ಬಾಳುಗೋಡು: ಕೊತ್ನಡ್ಕ ಜನತೆಗೆ ಸೇತುವೆ ಖೋತಾ!
Team Udayavani, Apr 4, 2018, 12:50 PM IST
ಸುಬ್ರಹ್ಮಣ್ಯ: ದಶಕಗಳಿಂದ ಸೇತುವೆ ಇಲ್ಲ, ಕಷ್ಟವಾಗುತ್ತಿದೆ. ಸಂಪರ್ಕಕ್ಕಾಗಿ ಒಂದು ಸೇತುವೆ ಒದಗಿಸಿ ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸುತ್ತಲೇ ಇದ್ದರು. 3 ವರ್ಷಗಳ ಹಿಂದೆ ಕಿರು ಸೇತುವೆ ಮಂಜೂರಾಯಿತು. ಅನುದಾನ ಬಂದು ಕಾಮಗಾರಿಯೂ ಶುರುವಾಯಿತು. ಆದರೆ, ಅದೀಗ ಅರ್ಧದಲ್ಲೇ ಸ್ಥಗಿತಗೊಂಡು ಸಂಕಷ್ಟ ಹೆಚ್ಚಿಸಿದೆ.
ಹರಿಹರ ಪಳ್ಳತ್ತಡ್ಕ ಗ್ರಾ.ಪಂ.ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ಕೊತ್ನಡ್ಕ ಎಂಬ ಪ್ರದೇಶವಿದೆ. ತೀರಾ ಕುಗ್ರಾಮ ಎನಿಸಿದ ಇಲ್ಲಿ ವಿರಳ ಸಂಖ್ಯೆಯ ಮನೆಗಳಿವೆ. ಬಾಳುಗೋಡು ಪೇಟೆಯಿಂದ ಕಾಡು ದಾರಿಯ ಮೂಲಕ ಕಚ್ಚಾ ರಸ್ತೆಯಲ್ಲೇ ಇಲ್ಲಿಗೆ ಸಂಚರಿಸಬೇಕು. ಐದಾರು ಕಿ.ಮೀ. ದೂರದ ದಾರಿಯಲ್ಲಿ ಮಧ್ಯೆ ನದಿ ಹರಿಯುತ್ತದೆ. ಮಳೆಗಾಲ ಬಂತೆಂದರೆ ಈ ನದಿ ದಾಟುವುದೇ ಕಷ್ಟ.
ಬಹುಕಾಲದ ಬೇಡಿಕೆಯಂತೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಇಲ್ಲಿಗೆ ಮೂರು ವರ್ಷಗಳ ಹಿಂದೆ 8.25 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಕೆಲಸ ವಹಿಸಿಕೊಂಡ ಗುತ್ತಿಗೆದಾರರು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಕೆಲಸ ಆರಂಭಿಸಿದ್ದರು. ಪಿಲ್ಲರ್ ತಲೆ ಎತ್ತಿ ನಿಂತಿತ್ತು. ಕಳೆದ ವರ್ಷ ಎಪ್ರಿಲ್‌ನಲ್ಲಿ ಇದ್ದಕ್ಕಿದ್ದಂತೆ ಕಾಮಗಾರಿ ಪೂರ್ಣ ಸ್ಥಗಿತಗೊಂಡಿದೆ. ಸೇತುವೆ ನಿರ್ಮಾಣವಾಗಿಯೇ ಬಿಟ್ಟಿತು ಎಂದು ನಂಬಿದ್ದ ಈ ಭಾಗದ ನಾಗರಿಕರಿಗೆ ನಿರಾಶೆ ಕಾದಿತ್ತು.
ಸಾಮಗ್ರಿಗಳು ಮಾಯ
ಅಂದು ಆರಂಭವಾದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆಗೆ ಹಾಕಿದ ಪಿಲ್ಲರ್ ಹಾಗೆಯೇ ಪಾಳುಬಿದ್ದಿದೆ. ಸೇತುವೆ ನಿರ್ಮಾಣಕ್ಕೆಂದು ತಂದು ಹಾಕಿದ್ದ ಸಾಮಗ್ರಿಗಳು ಕಾಣೆಯಾಗಿವೆ. ಪಿಲ್ಲರ್‌ಗೆ ಅಳವಡಿಸಿದ ಸಾಧನಗಳು ತುಕ್ಕು ಹಿಡಿದಿವೆ. ಗುತ್ತಿಗೆದಾರ ವರ್ಷದಿಂದ ಇತ್ತ ಕಡೆ ಸುಳಿದಿಲ್ಲ ಎಂದು ಊರವರು ಹೇಳುತ್ತಾರೆ.
ಕಾಮಗಾರಿ ವಿಳಂಬವೇಕೆ ಎಂಬ ಪ್ರಶ್ನೆಗೆ, ಮಳೆ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದಾಗಿ ಗುತ್ತಿಗೆದಾರರು ಈ ಹಿಂದೆ ಉತ್ತರಿಸಿದ್ದರು. ಮುಂದಿನ ವರ್ಷದೊಳಗೆ ಕಿರು ಸೇತುವೆ ನಿರ್ಮಾಣವಾಗುವ ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಮುಂದುವರಿಸಲು ಗುತ್ತಿಗೆದಾರರು ಆಸಕ್ತಿ ತೋರುವುದು ಕಾಣಿಸುತ್ತಿಲ್ಲ. ಶತಪ್ರಯತ್ನ ಮಾಡಿ ಅನುದಾನ ಒದಗಿಬಂದರೂ ಸೇತುವೆ ಪೂರ್ಣಗೊಳ್ಳದಿರುವುದು ಈ ಭಾಗದ ನಾಗರಿಕರಲ್ಲಿ ಬೇಸರ ತಂದಿದೆ. ಈ ಬಾರಿ ಚುನಾವಣೆ ವೇಳೆ ಮತ ಕೇಳಲು ಬರುವ ವರಿಗೆ ಬಿಸಿ ಮುಟ್ಟಿಸಲು ಇಲ್ಲಿಯ ವರು ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಇಲ್ಲಿನ ಮೂಲಸೌಕರ್ಯದ ನಿರ್ಲಕ್ಷ್ಯ ವಿಚಾರ ಚರ್ಚೆಗೆ ಬರಲಿದೆ.
ಕೇಳುವವರಿಲ್ಲವೇ?
ಅನುದಾನ ಮಂಜೂರುಗೊಂಡರೂ ಸೇತುವೆ ಪೂರ್ಣವಾಗದೆ ಇರುವುದಕ್ಕೆ ಗುತ್ತಿಗೆದಾರ ಮಾತ್ರ ಕಾರಣವಾಗುವುದಿಲ್ಲ. ಅದಕ್ಕೆ ಸಂಬಂದಿಸಿದ ಇಲಾಖೆಯವರು ಕೂಡ ಕಾರಣರು. ಅಧಿಕಾರಿಗಳು ನಿದ್ರೆಗೆ ಜಾರಿರುವುದು ಈ ರೀತಿ ಕಾಮಗಾರಿ ನೇಪಥ್ಯಕ್ಕೆ ಸರಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾತ್ಕಾಲಿಕ ಸಂಕ
ಶಾಲಾ ಮಕ್ಕಳು, ನಾಗರಿಕರು ಈ ರಸ್ತೆಯ ಮೂಲಕ ನಿತ್ಯವೂ ಓಡಾಡುತ್ತಾರೆ. ನಿತ್ಯವೂ ತಮ್ಮ ಬೇಡಿಕೆಗಳನ್ನು ಈ ರಸ್ತೆ ಮೂಲಕವೇ ಸಂಚರಿಸಿ ಪೂರೈಸಿಕೊಳ್ಳುತ್ತಾರೆ. ಈ ಊರಿಗೆ ಖಾಸಗಿ ಜೀಪು ಹೊರತುಪಡಿಸಿ ಇನ್ಯಾವುದೇ ವಾಹನ ಸೌಲಭ್ಯ ಇಲ್ಲ. ಕಳೆದ ವರ್ಷ ಮಳೆಗಾಲ ರಸ್ತೆ ತುಂಬಿ ಹರಿದ ಕಾರಣ ಸ್ಥಳೀಯರು ಸೇರಿ ತಾತ್ಕಾಲಿಕ ಮರದ ತೂಗು ಸೇತುವೆ ನಿರ್ಮಿಸಿಕೊಂಡಿದ್ದರು. ಕಷ್ಟದಲ್ಲಿ ಮಳೆಗಾಲ ಕಳೆದಿದ್ದರು. ಮುಂದಿನ ವರ್ಷವಾದರೂ ಸೇತುವೆ ಕಾಮಗಾರಿ ಪೂರ್ಣಗೊಂಡು ಸಮಸ್ಯೆ ಪರಿಹಾರ ಕಾಣಬಹುದು ಎಂದುಕೊಂಡಿದ್ದರು. ಅವರ ನಿರೀಕ್ಷೆ ಈ ಬಾರಿಯೂ ಈಡೇರುವ ಲಕ್ಷಣಗಳು ಸದ್ಯ ಗೋಚರಿಸುತ್ತಿಲ್ಲ.
ಅನುದಾನ ಸಾಲುತ್ತಿಲ್ಲ
ಅಲ್ಲಿ ಸೇತುವೆ ನಿರ್ಮಾಣಕ್ಕೆ ಈಗ ಶಾಸಕರು ನೀಡಿರುವ ಅನುದಾನ ಸಾಕಾಗುವುದಿಲ್ಲ. ಈಗ ದೊರಕಿದ ಅನುದಾನದಲ್ಲಿ ಪಿಲ್ಲರ್ ಕಾಮಗಾರಿ ಅಷ್ಟೆ ನಡೆದಿದೆ. ಪೂರ್ತಿಯಾಗಲು ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಶಾಸಕರು ಹೇಳಿದ್ದರು. ಅದು ದೊರಕಿದಲ್ಲಿ ಮಾತ್ರ ಪೂರ್ತಿಯಾಗಬಹುದು. ಹೀಗಾಗಿ ಕಾಮಗಾರಿ ಲಭ್ಯ ಅನುದಾನದ ಹಂತಕ್ಕೆ ನಡೆದು ನಿಂತಿದೆ.
– ಹರೀಶ್ ಮೆದು,
ಜೂನಿಯರ್ ಎಂಜಿನಿಯರ್
ಶೀಘ್ರ ಆರಂಭವಾಗಬೇಕು
ಸೇತುವೆ ಮಂಜೂರಾಗಿ ಮೂರು ವರ್ಷಗಳು ಕಳೆದಿವೆ. ಇನ್ನೂ ಸೇತುವೆ ಕಾಮಗಾರಿ ಕುಂಟುತ್ತ ಇದೆ. ಅರ್ಧಕ್ಕೆ ಕಾಮಗಾರಿ ಸ್ಥಗಿತವಾಗಿದ್ದರಿಂದ ಸರಕಾರದ ಯೋಜನೆ ಹಳ್ಳ ಹಿಡಿದಿದೆ. ಸ್ಥಳೀಯರಾದ ನಾವು ಇನ್ನೂ ಸಮಸ್ಯೆ ಅನುಭವಿಸುತ್ತಲೇ ಇದ್ದೇವೆ. ಇನ್ನಾದರೂ ಕಾಮಗಾರಿ ಚುರುಕಾಗಿ ಮಳೆಗಾಲದ ಅವಧಿಯಲ್ಲಾದರೂ ಸೇವೆಗೆ ಸಿಗುವಂತಾಗಬೇಕು.
– ಹರೀಶ್ ಕಜೆಗದ್ದೆ
ಸ್ಥಳೀಯರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.