ಗಡಿನಾಡಿನ ವಿದ್ಯಾಧಿಕಾರಿ ಆಗಬೇಕಿದ್ದಾಕೆಗೆ ನಿವೃತ್ತಿ ಬಳಿಕ ಭಡ್ತಿ!
Team Udayavani, Apr 4, 2018, 8:13 AM IST
ಕಾಸರಗೋಡು: ಕನ್ನಡಿಗರ ಬಗೆಗೆ ಕೇರಳ ರಾಜ್ಯ ಪದೇಪದೇ ಅನುಸರಿಸುವ ಮಲತಾಯಿ ಧೋರಣೆಯಿಂದ ಭಡ್ತಿ ವಂಚಿತರಾಗಿದ್ದ ಮುಖ್ಯೋಪಾಧ್ಯಾಯಿನಿಯೊಬ್ಬರಿಗೆ ಸೇವಾ ನಿವೃತ್ತಿಯಾಗಿ ಮೂರು ವರ್ಷಗಳ ಬಳಿಕ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ನೀಡಿದ ಅಪರೂಪದ ಘಟನೆ ಗಡಿನಾಡಿನಲ್ಲಿ ನಡೆದಿದೆ.
ತನಗೆ ಆದ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೊಕ್ಕು ಹೋರಾಟದ ಮೂಲಕ ಅವರು ಗೆಲುವು ಪಡೆದಿದ್ದಾರೆ. ಇದು ಅರ್ಹತೆಗೆ ಮತ್ತು ಹೋರಾಟಕ್ಕೆ ಸಂದ ಯಶಸ್ಸು. ಈ ಆದೇಶ ಎಲ್ಲ ಸಂದರ್ಭಗಳಲ್ಲೂ ಕಾಸರಗೋಡು ಕನ್ನಡಿಗರ ಬಗೆಗೆ ಕೇರಳಿಗರ ಮಲತಾಯಿ ಧೋರಣೆ ನಡೆಯುವುದಿಲ್ಲ ಎಂಬುದನ್ನು ಸಾರಿ ಹೇಳು
ವಂತಿದೆ. ಇದು ಕೇರಳ ರಾಜ್ಯದಲ್ಲೇ ಮೊತ್ತಮೊದಲ ಪ್ರಕರಣವಾಗಿಯೂ ದಾಖಲಿಸಲ್ಪಟ್ಟಿದೆ.
ಕಾರಣವೇನು?
ಲಲಿತಾಲಕ್ಷ್ಮೀ ಅವರು 1982ರ ಡಿಸೆಂಬರ್‌ನಲ್ಲಿ ಕೇರಳ ರಾಜ್ಯ ಲೋಕಸೇವಾ ಆಯೋಗದ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾಗಿ ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನಲ್ಲಿ ವೃತ್ತಿಜೀವನ ಆರಂಭಿಸಿದ್ದರು. 1982ರಲ್ಲಿ ಅವರ ವೃತ್ತಿ ನೇಮಕಾತಿ ಆದೇಶ ರ್‍ಯಾಂಕ್ ಸಂಖ್ಯೆ 811 ಎ ಆಗಿದ್ದು, ಆ ಬಳಿಕ ರ್‍ಯಾಂಕ್ ಸಂಖ್ಯೆ ಬದಲಾದುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ. 2008ರ ವರೆಗೂ ಮೂಲ ನೇಮಕಾತಿ ಆದೇಶ ರ್‍ಯಾಂಕ್ ಸಂಖ್ಯೆ ಸರಿಯಾಗಿತ್ತು, ಆ ಬಳಿಕ ಒಮ್ಮಿಂದೊಮ್ಮೆಗೆ ಬದಲಾಗಿರುವುದರ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕನ್ನಡಿಗರ ಬಗ್ಗೆ ಹೊಂದಿರುವ ಮಲತಾಯಿ ಧೋರಣೆ ಇದೆ.
ಆಗುತ್ತಿದ್ದರು ಮೊದಲ ಮಹಿಳಾ ವಿದ್ಯಾಧಿಕಾರಿ
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಮಹಿಳೆ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಉದಾಹರಣೆ ಇಲ್ಲ. ಲಲಿತಾಲಕ್ಷ್ಮೀ ಅವರಿಗೆ ಈ ಅವಕಾಶ ಇತ್ತು, ಕೇರಳ ರಾಜ್ಯ ಶಿಕ್ಷಣ ಇಲಾಖೆಯಲ್ಲಿ ನಡೆದ ಪ್ರಮಾದದಿಂದ ಅವಕಾಶದಿಂದ ಅವರು ವಂಚಿತರಾಗಬೇಕಾಯಿತು.
ಲಲಿತಾಲಕ್ಷ್ಮೀ ಅವರು ಸಾಮಾನ್ಯ ವರ್ಗದಲ್ಲಿ ಶಿಕ್ಷಕಿ ಸೇವೆಗೆ ಸೇರ್ಪಡೆಗೊಂಡವರು. ಕೇರಳದಲ್ಲಿ ಎರಡು ರೀತಿಯ ಶಿಕ್ಷಣ ನೇಮಕಾತಿಗಳಿವೆ. ಒಂದು- “ಗಡಿನಾಡಿನ ಕನ್ನಡಿಗರು’ ಎಂಬ ನೆಲೆಯಲ್ಲಿ ನೇಮಕಾತಿ ಪಡೆಯುವುದು, ಇವರು ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ; ಇನ್ನೊಂದು- “ಸಾಮಾನ್ಯ ವರ್ಗ’ದಲ್ಲಿ ನೇಮಕಾತಿ, ಇವರು ಕೇರಳ ರಾಜ್ಯಾದ್ಯಂತ ಎಲ್ಲಾದರೂ ಶಿಕ್ಷಕರಾಗಲು ಅರ್ಹರಾಗಿರುತ್ತಾರೆ.
ನಷ್ಟಕ್ಕೆ ಹೊಣೆ ಯಾರು?
ಲಲಿತಾಲಕ್ಷ್ಮೀ ಅವರು ತಮ್ಮ ನ್ಯಾಯಾಂಗ ಹೋರಾಟಕ್ಕೆ 1 ಲಕ್ಷ ರೂ.ಗಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಭಡ್ತಿಗೊಳಿಸಿ ಶಿಕ್ಷಣ ಇಲಾಖೆಯು ನೀಡಿರುವ ಆದೇಶದಲ್ಲಿ ದಾವೆ ಹೂಡಿದ ದಿನಾಂಕದ ಬಳಿಕ ಜಿಲ್ಲಾ ಶಿಕ್ಷಣ ಅಧಿಕಾರಿಗೆ ನೀಡಬೇಕಾದ ಸೌಲಭ್ಯ-ಸವಲತ್ತುಗಳನ್ನು ಲಲಿತಾಲಕ್ಷ್ಮೀ ಅವರಿಗೆ ಒದಗಿಸುವಂತೆ ಸೂಚಿಸಲಾಗಿದೆ. ಆದರೆ ದಾವೆ ಹೂಡುವುದಕ್ಕಿಂತ ಹಿಂದಿನ ಸುಮಾರು 6 ತಿಂಗಳ ಅವಧಿಯ ಬಗ್ಗೆ ಆದೇಶ ಏನೂ ಹೇಳದಿರುವುದು ಆಶ್ಚರ್ಯ ಮೂಡಿಸಿದೆ.
ಕರ್ತವ್ಯದಲ್ಲಿ ಮುಂಚೂಣಿ
ಲಲಿತಾಲಕ್ಷ್ಮೀ ಅವರು ಕಾಯರ್‌ಕಟ್ಟೆ ಹೈಸ್ಕೂಲಿನಲ್ಲಿ ಸೇವೆಯಲ್ಲಿದ್ದ ವೇಳೆ ಎಂದರೆ 2010ರಲ್ಲಿ ಆ ಶಾಲೆಗೆ ಪ್ಲಸ್ ವನ್ ಸ್ಥಾನಮಾನ ಮಂಜೂರಾಗಿತ್ತು. ಆ ಸಂದರ್ಭದಲ್ಲಿ ಅವರು ನೂತನ ಹೈಯರ್ ಸೆಕೆಂಡರಿಯ ಪ್ರಾಂಶುಪಾಲೆಯಾಗಿಯೂ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿಗೆ ಸಿಗುವಷ್ಟೇ ವೇತನದಲ್ಲಿ ದುಡಿದಿರುವುದು ಅವರ ಸೇವಾ ತತ್ಪರತೆಗೆ ಸಾಕ್ಷಿಯಾಗಿದೆ.
ರಾಜ್ಯದಲ್ಲೇ ಮೊದಲ ಪ್ರಕರಣ
ಲಲಿತಾಲಕ್ಷ್ಮೀ ಅವರ ಕಾನೂನು ಹೋರಾಟದ ಫಲವಾಗಿ ನಿವೃತ್ತಿ ಹೊಂದಿ ಮೂರು ವರ್ಷಗಳ ಬಳಿಕ ಸೇವಾ ಭಡ್ತಿ ಪಡೆದಿರುವುದು ಕೇರಳ ರಾಜ್ಯದಲ್ಲೇ ಮೊದಲ ಪ್ರಕರಣವಾಗಿದೆ. ನ್ಯಾಯಾಲಯವು ಈ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಭವಿಷ್ಯದಲ್ಲಿ ಇಂತಹ ಪ್ರಮಾದಗಳು ಘಟಿಸದಂತೆ ಕೇರಳ ರಾಜ್ಯ ಶಿಕ್ಷಣ ಇಲಾಖೆಗೆ ಎಚ್ಚರಿಕೆಯನ್ನೂ ನೀಡಿರುವುದು ಗಮನಾರ್ಹ.
ನಡೆದುದು ಏನು?
ಹಿರಿಯ ಶಿಕ್ಷಣ ತಜ್ಞ, ಸಾಹಿತಿ, ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ ಅವರ ಪತ್ನಿ ಲಲಿತಾಲಕ್ಷ್ಮೀ ಎಸ್. ಕುಳಮರ್ವ ಅವರು 2007ರಿಂದ 2014ರ ವರೆಗೆ ಪೈವಳಿಕೆ ಕಾಯರ್‌ಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಮಧ್ಯೆ 2008ರಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ಹಿರಿತನ (ಸೀನಿಯಾರಿಟಿ) ಪಟ್ಟಿಯನ್ನು ಗಮನಿಸಿದಾಗ ಲಲಿತಾಲಕ್ಷ್ಮೀ ಅವರ ಹೆಸರು ಅವರಿಗಿಂತ ಸೇವಾಕಿರಿಯರ ಬಳಿಕ ನಮೂದಾಗಿದ್ದುದು ಕಂಡುಬಂದಿತ್ತು. ಲಲಿತಾಲಕ್ಷ್ಮೀ ಅವರು ಈ ಬಗ್ಗೆ ಕೂಡಲೇ ಶಿಕ್ಷಣ ಉಪನಿರ್ದೇಶಕರ ಸಹಿತ ಉನ್ನತ ಅಧಿಕಾರಿಗಳಿಗೆ ಮನವಿ ನೀಡಿ ಸರಿಪಡಿಸಲು ಕೇಳಿಕೊಂಡಿದ್ದರು. ಆದರೆ ಲಲಿತಾಲಕ್ಷ್ಮೀ ಅವರ ಮನವಿಯನ್ನು ನಿರ್ಲಕ್ಷಿಸಿದ ಕೇರಳ ರಾಜ್ಯ ಶಿಕ್ಷಣ ಇಲಾಖೆ ಇವರಿಗಿಂತ ಕಿರಿಯರಿಗೆ ಭಡ್ತಿ ನೀಡಿತ್ತು.
ಇದರಿಂದ ಲಲಿತಾಲಕ್ಷ್ಮೀ ಅವರು 2013-14ರ ಅವಧಿಯಲ್ಲಿ ಭಡ್ತಿ ಹೊಂದಿ ಜಿಲ್ಲಾ ಶಿಕ್ಷಣಾಧಿ
ಕಾರಿ ಆಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಮನನೊಂದ ಲಲಿತಾಲಕ್ಷ್ಮೀ 2014 ಫೆ. 12ರಂದು ಕೇರಳ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಇದರಿಂದ ಎಚ್ಚೆತ್ತಂತೆ ನಟಿಸಿದ ಇಲಾಖೆಯು 2014ರ ಫೆಬ್ರವರಿಯಲ್ಲಿ ಲಲಿತಾಲಕ್ಷ್ಮೀ ಅವರನ್ನು ರಾಜ್ಯ ಶಿಕ್ಷಣ ನಿರ್ದೇಶಕರ ಕಚೇರಿಗೆ ಕರೆಯಿಸಿಕೊಂಡು ಅವರ ಹೇಳಿಕೆ ದಾಖಲಿಸಿ ಕೈತೊಳೆದುಕೊಂಡಿತ್ತು. ಬಳಿಕ ಯಾವುದೇ ಮಾತುಕತೆ, ಕಡತ ವಿಲೇವಾರಿಗೆ ಮುಂದಾಗದ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೆಲ ಸಮಯದ ಹಿಂದೆ ಲಲಿತಾಲಕ್ಷ್ಮೀ ಅವರ ಪರವಾಗಿ ತೀರ್ಪು ಹೊರಬಿದ್ದಿದೆ. ಅವರಿಗೆ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ನೀಡಿ ಆದೇಶಿಸುವಂತೆ ನ್ಯಾಯಾಲಯವು ಶಿಕ್ಷಣ ಇಲಾಖೆಗೆ ನಿರ್ದೇಶಿಸಿತು. ಆ ಬಳಿಕ ಶಿಕ್ಷಣ ಇಲಾಖೆಯು ಲಲಿತಾಲಕ್ಷ್ಮೀ ಅವರಿಗೆ “ನೋಶನಲ್ (ನಾಮಾಂಕಿತ) ಪ್ರಮೋಶನ್ ಆ್ಯಸ್ ಡಿಇಒ’ ಎಂಬ ಆದೇಶ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.