ಸಲ್ಮಾನ್ ಖಾನ್‌ಗೆ ಕಾರಾಗೃಹ ವಾಸದ ಶಿಕ್ಷೆ: ನಂಬಿಕೆ ಉಳಿಸಿದ ತೀರ್ಪು
Team Udayavani, Apr 7, 2018, 6:00 AM IST
ಜೋಧಪುರದ ಕಾಡಿನಲ್ಲಿ ಬಿಷ್ಣೋಯ್ ಸಮುದಾಯದವರು ಅಕ್ಕರೆ ಮತ್ತು ಭಕ್ತಿಯಿಂದ ಪೂಜಿಸುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ಗೆ 5 ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸುವ ಮೂಲಕ ಇಲ್ಲಿನ ನ್ಯಾಯಾಲಯ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದನ್ನು ಮತ್ತೂಮ್ಮೆ ನಿರೂಪಿಸಿದೆ. ಘಟನೆ ಸಂಭವಿಸಿದ ಇಪ್ಪತ್ತು ವರ್ಷಗಳ ಬಳಿಕ ತೀರ್ಪು ಬಂದಿದೆ. ವಿಳಂಬ ನ್ಯಾಯದಾನದಿಂದ ನ್ಯಾಯ ನಿರಾಕರಣೆಯಾಗುತ್ತದೆ ಎಂಬ ಮಾತು ನ್ಯಾಯಾಂಗದಲ್ಲಿ ಚಾಲ್ತಿಯಲ್ಲಿದೆ. ಸಲ್ಮಾನ್ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಗಿದ್ದರೂ ನ್ಯಾಯ ನಿರಾಕರಣೆಯಾಗಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದು.
ಇದು 1998ರಲ್ಲಿ ನಡೆದ ಪ್ರಕರಣ. ಚಿತ್ರೀಕರಣಕ್ಕಾಗಿ ಜೋಧಪುರಕ್ಕೆ ಹೋದ ಸಂದರ್ಭದಲ್ಲಿ ಸಹ ನಟ-ನಟಿಯರೊಂದಿಗೆ ಅಲ್ಲಿನ ದಟ್ಟ ಕಾಡಿನಲ್ಲಿ ಎರಡು ದಿನ ಮೋಜಿನ ಸವಾರಿ ಮಾಡಿದ ಸಂದರ್ಭದಲ್ಲಿ ಕೆಲವು ಮೃಗಗಳನ್ನು ಬೇಟೆಯಾಡಿದ್ದಾರೆ. ಈ ಪೈಕಿ ಎರಡು ಪ್ರಕರಣಗಳ ವಿಚಾರಣೆ ಸುದೀರ್ಘ ಕಾಲ ನಡೆದು ಹೈಕೋರ್ಟಿನಲ್ಲಿ ಸಲ್ಮಾನ್ ನಿರ್ದೋಷಿಯಾಗಿ ಹೊರಬಂದಿದ್ದಾರೆ. ಆದರೆ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣ ಮಾತ್ರ ಈಗ ಅವರಿಗೆ ಜೈಲಿನ ಹಾದಿ ತೋರಿಸಿದೆ.
ಕಾನೂನು ಜತೆಗೆ ಸಲ್ಮಾನ್ ತಿಕ್ಕಾಟ ಇದೇ ಮೊದಲೇನಲ್ಲ. 2002ರಲ್ಲಿ ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಪ್ರಕರಣ ದೊಡ್ಡ ಸುದ್ದಿಯಾ ಗಿತ್ತು. 12 ವರ್ಷ ವಿಚಾರಣೆ ನಡೆದು ಅಂತಿಮವಾಗಿ ಈ ಪ್ರಕರಣದಲ್ಲಿ ಸಲ್ಮಾನ್ ನಿರ್ದೋಷಿ ಎಂದು ಸಾಬೀತಾ ಗಿದ್ದಾರೆ. ಪ್ರೇಯಸಿಯ ಮನೆಗೆ ನಡುರಾತ್ರಿ ಹೋಗಿ ಗಲಾಟೆ ಮಾಡಿದ, ನಟನಿಗೆ ಹಲ್ಲೆ ಮಾಡಿದಂತಹ ಪ್ರಕರಣ ಗಳು ಸಲ್ಮಾನ್ ವಿರುದ್ಧ ದಾಖಲಾಗಿ ದ್ದವು. ಹೀಗೆ ನಿಜ ಜೀವನದಲ್ಲಿ ವಿಲನ್ ತರಹ ವರ್ತಿಸುತ್ತಿದ್ದ ಸಲ್ಮಾನ್ ತೆರೆಯ ಮೇಲೆ ಮಾತ್ರ ಸಕಲ ಕಲಾಗುಣ ಸಂಪನ್ನನಾಗಿ ಕಂಗೊಳಿಸುತ್ತಿದ್ದರು. ಜತೆಗೆ ಟ್ರಸ್ಟ್ ಹುಟ್ಟು ಹಾಕಿ ಒಂದಷ್ಟು ದಾನಧರ್ಮಗಳನ್ನು ಮಾಡುವ ಮೂಲಕ ಉತ್ತಮ ಇಮೇಜ್ ಸಂಪಾದಿಸಿ ಕೊಂಡಿದ್ದಾರೆ. ಆದರೆ ಇಷ್ಟರಿಂದಲೇ ಸಲ್ಮಾನ್ ಮಾಡಿದ ಕೃತ್ಯ ಕ್ಷಮ್ಯವಾಗು ವುದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿರುವುದು ಸರಿಯಾಗಿದೆ.
ಆದರೆ ಸಲ್ಮಾನ್ ತೀರ್ಪಿಗೆ ಬಾಲಿವುಡ್‌ನ ಕೆಲವು ಮಂದಿನ ನೀಡಿರುವ ಪ್ರತಿಕ್ರಿಯೆ ಮಾತ್ರ ಅಘಾತಕಾರಿಯಾದುದು ಮಾತ್ರವಲ್ಲದೆ ಕಳವಳಕಾರಿಯೂ ಹೌದು.ಸಲ್ಮಾನ್ ಮಾಡಿರುವ ಸಮಾಜ ಸೇವೆ ಮತ್ತು ತೆರೆಯ ಮೇಲಿನ ಅವರ ಹೀರೊಯಿಸಂ ನೋಡಿಕೊಂಡು ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಬೇಕಿತ್ತು ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ ಕೆಲವು ಸೆಲೆಬ್ರಿಟಿಗಳು. ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಸೆಲೆಬ್ರಿಟಿಯೊಬ್ಬರು ಸಲ್ಮಾನ್ ಪರ ಮಂಡಿಸಿದ ವಾದವಂತೂ ಹಾಸ್ಯಾಸ್ಪದವಾಗಿತ್ತು. ಘಟನೆ ಸಂಭವಿಸಿ 20 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ನಟ ಬಹಳಷ್ಟು ಸುಧಾರಿಸಿದ್ದಾರೆ ಹಾಗೂ ಧಾರಾಳ ದಾನಧರ್ಮಗಳನ್ನು ಮಾಡಿದ್ದಾರೆ. ಅವರೀಗ ಉತ್ತಮ ವ್ಯಕ್ತಿಯಾಗಿರುವುದರಿಂದ ನ್ಯಾಯಾಲಯ ಖುಲಾಸೆಗೊಳಿಸಬೇಕಿತ್ತು ಎಂದು ಓರ್ವ ಪ್ಯಾನಲಿಸ್ಟ್ ಹೇಳಿದರೆ ಇನ್ನೊಬ್ಬರಂತೂ ತೀರ್ಪಿಗೂ ಸಲ್ಮಾನ್ ಧರ್ಮಕ್ಕೂ ತಳಕು ಹಾಕುವಷ್ಟು ಕೀಳುಮಟ್ಟಕ್ಕಿಳಿದರು.
ಸಲ್ಮಾನ್ ಮುಸ್ಲಿಂ ಎಂಬ ಕಾರಣಕ್ಕೆ ನ್ಯಾಯಾಲಯ ಅವರಿಗೆ ಕಠಿನ ಶಿಕ್ಷೆ ವಿಧಿಸಿದೆ ಎನ್ನುವುದು ಅವರ ವಾದವಾಗಿತ್ತು. ಇನ್ನೊಬ್ಬರು ಸೆಲೆಬ್ರಿಟಿ ಎಂಬ ಕಾರಣಕ್ಕೆ ನ್ಯಾಯಾಲಯ ಸಲ್ಮಾನ್ ವಿರುದ್ಧ ಕಠಿನ ನಿಲುವು ತಾಳಿತು ಎಂಬ ವಿತಂಡ ವಾದ ಮಂಡಿಸಿದರು. ಹಲವು ಬಾಲಿವುಡ್ ಗಣ್ಯರು ಕೂಡಾ ಸಲ್ಮಾನ್‌ಗೆ ಅನುಕಂಪ ಸೂಚಿಸಿ ಟ್ವೀಟ್ ಮಾಡಿದರು. ಕೆಲವರಂತೂ ಇಡೀ ಹಿಂದಿ ಚಿತ್ರರಂಗ ಸಲ್ಮಾನ್ ಹೆಗಲ ಮೇಲಿದೆ ಎಂಬಂತೆ ಪ್ರಲಾಪಿಸಿದರು. ನಟನನ್ನು ನಂಬಿಕೊಂಡು ನಿರ್ಮಾಪಕರು 500 ಕೋ.ರೂ. ಹೂಡಿಕೆ ಮಾಡಿದ್ದಾರೆ, ಆತ ಜೈಲು ಪಾಲಾದರೆ ಈ ನಿರ್ಮಾಪಕರೆಲ್ಲ ದಿವಾಳಿಯಾಗುತ್ತಾರೆ ಹಾಗೂ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ ಎನ್ನುವುದು ಅವರ ಕಳವಳವಾಗಿತ್ತು. ನಟನಿಗೆ ಇಷ್ಟೆಲ್ಲ ಬೆಂಬಲ ನೀಡಿದವರಿಗೆ ಬೇಟೆಯಲ್ಲಿ ಸತ್ತ ಮುಗ್ಧ ಮೃಗಗಳ ಕುರಿತಾಗಲಿ, ಅವುಗಳನ್ನು ಮಕ್ಕಳಿಗಿಂತಲೂ ಹೆಚ್ಚು ಮಮತೆಯಿಂದ ನೋಡಿಕೊಳ್ಳುವ ಬಿಷ್ಣೋಯ್ ಸಮುದಾಯದವರ ಮನಸಿಗಾದ ನೋವು ಎಷ್ಟು ಎಂದು ಅರಿವಿದೆಯೇ? ಶ್ರೀಮಂತ ಅಥವಾ ಸೆಲೆಬ್ರಿಟಿ ಆದ ಮಾತ್ರಕ್ಕೆ ಕಾನೂನು ಮೃದುವಾಗಿ ವರ್ತಿಸಬೇಕೆ? ತೆರೆಯ ಮೇಲಿನ ಹೀರೊಯಿಸಂ ಅಥವಾ ಸಮಾಜ ಸೇವೆಯನ್ನು ನೋಡಿಕೊಂಡು ಆರೋಪಿಯನ್ನು ದೋಷಮುಕ್ತಿಗೊಳಿಸಬೇಕೆಂದು ಹೇಳುವುದಾದರೆ ಎಲ್ಲ ಆರೋಪಿಗಳು ಇದೇ ಹಾದಿಯನ್ನು ಅನುಸರಿಸುವ ಅಪಾಯವಿದೆ.
ಸೆಲೆಬ್ರಿಟಿಗಳು ಕಾನೂನು ಜತೆಗೆ ಸಂಘರ್ಷ ನಡೆಸುವುದು ಹೊಸದೇನಲ್ಲ. ಈ ಹಿಂದೆ ನಟ ಸಂಜಯ್ ದತ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅವರು ಕೂಡಾ ಶಿಕ್ಷೆಯಿಂದ ಪಾರಾಗಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅಂತಿಮವಾಗಿ ಕಂಬಿ ಎಣಿಸಬೇಕಾಯಿತು. ಇಂತಹ ಕೆಲವು ತೀರ್ಪುಗಳಿಂದ ಇನ್ನೂ ನ್ಯಾಯಾಂಗದ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.