ಕ್ಷೇತ್ರಕ್ಕೆ ಬರ ಶಾಪ ವಿಮೋಚನೆ ಯಾವಾಗ?
Team Udayavani, Apr 8, 2018, 10:38 AM IST
ಜಗಳೂರು: ಕಳೆದ ಒಂದು ಶತಮಾನದಲ್ಲಿ 60-70 ವರ್ಷಗಳ ಕಾಲ ಬರದ ಬೇಗೆಯಲ್ಲಿ ಬೆಂದಿರುವ ಜಗಳೂರು ಕ್ಷೇತ್ರ ಶಾಶ್ವತ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದೆ. ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಈ ಕ್ಷೇತ್ರದಲ್ಲಿ ಜಲಮೂಲ ಅಕ್ಷರಶಃ ಮರೀಚಿಕೆ. ಹಾಗಾಗಿಯೇ ಈ ಕ್ಷೇತ್ರದಲ್ಲಿ ಸದಾ ಕುಡಿಯುವ ನೀರಿಗೆ ಪರಿತಾಪ ತಪ್ಪದು.
ಬರ ಬಳುವಳಿಯಾಗಿ ಪಡೆದಿರುವ ಜಗಳೂರು ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿನ ಪೈಪೋಟಿಗೂ ಬರ ಇಲ್ಲ. ಮಾಜಿ ಸಚಿವ ಜಿ.ಎಚ್. ಅಶ್ವತ್‌ರೆಡ್ಡಿ ಮತ್ತು ಕೆ. ಬಸಪ್ಪ ನಡುವೆ ನಡೆದಿದ್ದ ರಾಜಕೀಯ ಸೆಣಸಾಟ ಈಗಲೂ ಈ ಕ್ಷೇತ್ರದಲ್ಲಿ ಹಚ್ಚ ಹಸಿರು. ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಶಾಶ್ವತ ಛಾಪು ಮೂಡಿಸಿರುವ ಇಮಾಂ ಸಾಹೇಬ್… ಇದೇ
ಜಗಳೂರಿನವರು. ಸಾಮಾನ್ಯ ಕ್ಷೇತ್ರವಾಗಿದ್ದ ಜಗಳೂರು ಕಾಂಗ್ರೆಸ್ ಭದ್ರಕೋಟೆ ಆಗಿತ್ತು. ಜಿ.ಎಚ್. ಅಶ್ವತ್ ರೆಡ್ಡಿಯವರ ಚುನಾವಣಾ ಟ್ರಿಕ್ ರಾಜ್ಯದ ಗಮನ ಸೆಳೆಯುತ್ತಿತ್ತು.
ಜಗಳೂರಿನಲ್ಲಿ ಪಕ್ಷಾಂತರ ಎಂಬುದು ಒಂದು ರೀತಿಯ ರಾಜಕೀಯ ಸಂಪ್ರದಾಯ ಎನ್ನುವುದಕ್ಕೆ ಸಾಲು ಸಾಲು ಉದಾಹರಣೆ ಇವೆ. ಶಾಶ್ವತ ಶಾಸಕರಂತಿದ್ದ ಕಾಂಗ್ರೆಸ್‌ನ ಜಿ.ಎಚ್. ಅಶ್ವತ್ ರೆಡ್ಡಿ ರಾಜಕೀಯ ಜೀವನ ಕೊನೆಯ ಘಟ್ಟದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡರು. ಕಾಂಗ್ರೆಸ್ ವಿರುದ್ಧ ಸದಾ ಸೆಣಸಾಡಿದ ಕೆ. ಬಸಪ್ಪ ಸಹ ಕೊನೆಗೆ ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದರು. ಹಾಲಿ ಶಾಸಕ ಎಚ್.ಪಿ. ರಾಜೇಶ್ ಸಹ ಬಿಜೆಪಿಯಿಂದಲೇ ಕಾಂಗ್ರೆಸ್ ಗೆ ಬಂದವರು. ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕಾಂಗ್ರೆಸ್‌ನಿಂದ ಕಮಲ ಪಾಳಯಕ್ಕೆ ಸೇರಿದವರು.
ರಾಜಕಾರಣಿಗಳು ಪಕ್ಷಾಂತರದ ಮೂಲಕ ತಮ್ಮ ರಾಜಕೀಯ ನೆಲೆ ಕಂಡುಕೊಂಡಿರುವ ಜಗಳೂರು ಕ್ಷೇತ್ರ ಅಭಿವೃದ್ಧಿಯ ನೆಲೆಯನ್ನೇ ಕಂಡಿಲ್ಲ. ಈಗಲೂ ಬಸ್ ದರ್ಶನ ಮಾಡದ ಕೆಲವಾರು ಗ್ರಾಮಗಳಿವೆ. ಶುದ್ಧ ಕುಡಿಯುವ ನೀರು… ಎಂಬುದು ಬೇಸಿಗೆಯಲ್ಲಿ ಇಲ್ಲಿನ ಜನಕ್ಕೆ ಅಮೃತ. ಕ್ಷೇತ್ರದ ಜನರನ್ನು ನೀರಿನ ಸಮಸ್ಯೆ ಅಷ್ಟು ಘೋರವಾಗಿ ಕಾಡುತ್ತದೆ. ಇನ್ನು ಸಿಗುವ ಅಲ್ಪ ಸ್ವಲ್ಪ ನೀರಲ್ಲಿ ಫ್ಲೋರೈಡ್ ಇರುತ್ತದೆ.
2008ರಲ್ಲಿ ಪುನರ್ ವಿಂಗಡನೆಯಿಂದಾಗಿ ಜಗಳೂರು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ. ಪುನರ್ ವಿಂಗಡಣೆಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಪಿ. ರಾಜೇಶ್ ಮತ್ತು ಕಾಂಗ್ರೆಸ್ಸಿನ ಎಸ್.ವಿ.ರಾಮಚಂದ್ರ ನಡುವಿನ ನೇರ ಸ್ಪರ್ಧೆಯಲ್ಲಿ ಮತದಾರರು ಕಾಂಗ್ರೆಸ್ ಗೆ ಮಣೆ ಹಾಕಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ವಿ. ರಾಮಚಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡು, 2010ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾದರು. ಆ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪ ರ್ಧಿಸಿ ಪರಾಭವಗೊಂಡ ಎಚ್.ಪಿ. ರಾಜೇಶ್, ನಂತರ ಕಾಂಗ್ರೆಸ್ ಸೇರ್ಪಡೆಯಾದರು.
2013ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಈ ಬಾರಿಯ ಚುನಾವಣೆಯಲ್ಲೂ ಎಚ್.ಪಿ.ರಾಜೇಶ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅವರ ನಡುವೆಯೇ ಹಣಾಹಣಿ ನಡೆಯುವ ಲಕ್ಷಣ ಇವೆ. ಎಚ್.ಪಿ. ರಾಜೇಶ್‌ಗೆ ಟಿಕೆಟ್ ಖಾಯಂ ಎನ್ನುತ್ತಿದ್ದರೂ ಪುಷ್ಪಾ ಲಕ್ಷ್ಮಣಸ್ವಾಮಿ ಮಹಿಳಾ ಕೋಟಾದಡಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. 2010ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೈ. ದೇವೇಂದ್ರಪ್ಪ ಈ ಬಾರಿ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಕಳೆದ ಮೂರು ಚುನಾವಣೆಯಲ್ಲಿ ಎಸ್.ವಿ. ರಾಮಚಂದ್ರ ಮತ್ತು ರಾಜೇಶ್ ನಡುವೆ ನೇರಾ ಹಣಾಹಣಿ ಏರ್ಪಡುತ್ತಿತ್ತು. ಈ ಬಾರಿ ಜೆಡಿಎಸ್ ಪ್ರಬಲ ಪೈಪೋಟಿ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕ್ಷೇತ್ರದ ಬೆಸ್ಟ್ ಏನು?
ಶಾಸಕ ಎಚ್.ಪಿ. ರಾಜೇಶ್ ತಾಲೂಕಿನ 46 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರು ಮಾಡಿಸುವಲ್ಲಿ
ಯಶಸ್ವಿಯಾಗಿದ್ದಾರೆ. ರಸ್ತೆಗಳ ಅಭಿವೃದ್ಧಿ, ಯಾತ್ರಿ ನಿವಾಸ, ಟ್ರೀ ಪಾರ್ಕ್ ಇತರೆ ಅಭಿವೃದ್ಧಿ ಕಾರ್ಯ ನಡೆದಿವೆ.
ಕ್ಷೇತ್ರದ ದೊಡ್ಡ ಸಮಸ್ಯೆ?
ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರತರ ಸಮಸ್ಯೆ ಸಾಮಾನ್ಯ. ತಾಲೂಕಿನ ಜನರಿಗೆ ನೀರುಣಿಸಲಿರುವ ಭದ್ರಾ ಮೇಲ್ದಂಡೆ ಯೋಜನೆಯ ಶಾಖಾ ಕಾಲುವೆ ಕಾಮಗಾರಿಗೆ ವಿಘ್ನ ಎದುರಾಗಿದೆ. ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ದಶಕಗಳೇ ಕಳೆದರೂ ಅನುಷ್ಠಾನವಾಗಿಲ್ಲ. ಕೆಲ ಕಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿವೆ. ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಶಾಸಕರು ಏನಂತಾರೆ?
ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಆದ್ಯತೆ ಮೇರೆಗೆ ಈಡೇರಿಸಿದ್ದೇನೆ. ಮುಖ್ಯವಾಗಿ ತಾಲೂಕಿನ 46 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಈ ಯೋಜನೆಯಿಂದ ಈ ಭಾಗದ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ ವಿಚಾರದಲ್ಲೂ ಸರ್ಕಾರ ನಿರ್ಲಕ್ಷé ತೋರಿಲ್ಲ. ಜಗಳೂರು ಶಾಖಾ ಕಾಲುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿತ್ತು. ಆದರೆ, ತಾಲೂಕಿನ ನೀರಾವರಿ ಹೋರಾಟಗಾರರಿಂದ ಬೆಳಗಟ್ಟ ಮಾರ್ಗವಾಗಿ ಶಾಖಾ ಕಾಲುವೆ ನಿರ್ಮಿಸಬೇಕೆಂಬ ಒತ್ತಡ ಹೆಚ್ಚಿದ್ದರಿಂದ ಸಿಎಂ ಸಿದ್ದರಾಮಯ್ಯನವರು ತಾಂತ್ರಿಕ ಸಮಿತಿ ರಚಿಸಿದರು. ಸರ್ಕಾರಕ್ಕೆ ನಿಗದಿತ ಅವಧಿ ಯೊಳಗೆ ವರದಿ ಕೈ ಸೇರಲಿಲ್ಲ. ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ಕ್ಷೇತ್ರದ ಜನತೆಯ ಮೇಲೆ ಗಾಢ ಪರಿಣಾಮ ಬೀರಿವೆ. ಮತ್ತೂಂದು ಸಾರಿ ಮತದಾರರು ಕಾಂಗ್ರೆಸ್ ಗೆಲ್ಲಿಸುತ್ತಾರೆಂಬ ಆತ್ಮವಿಶ್ವಾಸವಿದೆ.
ಎಚ್.ಪಿ. ರಾಜೇಶ್
ಕ್ಷೇತ್ರದ ಮಹಿಮೆ
ಶಾಶ್ವತ ಬರ ಪೀಡಿತ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಪ್ರಸಿದ್ಧ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕಲ್ಲೇದೇವರಪುರದ ಶ್ರೀ ಕಲ್ಲೇಶ್ವರ ದೇವಸ್ಥಾನ, ಕೊಣಚಕಲ್ಲು ಗುಡ್ಡದ ಶ್ರೀ ರಂಗನಾಥ ದೇವಾಲಯ, ಕಣ್ವಕುಪ್ಪೆಯ ಗವಿಮಠ ಪ್ರಮುಖ ಧಾರ್ಮಿಕ ಕೇಂದ್ರ. ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಏಷ್ಯಾ ಖಂಡದಲ್ಲೇ ತೀರಾ ಅಪರೂಪವಾದ ಕೊಂಡುಕುರಿಗಳು ಕಂಡು ಬರುತ್ತವೆ.
ಜಗಳೂರು ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳಿಲ್ಲದ ಕಾರಣಕ್ಕೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಹುತೇಕ ಪದವೀಧರರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಪ್ರತಿಯೊಂದು ಕಾಯಿಲೆಗೂ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ನೂರು ಹಾಸಿಗೆ ಆಸ್ಪತ್ರೆ ಅಂತಾರೆ, ಹತ್ತು ರೋಗಿಗಳಿಗೆ ಚಿಕಿತ್ಸೆ ನೀಡೊಲ್ಲ. ಆಸ್ಪತ್ರೆಯ ವ್ಯವಸ್ಥೆಯೇ ಅನಾರೋಗ್ಯದಿಂದ ಬಳಲುತ್ತಿದೆ.
ಎಚ್.ಆರ್.ಬಿ. ರಾಜು, ಹನುಮಂತಾಪುರ
ಮೊದಲಿಗಿಂತಲೂ ಈಗ ಕ್ಷೇತ್ರದಲ್ಲಿ ಭರಪೂರ ಅಭಿವೃದ್ಧಿ ಕಾಮಗಾರಿ ನಡೆದಿವೆ. ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಿರುವ
ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಫ್ಲೋರೈಡ್‌ಯುಕ್ತ ನೀರಿನಿಂದ ಮುಕ್ತಿ ಸಿಕ್ಕಂತಾಗಿದೆ.
ಜಗದೀಶ್, ಜಗಳೂರು ಟೌನ್
ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸರ್ಕಾರದ ಸೌಲಭ್ಯಗಳು ಅರ್ಹರ ಪಾಲಾಗುವ ಬದಲು ಬೇರೆಯವರ ಪಾಲಾಗಿವೆ.
ಮಂಜುನಾಥ್, ಮಾದೇಹಳ್ಳಿ
ಜಗಳೂರು ತಾಲೂಕಿನಲ್ಲಿ ಕಳೆದ ಐದು ವರ್ಷದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳಲಿಲ್ಲ. ಅಕ್ರಮ ಮರುಳುಗಾರಿಕೆಯಿಂದಾಗಿ ಅಂತರ್ಜಲ ಕುಸಿದಿದೆ. ಬೋರ್‌ವೆಲ್‌ಗಳನ್ನು ನಂಬಿರುವ ರೈತರು ಆತಂಕದಲ್ಲಿದ್ದಾರೆ. ಆಡಳಿತ ನಡೆಸಿದ ಜನಪ್ರತಿನಿಧಿ ಗಳು ಇದರ ಬಗ್ಗೆ ಗಮನಹರಿಸಲಿಲ್ಲ.
ಓಬಳೇಶ್, ಲಕ್ಕಂಪುರ
ಸಿ. ಬಸವರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.