ಅರಸರ ಕರ್ಮಭೂಮಿಯಲ್ಲಿ ಜಾತಿ ಲೆಕ್ಕಾಚಾರ
Team Udayavani, Apr 8, 2018, 12:53 PM IST
ಮೈಸೂರು: ಎಂಟು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮದೇ ಆದ ಕ್ರಾಂತಿಕಾರಿ ತೀರ್ಮಾನಗಳ ಮೂಲಕ ಹಿಂದುಳಿದವರು, ಶೋಷಿತ ವರ್ಗದವರಿಗೆ ಧ್ವನಿಯಾಗಿ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸರ ಕರ್ಮಭೂಮಿ ಹುಣಸೂರು ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿದೆ.
ಸತತ ಎರಡು ಬಾರಿ ಶಾಸಕರಾಗಿರುವ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್, ಈ ಚುನಾವಣೆಯಲ್ಲಿ ಗೆಲುವಿನ ಹ್ಯಾಟ್ರಿಕ್ ಕನಸು ಕಾಣುತ್ತಿದ್ದರೆ, ದೇವರಾಜ ಅರಸರ ಗರಡಿಯಲ್ಲೇ ಬೆಳೆದು ಶಾಸಕ, ಸಚಿವ, ಸಂಸದರಾಗಿ ಕೆಲಸ ಮಾಡಿದ ಅನುಭವಿ ರಾಜಕಾರಣಿ ಎಚ್.ವಿಶ್ವನಾಥ್ ಅವರು ನಾಲ್ಕು ದಶಕಗಳ ಕಾಂಗ್ರೆಸ್ ನಂಟು ತೊರೆದು ಜೆಡಿಎಸ್ ಸೇರಿ, ಕೆ.ಆರ್.ನಗರದಿಂದ ಹುಣಸೂರಿಗೆ ಬಂದು ಅರಸರ ಕರ್ಮಭೂಮಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಬಿಜೆಪಿಯಿಂದ ಪಕ್ಷದ ತಾಲೂಕು ಅಧ್ಯಕ್ಷರಾದ ವಕೀಲ ಬಿ.ಎಸ್.ಯೋಗಾನಂದ ಕುಮಾರ್ ಹಾಗೂ ವಿ.ಕೆ.ಫೌಂಡೇಷನ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ವಸಂತಕುಮಾರ್ ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದು, ಈ ಮಧ್ಯೆ ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ದೇವರಾಜ ಅರಸರ ಮೊಮ್ಮಗ ಮಂಜುನಾಥ್ ಅರಸು ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಕ್ಕಲಿಗರು, ಲಿಂಗಾಯಿತರು, ಕುರುಬ ಸಮುದಾಯಗಳದ್ದೇ ಪ್ರಾಬಲ್ಯ ಎಂದು ಹೇಳಲಾಗುತ್ತಿದ್ದರೂ ದಲಿತರು ಸೇರಿದಂತೆ ಇತರೆ ಸಣ್ಣಪುಟ್ಟ ಕೋಮುಗಳ ಮತದಾರರ ಸಂಖ್ಯೆಯೇ ಹೆಚ್ಚಿದೆ. ಆದರೆ, ಈ ವರ್ಗಗಳಲ್ಲಿ ಸಂಘಟನೆ ಕೊರತೆ ಹಾಗೂ ರಾಜಕೀಯ ಜಾಗೃತಿ ಇಲ್ಲದೆ ಹರಿದು ಹಂಚಿ ಹೋಗಿರುವುದರಿಂದ ನಿರ್ಣಾಯಕ ಪಾತ್ರವಹಿಸಲು ಸಾಧ್ಯವಾಗುತ್ತಿಲ್ಲ.
ಹಾಗೇ ನೋಡಿದರೆ ಹುಣಸೂರು ಕ್ಷೇತ್ರದ ಮತದಾರ ಯಾವತ್ತೂ ಜಾತೀ ಆಧಾರದ ಮೇಲೆ ಮತ ಹಾಕಿಲ್ಲ. ಹೀಗಾಗಿಯೇ ಇಡೀ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಬೆರಳೆಣಿಕೆ ಮತದಾರರನ್ನು ಹೊಂದಿದ್ದ ಡಿ.ದೇವರಾಜ ಅರಸರನ್ನು ಕ್ಷೇತ್ರದ ಜನತೆ 1952ರಿಂದ ಆರು ಬಾರಿ ಆರಿಸಿ ಕಳುಹಿಸಿದ್ದಲ್ಲದೆ, 1962ರಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿದ್ದರು. ದೇವರಾಜ ಅರಸರ ನಂತರ ಅವರ ಪುತ್ರಿ ಚಂದ್ರಪ್ರಭಾ ಅರಸು ಅವರೂ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಜನತಾ ಪಕ್ಷದಿಂದ ಡಾ.ಎಚ್.ಎಲ್.ತಿಮ್ಮೇಗೌಡ, ಕಾಂಗ್ರೆಸ್‌ನಿಂದ ಎಸ್.ಚಿಕ್ಕಮಾದು, ಬಿಜೆಪಿಯಿಂದ ಸಿ.ಎಚ್.ವಿಜಯಶಂಕರ್, ಕೋಡಿ ವಿ.ಪಾಪಣ್ಣ, ಜನತಾದಳ ಮತ್ತು ಜಾತ್ಯತೀತ ಜನತಾದಳದಿಂದ ಜಿ.ಟಿ.ದೇವೇಗೌಡ ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರೆ, 1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿದ್ದ ಚಂದ್ರಪ್ರಭಾ ಅರಸು ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ 35 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಚ್.ಎನ್.ಪ್ರೇಮಕುಮಾರ್ ಅವರ ಪುತ್ರ ಎಚ್.ಪಿ.ಮಂಜುನಾಥ್ ಅವರು 2008, 2013ರ ಚುನಾವಣೆಯಲ್ಲಿ ಸತತವಾಗಿ ಚುನಾಯಿತರಾಗಿದ್ದಾರೆ.
83ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಚಂದ್ರಪ್ರಭಾ ಅರಸು 50951 ಮತಗಳಿಸಿ ಭರ್ಜರಿ ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಎನ್.ಪ್ರೇಮಕುಮಾರ್ ಅವರು 15363 ಮತಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದರು. ಆದರೆ, ಈ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತದಾನ ನಡೆಯುವ ಮಾತುಗಳು ಕೇಳಿಬರುತ್ತಿವೆ.
ಮೂವರು ಶಾಸಕರು!: 2008ರ ಚುನಾವಣೆಯಲ್ಲಿ ಅದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ಪಿ.ಮಂಜುನಾಥ್ ಅವರು ಮಾಜಿ ಶಾಸಕರುಗಳಾದ ಜೆಡಿಎಸ್‌ನ ಎಸ್.ಚಿಕ್ಕಮಾದು, ಬಿಜೆಪಿಯ ಜಿ.ಟಿ.ದೇವೇಗೌಡರನ್ನು ಮಣಿಸಿ, ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿದ್ದರು. 2013ರ ಚುನಾವಣೆಯಲ್ಲಿ ಎಸ್.ಚಿಕ್ಕಮಾದು ಹಾಗೂ ಜಿ.ಟಿ.ದೇವೇಗೌಡರು ಹುಣಸೂರು ಕ್ಷೇತ್ರವನ್ನು ತ್ಯಜಿಸಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಎಸ್.ಚಿಕ್ಕಮಾದು,
ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಅವರು ಶಾಸಕರಾಗಿ ಆಯ್ಕೆಯಾದರು. ಹೀಗಾಗಿ ಒಂದೇ ಚುನಾವಣೆಯಲ್ಲಿ ಹುಣಸೂರಿನ ಮೂವರು ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು. ಈ ಇಬ್ಬರೂ ಪ್ರಭಾವಿ ನಾಯಕರು ಕ್ಷೇತ್ರ ತೊರೆದಿದ್ದರಿಂದಾಗಿ ಜಿದ್ದಾಜಿದ್ದಿನ ಹೋರಾಟವೇ ಇಲ್ಲದೆ, ಜೆಡಿಎಸ್ ಕಣಕ್ಕಿಳಿಸಿದ್ದ ಹೊಸಮುಖ ಎಚ್.ಎಂ.ಕುಮಾರಸ್ವಾಮಿ ವಿರುದ್ಧ ಎಚ್.ಪಿ.ಮಂಜುನಾಥ್ 40 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಜತೆಗೆ ಬೇರೆ ಪಕ್ಷದಿಂದ ವಲಸೆ ಬಂದ ಅಣ್ಣಯ್ಯನಾಯಕರಿಗೆ ಬಿಜೆಪಿ ಮಣೆ ಹಾಕಿದ್ದು, ಕೆಜೆಪಿಯಿಂದ ಮಂಜುನಾಥ್ ಅರಸು ಸ್ಪರ್ಧೆ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ದ್ಯಾವಪ್ಪ ನಾಯಕ, ಪಕ್ಷೇತರರಾಗಿ ಜಿಪಂ ಸದಸ್ಯ ಸಿ.ಟಿ.ರಾಜಣ್ಣ ಅವರ ಸ್ಪರ್ಧೆ ಎಚ್.ಪಿ.ಮಂಜುನಾಥ್ ಅವರ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿತ್ತು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರ ಮಧ್ಯೆ ನೇರ ಹಣಾಹಣಿ ಎಂದು ಹೇಳಲಾಗುತ್ತಿದ್ದರೂ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳುತ್ತಿರುವುದು ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.