ನದಿ ತಟದಲ್ಲಿದ್ದರೂ ತಪ್ಪಿಲ್ಲ ನೀರಿಗೆ ಪರದಾಟ
Team Udayavani, Apr 7, 2018, 3:59 PM IST
ಹರಿಹರ: ಜೀವನದಿ ತುಂಗಭದ್ರಾ ತಟದಲ್ಲಿರುವ ಹರಿಹರ ಹಿಂದಿನಿಂದಲೂ ರಾಜಕೀಯ ಜಿದ್ದಾಜಿದ್ದಿನ ಮತಕ್ಷೇತ್ರ. ಗಾಂಜೀ ವೀರಪ್ಪ, ಎಚ್.ಸಿ. ಸಿದ್ದವೀರಪ್ಪ, ಕೊಂಡಜ್ಜಿ ಬಸಪ್ಪ, ಬಿ.ಜಿ. ಕೊಟ್ರಪ್ಪ, ಡಿ. ಬಸವನಗೌಡ್ರು, ಡಾ| ವೈ. ನಾಗಪ್ಪ, ಎಚ್. ಶಿವಪ್ಪ, ಎಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್…. ಹೀಗೆ ಅನೇಕರ ಜಿದ್ದಾಜಿದ್ದಿನ ರಾಜಕಾರಣದ ಪರಂಪರೆ ಈಗಲೂ ಮುಂದುವರೆದಿದೆ.
1952ರಿಂದ 1972ರ ವರೆಗೆ ಎಚ್.ಸಿ.ಸಿದ್ದವೀರಪ್ಪ ಹಾಗೂ ಗಾಂಜೀ ವೀರಪ್ಪನವರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿಯ ಕ್ಷೇತ್ರವಾಗಿತ್ತು. 1989ರ ನಂತರ ಎರಡು ದಶಕಗಳ ಕಾಲ ಎಚ್.ಶಿವಪ್ಪ ಹಾಗೂ ಡಾ| ವೈ. ನಾಗಪ್ಪನವರ ಮಧ್ಯೆ ಜಿದ್ದಾಜಿದ್ದು ನಡೆಯಿತು.
ಸ್ವಾತಂತ್ರ್ಯ ನಂತರ ಹಲವು ದಶಕಗಳ ಕಾಲ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿ ಸಿರುವುದು ಇತಿಹಾಸ. ಆದರೆ, ಹರಿಹರ ಇದಕ್ಕೆ ಅಪವಾದ. 1952ರ ಮೊದಲ ವಿಧಾನಸಭಾ ಚುನಾವಣೆಯಿಂದ ಇದುವರೆಗಿನ 15 ಚುನಾವಣೆಗಳಲ್ಲೂ ಪ್ರಬಲ ಪೈಪೋಟಿಯಿಂದಾಗಿ ಕಾಂಗ್ರೆಸ್ 8 ಬಾರಿ ಗೆಲುವು ಸಾ ಧಿಸಿದ್ದರೆ, ಕಾಂಗ್ರೆಸ್ಸೇತರ ಅಭ್ಯರ್ಥಿಗಳು 7 ಸಲ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಸತತ ಎರಡು, ನಂತರ ಮತ್ತೂಂದು ಅವಧಿ ಸೇರಿ 3 ಬಾರಿ ಆಯ್ಕೆಯಾದ ಎಚ್. ಸಿದ್ದವೀರಪ್ಪ ಹಾಗೂ ಡಾ| ವೈ.ನಾಗಪ್ಪ ಮತ್ತು 2 ಬಾರಿ ಆಯ್ಕೆಯಾಗಿದ್ದ ಎಚ್.ಶಿವಪ್ಪ ಸೇರಿ ಕ್ಷೇತ್ರದ ಮೂವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹರಿಹರ ಕ್ಷೇತ್ರದಲ್ಲಿ ಮುಖಂಡರ ವಾಗ್ಬಾಣದ ಸಮರ ರಾಜಕಾರಣಕ್ಕಿಂತಲೂ ಹೆಚ್ಚು ಮೊನಚು. ಚುನಾವಣೆಯಲ್ಲಿ ಮಾತ್ರವಲ್ಲ, ಇತರೆ ಎಲ್ಲ ಸಂದರ್ಭದಲ್ಲಿ ಮಾತಿನ ಸಮರ ನಡೆದೇ ನಡೆಯುತ್ತದೆ. ತುಂಗಭದ್ರಾ ನದಿಯಲ್ಲಿ ನೀರು ಹರಿದಂತೆ ಇಲ್ಲಿ ಕ್ಷೇತ್ರದುದ್ದಕ್ಕೂ ರಾಜಕೀಯದ ಝರಿ ಹರಿಯುತ್ತಲೇ ಇರುತ್ತದೆ.
ದಲಿತ ಚಳವಳಿಗೆ ಹೊಸ ಆಯಾಮವನ್ನೇ ನೀಡಿದ ಪ್ರೊ| ಬಿ. ಕೃಷ್ಣಪ್ಪ, ಬೂಸಾ ಸಾಹಿತ್ಯ… ಎಂಬ ಪದ ಹೇಳುವ ಮೂಲಕ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ, ಕ್ರಾಂತಿಕಾರಿ ನಿಲುವುಗಳ ಗಮನ ಸೆಳೆದ ಬಿ. ಬಸವಲಿಂಗಪ್ಪ, ಬಿಜೆಪಿ ಮುಖಂಡ ಎಸ್. ಸುರೇಶ್‌ಕುಮಾರ್ ಇದೇ ಹರಿಹರದವರು.
ಜಿಲ್ಲಾ ಕೇಂದ್ರ ದಾವಣಗೆರೆಯಿಂದ 17 ಕಿಲೋ ಮೀಟರ್ ದೂರದಲ್ಲಿರುವ ಹರಿಹರ ನೀರಾವರಿ ಪ್ರದೇಶ ಹೊಂದಿದೆ. ಭತ್ತ ಮುಖ್ಯ ಬೆಳೆಯಾದರೂ ಈಚೆಗೆ ನೀರಿನ ಕೊರತೆಯಿಂದ ಮಕ್ಕೆಜೋಳದ್ದೆ ಮೇಲುಗೆ„. ಶೇ. 80ರಷ್ಟು ನೀರಾವರಿ ಜಮೀನಿರುವ ತಾಲೂಕು ಎಂದು ದಾಖಲೆಯಲ್ಲಿದ್ದರೂ ಮಳೆಗಾಲದ ಬೆಳೆಗೂ ಭದ್ರಾ ಕಾಲುವೆಗಳಲ್ಲಿ ನೀರು ಹರಿಯಲ್ಲ ಎಂಬುದು ವಾಸ್ತವ.
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ… ಎಂಬಂತೆ ತಾಲೂಕಿನುದ್ದಕ್ಕೂ ತುಂಗಭಧ್ರಾ ನದಿ ಹರಿದರೂ ಕುಡಿವ ನೀರಿಗೆ ಜನರ ಪರದಾಟ ತಪ್ಪಿಲ್ಲ. ಇದುವರೆಗೆ ಕ್ಷೇತ್ರ ಪ್ರತಿನಿಧಿಸಿರುವ ನಾಯಕರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡರೂ ಕ್ಷೇತ್ರಕ್ಕೆ ನಿರೀಕ್ಷಿತ ಕೊಡುಗೆ ನೀಡಿಲ್ಲ ಎಂಬುದು ಮತದಾರರ ಅನಿಸಿಕೆ.
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ಖಚಿತವಾಗದೆ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಟಿಕೆಟ್‌ಗಾಗಿ ತೀವ್ರ ಪ್ರಯತ್ನ ಪಡುತ್ತಿರುವ ಆಕಾಂಕ್ಷಿತರಿಗೆ ಪ್ರಚಾರ ಕಾರ್ಯ, ಸಂಘಟನೆಯಲ್ಲಿ ತೊಡಗಲಾಗುತ್ತಿಲ್ಲ. ಆದರೂ ಜನಸಂಪರ್ಕದಲ್ಲಿದ್ದಾರೆ. ಶಾಸಕ ಶಿವಶಂಕರ್ ವರ್ಷದಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಘೋಷಣೆ ನಂತರ ಕ್ಷೇತ್ರದಲ್ಲಿ ಪ್ರಚಾರ ರಂಗೇರಲಿದೆ.
ಕ್ಷೇತ್ರದ ಬೆಸ್ಟ್ ಏನು?
ಕೆಎಚ್‌ಬಿ ಕಾಲೋನಿಯ 6 ಎಕರೆಯಲ್ಲಿ ಸುಸಜ್ಜಿತ ನ್ಯಾಯಾಲಯ ಸಂಕೀರ್ಣ ನಿರ್ಮಾಣ, ಹೊರ ವಲಯದಲ್ಲಿ ರೈಲ್ವೆ ಮಾರ್ಗಕ್ಕೆ ಸಮಾನಾಂತರ ರಸ್ತೆ ನಿರ್ಮಾಣದ ಮೂಲಕ ಹರಿಹರ-ದಾವಣಗೆರೆ ಮಾರ್ಗದ ಎರಡು ರೈಲ್ವೆ ಗೇಟು ಸಮಸ್ಯೆಗೆ ಮುಕ್ತಿ ದೊರಕಿಸಿರುವುದು. ಶಿಥಿಲಗೊಂಡ ಬ್ರಿಟಿಷರ ಕಾಲದ ತುಂಗಭದ್ರಾ ನದಿಯ ಹಳೆ ಸೇತುವೆ ಪಕ್ಕದಲ್ಲೆ ನೂತನ ಸೇತುವೆ ನಿರ್ಮಿಸುತ್ತಿರುವುದು. ನಗರದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ ರಸ್ತೆ ಅಗಲೀಕರಿಸಿ, ಸಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುತ್ತಿರುವುದು.
ಕ್ಷೇತ್ರದ ದೊಡ್ಡ ಸಮಸ್ಯೆ?
ಕೊನೆ ಭಾಗವಾಗಿರುವ ತಾಲೂಕಿನ ಭದ್ರಾ ಕಾಲುವೆಗಳಿಗೆ ನೀರು ಹರಿಸುವ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳದಿರುವುದು. ಬೇಸಿಗೆಯಲ್ಲೂ ಹರಿಹರ ನಗರಕ್ಕೆ ನೀರು ಪೂರೈಸುವ ಅಗಸನಕಟ್ಟೆ ಕೆರೆ ಅಭಿವೃದ್ಧಿ ಪಡಿಸದಿರುವುದು. ಮೈಸೂರು ಕಿರ್ಲೋಸ್ಕರ್ ಮುಚ್ಚಿ ಅಧೋಗತಿಯಾಗಿರುವ ಹರಿಹರದ ಆರ್ಥಿಕ ಚೇತರಿಕೆಗೆ ಪರ್ಯಾಯ ಕೈಗಾರಿಕೆ ಸ್ಥಾಪಿಸದಿರುವುದು. ಸೂರಿಲ್ಲದ ಬಡ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸದಿರುವುದು.
ಶಾಸಕರು ಏನಂತಾರೆ?
20 ಕೋಟಿ ವೆಚ್ಚದಲ್ಲಿ ತಾಲೂಕಿನ ಗ್ರಾಮೀಣ ಶಾಲೆಗಳ ಅಭಿವೃದ್ಧಿ, 12 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ನವೀಕರಣ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ 40 ಕೋಟಿ ಅನುದಾನ ತಂದಿದ್ದೇನೆ. ಬಹುತೇಕ ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ, ವಿವಿಧ ಮುಖ್ಯ ರಸ್ತೆಗಳು, ಹಳ್ಳಿ-ಹಳ್ಳಿ ಸಂಪರ್ಕಿಸುವ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೊಂಡಜ್ಜಿ ಕೆರೆ ತುಂಬಿಸಿ 12 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ, ನಗರಕ್ಕೆ ನೀರು ಪೂರೈಸುವ ಕವಲೆತ್ತು ಜಾಕ್‌ವೆಲ್ ಹಾಗೂ ನಂದಿಗಾವಿ ಬಳಿ ತುಂಗಭದ್ರಾ ನದಿಗೆ ನೀರು ಪೂರೈಕೆ ಯೋಜನೆಗಳ ಡಿಪಿಆರ್ ಮಾಡಿಸಿದ್ದೇನೆ. ವಿಪಕ್ಷದಲ್ಲಿದ್ದರೂ ಅಧಿಕ ಅನುದಾನ ತಂದಿದ್ದೇನೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಮತ್ತೂಮ್ಮೆ ಅವಕಾಶ ಸಿಗುವ ವಿಶ್ವಾಸವಿದ್ದು, ಹರಿಹರವನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡುವ ಗುರಿ ಹೊಂದಿದ್ದೇನೆ.
ಎಚ್.ಎಸ್. ಶಿವಶಂಕರ್
ಕ್ಷೇತ್ರದ ಮಹಿಮೆ
ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಹರಿಹರದ ಹರಿಹರೇಶ್ವರನ ದೇವಸ್ಥಾನ ಅತ್ಯದ್ಭುತ ಶಿಲ್ಪಕಲೆಗೆ ಪ್ರಸಿದ್ಧಿ. ಉಕ್ಕಡಗಾತ್ರಿ ಅಜ್ಜಯ್ಯ, ಮಲೇಬೆನ್ನೂರು ಸಮೀಪದ ಕುಮಾರನಹಳ್ಳಿ ರಂಗನಾಥಸ್ವಾಮಿ ದೇವಸ್ಥಾನ, ಮೂರನೇ ಮಂತ್ರಾಲಯ ಖ್ಯಾತಿಯ ರಾಘವೇಂದ್ರ ಮಠ, ಪಂಚಮಸಾಲಿ ಲಿಂಗಾಯತ, ನಾಯಕ (ವಾಲ್ಮೀಕಿ), ರೆಡ್ಡಿ (ವೇಮನ), ಕುರುಬ (ಬೆಳ್ಳೊಡಿ), ನೊಣಬ ಲಿಂಗಾಯತ (ನಂದಿಗುಡಿ ವೃಷಭಪುರಿ) ಸಮಾಜಗಳ ಗುರುಪೀಠಗಳ ತಪೋಭೂಮಿ, ಸೌಂದರ್ಯ ಸೊಬಗಿನ ಕೊಂಡಜ್ಜಿ ಕೆರೆ ಕ್ಷೇತ್ರದ ಐಕಾನ್.
ಆಡಳಿತ ಕಾಂಗ್ರೆಸ್ ಸರ್ಕಾರದ ಅಸಹಕಾರದಿಂದಾಗಿ ಹರಿಹರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಶಾಸಕರ ಕನಸು ಈಡೇರಿಲ್ಲ. ಶಾಸಕ ಶಿವಶಂಕರ್ ಅಧಿಕಾರಿಗಳ ಮೇಲೆ ಹಿಡಿತವಿಟ್ಟುಕೊಂಡು ಸರ್ಕಾರಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುವಂತೆ, ಅರ್ಹ ಫಲಾನುಭವಿಗಳು ಆಯ್ಕೆಗೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.
ಸುಧೀರ್ ಪಾಟೀಲ್
ಹಳೆ ಪಿಬಿ ರಸ್ತೆ ಅಭಿವೃದ್ಧಿ, ಸರ್ಕಾರಿ ಪಾಲಿಟೆಕ್ನಿಕ್, ಪದವಿ, ಜಿಟಿಟಿಸಿ ಕಾಲೇಜುಗಳಿಗೆ ಕಟ್ಟಡ, ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ. ನಗರದ ಹೃದಯ ಭಾಗದ ಹಳ್ಳಕ್ಕೆ ತಡೆ ಗೋಡೆ ಕಟ್ಟಿ ಮಾರುಕಟ್ಟೆ ನಿರ್ಮಿಸುವ ಯೋಜನೆ. ಬೇಸಿಗೆಯಲ್ಲಿ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಕ್ಷಿಪ್ರ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು ಶಾಸಕರ ಶ್ಲಾಘನೀಯ ಕಾರ್ಯ.
ಪಿ. ರುದ್ರಗೌಡ
ಕಳೆದ ನಾಲ್ಕು ವರ್ಷಗಳಿಂದ ಯುಜಿಡಿ ಕಾಮಗಾರಿ ಕುಂಟುತ್ತಾ ಸಾಗಿದೆ. ನಗರದ ರಸ್ತೆಗಳನ್ನೆಲ್ಲಾ ಅಗೆದು ಹಾಳು ಮಾಡಲಾಗಿದೆ. ಬೇಜವಾಬ್ದಾರಿ ಗುತ್ತಿಗೆದಾರರು, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸಕಾಲಕ್ಕೆ ಕಾಮಗಾರಿ ಮುಗಿಸಬೇಕೆಂಬ ಕಾಳಜಿ ಶಾಸಕರಿಗೂ ಇಲ್ಲದಿರುವುದು ದುರದೃಷ್ಟಕರ.
ಸುಧಾ ಪಿ. ಸಾಲಕಟ್ಟಿ
ಶಾಸಕರು ತಾಲೂಕಿಗೆ ಯಾವುದೆ ಹೊಸ ಯೋಜನೆ ತಂದಿಲ್ಲ, ಬಹುತೇಕ ಇಲಾಖೆಗಳು ಭ್ರಷ್ಟಮಯವಾಗಿವೆ. ಗ್ರಾಮದ ವಾರ್ಡ್ ಸಭೆಗಳಲ್ಲಿ ಅಂತಿಮಗೊಳ್ಳಬೇಕಾದ ಫಲಾನುಭವಿಗಳ ಆಯ್ಕೆಗೆ ಶಾಸಕರ ಒಪ್ಪಿಗೆ ಕಡ್ಡಾಯವಾಗಿರುವುದು ಸರಿಯಲ್ಲ. ನಗರದ ನಿರಾಶ್ರಿತರಿಂದ ಆಶ್ರಯ ಮನೆಗಾಗಿ ತಲಾ 50 ರೂಪಾಯಿ ಶುಲ್ಕದೊಂದಿಗೆ ಅರ್ಜಿ ಪಡೆದಿದ್ದು, ಈವರೆಗೂ ಏನೂ ಸಿಕ್ಕಿಲ್ಲ.
ಎಸ್. ಬೀರಪ್ಪ, ರಾಜನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.