ದೊಡ್ಡ ಚೋಡಿ ಸೇತುವೆಗೆ ದೊಡ್ಡ ಮನಸ್ಸು ಮಾಡಿ!
Team Udayavani, Apr 8, 2018, 1:02 PM IST
ಸುಬ್ರಹ್ಮಣ್ಯ: ಹರಿಹರ- ಕಟ್ರಮನೆ- ಕಾಂತುಕೇಮರಿ ಗ್ರಾಮದ ದೊಡ್ಡಚೋಡಿ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ. ಹಳ್ಳಿ ಸಂಪರ್ಕದ ಮೂಲ ಆದ್ಯತೆಯಾದ ಇಲ್ಲಿ ಸೇತುವೆ ನಿರ್ಮಾಣ ಆಗದ ಕುರಿತು ಸ್ಥಳೀಯರಲ್ಲಿ ಬೇಸರವಿದೆ. ದಶಕಗಳ ಬೇಡಿಕೆ ಈಡೇರಿಸಲು ದೊಡ್ಡ ಮನಸ್ಸು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಹರಿಹರ-ಕಟ್ರಮನೆ- ಕಾಂತುಕುಮೇರಿ ಗ್ರಾಮದ ದೊಡ್ಡಚೋಡಿ ಸೇತುವೆ ನಿರ್ಮಾಣದ ಬೇಡಿಕೆ ದಶಕಗಳದ್ದು. ಅದು ಈಡೇರದೆ ಇಲ್ಲಿನ ಜನರು ಸಂಪರ್ಕಕ್ಕಾಗಿ ಪರದಾಡುವಂತಾಗಿದೆ. ದೊಡ್ಡಚೋಡಿಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡುತ್ತಲೆ ಬಂದಿದ್ದರೂ ಸೇತುವೆ ನಿರ್ಮಾಣವಾಗಿಲ್ಲ.
ಹರಿಹರ-ಸುಬ್ರಹ್ಮಣ್ಯ ಪ್ರಮುಖ ರಸ್ತೆ ಗುಂಡಡ್ಕ ಎಂಬಲ್ಲಿಂದ ಕವಲೊಡೆದು ಐಪಿನಡ್ಕ, ಕೂಜುಗೋಡು, ಕಟ್ರಮನೆ, ಕಾಂತುಕುಮೇರಿ ಇಜ್ಜಿನಡ್ಕ ಪ್ರದೇಶಗಳಿಗೆ ತೆರಳಲು ಇರುವ ದಾರಿಯೇ ಐಪಿನಡ್ಕ ಕಟ್ರಮನೆ ಕಾಂಕುಕುಮೇರಿ ರಸ್ತೆ. ಈ ಪ್ರದೇಶಗಳನ್ನು ತಲುಪಬೇಕಿದ್ದಲ್ಲಿ ಕೂಜುಗೋಡು ಬಳಿ ದೊಡ್ಡಚೋಡಿ ಎಂಬಲ್ಲಿ ಹರಿಯುವ ಹೊಳೆ ದಾಟಬೇಕು. ಈ ರಸ್ತೆ ಈ ಭಾಗದ ಹಲವಾರು ಕಡೆಗಳಿಗೆ ಸಂಪರ್ಕ ಒದಗಿಸುತ್ತದೆ. ಆದರೆ ಇಲ್ಲಿ ಸೇತುವೆ ಇಲ್ಲದೆ ಜನ ಸಂಕಷ್ಟ ಪಡಬೇಕಿದೆ.
ಇಲ್ಲಿ ಹರಿಯುವ ಹೊಳೆಗೆ ಎಲ್ಲ ದೃಷ್ಟಿಯಿಂದಲೂ ಸೇತುವೆ ಅವಶ್ಯ. ಈ ಭಾಗದ ಇಜ್ಜಿನಡ್ಕ ಭಾಗ ಐನಕಿದು ಗ್ರಾಮದಿಂದ ಬಹು ದೂರವಿರುವ ಗ್ರಾಮ. ಸುಬ್ರಹ್ಮಣ್ಯಕ್ಕೆ ಹತ್ತಿರವಾಗಿದ್ದರೂ ಗ್ರಾಮ ಐನಕಿದುವಿಗೆ ಸೇರುವುದರಿಂದ ಐನಕಿದು ಸಂಪರ್ಕ ಗ್ರಾಮಸ್ಥರಿಗೆ ಅನಿವಾರ್ಯ. ಅವರಿಗೆ ಇದೇ ದಾರಿ ಗತಿ. ಕಟ್ರಮನೆ, ಕಾಂತು ಕುಮೇರಿ-ಇಜ್ಜಿನಡ್ಕ ಕೂಜುಗೋಡು ಭಾಗದ ರಸ್ತೆ ಫಲಾನುಭವಿಗಳು ಈ ಹೊಳಗೆ ಸೇತುವೆ ನಿರ್ಮಿಸುವಂತೆ ದಶಕಗಳಿಂದ ಜನ ಪ್ರತಿನಿಧಿಗಳಿಗೆ ಒತ್ತಾಯಿಸಿದ್ದರು.
ಸಿಕ್ಕಿದ ಭರವಸೆಗಳೆಲ್ಲ ಠುಸ್!
ಈ ಹಿಂದೆ ಗ್ರಾ.ಪಂ.ಗೆ ಚುನಾವಣೆ ನಡೆದ ವೇಳೆ ಇಲ್ಲಿ ಸೇತುವೆ ನಿರ್ಮಾಣ ಪ್ರಸ್ತಾವಕ್ಕೆ ಜೀವ ಬಂದಿತ್ತು. ಬೇಡಿಕೆ ಈಡೇರಿಸುವಂತೆ ಸ್ಥಳೀಯರು ಜನಪ್ರತಿನಿಧಿಗಳ ಮುಂದೆ ಹಠಕ್ಕೆ ಬಿದ್ದಿದ್ದರು. ಬಹು ಸಂಖ್ಯೆಯಲ್ಲಿರುವ ಕಟ್ರಮನೆ ಜನತೆಯ ಸಹನೆ ಕಟ್ಟೆ ಒಡೆದು ಹೋಗಿತ್ತು. ಹೋರಾಟಕ್ಕೆ ಮುಂದಾಗಿದ್ದರು. ಜನಪ್ರತಿನಿಧಿಗಳು ಭರವಸೆ ನೀಡಿದರೇ ಹೊರತು, ಸೇತುವೆ ಮಾತ್ರ ಇನ್ನೂ ಆಗಲೇ ಇಲ್ಲ. ಬಿಡಿಗಾಸು ಅನುದಾನವೂ ಒದಗಲಿಲ್ಲ.
ಶಾಸಕರ 10 ಲಕ್ಷ ರೂ. ಸಾಕಾಗಲ್ಲ
ದೊಡ್ಡಚೋಡಿ ಸೇತುವೆ ನಿರ್ಮಾಣ ಆವಶ್ಯಕತೆ ಮನಗಂಡ ಶಾಸಕರು ಇಲ್ಲಿ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನವನ್ನು ನೀಡಿದ್ದರು. ಅದರಂತೆ ಕಾಮಗಾರಿ ಆರಂಭವಾಗಿ ಪಿಲ್ಲರ್ ತಲೆ ಎತ್ತಿ ನಿಂತಿದೆ. ಆದರೆ ಸೇತುವೆ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತುತ್ತದೆಯೇ ಎಂಬ ಕುರಿತು ಜನತೆಯಲ್ಲಿ ಸಂಶಯವಿದೆ. ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಅನುದಾನದ ಅಗತ್ಯವಿದೆ. ಹೀಗಾಗಿ, ಸದ್ಯ ಸೇತುವೆ ಕನಸು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.
ನೆರೆ ಇಳಿಯುವ ತನಕ ಕಾಯಲೇ ಬೇಕು
ಈ ಭಾಗದಲ್ಲಿ 60ಕ್ಕೂ ಅಧಿಕ ಕುಟುಂಬಗಳಿವೆ. ಕೃಷಿ ಅವಲಂಬಿತ ಸ್ಥಳೀಯರು ಹರಿಹರ, ಸುಬ್ರಹ್ಮಣ್ಯ, ಐನಕಿದು ಮುಂತಾದ ಕಡೆ ಪಡಿತರ, ಆಹಾರ ಸಾಮಗ್ರಿಗಳನ್ನು ಖರೀದಿಸಿ, ತಲೆ ಹೊರೆಯಲ್ಲೇ ತರಬೇಕು. ಅಗಲ ಕಿರಿದಾಗಿರುವ ರಸ್ತೆಯ ಮಧ್ಯೆ ಇರುವ ಹಳ್ಳವನ್ನು ದಾಟಿಯೇ ಬರಬೇಕು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳವನ್ನು ದಾಟುವುದು ಎಂದರೆ ಜೀವ ಪಣಕ್ಕಿಟ್ಟಂತೆಯೇ ಸೈ. ಹಲವು ಸಲ ನೆರೆ ಬಂದು, ತಾಸುಗಟ್ಟಲೆ ಹಳ್ಳದ ಬದಿಯಲ್ಲಿ ನಿಲ್ಲಬೇಕಾಗುತ್ತದೆ. ದಾಟುವ ಪ್ರಯತ್ನ ಮಾಡಿದರೆ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವೂ ಇದೆ. ಇಂತಹ ಘಟನೆಗಳು ಈ ಹಿಂದೆ ನಡೆದಿರುವುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
ಅಷ್ಟು ಹಣ ನಮ್ಮಲ್ಲಿಲ್ಲ
ಹೆಚ್ಚು ಮೊತ್ತದ ಅನುದಾನದ ಆವಶ್ಯಕತೆ ಇದೆ. ಸ್ಥಳೀಯಾಡಳಿತ ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಪಂಚಾಯತ್ ನೀಡುವ ಗರಿಷ್ಠ ಅನುದಾನ ಒದಗಿಸಲಾಗುವುದು. ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಅನುದಾನ ಕೇಳಲಾಗುವುದು.
– ವಿದ್ಯಾಧರ,
ಪಿಡಿಒ, ಹರಿಹರ ಗ್ರಾ.ಪಂ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.