ್ರಮವುಂಟು.
ದೇಶಾದ್ಯಂತ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಏಕರೂಪತೆ ತರುವ ಸಲುವಾಗಿ ಕೇಂದ್ರ ಸಾರಿಗೆ ಇಲಾಖೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಪ್ರಕಾರ ಇನು °ಮುಂದೆ ವಾಹನ ಉತ್ಪಾದಿಸುವ ಕಂಪೆನಿಗಳೇ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಡಲಿವೆ. ಅನಂತರ ಎಂಬೋಸಿಂಗ್ ಮೂಲಕ ಇದರ ಮೇಲೆ ನಂಬರ್ ಬರೆಯಲಾಗುವುದು. ಪ್ರಸ್ತುತ ವಾಹನ ಡೀಲರ್‌ಗಳು ನಂಬರ್ ಪ್ಲೇಟ್ ಅಳವಡಿಸುತ್ತಾರೆ. ಆಯಾಯ ಆರ್‌ಟಿಒ ಕಚೇರಿಗಳಲ್ಲಿ ನಂಬರ್ ಮಂಜೂರಾದ ಬಳಿಕ ಅದನ್ನು ನಂಬರ್‌ಪ್ಲೇಟ್ ಮೇಲೆ ಬರೆಯಲಾಗುತ್ತದೆ. ಹೆಚ್ಚಿನವರು ಸ್ಟಿಕ್ಕರ್‌ಗಳನ್ನು ಅಂಟಿಸಿ ನಂಬರ್ ಬರೆಯುತ್ತಾರೆ. ಇದು ಅತ್ಯಂತ ಅಸುರಕ್ಷಿತ ವಿಧಾನ. ಅಲ್ಲದೆ ಈ ಪದ್ಧತಿಯಿಂದಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಶೈಲಿಯ ನಂಬರ್ ಪ್ಲೇಟ್ ಇರುವುದರಿಂದ ಏಕರೂಪತೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸಾರಿಗೆ ಸಚಿವ ನಿತಿನ್ ಗಡ್ಕರಿ. ಕಂಪೆನಿಗಳೇ ನಂಬರ್ ಪ್ಲೇಟ್ ಅಳವಡಿಸಿಕೊಡುವುದರಿಂದ ನಂಬರ್ ಪ್ಲೇಟ್ ಅಳವಡಿಸುವ ಖರ್ಚು ಉಳಿತಾಯವಾಗಲಿದೆ. ಈಗ ರೂ. 800ರಿಂದ ಹಿಡಿದು 40,000 ತನಕದ ನಾನಾ ನಮೂನೆಯ ನಂಬರ್ ಪ್ಲೇಟ್‌ಗಳಿವೆ. ಕಂಪೆನಿಗಳು ಅಳವಡಿಸುವುದರಿಂದ ನಂಬರ್‌ಪ್ಲೇಟ್‌ಗಳ ಖರ್ಚಿನಲ್ಲೂ ಏಕರೂಪತೆ ಬರಲಿರುವುದರಿಂದ ಗ್ರಾಹಕರಿಗೆ ಒಳಿತಾಗಲಿದೆ.
ನಂಬರ್ ಪ್ಲೇಟ್ ಅಳವಡಿಸಲು ನಿರ್ದಿಷ್ಟ ನಿಯಮಗಳಿವೆ. ನಂಬರ್ ಪ್ಲೇಟ್ ಗಾತ್ರ, ಅದರಲ್ಲಿ ಬರೆಯುವ ಅಕ್ಷರದ ಗಾತ್ರ , ಶೈಲಿ ಇತ್ಯಾದಿಗಳು ಇಂಥದ್ದೇ ರೂಪದಲ್ಲಿರಬೇಕೆಂದು ಮೋಟಾರು ವಾಹನ ಕಾಯಿದೆ ಹೇಳುತ್ತದೆ. ಆದರೆ ಈ ನಿಯಮಗಳು ಪಾಲನೆಯಾಗುವುದು ಬಹಳ ವಿರಳ. ಜನರು ತಮ್ಮ ಅಭಿರುಚಿ, ಇಷ್ಟ, ಮರ್ಜಿಗೆ ಬೇಕಾದಂತೆ ನಂಬರ್‌ಪ್ಲೇಟ್‌ಗಳನ್ನು ಬರೆಸಿಕೊಳ್ಳುತ್ತಾರೆ. ಅನೇಕ ಮಂದಿಗೆ ನಂಬರ್ ಪ್ಲೇಟ್‌ಗಳು ತಮ್ಮ ಕಲಾಭಿರುಚಿಯನ್ನು ವ್ಯಕ್ತಪಡಿಸುವ ಕ್ಯಾನ್ವಾಸ್‌ನಂತೆ ಕಾಣಿಸುವುದೂ ಉಂಟು!
ನಂಬರ್‌ಪ್ಲೇಟ್‌ಗಳ ದುರುಪ ಯೋಗ ಅತಿ ದೊಡ್ಡ ಸಮಸ್ಯೆ. ಪ್ರಸ್ತುತ ನಂಬರ್‌ಪ್ಲೇಟ್ ಬದಲಾಯಿಸುವುದು ಬರೀ ಐದು ನಿಮಿಷದ ಕೆಲಸ. ಎರಡು ಬೋಲ್ಟ್‌ಗಳನ್ನು ಕಳಚಿದರಾಯಿತು. ಈ ಕಾರಣದಿಂದಲೇ ಎಷ್ಟೋ ಅಪ ರಾಧ ಪ್ರಕರಣಗಳಲ್ಲಿ ಬಳಕೆಯಾದ ವಾಹನ ಸ್ಪಷ್ಟವಾಗಿ ಕಂಡರೂ ನಕಲಿ ನಂಬರ್‌ಪ್ಲೇಟ್‌ನಿಂದಾಗಿ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗುವು ದಿಲ್ಲ. ಒಂದೇ ನಂಬರ್ ಹೊಂದಿರುವ ವಾಹನಗಳು ಬೇರೆ ಬೇರೆ ನಗರಗಳಲ್ಲಿ ಓಡಾಡುತ್ತಿರುವ ಅನೇಕ ಪ್ರಕರಣಗಳಿವೆ. ಎರಡು ವರ್ಷದ ವಿದೇಶದ ರಾಯಭಾರಿಗಳಿಗೆ ನೀಡುವ ವಿಶೇಷ ನಂಬರ್ ಪ್ಲೇಟ್ ಅಳವಡಿ ಸಿದ್ದ ಟ್ಯಾಕ್ಸಿಗಳು ಕೇರಳ ಮತ್ತು ಪಾಂಡಿಚೇರಿಯಲ್ಲಿ ಓಡುತ್ತಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲೇ ಕೆಲ ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಗರಿಷ್ಠ ಭದ್ರತೆಯ ನಂಬರ್‌ಪ್ಲೇಟ್‌ಗಳನ್ನು ಅಳವಡಿಸಲು ಆದೇಶಿಸಿತ್ತು. ಆದರೆ ಆ ಆದೇಶವಿನ್ನೂ ಕಾರ್ಯಗತಗೊಂಡಿಲ್ಲ. ಸದ್ಯ ಸರಕಾರ ನಂಬರ್‌ಪ್ಲೇಟ್‌ಗಳಲ್ಲಿ ಏಕರೂಪತೆ ತರಲು ಹೆಚ್ಚು ಆಸಕ್ತಿ ವಹಿಸಿದೆಯೇ ಹೊರತು ಅವುಗಳ ಭದ್ರತೆ ಕುರಿತು ಅಲ್ಲ. ಕೆಲವು ದೇಶಗಳಲ್ಲಿ ವಾಹನ ನೋಂದಣಿಯಾಗುವಾಗಲೇ ಯಾವ ರೀತಿಯಲ್ಲೂ ತಿರುಚಲಾಗದಂತಹ ನಂಬರ್‌ಪ್ಲೇಟ್ ಅಳವಡಿಸುವ ಕ್ರಮವುಂಟು. ಇಂತಹ ನಂಬರ್‌ಪ್ಲೇಟ್ ಹೊಂದಿರುವ ವಾಹನ ಕಳುವಾದರೆ ಅಥವಾ ಅಪಘಾತವೆಸಗಿ ಪಲಾಯನ ಮಾಡಿದರೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನಮಗೆ ಅಗತ್ಯವಿರುವುದು ಈ ರೀತಿಯ ನಂಬರ್‌ಪ್ಲೇಟ್. ಈಗ ಸರಕಾರ ಹೊಸ ರೀತಿಯ ನಂಬರ್‌ಪ್ಲೇಟ್ ಅಳವಡಿಸಲು ಹೊರಟಿರುವುದು ಖಾಸಗಿ ವಾಹನಗಳಿಗೆ ಮಾತ್ರ. ವಾಣಿಜ್ಯ ಉದ್ದೇಶದ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ಇದೇ ವೇಳೆ ಮುಂದಿನ ವರ್ಷದ ಜುಲೈ ಬಳಿಕ ಮಾರುಕಟ್ಟೆಗೆ ಬರುವ ಎಲ್ಲ ಕಾರುಗಳಲ್ಲಿ ಚಾಲಕನ ಬದಿಯಲ್ಲೂ ಏರ್‌ಬ್ಯಾಗ್ ಇರುವುದು ಕಡ್ಡಾಯವಾಗಲಿದೆ. ಅಂತೆಯೇ ಸೀಟ್ ಬೆಲ್ಟ್ ಕಟ್ಟಲು ನೆನಪಿಸುವ ವ್ಯವಸ್ಥೆ ಹಾಗೂ ವೇಗ ಮಿತಿ ಸೂಚಿಸುವ ಅಲಾರ್ಮ್ ವ್ಯವಸ್ಥೆ ಅಳವಡಿ ಸುವುದು ಕಡ್ಡಾಯವಾಗಲಿದೆ. ವಾಹನ 80 ಕಿ. ಮೀ. ವೇಗ ಮೀರಿದರೆ ಚಾಲಕನಿಗೆ ಎಚ್ಚರಿಕೆ ರವಾನೆಯಾಗುತ್ತದೆ. ಜತೆಗೆ ರಿವರ್ಸ್ ತೆಗೆಯುವಾಗ ಕೂಡಾ ಅಪಘಾತವಾಗುವುದನ್ನು ತಡೆಯಲು ಸೆನ್ಸಾರ್ ಅಳವಡಿಸು ವುದನ್ನು ಕಡ್ಡಾಯಗೊಳಿಸಲಾಗಿದೆ. ಜನರ ಸುರಕ್ಷೆ ದೃಷ್ಟಿಯಿಂದ ಮಾಡುವ ಈ ಎಲ್ಲ ನಿಯಮಗಳು ಅಪೇಕ್ಷಣೀಯ. ರಸ್ತೆ ಅಪಘಾತಗಳಲ್ಲಿ ದೇಶ ಅಗ್ರಸ್ಥಾನದಲ್ಲಿರುವುದರಿಂದ ವಾಹನಗಳ ಸುರಕ್ಷಾ ವ್ಯವಸ್ಥೆ ಇನ್ನಷ್ಟು ಬಿಗುವಾಗುವ ಅಗತ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.