ಸೀಬೆಯಿಂದ ಸಿರಿ ಬಂತು!
Team Udayavani, Apr 9, 2018, 6:00 AM IST
ಕಳೆದ ಐದು ವರ್ಷಗಳಿಂದ ಸೀಬೆ ಬೆಳೆಯುತ್ತಿರುವ ಮಾರುತಿ, ಈ ಬೆಳೆಯಿಂದಲೇ “ಸಿರಿವಂತ’ನಾಗಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ಹೈದರಾಬಾದ್‌ಗೆ ಹೋಲಿಸಿದರೆ ರಾಜ್ಯದಲ್ಲಿ ಸೀಬೆ ಬೆಳೆಯುವವರ ಪ್ರಮಾಣ ತುಂಬಾ ಕಡಿಮೆ. ರಾಜ್ಯಕ್ಕೆ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಟನ್‌ಗಟ್ಟಲೆ ಸೀಬೆ ಹೊರ ರಾಜ್ಯಗಳಿಂದ ಆಮದಾಗುತ್ತಿದೆ. ಸೀಬೆ ಬೆಳೆಯುವುದು ಅಷ್ಟು ಸುಲಭವಲ್ಲ. ಮಾಹಿತಿ, ಮಾರ್ಗದರ್ಶನದೊಂದಿಗೆ ಬಂಡವಾಳವೂ ಬೇಕು. ಗೊಬ್ಬರ, ನೀರಾವರಿಯ ವ್ಯವಸ್ಥೆಗಳಿರಬೇಕು. ಕೃಷಿ ಮಾಡದೇ ಬಿಟ್ಟಿರುವ ಎಕರೆಗಟ್ಟಲೆ ಭೂಮಿಯಲ್ಲಿ ಸೀಬೆ ಬೆಳೆಯಲು ಯತ್ನಿಸಬಹುದು.
ಶಿಡ್ಲಘಟ್ಟ ತಾಲೂಕಿನ ಚಿಂತಾಡಪಿಯ ಮಾರುತಿ ಸಿ.ಎಂ. ಕಳೆದ ಐದು ವರ್ಷದಿಂದ ಮೂರು ಎಕರೆಯಲ್ಲಿ ಪೇರಳೆ ಬೆಳೆಯುತ್ತಿದ್ದಾರೆ. ಅಲಹಾಬಾದ್ ಸಫೇದ ತಳಿಯ ಪೇರಳೆ ಗಿಡಗಳನ್ನು ಕೋಲಾರ ಜಿಲ್ಲೆಯ ಮಾಲೂರಿನಿಂದ ಗಿಡವೊಂದಕ್ಕೆ ರೂ. 140.00ರಂತೆ ನೀಡಿ 420 ಗಿಡಗಳನ್ನು ತಂದಿದ್ದಾರೆ.
ನಾಟಿ ಮಾಡುವ ವಿಧಾನ
ನೀರಾವರಿ ವ್ಯವಸ್ಥೆಯಿದ್ದರೆ ಯಾವಾಗ ಬೇಕಾದರೂ ನಾಟಿ ಮಾಡಬಹುದು. ಆದರೆ, ಹೆಚ್ಚು ಮಳೆ ಬೀಳುವ ಮಲೆನಾಡಿಗೆ ಇದು ಸೂಕ್ತವಲ್ಲ. ಕೆಂಪು ಕಲ್ಲಿನಿಂದ ಕೂಡಿದ ಗುಡ್ಡ ಪ್ರದೇಶದಲ್ಲಿ ಅಧಿಕ ಇಳುವರಿ ಸಿಗಲಾರದು. 3 ಅಡಿ ಅಗಲ, 3 ಅಡಿ ಉದ್ದ, 3 ಅಡಿ ಆಳವಾಗಿ ಗುಂಡಿ ತೆಗೆಯಬೇಕು. ಮಾರುತಿಯವರು, ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿ ಗಿಡದಿಂದ ಗಿಡಕ್ಕೆ 20 ಅಡಿ ಅಂತರ ಬಿಟ್ಟು ನಾಟಿ ಮಾಡಿದ್ದಾರೆ. ಬೆಳೆಗೆ ಬಿಸಿಲು ಅತ್ಯಗತ್ಯ. ವಾರಕ್ಕೆ 3 ಬಾರಿ 4 ಗಂಟೆಗಳ ಕಾಲ ನೀರು ಪೂರೈಸಬೇಕು. ಆರಂಭದ ವರ್ಷ ಗೊಬ್ಬರ ಹಾಕಬೇಕಾಗಿಲ್ಲ. ಎರಡನೇ ವರ್ಷ ಗೊಬ್ಬರ ಹಾಕಬೇಕು. ಸೂಕ್ತ ಆರೈಕೆ ದೊರೆತರೆ ಒಂದು ಗಿಡ 20 ವರ್ಷ ಬದುಕುತ್ತದೆ. ನೆಟ್ಟ ಎರಡನೇ ವರ್ಷಕ್ಕೆ ಇಳುವರಿ ದೊರೆಯುತ್ತದೆ. ಅಂದಹಾಗೆ, ಸೀಬೆ ಕೃಷಿ ಮಾಡುವ ಭೂಮಿಯಲ್ಲಿ ಹೆಚ್ಚು ತೇವಾಂಶವೂ ಇರಬಾರದು. ತೇವಾಂಶವಿದ್ದಲ್ಲಿ ಕಾಯಿ ಉದುರುತ್ತದೆ.
ಫೆಬ್ರವರಿಯಲ್ಲಿ ಚಿಗುರು ಬಿಟ್ಟು ಹೂವು ನೀಡುತ್ತದೆ. ಅಕ್ಟೋಬರ್‌ನಲ್ಲಿ ಕಟಾವಿಗೆ ಲಭ್ಯ. ರೆಡ್ ಮತ್ತು ಅಲಹಾಬಾದ್ ಸಫೇದ ತಳಿಗಳನ್ನು ಮಾರುತಿಯವರು ಬೆಳೆಯುತ್ತಿದ್ದಾರೆ. ಹಣ್ಣು ಸಿಹಿಯಾಗಿದ್ದು ಕಾಯಿ ಜಾಸ್ತಿ ಇರುವುದಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ. 4 ರಿಂದ 5 ಕಾಯಿಗಳು ಒಂದು ಕೆ.ಜಿ. ತೂಗುತ್ತವೆ. ಒಂದು ಕಾಯಿಗೆ 10 ರೂ. ದರವಿದೆ. ನಿತ್ಯ ಕಾಯಿಯನ್ನು ಕೊಯ್ಲು ಮಾಡುತ್ತಾರೆ. 6 ವರ್ಷ ತುಂಬಿದ ಒಂದು ಗಿಡ ಒಂದು ಬೆಳೆಗೆ 800 ಕಾಯಿಗಳನ್ನು ನೀಡುತ್ತದೆ. 3 ವರ್ಷಕ್ಕೊಮ್ಮೆ ಗಿಡಗಳನ್ನು ಕಸಿ ಮಾಡಿ ಮತ್ತಷ್ಟು ಶಕ್ತಿಶಾಲಿಯನ್ನಾಗಿಸುತ್ತಾರೆ. ಇಲ್ಲವಾದರೆ, ಗಿಡಗಳು ಎತ್ತರಕ್ಕೆ ಬೆಳೆದು ಇಳುವರಿ ಇಳಿಮುಖವಾಗುತ್ತದೆ. ಆರಂಭದಲ್ಲಿ 3 ಎಕರೆಗೆ ಎಲ್ಲಾ ಸೇರಿ 2 ಲಕ್ಷ ರೂ. ಖರ್ಚು ತಗುಲಿದೆ. ಎರಡು ವರ್ಷಗಳ ಬಳಿಕ ವರ್ಷಕ್ಕೆ 25 ಸಾವಿರ ರೂ. ಖರ್ಚು ಬರುತ್ತದೆ.
ಇವರು ಆರಂಭದ ಎರಡು ವರ್ಷ ರಾಗಿ, ಅವರೆ, ಟೊಮೇಟೊವನ್ನೂ ಸೀಬೆ ಇರುವ ಜಮೀನಿನಲ್ಲಿಯೇ ಬೆಳೆದಿದ್ದಾರೆ. ಅದರಿಂದ ಆರಂಭದ ಖರ್ಚು ಎಲ್ಲಾ ಕೈ ಸೇರಿದೆಯಂತೆ. ಪಕ್ಷಿಗಳು ಸೀಬೆಕಾಯಿಗಳನ್ನು ತಿನ್ನುವುದು ಸಾಮಾನ್ಯ. ಪ್ರಾಣಿಗಳ ಕಾಟ ಕಡಿಮೆಯೇ.
ಜನವರಿಯಲ್ಲಿ ತೋಟವನ್ನು ಇತರರಿಗೆ ನೀಡುತ್ತಾರೆ. ಈ ಬಾರಿ 5.25 ಲಕ್ಷ ರೂಪಾಯಿಗೆ ತೋಟವನ್ನು ನೀಡಿದ್ದಾರೆ. ಸೀಬೆ ಕೃಷಿಗೆ ಮುಂದಾದರೆ ವರ್ಷಕ್ಕೆ 10 ಲೋಡ್ ಗೊಬ್ಬರ ನೀಡಬೇಕಾಗುತ್ತದೆ. ಕಳೆ ಕೀಳುವ, ಪಾತಿ ಮಾಡಿಸುವ, ಬುಡ ಬಿಡಿಸುವ, ಔಷಧಿ ನೀಡುವ… ಹೀಗೆ ಖರ್ಚುಗಳನ್ನು ತೋಟ ನೀಡಿದವರು, ಪಡೆದವರು ಸಮಾನವಾಗಿ ವಿಂಗಡಿಸಿಕೊಳ್ಳುತ್ತಾರೆ.
ಹಣ್ಣು ಕಟಾವು, ಮಾರಾಟ, ಅದರಿಂದ ಬಂದ ಲಾಭ- ನಷ್ಟವೆಲ್ಲ ತೋಟವನ್ನು ಪಡೆದವನಿಗೆ ಸೇರುತ್ತದೆ. ಮಾರುತಿಯವರು ಹೇಳುವಂತೆ, ಸೀಬೆಗೆ ರಾಸಾಯನಿಕ ಗೊಬ್ಬರ ನೀಡಿದರೆ ಕಾಯಿ ಉದುರುವ ಸಮಸ್ಯೆ ಎದುರಾಗುತ್ತದಂತೆ. ಭೂಮಿಯ ಫಲವತ್ತತೆಯೂ ಹಾಳಾಗುತ್ತದಂತೆ. ಹಾಗಾಗಿ ಈ ಬೆಳೆಗೆ ಕೊಟ್ಟಿಗೆ ಗೊಬ್ಬರದ ಬಳಕೆಯೇ ಸೂಕ್ತ ಎಂಬುದು ಅವರ ಅನುಭವದ ಮಾತು.
ಸೀಬೆ ಬೆಳೆಯಲೆತ್ನಿಸುವವರು ಮೊ. 9964951680 ಸಂಪರ್ಕಿಸಬಹುದು.
– ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.