ಕಾಡಬೆಟ್ಟು: ಕೆರೆ ಅತಿಕ್ರಮಣ ದೂರು, ಪೊಲೀಸರಿಂದ ಎಚ್ಚರಿಕೆ
Team Udayavani, Apr 5, 2018, 12:48 PM IST
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳ ಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಕೆರೆಕೋಡಿಯಲ್ಲಿ ಸರಕಾರದ ಕೆರೆಯನ್ನು ಅತಿಕ್ರಮಣ ಮಾಡುತ್ತಿರುವ ವ್ಯಕ್ತಿಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪ್ರೊಬೆಷನರಿ ಎಸ್ಪಿ ಪರಿಶೀಲನೆ ನಡೆಸಿ ಕೆರೆ ಸ್ಥಳ ಅತಿಕ್ರಮಣ ಮಾಡಿರುವುದನ್ನು ತತ್‌ಕ್ಷಣ ತೆರವುಗೊಳಿಸಿ ಯಥಾಪ್ರಕಾರ ಇಡುವಂತೆ ಎಚ್ಚರಿಕೆ ನೀಡಿದ್ದಾರೆ.
ಕಾಡಬೆಟ್ಟು ಗ್ರಾಮದ ಕೆರೆಕೋಡಿಯಲ್ಲಿ ಸರಕಾರಿ ಮೀಸಲಿರಿಸಿರುವ ಸರ್ವೆ ನಂ. 13.12ರ ಸುಮಾರು 0.17 ಎಕ್ರೆ ಕೆರೆ ಜಮೀನನ್ನು ಸ್ಥಳೀಯ ನಿವಾಸಿ ನಿರಂಜನ ಸುವರ್ಣ ಅತಿಕ್ರಮಣ ಮಾಡಿರುವುದಾಗಿ ಸಾರ್ವಜನಿಕರು ಕಾವಳಪಡೂರು ಗ್ರಾ.ಪಂ.ಗೆ ದೂರು ಸಲ್ಲಿಸಿದ್ದರು. ಕೆರೆ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮ ಜರಗಿಸುವಂತೆ ಪಿಡಿಒ ಮಹಮ್ಮದ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಮನವಿ ಸಲ್ಲಿಸಿದ್ದರು. ಪಂ.ನ ಪತ್ರವನ್ನು ಗಮನಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪ್ರೊಬೆಷನರಿ ಎಸ್ಪಿ ಅಕ್ಷಯ್ ಅವರು ಅತಿಕ್ರಮಣಗೊಂಡಿರುವ ಕೆರೆ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಯನ್ನು ಕಳುಹಿಸಿದ್ದು, ವೀಡೀಯೋ ಚಿತ್ರೀಕರಣ ನಡೆಸಿ ವರದಿ ಕೇಳಿದ್ದಾರೆ. ಬಳಿಕ ಅತಿಕ್ರಮಣ ಮಾಡಿರುವ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಲ್ಲದೇ ಕೆರೆಗೆ ತುಂಬಿಸಲಾದ ಮಣ್ಣನ್ನು ತತ್‌ಕ್ಷಣ ತೆರವುಗೊಳಿಸಿ ಮೊದಲಿನ ಸ್ಥಿತಿಯಂತೆ ಇಡಬೇಕೆಂದು ಸೂಚಿಸಿದ್ದಾರೆ.
ಕೆರೆಕೋಡಿಯಲ್ಲಿ ಸಾರ್ವಜನಿಕ ಕೆರೆಗಾಗಿ ಸರಕಾರ ಈ ಹಿಂದೆಯೇ ಜಮೀನನ್ನು ಮೀಸಲು ಇರಿಸಿದ್ದು, ಸಾರ್ವಜನಿಕರು ಕೆರೆಯ ನೀರನ್ನು ಬಳಸುತ್ತಿದ್ದರು. ಇತ್ತೀಚೆಗೆ ಕೆರೆಯ ಬಳಕೆ ಇಲ್ಲವಾದುದರಿಂದ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇದರಿಂದಾಗಿ ಕೆರೆಯ ನಿವೇಶನವನ್ನು ಅತಿಕ್ರಮಣ ಮಾಡಲಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಸಹಿತ ಸಂಬಂಧಿತ ಇಲಾಖೆಗಳಿಗೆ ಸ್ಥಳೀಯರು ದೂರು ನೀಡಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.