ವಹಿವಾಟಿನಲ್ಲಿ ಎಚ್‌ಎಎಲ್ ದಾಖಲೆ ನಿರ್ಮಾಣ
Team Udayavani, Apr 4, 2018, 11:32 AM IST
ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) 2017-
18ನೇ ಆರ್ಥಿಕ ಸಾಲಿನಲ್ಲಿ 18 ಸಾವಿರ ಕೋಟಿ ರೂ. (ತಾತ್ಕಾಲಿಕ ಮತ್ತು ಲೆಕ್ಕ ಪರಿಶೋಧನೆಗೆ ಒಳಪಡದ)
ವಹಿವಾಟು ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ.
2016-17ನೇ ಸಾಲಿನಲ್ಲಿ ಎಚ್‌ಎಎಲ್ ಒಟ್ಟು 17,605 ಕೋಟಿ ರೂ. ವಹಿವಾಟು ನಡೆಸಿರುವುದು ಇದುವರೆಗಿನ ದಾಖಲೆಯಾಗಿದ್ದು, ಈ ದಾಖಲೆ ಮೀರಿ 2017-18ನೇ ಸಾಲಿನಲ್ಲಿ ವಹಿವಾಟು ನಡೆಸಿದೆ. ಇದರೊಂದಿಗೆ ಕೇಂದ್ರ ನೀಡುವ “ಅತ್ಯುತ್ತಮ’ ರ್‍ಯಾಂಕಿಂಗ್ ಮುಂದುವರಿಯಲಿದೆ ಎಂದು ಕಂಪನಿ ತಿಳಿಸಿದೆ.
ಹೆಚ್ಚಿದ ಬೇಡಿಕೆ: 2017-18ನೇ ಸಾಲಿನಲ್ಲಿ ಎಚ್ ಎಎಲ್ 40 ಹೊಸ ವಿಮಾನ/ ಹೆಲಿಕಾಪ್ಟರ್ ಮತ್ತು 105
ಹೊಸ ಎಂಜಿನ್‌ಗಳನ್ನು ತಯಾರಿಸಿದೆ. ಅಲ್ಲದೆ, 220 ವಿಮಾನ/ ಹೆಲಿಕಾಪ್ಟರ್ ಮತ್ತು 550 ಎಂಜಿನ್‌ಗಳನ್ನು ಸಮಗ್ರ ಪರಿಶೀನೆಗೆ ಒಳಪಡಿಸಿದೆ. ಜತೆಗೆ ಭಾರತೀಯ ವಾಯುಸೇನೆಯಿಂದ 8 ಚೇತಕ್ ಹೆಲಿಕಾಪ್ಟರ್ ಮತ್ತು 41 ಅತ್ಯಾಧುನಿಕ ಲೈಟ್ ಹೆಲಿಕಾಪ್ಟರ್‌ಗಳ ಬೇಡಿಕೆ ಬಂದಿದ್ದು, ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು
ಕಂಪನಿ ಹೇಳಿದೆ.
ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ಉತ್ಪಾದನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಕಾರ್ಯಾಚರಣೆ ಅನುಮತಿ ಪ್ರಮಾಣಪತ್ರ ಲಭ್ಯವಾಗಿರುವುದರ ಜತೆಗೆ ನಾಗರಿಕ ವಿಮಾನದ ರೂಪಾಂತರವಾಗಿರುವ ಡೋರ್ನಿಯರ್ ಡೋ-228 ಯುದ್ಧ ವಿಮಾನ ಹಾರಾಟ ಯೋಗ್ಯ ಎಂಬ ಪ್ರಮಾಣಪತ್ರವನ್ನು ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್
ಏವಿಯೇಷನ್‌ನಿಂದ ಪಡೆದುಕೊಂಡಿದೆ. ಮಿರಾಜ್-2000 ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ವಾಯುಸೇನೆಯಿಂದ ಅದನ್ನು ಮೇಲ್ದರ್ಜೆಗೇರಿಸಲು ಬೇಡಿಕೆ ಬಂದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣರಾಜು, ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶೀಯ ಉತ್ಪಾದನೆಯಲ್ಲಿ ಸ್ವಾಯತ್ತತೆ ಸಾಧಿಸುವುದು, ನಾಗರಿಕ ವಾಯುಯಾನ ಕ್ಷೇತ್ರಕ್ಕೆ ವೈವಿದ್ಯಮಯ ವಿಮಾನಗಳನ್ನು ಒದಗಿಸುವುದು, ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸಲು ಎಚ್‌ಎಎಲ್ ಸದಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.