ಅಕ್ಕ ಕೇಳವ್ವ: ಅಡುಗೆ ಮನೆ
Team Udayavani, Apr 6, 2018, 7:00 AM IST
ಹಪ್ಪಳ ಕಾಯಿಸುತ್ತಿದ್ದ ಬಾಣಸಿಗ ರೊಬ್ಬರ ಎಣ್ಣೆಯ ಬಾಣಲೆಯಿಂದ ಚಂಗನೆ ಜಿಗಿದು ಬಾನಿಗೆ ಹಾರಿ ಬದುಕಿದೆಯಾ ಬಡಜೀವವೇ ಎಂದು ಏದುಸಿರು ಬಿಡುತ್ತ ಕಣ್ಣು ಪಿಳಿಪಿಳಿ ಬಿಡುತ್ತಿದ್ದಾನೆ ಸೂರ್ಯ. ಅವ ನಡುನೆತ್ತಿಗೇರಿದ ಸುಡುಹೊತ್ತು. ಗದ್ದೆ ಉತ್ತು, ಎತ್ತುಗಳ ಮೈಯನ್ನು ಹಳ್ಳದಲ್ಲಿ ಗಸಗಸ ತಿಕ್ಕಿ ಹೊಡೆದುಕೊಂಡು ಸೂರ್ಯನಂತೆ ಉರಿಯುತ್ತ ಬಂದು ಕೊಟ್ಟಿಗೆಯಲ್ಲಿ ಕಟ್ಟಿದವನೇ, “”ಲೇ ಇವಳೇ, ಊಟ ಬಡಿಸು” ಎಂದನವ. ಅವಳ್ಳೋ, ಹಸಿಕಟ್ಟಿಗೆ ಒಲೆಗಿಟ್ಟು ವಾಂಟೆಕೊಳವೆ ಕತ್ತಿನಲ್ಲಿ ಊದಿ ಊದಿ ಕಣ್ಣು ಕೆಂಪು ಕಿಸ್ಕಾರ ಹೂವಾಗಿ ನೀರು ಬಿಸಿಯಾಗಿ ಅಕ್ಕಿ ಹಾಕಿ ಹೊರ ಬಂದರೆ ಬೆಂಕಿ ಅಲ್ಲಿಂದೆದ್ದು ಅವಳ ಹಿಂದುಗಡೆಯೇ ಬಂದುಬಿಟ್ಟಿದೆ! “”ನಾನು ಮೂರುಕೊಯ್ಲು ಗದ್ದೆ ಉತ್ತು ಬಂದೆ. ನಿಂದು ಇನ್ನೂ ಅಡುಗೆ ಆಗಿಲ್ವೇನೇ? ಹಸಿವಲ್ಲಿ ಜೀವ ಹೋಗ್ತಿದೆ ನಂಗೆ! ನಿನ್ನನೀಗಲೆ ಬೇಯಿಸುತ್ತೇನೆ ಅನ್ನ” ಎಂದ ಕಣ್ಣಲ್ಲೇ ಬೆಂಕಿ ಉರಿಸುತ್ತ. “”ಆಯ್ತು, ನಾಳೆಯಿಂದ ನಾನು ಗದ್ದೆ ಉಳುತ್ತೇನೆ, ನೀವು ಬೇಯಿಸಿಡಿ ಅನ್ನ” ಎಂದಳವಳು ಹೊಗೆಗೆ ಉರಿಯುತ್ತಿದ್ದ ಕಣ್ಣನ್ನು ಸೆರಗಂಚಿನಿಂದ ಒರೆಸುತ್ತ. “”ಅಡುಗೆ ಎಂದರೆ ಏನು ಮಹಾಯಾಗವ? ಒಲೆ ಉರಿಸಿದರಾಯ್ತು, ನೀರಿಟ್ಟರಾಯ್ತು, ಅಕ್ಕಿ ಹಾಕಿದರಾಯ್ತು ಬೇಯುತ್ತದೆ. ಅಕ್ಕಿಯೊಟ್ಟಿಗೆ ನಾವು ಬೇಯ್ಲಿಕ್ಕುಂಟ?” ಎಂದನವ. ಸರಿ, ಮಾರನೆಯ ದಿನ ಹೆಂಡತಿ ಎತ್ತು ಹೊಡ್ಕೊಂಡು ಹೋಗಿ ಗದ್ದೆಗೆ ಮೂರು-ನಾಲ್ಕು ಗೀಟು ಹಾಕಿ ನಡುಮಧ್ಯಾಹ್ನ ಮನೆಗೆ ಬಂದು, “”ಆಯ್ತಾ ಅಡುಗೆ? ಬಡಿಸಿ ನೋಡುವ” ಎಂದರೆ ಗಂಡ, “”ಲೇ ಇವಳೇ, ಅಕ್ಕಿಯಲ್ಲಿ ಕಲ್ಲೋ ಕಲ್ಲು. ಕೇರಲೇಬೇಕು. ಮೊರಕುಟ್ಟುವ ಕೋಲು ಎಲ್ಲುಂಟು ಮಾರಾಯ್ತಿ?” ಎಂದು ಕೇಳಬೇಕೆ?
“ಸಾವಿರ ಜನಕ್ಕಾಗಿ ಮಾಡಿದ ಅಡುಗೆಯೂ, ಒಂದು ಹೆಣ್ಣಿಗಾಗಿ ಗಂಡು ನೋಡಿ ಮಾಡಿದ ಮದುವೆಯೂ ಹೆಚ್ಚುಕಮ್ಮಿಯಾದರೆ ಜೀವಮಾನವಿಡೀ ಮತ್ತೆ ಸರಿಹೋಗದು’. ಹಿಂದೆ ಒಂದು ಹೆಣ್ಣುಮಗಳ ಮದುವೆ ಮಾಡಬೇಕಾದರೆ ಗಂಡಿನ ಮನೆಗೆ ಹೋಗಿ ಎಷ್ಟು ಮುಡಿ ಅಕ್ಕಿಯ ಕಣಜವಿದೆ ಎಂದು ನೋಡುವ ಕ್ರಮವಿತ್ತು. ದುಡಿದರೂ ತೊಂದರೆಯಿಲ್ಲ, ಗಂಜಿಗೊಂದು ತೊಂದರೆ ಇಲ್ಲವಲ್ಲ ಎಂಬ ಯೋಚನೆ. ಆದರೆ ಈಗ ಎಷ್ಟು ಬಂಗ್ಲೆ, ಕಾರು ಆಸ್ತಿ ಇದೆ ಎಂದು ಲೆಕ್ಕ ಹಾಕುವ ವ್ಯಾಪಾರಿ ದೃಷ್ಟಿಕೋನ, ದುರಾಸೆ. “ಸತ್ಯದಲ್ಲಿ ಹೋದವ ಸತ್ತುಹೋದಾನು ಅನ್ಯಾಯ ಮಾಡಿದವ ಅನ್ನ ತಿಂದಾನು. ಕಾಲ ಹಾಳಾಗಿದೆ ಮಗಾ ಶೀಲ ಕೆಟ್ಟು ಹೋಗಿದೆ’ ಎನ್ನುತ್ತಿದ್ದರು ಅಜ್ಜಿ . ಮಗುವಿಗೆ ಕೊಡುವ ಹಾಲಿನಲ್ಲಿ ಅನ್ನ ಆಹಾರದಲ್ಲಿ ವಿಷಬೆರೆಸುವ ದುರುಳರಿರಲಿಲ್ಲ ಹಿಂದೆ. ರಾಸಾಯನಿಕ ಕೀಟನಾಶಕ ಬಳಸದ ಸಾವಯವ ಕೃಷಿಯಲ್ಲಿ ಭೂದೇವಿ ಆರೋಗ್ಯವಂತಳಾಗಿದ್ದಳು. ಈಗ ಗಜಘೋರ. ಎಷ್ಟು ದೊರಕಿದರೂ ಮತ್ತಷ್ಟು ಬೇಕೆಂಬ ಕಡುಸುಖವ ಕಾಣುವ ದುರಾಸೆಯಲ್ಲಿ ನಮ್ಮ ಕಾಲಿಗೆ ನಮ್ಮದೇ ಕೊಡಲಿ. ಭಸ್ಮಾಸುರರಾಗುತ್ತಿದ್ದೇವೆ. ಅಡಿ ತಪ್ಪಿದರೆ ನೆಲವುಂಟು, ನೆಲವೇ ತಪ್ಪಿದರೆ ಏನುಂಟು? ರೆಡಿಮೇಡ್ ಪರೋಟ, ರವೆಇಡ್ಲಿ, ಹೋಳಿಗೆಗಳನ್ನು ತುಂಬಿಕೊಳ್ಳುವ ಪ್ಯಾಕೆಟುಗಳಾಗುತ್ತಿದೆ ನಮ್ಮ ಸಂತತಿ. ಅಕ್ಕಿ ಗೋಧಿ ಹಾಲಿನ ಮೂಲ ತಿಳಿಯದ ವಿಚಿತ್ರವಾದ ಚಿತ್ರದಗೊಂಬೆಗಳು. ಜತೆಗೆ ಹೊಟ್ಟೆತುಂಬ ತಿನ್ನದೆ ತೆಳ್ಳಗೆ ಬೆಳ್ಳಗಾಗುವ ದೇಹಸೌಂದರ್ಯದ ಅಮಲು.
ಎಲ್ಲಾರು ಮಾಡುವುದು ಹೊಟ್ಟೆಗಾಗಿ -ಗೇಣು ಬಟ್ಟೆಗಾಗಿ. ಎಣಿಸಿದರೆ ವಿಚಿತ್ರವೆನಿಸುವುದಿಲ್ಲವೇ? ಹೊಟ್ಟೆಯಂತೆ, ಅದಕ್ಕೊಂದು ಅಷ್ಟು ಪಕ್ಕ ಹಸಿವಾಗುವುದಂತೆ, ಆ ಹಸಿವು ನೀಗಲಿಕ್ಕೊಂದು ಬಾಯಿಯಂತೆ, ಅದರಲ್ಲಿ ಅಷ್ಟೆಲ್ಲ ಕಷ್ಟಪಟ್ಟು ತಿನ್ನುವುದಂತೆ, ಅದಕ್ಕೋಸ್ಕರ ಷಡ್ರಸಾನ್ನಗಳಂತೆ. ಗಂಟಲಿನಿಂದ ಒಳಹೋದ ಮೇಲೆ ರುಚಿಯೂ ಇಲ್ಲ ಶುಚಿಯೂ ಇಲ್ಲ. ಆದರೂ ಬಾಯಿ ರುಚಿಯರಸ ಕಡಲಲ್ಲೇ ಹೊಟ್ಟೆಲೋಕ ತಿರುಗುತ್ತಿದೆಯಲ್ಲ? ಅಡುಗೆ ಮಾಡಲು ಗಂಟೆ, ತಿನ್ನಲು ನಿಮಿಷ. “ಎಂಟುಗೇಣಿನ ದೇಹ ರೋಮಗಳೆಂಟು ಕೋಟಿಯ ಕೀಲ್ಗಳರುವತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು. ನೆಂಟ ನೀನಿರ್ದಗಲಿದಡೆ ಒಣ ಹೆಂಟೆಯಲಿ ಮುಚ್ಚುವರು ದೇಹದಲುಂಟೆ ಫಲ ಪುರುಷಾರ್ಥ?’ ಎನ್ನುತ್ತಾರೆ ಕನಕದಾಸರು. ಆಸೆಯಿಂದ ಪರಮದುಃಖ, ನಿರಾಸೆಯಿಂದ ಪರಮಸುಖ.
ಬೆಂಕಿಯಿಲ್ಲದೆ ನೀರಿಲ್ಲದೆ ಅಡುಗೆ ಮಾಡುತ್ತಿದ್ದ ನಳನ ಹೆಸರನ್ನೇ ಎತ್ತರಕ್ಕೇರಿಸಿ ನಳಪಾಕ ಎಂದು ಹಿಗ್ಗುತ್ತೇವಲ್ಲ? ಜಂಗಮವಾದ ಬೇಟೆಯ ಜೀವನವನ್ನು ಬಿಟ್ಟು ಬೆಂಕಿ ಆರದಂತೆ ಕಾಯುತ್ತ, ಉತ್ತು ಬಿತ್ತು, ಬೇಳೆ ಬೇಯಲಿಟ್ಟು ಒಲೆಯ ಮುಂದೆ ಒಲವಿನಲಿ ಸಂತತಿಯನ್ನು ಕಾಯುತ್ತ ಜಡಸ್ಥಾವರವಾಗಿಬಿಟ್ಟ ಬಾಗು ಬೆನ್ನಿನ ಮೂಳೆ ಚೀಲದಂತಹ ಹೆಣ್ಣು ಜೀವಗಳ ಪಾಡು ನೆನೆದರೆ ಅಯ್ಯೋ ಅನಿಸುವುದಿಲ್ಲವೇ? ಹಪ್ಪಳ ಸೆಂಡಿಗೆಯಂತೆ ಒಣಗುತ್ತ ಗತ ಭೂತದ ಗುಸುಗುಸು ಪಿಸುಪಿಸು ಕತೆಗಳನ್ನು ವರ್ತಮಾನದ ಉಪ್ಪಿನಕಾಯಿಯೊಂದಿಗೆ ಜಾಡಿಗಳಲ್ಲಿ ತುಂಬಿಟ್ಟು ಉಪ್ಪು ಕಡಲೊಳಗೆ ಸೇರಿಹೋಗುತ್ತವೆ ಈ ಉಪ್ಪಿನಮೂಟೆಗಳು ಕೂಡುಕುಟುಂಬ. ಗಂಡಂದಿರೋ ಸಂತಾನಬ್ರಹ್ಮರು. ಕೈಗೊಂದು ಕಾಲಿಗೊಂದು ಸೊಂಟಕ್ಕೊಂದು ಬೆನ್ನಿಗೊಂದು ಎಂದು ಹತ್ತು-ಹನ್ನೆರಡು ಮಕ್ಕಳು. ಕೆರೆಯಲ್ಲಿ ಅವುಗಳ ಮೈತಿಕ್ಕಿ ತೊಳೆದು, ಬಟ್ಟೆಒಗೆದು, ಮಸಾಲೆ ಹುರಿದು ರುಬ್ಬುಕಲ್ಲಲ್ಲಿ ರುಬ್ಬಿ ಅಷ್ಟೂ ಮಕ್ಕಳಿಗೆ ಗಂಜಿ ಬೇಯಿಸಿ ಬಡಿಸಿ, ಕಸಮುಸುರೆ, ಅದರ ನಡುವೆ ಹತ್ತು ದನ, ಎತ್ತು ಎಮ್ಮೆ ಜತೆಗೆ ಮುದಿಜೀವಗಳ ಸೇವೆ. ತಲೆಬಾಚಲೂ ಪುರುಸೋತಿಲ್ಲ, ಈಗಿನಂತೆ ಮೇಕಪ್ಪೇ? “ಬಡವರ ಮಕ್ಕಳಿಗೆ ಕೂಳೇ ಕಜ್ಜಾಯವಾಗಿತ್ತು’. ಗಂಜಿಗೊಂದು ಉಪ್ಪು ಮೆಣಸು. ಎಮ್ಮೆ ಕಲಗಚ್ಚು ಕುಡಿದ ಹಾಗೆ ಬಟ್ಟಲುತುಂಬ ಗಂಜಿ ತಿಳಿನೀರು ಅದರಲ್ಲಿ ಅಲಲ್ಲಿ ಅಗುಳು ಅನ್ನ. “ಮನೆಗೊಬ್ಬಳು ಅಜ್ಜಿ ಮಾಡಿದಳೊಂದು ಬಜ್ಜಿ’ ಎಂಬಂತೆ ಮಗುವೋ ಬಸುರಿಯೋ ಬಾಣಂತಿಯೋ ನೆಪವಾಗಿ ಚಪ್ಪೆಗಟ್ಟಿದ ಬೋಡು ಬಾಯಿಗೆ ಮನೆಯಲ್ಲಿ ಏನಾದರೊಂದು ಬಜ್ಜಿ ತಪ್ಪುತ್ತಿರಲಿಲ್ಲ ಹಿಂದೆ. ಈಗ ಅಂತಹ ಕಷ್ಟ ಎಲ್ಲುಂಟು? ಚಿಕ್ಕ ಸಂಸಾರ. “ಅವನಿಗವಳು ಬಂಗಾರ ಅವಳಿಗವನು ಬಂಗಾರ’. ಅಡುಗೆಮನೆ ಸೇರಿದರೆ ಅಬ್ಬಬ್ಟಾ ಎಂದರೆ ಅರ್ಧ ಗಂಟೆ ಸಾಕು, ಯಂತ್ರಯುಗ. ಗ್ಯಾಸೊಲೆಯಲ್ಲಿ ಕುಳಿತ ಕುಕ್ಕರ್ ಕಂಡೆಕ್ಟರಿನಂತೆ ಸಿಳ್ಳೆಹೊಡೆದು ಎಷ್ಟು ದೂರದಲ್ಲಿದ್ದರೂ ಕೂಗಿ ಕರೆಯುತ್ತದೆ. ಗಜಬಜ ಮಿಕ್ಸಿಯಲ್ಲಿ ತಿರುಗಿಸಿ ಮಸಾಲೆ ಹಾಕಿದರಾಯ್ತು, ರುಚಿಯಾ ಶುಚಿಯಾ? ಒಲೆಯಲ್ಲಿ ಮಣ್ಣಿನ ಮಡಕೆಯಲ್ಲಿ ಬೇಯುತ್ತಿದ್ದ ಕುಚ್ಚಲಕ್ಕಿ ಗಂಜಿ, ಸಿಪ್ಪೆ ತಿರುಳುಗಳ ತಂಬುಳಿ, ಮಜ್ಜಿಗೆಹುಳಿ, ಹುರುಳಿ ಸಾರು, ನೆಕ್ಕರೆಚಟ್ನಿ, ಹರಿವೆ ಸಾಸಿವೆ, ಬದನೆ ಪಲ್ಯ… ದಿವ್ಯಾನ್ನ ದೇವಾನ್ನದ ಪರಿಮಳ ರುಚಿ ಎಣಿಸಿದರೆ ಬಾಯಲ್ಲಿ ನೀರೂರುತ್ತದೆಯಲ್ಲ? ತಿಂದು ಕೈತೊಳೆದರೂ ಪರಿಮಳ ಹೋಗದು. ತಿಂದವರು ಕೈಕಿಸೆಯಲ್ಲಿಟ್ಟುಕೊಳ್ಳಬೇಕು. ಟೇಸ್ಟ್ ಮೇಕರಿನಲ್ಲೇ ಅದ್ದಿದ ರಸಪಾಕಗಳ ಈ ಕಾಲದ ತಿಂಡಿ ತಿನಿಸುಗಳಲ್ಲಿ ತೇಲಿ ಮುಳುಗಿದರೂ ಕೈಗೆ ಹತ್ತಿದ ಅಂದಿನ ಆ ಪರಿಮಳ ಎಂದಿಗೂ ಹೋಗದು.
ಬಲೀಂದ್ರನು ಭೂಮಿಯನ್ನು ಆಳುತ್ತಿದ್ದಾಗ ದಿನಾ ಹಬ್ಬವಂತೆ. ದಿನಾ ಸುಖವಿದ್ದರೆ ದೇವರನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರ? ಕಷ್ಟ ಬಂದಾಗ ಮಾತ್ರ ಓ ದೇವರೇ! ಸಂಕಟ ಬಂದಾಗ ವೆಂಕಟರಮಣ. ಅದಕ್ಕೇ ವಾಮನನ ಅವತಾರವಾಯಿತಂತೆ. ಅದಕ್ಕೇ ಹಳ್ಳಿ ದೇವರಿಗೆ ಕೊಳ್ಳಿ ದೀಪ, ದಿಳ್ಳಿ ದೇವರಿಗೆ ಬೆಳ್ಳಿದೀಪ. ಉಳ್ಳವರ ಮನೆಯಲ್ಲಿ ನಿತ್ಯ ರಸಾಯನ ನೈವೇದ್ಯ, ಇಲ್ಲದವರ ಮನೆಯಲ್ಲಿ ಗಂಜಿಗೂ ತತ್ವಾರ. ವೈದ್ಯೆಯಾಗಲೀ, ಪೈಲೆಟ್ ಆಗಲಿ, ವಿಜ್ಞಾನಿಯೇ ಆಗಲಿ, ಹೆಣ್ಣಿಗೆ ಅಡುಗೆ ಮನೆ ತಪ್ಪುವುದೇ ಇಲ್ಲವಲ್ಲ.
ಕಾತ್ಯಾಯಿನಿ ಕುಂಜಿಬೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.