ಪುಣೆ ಬಂಟರ ಭವನದ ಉದ್ಘಾಟನ ಸಂಭ್ರಮ:ವೈವಿಧ್ಯಕ್ಕೆ ಸಾಕ್ಷಿ
Team Udayavani, Apr 8, 2018, 5:17 PM IST
ಪುಣೆ: ಭವನದ ಸುತ್ತಮುತ್ತಲು ಎತ್ತ ನೋಡಿದರತ್ತ ವಿದ್ಯುತ್ ದೀಪಾಲಂಕೃತಗೊಂಡು ಪರಿಸರವು ಊರಿನ ಜಾತ್ರಾ ಮಹೋತ್ಸವದ ವಾತಾವರಣ ವನ್ನು ನೆನಪಿಸುತ್ತದೆ. ಪುಣೆಯ ಪ್ರತಿಯೋರ್ವ ಬಂಟ ಬಾಂಧವರ ಮನೆ-ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿ ಯೋರ್ವರು ತಮ್ಮ ಮನೆಯ ಕೆಲಸವೆಂಬಂತೆ ಉಲ್ಲಾಸದಿಂದ ಪಾಲ್ಗೊಳ್ಳುತ್ತಿದ್ದಾರೆ.
ಪೂರ್ಣಕುಂಭ ಸ್ವಾಗತ
ಬೆಳಗ್ಗೆ ನಡೆದ ಮೆರವಣಿಗೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಬಂಟ ಬಾಂಧವರು ಭಾಗವಹಿಸಿದ್ದರು. ಮಹಿಳೆಯರು ಮತ್ತು ಪುರುಷರು ತುಳುನಾಡ ಸಂಸ್ಕೃತಿ ಸಾರುವ ವಸ್ತ್ರಗಳನ್ನು ಧರಿಸಿ ಅತಿಥಿ-ಗಣ್ಯರುಗಳನ್ನು ಮೆರವಣಿಗೆಯ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ, ಚಂಡೆ ವಾದನ, ವಾದ್ಯ, ಇನ್ನಿತರ ಸಂಗೀತ ಪರಿಕರಗಳ ನಿನಾದದೊಂದಿಗೆ ಬರಮಾಡಿಕೊಂಡರು.
ಕೈಬೀಸಿ ಕರೆಯುತ್ತಿರುವ ದ್ವಾರ
ತುಳುನಾಡ ಸಂಸ್ಕೃತಿ ಎಂದರೆ ಅದನ್ನು ವರ್ಣಸಲು ಶಬ್ದಗಳೇ ಸಾಲುದು. ತುಳುವರು ಎಲ್ಲಿಯೇ ಇರಲಿ ತಮ್ಮ ಕಾರ್ಯಕ್ರಮಗಳನ್ನು ತುಳುನಾಡ ಪದ್ಧತಿಯಿಂದ ಆಚರಿಸುವವರು. ಪುಣೆ ಬಂಟರ ಭವನವನ್ನು ನಿರ್ಮಿಸಿ ಅದನ್ನು ಲೋಕಾರ್ಪಣೆಗೊಳಿಸುವ ಭರದಲ್ಲಿ ಪುಣೆಯ ಬಂಟರು ತುಳುನಾಡ ಸಂಸ್ಕೃತಿಯನ್ನು ಮರೆ ಯದೆ ಪಾಲಿಸುತ್ತಿರುವುದು ಹೆಮ್ಮೆಯ ವಿಷಯ. ಭವನಕ್ಕೆ ಹೋಗುವ ಮುಖ್ಯ ರಸ್ತೆ ಯಲ್ಲಿ ನಿರ್ಮಿಸಲಾಗಿರುವ ಮುಖ್ಯದ್ವಾರವು ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬರುವವರನ್ನು ಕೈ ಬೀಸಿ ಕರೆಯುತ್ತಿದೆ. ಆಶಾ ಪ್ರಕಾಶ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಈ ದ್ವಾರವನ್ನು ನಿರ್ಮಿಸಲಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಹೋಲುವ ಮುಖ್ಯದ್ವಾರದ ಮುಕುಟವು ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತಿದೆ.
ಸೀಯಾಳದ ರಾಶಿ
ಭವನ ಪ್ರವೇಶಿಸುತ್ತಿದ್ದಂತೆ ಒಂದುಕಡೆ ಹಚ್ಚ ಹಸುರಿನ ರಾಶಿಯೇ ಕಣ್ಣಿಗೆ ತಂಪು ನೀಡುತ್ತದೆ. ಊರಿನಿಂದಲೇ ತಂದಂತಹ ಸೀಯಾಳದ ರಾಶಿ ಎದ್ದು ಕಾಣುತ್ತಿದ್ದು, ಅತಿಥಿ-ಗಣ್ಯರನ್ನು ಸೀಯಾಳ ಸೇವನೆಯ ಮೂಲಕವೇ ಭವನಕ್ಕೆ ಸ್ವಾಗತಿಸ ಲಾಗುತ್ತಿದೆ. ಸೀಯಾಳದ ರಾಶಿಯ ಕೌಂಟರ್‌ನ್ನು ತೆರೆಯಲಾಗಿದ್ದು, ಸ್ವಯಂ ಸೇವಕರು ಬಂದವರಿಗೆ ಸೀಯಾಳವನ್ನು ನೀಡಿ ಬಿಸಿಲ ಬೇಗೆಯನ್ನು ನಿವಾರಿಸುತ್ತಿದ್ದಾರೆ.
ಎಲ್ಲೂರಿನ ಪ್ರತಿಷ್ಠಿತ ಗುತ್ತಿನ ಮನೆ
ಪುಣೆ ಬಂಟರ ಭವನದ ಉದ್ಘಾಟನ ಸಂಭ್ರಮ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಭವನದ ಎದುರುಗಡೆ ನಿರ್ಮಿಸಲಾಗಿರುವ ಎಲ್ಲೂರು ಗುತ್ತಿನ ಮನೆಯು ಗಣ್ಯರನ್ನು ಹಾಗೂ ಸಮಾಜ ಬಾಂಧವರನ್ನು ಆಕರ್ಷಿಸುತ್ತಿದೆ. ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಗುತ್ತಿನ ಮನೆಯನ್ನು ನಿರ್ಮಿಸಲಾಗಿದ್ದು, ಗುತ್ತಿನ ಮನೆಯ ಚಾವಡಿಯಲ್ಲಿ ಊರಿನ ಗುತ್ತಿನ ಮನೆಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಗುತ್ತಿನ ಮನೆಯ ಅಂಗಳದಲ್ಲಿ ಬಾವಿಕಟ್ಟೆಯಿದ್ದು, ಪಕ್ಕದಲ್ಲೇ ಭತ್ತದ ಹುಲ್ಲಿನ ಮೂಟೆಯನ್ನು ರಚಿಸಲಾಗಿದೆ.
ಧರ್ಮ ದೈವದ ಗುಡಿ
ತುಳುವರು ಸಂಪ್ರದಾಯ ಬದ್ಧವಾಗಿ ಆಚರಿಸುವ ದೈವರಾಧನೆಗೆ ಇಲ್ಲಿ ಮೊದಲ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಭವನದ ಪಕ್ಕದಲ್ಲಿ ತುಳುನಾಡಿನ ಪ್ರತೀ ಮನೆ ಮನೆಗಳಲ್ಲಿ ನೆಲೆಕಂಡಿರುವ ಧರ್ಮದೈವದ ಗುಡಿಯನ್ನು ಆಕರ್ಷಣೀಯವಾಗಿ ನಿರ್ಮಿಸಲಾಗಿದೆ. ಗುಡಿಯೊಳಗೆ ಇಣುಕಿ ನೋಡಿದರೆ, ಅಲ್ಲಿ ಕಾಣುವುದು ವಿದ್ಯುತ್ ದೀಪಾಲಂಕೃತ ಮತ್ತು ಪುಷ್ಪಾಲಂಕೃತಗೊಂಡಿರುವ ದೈವ ಮಣೆ- ಮಂಚವು. ಅಲ್ಲದೆ ಪ್ರಜ್ವಲಿಸುತ್ತಿರುವ ದೀಪ. ಗುಡಿಯ ಎದರಿನಲ್ಲಿ ತೆಂಗಿನಕಾಯಿಯ ರಾಶಿಯಿದ್ದು, ಮಣೆ-ಮಂಚವನ್ನು ಊರಿನ ಮಲ್ಲಿಗೆಯಿಂದ ಶೃಂಗರಿಸಲಾಗಿದೆ. ಇದು ಸಾಂಸ್ಕೃತಿಕ ನಗರಿ ಪುಣೆಯ ಬಂಟರ ಭವನ ನಿರ್ಮಾಣಕ್ಕೆ ಧರ್ಮದೈವದ ಸಹಕಾರವನ್ನು ಸೂಚಿಸುತ್ತದೆ ಎಂದು ಗಣ್ಯರು ಉದ್ಗರಿಸುತ್ತಿದ್ದಾರೆ.
ಕರಕುಶಲ ಪ್ರದರ್ಶನ
ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಅರಿವಿಲ್ಲದ ಕರ ಕುಶಲ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಇಲ್ಲಿ ಆಯೋಜಿಸಲಾಗಿದೆ. ಮಣ್ಣಿನಿಂದ ಮಡಿಗೆ ಮಾಡುವುದು, ಹಳೆಯ ಕಾಲದಲ್ಲಿ ಉಪ ಯೋಗಿಸುತ್ತಿದ್ದ ಮರದ, ಮಣ್ಣಿನ ಪಾತ್ರೆಗಳು, ಕೃಷಿಗೆ ಸಂಬಂಧಿಸಿದ ವಸ್ತುಗಳು, ಗುಡಿ ಕೈಗಾರಿಕೆ, ಅಡುಗೆ ಮನೆಯ ಮರದ ವಸ್ತುಗಳು, ಹಿಂದಿನ ಏತ ನೀರಾವರಿಯ ವಸ್ತುಗಳು, ರಾಗಿಯ ಬೀಸುವ ಕಲ್ಲು, ಚೆನ್ನೆಮಣೆ, ಹಿಂದಿನ ಕಾಲದ ಲಾಟನ್ ಗತ ಕಾಲದ ನೆನಪುಗಳನ್ನು ಸಾರುವ ದಿನೋಪಯೋಗಿ ವಸ್ತುಗಳು ಕಣ್ಣಿಗೆ ಹಬ್ಬದಂತಿದೆ.
ಮಾನವೀಯತೆಗೆ ಸಾಕ್ಷಿಯಾಗಿರುವ ದನದ ಹಟ್ಟಿ : ಭವನದ ಸಮೀಪದಲ್ಲಿ ತುಳನಾಡಿನ ಮಾದರಿಯಲ್ಲೇ ದನದ ಹಟ್ಟಿಯನ್ನು ನಿರ್ಮಿಸಲಾಗಿದ್ದು, ಅಲ್ಲಿ ದನ ಹಾಗೂ ಕರುವನ್ನು ಕಟ್ಟಿ ಹಾಕಿ ತಾಯಿ-ಮಗುವಿನ ಬಾಂಧವ್ಯವನ್ನು ಬೆಸೆಯಲಾಗಿದೆ. ತುಳುನಾಡಿನ ಮನೆಯ ಕಲ್ಪವೃಕ್ಷ ಗೋ ಮಾತೆಯ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿಯನ್ನು ಮೂಡಿಸುವುದರೊಂದಿಗೆ ಮಾನವೀಯತೆಯನ್ನು ಬೋಧಿಸುವಲ್ಲೂ ಮುಂ ದಾಗಿದೆ. ಎಳೆಯ ಮಕ್ಕಳಂತೂ ದನ-ಕರುವನ್ನು ಕಂಡು ಹರ್ಷ ವ್ಯಕ್ತಪಡಿಸುವ ರೀತಿ ಬೆರಗು ಮೂಡಿಸುತ್ತದೆ.
ಸಾಗಿ ಬಂದ ಜನಸಾಗರ
ಪುಣೆ ಬಂಟರ ಭವನದ ಉದ್ಘಾಟನ ಸಂಭ್ರಮ ವನ್ನು ಕಣ್ತುಂಬಿಕೊಳ್ಳಲು ಪುಣೆ ಹಾಗೂ ಇನ್ನಿತರ ನಗರಗಳಿಂದ ಜನಸಾಗರವೇ ಸಾಗಿ ಬರುತ್ತಿದೆ. ಬರುವ ಎಲ್ಲ ತುಳು-ಕನ್ನಡಿಗರಿಗೆ ದಿನವಿಡೀ ಉಪಾಹಾರ, ಭೋಜನ, ಚಹಾ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಇಂದು ಭಾಗವಹಿಸಿರುವುದು ವಿಶೇಷತೆಯಾಗಿದೆ.
ಕಲಾತ್ಮಕತೆ
ಸುಮಾರು ಒಂದು ಎಕರೆ ಜಾಗದಲ್ಲಿ 62 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕಲಾತ್ಮಕತೆಯನ್ನು ಮೈಗೂಡಿಸಿಕೊಂಡು ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿದ್ದು ಅನೇಕ ವೈಶಿಷ್ಟéವನ್ನು ಮೈದುಂಬಿಸಿಕೊಂಡಿದೆ.
ಆಧ್ಯಾತ್ಮದತ್ತ ಕೊಂಡೊಯ್ಯುವ ಭವನ
ಮೂಡಬಿದಿರೆಯಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಗುರು ನಿತ್ಯಾನಂದ ಸ್ವಾಮಿಗಳ ಕಪ್ಪು ಕಲ್ಲಿನ ಭವ್ಯ ಮೂರ್ತಿ, ಇನ್ನೊಂದೆಡೆ ರಾಜಸ್ಥಾನದಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಶಿರ್ಡಿ ಸಾಯಿಬಾಬಾರ ಬಿಳಿ ಕಲ್ಲಿನ ಮೂರ್ತಿ, ಮರದ ಕೆತ್ತನೆಗಳೊಂದಿಗೆ ತಯಾರಿಸಲಾದ ದೇವರ ಭವ್ಯ ಪೂಜಾ ಮಂಟಪ, ಶ್ರೀ ಕ್ಷೇತ್ರ ಕಟೀಲಿನ ದುರ್ಗಾಪರಮೇಶ್ವರೀ ಅಮ್ಮನವರ ಬೆಳ್ಳಿ ಲೇಪನದ ಕಲಾಶೈಲಿಯ ಫೂಟೋ, ಮಹಾಗಣಪತಿ ದೇವರ ಫೂಟೋ ಹಾಗೂ ವೆಂಕಟರಮಣ ದೇವರ ಫೂಟೋಗಳನ್ನು ಭವನದೊಳಗಡೆ ಅಳವಡಿಸಲಾಗಿದ್ದು, ಸಣ್ಣದೊಂದು ದೇವಸ್ಥಾನದ ಕಲ್ಪನೆಯೊಂದಿಗೆ, ಎಲ್ಲ ಮೂರ್ತಿಗಳು ಶೃಂಗಾರಗೊಂಡು ನೋಡುಗರನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುತ್ತದೆ.
ಕಂಗೊಳಿಸುತ್ತಿರುವ ವೇದಿಕೆ
ಪುಣೆ ಬಂಟರ ಭವನದ ಇನ್ನೊಂದು ಆಕರ್ಷಣೆಯೆಂದರೆ ಕಂಗೊಳಿಸುತ್ತಿರುವ ಶ್ರೀಮತಿ ಲತಾ ಸುಧೀರ್ ಶೆಟ್ಟಿ ಸಭಾಗೃಹ. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಆಸೀನರಾಗುವ ಈ ಭವ್ಯ ಸಭಾಗೃಹವು ಊರಿನ ವೈವಿಧ್ಯಮಯ ಹೂವು ಗಳಿಗೆ ಶೃಂಗರಿಸಲ್ಪಟ್ಟಿದ್ದು, ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಅಲ್ಲದೆ ಭವನ ಹಾಗೂ ಪಕ್ಕದಲ್ಲಿ ನಿರ್ಮಿಸಲಾಗಿರುವ ಗುತ್ತಿನ ಮನೆ, ದನದ ಕೊಟ್ಟಿಗೆ, ದೈವದ ಗುಡಿ ಇನ್ನಿತರ ಎಲ್ಲ ಕಡೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.
ಕಂಬಳದ ಕೋಣಗಳು ಕೇಂದ್ರ ಬಿಂದು
ಹೊರನಾಡ ತುಳು-ಕನ್ನಡಿಗರು ಆಯೋಜಿಸುವ ಹೆಚ್ಚಿನ ಸಮಾರಂಭಗಳಲ್ಲಿ ಕಂಬಳದ ಕೋಣಗಳ ಪ್ರತಿಕೃತಿಯನ್ನು ಇಡಲಾಗುತ್ತದೆ. ಆದರೆ ಪುಣೆ ಬಂಟರ ಸಂಘವು ಒಂದು ಹೆಜ್ಜೆ ಮುಂದೆ ಹೋಗಿ ಕಂಬಳದ ಕೋಣಗಳನ್ನೇ ಪುಣೆಗೆ ಆಹ್ವಾನಿಸಿದೆ. ದಷ್ಟಪುಷ್ಪವಾಗಿರುವ ಕಂಬಳದ ಕೋಣಗಳು ಭವನಕ್ಕೆ ಆಗಮಿಸಿರು ವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ಉಡುಪಿಯ ಹಂಕರಜಾಲ್ ಶ್ರೀನಿವಾಸ ಶೆಟ್ಟಿ ಇವರ ಕಂಬಳದ ಕೋಣಗಳನ್ನು ಕಂಡ ಹೆಚ್ಚಿನವರು ಮುಗಿನ ಕೈಗೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.