ಇಂದು ಕಾಮನ್ವೆಲ್ತ್ ಗೇಮ್ಸ್‌ಗೆ ಚಾಲನೆ
Team Udayavani, Apr 4, 2018, 7:30 AM IST
ಗೋಲ್ಡ್‌ಕೋಸ್ಟ್ (ಆಸ್ಟ್ರೇಲಿಯ): ಬಹು ನಿರೀಕ್ಷಿತ 21ನೇ ಕಾಮನ್‌ವೆಲ್ತ್ ಗೇಮ್ಸ್ ಬುಧವಾರದಿಂದ ಆರಂಭವಾಗಲಿದೆ. ಭಾರತದಿಂದ 225 ಮಂದಿಯ ತಂಡ ಸೇರಿ ಒಟ್ಟು 5,000ಕ್ಕೂ ಅಧಿಕ ಆ್ಯತ್ಲೀಟ್‌ಗಳು ಈ ಮಹೋನ್ನತ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 19 ಮುಖ್ಯ ಕ್ರೀಡೆಗಳು, 275 ಉಪವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 71 ರಾಷ್ಟ್ರಗಳು ಭಾಗವಹಿಸಲಿವೆ.
ಕಾಮನ್ವೆಲ್ತ್ ಕೂಟಕ್ಕೆ ವಿಶ್ವದ 3ನೇ ಬೃಹತ್ ಕೂಟ ಎಂಬ ಹೆಗ್ಗಳಿಕೆಯಿದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಅನಂತರ ಬಹುಕ್ರೀಡೆಗಳು ನಡೆಯುವ ಕೂಟವಿದು. ಈ ಹೆಗ್ಗಳಿಕೆಗೆ ಯಾವುದೇ ಧಕ್ಕೆ ಬಾರದಂತೆ ಕೂಟ ನಡೆಸಲು ಗೋಲ್ಡ್‌ಕೋಸ್ಟ್ ಸಂಘಟಕರು ಸಜ್ಜಾಗಿದ್ದಾರೆ. ಈ ಕೂಟದಲ್ಲಿ ಗರಿಷ್ಠ ಪದಕ ಗೆಲ್ಲಬಲ್ಲ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿರುವುದರಿಂದ ಭಾರತೀಯರ ನಿರೀಕ್ಷೆಗಳು ಮುಗಿಲೆತ್ತರಕ್ಕೆ ಮುಟ್ಟಿವೆ.
ಕೂಟದ ವೆಚ್ಚ ಬೃಹತ್ ಪ್ರಮಾಣದಲ್ಲಿರುತ್ತದೆ. 2010ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್ ನಡೆದಾಗ ಅದರ ವೆಚ್ಚ 30 ಸಾವಿರ ಕೋಟಿ ರೂ. ತಲುಪಿ ವಿಶ್ವದಲ್ಲೇ ದುಬಾರಿ ಕಾಮನ್‌ವೆಲ್ತ್ ಎನಿಸಿಕೊಂಡಿತ್ತು. ಆದರೆ ಗೋಲ್ಡ್‌ಕೋಸ್ಟ್‌ಗೆ
ಇಷ್ಟು ಖರ್ಚಾಗುವ ಸಮಸ್ಯೆಯಿಲ್ಲ. ಕೂಟ ನಡೆಸಲು ಬೇಕಾದ ಎಲ್ಲ ಸೌಲಭ್ಯಗಳು ಮುಂಚಿತವಾಗಿಯೇ ಇದ್ದಿದ್ದರಿಂದ ಬಹುತೇಕ ಖರ್ಚು ಕಡಿಮೆಯಾಗಿದೆ.
ಉದ್ಘಾಟನಾ ಸಮಾರಂಭ ಹೇಗೆ? ಏನು?
ಇದುವರೆಗೆ ಉದ್ಘಾಟನಾ ಸಮಾರಂಭದ ಕುರಿತು ಯಾವುದೇ ಮಾಹಿತಿಗಳು ಹೊರಬಿದ್ದಿಲ್ಲ. ಉದ್ಘಾಟನೆ ವೇಳೆ ಏನೇನು ನಡೆಯಲಿದೆ, ಹೇಗೆ ನಡೆಯಲಿದೆ ಎಂಬುದರ ಚುಟುಕು ಮಾಹಿತಿಯಷ್ಟೇ ಲಭ್ಯವಾಗಿದೆ. ಗೋಲ್ಡ್‌ಕೋಸ್ಟ್‌ನ ಕರಾರಾ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಂದಿನಂತೆ ವರ್ಣಮಯವಾಗಿ ನಡೆಯಲಿದೆ. ಬೆಳಕು, ನೆರಳಿನ ಸುಂದರ ಚಿತ್ರಾವಳಿ ಕಾಣಿಸಿಕೊಳ್ಳಲಿದೆ. ಮನೋರಂಜನ ಕಾರ್ಯಕ್ರಮಗಳು ಇರಲಿವೆ. ಹಾಡು, ನೃತ್ಯಕ್ಕೆ ಮುಖ್ಯ ಸ್ಥಾನವಿದೆ. ಮೊದಲು ವಿವಿಧ ರಾಷ್ಟ್ರಗಳ ಸ್ಪರ್ಧಾಳುಗಳ ಮೆರವಣಿಗೆ ನಡೆಯಲಿದೆ. ಅನಂತರ ಸ್ಪರ್ಧಿಗಳು ಪ್ರಮಾಣವಚನ ಸ್ವೀಕರಿಸುತ್ತಾರೆ. ಕಡೆಯ ಹಂತವಾಗಿ ಕ್ರೀಡಾಜ್ಯೋತಿಯ ಓಟ ನಡೆಯುತ್ತದೆ.
ಆಸ್ಟ್ರೇಲಿಯದ ಖ್ಯಾತ ಸಂಗೀತ ನಿರ್ದೇಶಕಿ ಕ್ಯಾಟಿ ನೂನನ್ ಇಡೀ ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ. ಮತ್ತೂಬ್ಬ ಸ್ಥಳೀಯ ನೃತ್ಯ ನಿರ್ದೇಶಕ ಡ್ರೂ ಆಂಥೋನಿ ಸಂಯೋಜನೆಗೆ ನೆರವು ನೀಡಲಿದ್ದಾರೆ. ಸಾವಿರಾರು ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾದ ಅದರಲ್ಲೂ ಗೋಲ್ಡ್‌ಕೋಸ್ಟ್‌ನ ಸ್ಥಳೀಯ ಸಂಸ್ಕೃತಿ, ಅದರ ಇತಿಹಾಸ ಬಿಂಬಿಸುವ ಸಾಧ್ಯತೆಯಿದೆ.
15 ಮುಖ್ಯ ಕ್ರೀಡೆಯಲ್ಲಿ ಭಾರತೀಯರ ಸ್ಪರ್ಧೆ
ಭಾರತದಿಂದ ಒಟ್ಟು 225 ಮಂದಿ ಸ್ಪರ್ಧಿಸುತ್ತಿದ್ದಾರೆ. ಒಟ್ಟು 19 ಮುಖ್ಯ ಕ್ರೀಡಾ ವಿಭಾಗಗಳ ಪೈಕಿ 15ರಲ್ಲಿ ಭಾರತೀಯರ ಸ್ಪರ್ಧೆಯಿದೆ. 115 ಪುರುಷರು, 105 ಮಹಿಳೆಯರು ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಹಾಕಿ, ಲಾನ್‌ಬೌಲ್ಸ್, ಶೂಟಿಂಗ್, ಸ್ಕ್ವಾಷ್, ಈಜು, ಟೇಬಲ್ ಟೆನಿಸ್, ವೇಟ್‌ಲಿಫ್ಟಿಂಗ್‌ಗಳಲ್ಲಿ ಭಾಗವಹಿಸಲಿದ್ದಾರೆ. ಭಾರತ ತಂಡ ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಆ್ಯತ್ಲೆಟಿಕ್ಸ್, ಹಾಕಿಯಲ್ಲಿ ಬಲಿಷ್ಠವಾಗಿದ್ದು ಪದಕ ಕೊಳ್ಳೆ ಹೊಡೆಯುವ ಎಲ್ಲ ಸಾಧ್ಯತೆಗಳಿವೆ.
6,600 ಆ್ಯತ್ಲೀಟ್‌ಗಳು ಉಳಿಯಬಹುದು ಗೋಲ್ಡ್‌ಕೋಸ್ಟ್‌ನ ಪಾರ್ಕ್‌ಲ್ಯಾಂಡ್‌ನಲ್ಲಿ ಕ್ರೀಡಾಗ್ರಾಮ ವಿದೆ. ಸುಮಾರು 7 ಹೆಕ್ಟೇರ್ ಜಾಗದಲ್ಲಿ ಇದನ್ನು ನಿರ್ಮಿಸಲಾಗಿದೆ. 6600ಕ್ಕೂ ಅಧಿಕ ಆ್ಯತ್ಲೀಟ್‌ಗಳು ಇಲ್ಲಿ ಉಳಿದುಕೊಳ್ಳಬಹುದು. ವೈದ್ಯಕೀಯ, ಹೊಟೇಲ್ ಸೇರಿದಂತೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ಇಲ್ಲಿರಲಿವೆ. ಕ್ರೀಡಾಗ್ರಾಮಕ್ಕೆ ಹತ್ತಿರವಾಗಿ ಕರಾರಾ ಮೈದಾನವಿದೆ. ಇದೇ ಈ ಕೂಟದ ಮುಖ್ಯ ಮೈದಾನ. ಬಹುತೇಕ ಸ್ಪರ್ಧೆಗಳು ಇಲ್ಲೇ ಆಯೋಜನೆಯಾಗಲಿವೆ. ಕೂಟದ ಉದ್ಘಾಟನೆ ಮತ್ತು ಮುಕ್ತಾಯ ಸಮಾರಂಭಗಳು ಇಲ್ಲೇ ನಡೆಯಲಿವೆ. ಉಳಿದಂತೆ ಇತರ 17 ಮೈದಾನಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳು ಮಾತ್ರ ಗೋಲ್ಡ್‌ಕೋಸ್ಟ್ ನಗರದ ಹೊರಭಾಗದಲ್ಲಿ ನಡೆಯಲಿವೆೆ. ಬಾಸ್ಕೆಟ್‌ಬಾಲ್ ಆರಂಭಿಕ ಪಂದ್ಯಗಳು ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದರೆ, ಶೂಟಿಂಗ್ ಕ್ರೀಡೆ ಟೌನ್ಸ್‌ವಿಲ್ಲೆಯಲ್ಲಿ ನಡೆಯಲಿದೆ.
6.72 ಲಕ್ಷ ಪ್ರವಾಸಿಗರ ಭೇಟಿ ಸಾಧ್ಯತೆ
ಆಸ್ಟ್ರೇಲಿಯಕ್ಕೆ ಈ ಗೇಮ್ಸ್ ಬಹುಮುಖ್ಯವಾಗಿದೆ. ಆದ್ದರಿಂದ ಪ್ರವಾಸಿಗಳನ್ನು ಸೆಳೆಯಲು ಅದು ಕೆಲವು ವರ್ಷಗಳಿಂದ ತನ್ನ ಯತ್ನ ಶುರು ಮಾಡಿದೆ. ಕಾಮನ್‌ವೆಲ್ತ್ ಕೂಟದ ವೇಳೆ ಗೋಲ್ಡ್‌ಕೋಸ್ಟ್‌ಗೆ 6.72 ಲಕ್ಷ ಪ್ರವಾಸಿಗಳು ಭೇಟಿ ನೀಡುತ್ತಾರೆಂದು ಅಂದಾಜಿಸಲಾಗಿದೆ. ಈ ಕೂಟದಲ್ಲಿ 15000 ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.
150 ಕೋಟಿ ಜನರಿಂದ ವೀಕ್ಷಣೆ
ಉದ್ಘಾಟನಾ ಸಮಾರಂಭವನ್ನು ಜಗತ್ತಿನಾದ್ಯಂತ 150 ಕೋಟಿ ಮಂದಿ ಟೀವಿಯಲ್ಲಿ ವೀಕ್ಷಿಸುವ ನಿರೀಕ್ಷೆಯಿದೆ. ಒಟ್ಟಾರೆ 15 ಲಕ್ಷ ಮಂದಿ ನೇರವಾಗಿ ವೀಕ್ಷಿಸುವ ನಿರೀಕ್ಷೆಯಿದೆ. ಆದ್ದರಿಂದ ಈ ಭಾರೀ ಸಂಖ್ಯೆಯನ್ನು ಜನರನ್ನು ತಲುಪಲು ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ನಿರ್ದೇಶಕರು, ಕಾರ್ಯಕ್ರಮ ನಿರ್ಮಾಪಕರು, ಕಲಾವಿದರನ್ನು ಜೋಡಿಸಿಕೊಳ್ಳಲಾಗಿದೆ.
ಕಾಮನ್ವೆಲ್ತ್: ಒಂದು ಪಂದ್ಯ ಗೆದ್ದರೆ ಮೇರಿ ಕಾಮ್‌ಗೆ ಪದಕ ಖಚಿತ
ಗೋಲ್ಡ್‌ಕೋಸ್ಟ್: ಭಾರತದ ಸ್ಟಾರ್ ವನಿತಾ ಬಾಕ್ಸರ್ ಮೇರಿಕಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಂದು ಪಂದ್ಯ ಗೆದ್ದರೆ ಪದಕ ಖಚಿತವಾಗಲಿದೆ. ಪುರುಷರ ವಿಭಾಗದಲ್ಲಿ ವಿಕಾಸ್ ಕೃಷ್ಣನ್ ಅವರಿಗೂ ಪ್ರಿ-ಕ್ವಾರ್ಟರ್ ಫೈನಲ್‌ಗೆ ಬೈ ಲಭಿಸಿದ್ದು, ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಪದಕ ಬೇಟೆ ಸುಲಭವಾಗಿಸಿದೆ. 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೇರಿ, ಎ. 8ರಂದು ಸ್ಕಾಟ್ಲೆಂಡ್‌ನ ಮೇಗನ್ ಗಾರ್ಡನ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ತಂಡದ ಇಬ್ಬರು ಆಟಗಾರರ ಪದಕ ಗೆಲುವಿನ ದಾರಿ ಸುಲಭವಾಗಿರುವುದರಿಂದ ಹೆಚ್ಚು ಪದಕ ಗೆಲ್ಲುವತ್ತ ತಂಡ ಚಿತ್ತ ಹರಿಸಿದೆ.
ಭಾರತದ ಐತಿಹಾಸಿಕ ಕ್ಷಣಗಳು…
ಮೊದಲ ಪದಕ ಜಯಿಸಿದ ರಶೀದ್ ಅನ್ವರ್
1930ರ ಮೊದಲ ಅಧಿಕೃತ ಕಾಮನ್ವೆಲ್ತ್ ಗೇಮ್ಸ್, ಬ್ರಿಟಿಷ್ ಎಂಪೈರ್ ಗೇಮ್ಸ್ ಎಂದು ಕರೆಸಿಕೊಂಡಿತ್ತು. ಅನಂತರ 1934ರಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತ ಮೊದಲ ಸಲ ಪಾಲ್ಗೊಂಡಿತ್ತು. ಇಲ್ಲಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರಶೀದ್ ಅನ್ವರ್ ಕಂಚಿನ ಪದಕ ಗೆದ್ದರು. ಇದು ಕಾಮನ್ವೆಲ್ತ್ ಇತಿಹಾಸದಲ್ಲಿ ಭಾರತಕ್ಕೆ ಲಭಿಸಿದ ಮೊತ್ತಮೊದಲ ಪದಕವಾಗಿದೆ.
ಚಿನ್ನಕ್ಕೆ ನಾಂದಿ ಹಾಡಿದ ಮಿಲ್ಖಾ ಸಿಂಗ್
ಕಾಮನ್ವೆಲ್ತ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದಿರುವುದು ಕಾರ್ಡಿಫ್ನಲ್ಲಿ ನಡೆದ 1958ರ ಕೂಟದಲ್ಲಿ. ಹಾರುವ ಸಿಕ್ಖ್ ಖ್ಯಾತಿಯ ಆ್ಯತ್ಲೀಟ್ ಮಿಲ್ಖಾ ಸಿಂಗ್ ಈ ಸಾಧನೆ ಮಾಡಿದರು. 440 ಯಾರ್ಡ್ ಟ್ರ್ಯಾಕ್ ಇವೆಂಟ್‌ನಲ್ಲಿ ಪಾಲ್ಗೊಂಡ ಮಿಲ್ಖಾ ಸಿಂಗ್ ಅಮೋಘ ಪ್ರದರ್ಶನ ನೀಡುವ ಮೂಲಕ ಫೈನಲ್‌ನಲ್ಲಿ ಸ್ವರ್ಣಕ್ಕೆ ಕೊರಳೊಡ್ಡಿದರು.
ಮೊದಲ ಆ್ಯತ್ಲೆಟಿಕ್ಸ್ ಚಿನ್ನ ಗೆದ್ದ ಸಾಧಕಿ
2010ರ ಹೊಸದಿಲ್ಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಕೃಷ್ಣಾ ಪೂನಿಯಾ 61.51 ಮೀ. ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಇದು ಆ್ಯತ್ಲೆಟಿಕ್ಸ್‌ನಲ್ಲಿ ಭಾರತದ ವನಿತೆಗೆ ಒಲಿದ ಮೊದಲ ಚಿನ್ನದ ಪದಕ. ಅಷ್ಟೇ ಅಲ್ಲ, ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಮಿಲ್ಖಾ ಸಿಂಗ್ ಅನಂತರ ಚಿನ್ನ ದಕ್ಕಿದ್ದೂ ಕೃಷ್ಣಾ ಪೂನಿಯಾಗೆ. ಮಿಲ್ಖಾ ಅನಂತರ ಸುಮಾರು 50 ವರ್ಷಗಳ ಕಾಲ ಭಾರತಕ್ಕೆ ಈ ವಿಭಾಗದಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿರಲಿಲ್ಲ!
ಬಾಕ್ಸಿಂಗ್ ಅಲೆ ಸೃಷ್ಟಿಸಿದ ಅಲಿ ಖಾಮರ್
ಭಾರತದಲ್ಲಿ ಇಂದು ಬಾಕ್ಸಿಂಗ್ ಭಾರೀ ಜನಪ್ರಿಯ ಕ್ರೀಡೆಯಾಗಿದೆ. ಆದರೆ, ಭಾರತದಲ್ಲಿ ಬಾಕ್ಸಿಂಗ್ ಅಲೆಯನ್ನು ಹುಟ್ಟಿಸಿದವರು ಅಲಿ ಖಾಮರ್. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಲೈಟ್ ಫ್ಲೈವೇಟ್‌ನಲ್ಲಿ ಭಾಗವಹಿಸಿದ್ದ ಅಲಿ ಎದುರಾಳಿಗಳಿಗೆ ಅದ್ಭುತ ಪಂಚ್ ನೀಡುವ ಮೂಲಕ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಇಂಗ್ಲೆಂಡ್‌ನ ತಾರಾ ಬಾಕ್ಸರ್ ಡ್ಯಾರೆನ್ ಲ್ಯಾಂಗ್ಲೆ ಅವರನ್ನು ಮಣಿಸಿ ಚಿನ್ನ ಗೆದ್ದರು. ಇದು ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಸಿಕ್ಕ ಮೊದಲ ಚಿನ್ನದ ಪದಕ.
ಕುಸ್ತಿಯಲ್ಲಿ ಚಿನ್ನ ತಂದ ಲೀಲಾ ರಾಮ್
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕುಸ್ತಿಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ತಂದವರು ಲೀಲಾ ರಾಮ್ ಸಂಗ್ವಾನ್. ಕಾರ್ಡಿಫ್ನಲ್ಲಿ ನಡೆದ 1958ರ ಗೇಮ್ಸ್‌ನಲ್ಲಿ ಲೀಲಾ ರಾಮ್ ಎದುರಾಳಿಗಳನ್ನು ಮಣಿಸುತ್ತ ಫೈನಲ್ ತಲುದ್ದರು. ಅಲ್ಲಿ ಹಾಲೆಂಡ್‌ನ ಬಲಿಷ್ಠ ಎದುರಾಳಿ ಜಾಕೋಬ್ಸ್ ಹ್ಯಾನೆಕಾಮ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.
2 ಬಂಗಾರ ಗೆದ್ದ ಜಸ್ಪಾಲ್ ದಾಖಲೆ
1994ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಭಾರತದ ಪಾಲಿಗೆ ಇತಿಹಾಸವಾಗಿದೆ. 94ರ ವರೆಗೆ ಯಾವುದೇ ಒಬ್ಬ ಭಾರತೀಯ ಸ್ಪರ್ಧಿ ಎರಡು ಪದಕ ಗೆದ್ದ ಇತಿಹಾಸ ಇರಲಿಲ್ಲ. ಆದರೆ ಶೂಟರ್ ಜಸ್ಪಾಲ್ ರಾಣಾ ಈ ಸಾಧನೆಗೈದರು. ಪಿಸ್ತೂಲ್‌ನ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಸ್ಪರ್ಧಿಸಿದ ರಾಣಾ ಎರಡರಲ್ಲಿಯೂ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
ಪಡುಕೋಣೆಗೆ ಮೊದಲ ಬ್ಯಾಡ್ಮಿಂಟನ್ ಚಿನ್ನ
ಇಂದು, ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಚೀನಕ್ಕೆ ಸೆಡ್ಡು ಹೊಡೆದಿರುವ ಭಾರತ ಜಗತ್ತಿನಲ್ಲಿ ಪ್ರಕಾಶಿಸುತ್ತಿದೆ. ಕಾಮನ್ವೆಲ್ತ್‌ನಲ್ಲಿ ಪ್ರಥಮ ಚಿನ್ನದ ಪದಕ ತಂದವರು ಕನ್ನಡಿಗ ಪ್ರಕಾಶ್ ಪಡುಕೋಣೆ ಎಂಬುದು ಹೆಮ್ಮೆಯ ಸಂಗತಿ. 1978ರಲ್ಲಿ ನಡೆದ ಗೇಮ್ Õ
ನಲ್ಲಿ ಪಡುಕೋಣೆ ಈ ಸಾಧನೆ ಮಾಡಿದರು.
ಪಾಕಿಯನ್ನು ಮಣಿಸಿ ಚಿನ್ನ ಗೆದ್ದ “ಭೀಮ’
ಭಾರತ-ಪಾಕಿಸ್ಥಾನ ನಡುವೆ ಪಂದ್ಯವಿದ್ದರೆ ಅಭಿಮಾನಿ ಗಳಿಗೆ ತೀವ್ರ ಕುತೂಹಲ. 1966ರಲ್ಲಿ ಕಿಂಗ್‌ಸ್ಟನ್‌ನಲ್ಲಿ ನಡೆದ ಕುಸ್ತಿಯಲ್ಲೂ ಹಾಗೇ ಆಯಿತು. ಹೆವಿವೇಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭೀಮ್ ಸಿಂಗ್ ಫೈನಲ್ ತಲುಪಿದ್ದರು. ಮತ್ತೂಂದೆಡೆ ಪಾಕ್‌ನ ಇಕ್ರಮ್ ಇಲಾಹಿ ಇದ್ದರು. ಹೀಗಾಗಿ ಇಬ್ಬರ ನಡುವಿನ ಕಾಳಗ ರಾಷ್ಟ್ರೀಯ ಪ್ರತಿಷ್ಠೆಯಾಗಿ ನಿರ್ಮಾಣವಾಗಿತ್ತು. ಪಾಕ್ ಕುಸ್ತಿಪಟುವನ್ನು ಮಣಿಸಿ ಭೀಮ್ ಸಿಂಗ್ ಮೆರೆದಾಡಿದರು.
ಕೂಟದ ಸಂದೇಶ
ಶೇರ್ ದ ಡ್ರೀಮ್ (ಕನಸು ಹಂಚಿಕೊಳ್ಳಿ)
ಲಾಂಛನ ಬೊರೊಬಿ (ಇದು ಆಸ್ಟ್ರೇಲಿಯದಲ್ಲಿ ಕಂಡು ಬರುವ ವಿಶಿಷ್ಟ ತಳಿಯ ಕಿರುಗಾತ್ರದ ಕರಡಿ)
ಸಮಾರಂಭ ಆರಂಭ ಮಧ್ಯಾಹ್ನ 3 ಗಂಟೆ
ಸ್ಥಳ ಕೆರಾರಾ ಮೈದಾನ, ಗೋಲ್ಡ್‌ಕೋಸ್ಟ್, ಆಸ್ಟ್ರೇಲಿಯ
ನೇರಪ್ರಸಾರ
ಸೋನಿ ಸಿಕ್ಸ್, ಸೋನಿ ಟೆನ್ 2, ಸೋನಿ ಟೆನ್ 3
ಅಂತರ್ಜಾಲ ಪ್ರಸಾರ: SonyLiv.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.