ನೋಟಾ ಹಲ್ಲಿಲ್ಲದ ಹಾವಾಗದಿರಲಿ…
Team Udayavani, Apr 9, 2018, 6:00 AM IST
ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಜನಪ್ರತಿನಿಧಿ ಅನ್ನಿಸಿಕೊಳ್ಳಲು ಯಾರಿಗೂ ಯೋಗ್ಯತೆಯಿಲ್ಲ ಅನ್ನಿಸಿದಾಗ- ಎಲ್ಲರ ವಿರುದ್ಧವಾಗಿ ಮತದಾರ ಒತ್ತುವ ಮುದ್ರೆಯೇ ನೋಟಾ. ವಿಪರ್ಯಾಸವೆಂದರೆ, ಒಂದು ಕ್ರಾಂತಿಗೆ ಮುನ್ನುಡಿ ಹಾಡುವಂಥ ಸಾಮರ್ಥ್ಯವಿರುವ “ನೋಟಾ’ವನ್ನು ಕೇವಲ ಹಲ್ಲಿಲ್ಲದ ಹಾವನ್ನಾಗಿ ಮಾಡಿ ಬಿಡುವ ಪ್ರಯತ್ನಗಳು ನಡೆಯುತ್ತಲೇ ಇವೆ!
ಚುನಾವಣೆಯಲ್ಲಿ ಸ್ಪರ್ಧಿಸುವವರೆಲ್ಲ ಗೆಲುವೊಂದನ್ನೇ ತಮ್ಮ ಗುರಿ ಎಂದು ಭಾವಿಸಿರುವುದಿಲ್ಲ. ಹಲವು ಸಂದರ್ಭಗಳಲ್ಲಿ ಸ್ಪರ್ಧೆ ಸಾಂಕೇತಿಕವಾಗಿರುತ್ತದೆ. ಅದಕ್ಕೂ ಮುಖ್ಯವಾಗಿ, ವಿಷಯಾಧಾರಿತವಾಗಿ ಸ್ಪರ್ಧೆಗಿಳಿದು ತಾವು ಗಳಿಸುವ ಮತವನ್ನು ವಿಷಯ ಕುರಿತ ಜನಾಭಿಪ್ರಾಯ ಎಂದು ಪ್ರತಿಪಾದಿಸುವ ಮಾದರಿಯೂ ಇದೆ. ಹಿಂದೊಮ್ಮೆ ಶಿವರಾಮ ಕಾರಂತರಂಥ ಸಾಹಿತಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದುದರ ಹಿನ್ನೆಲೆ ಇದೇ ಆಗಿತ್ತು. ನೆನಪಿಡಬೇಕಾದ್ದೇನೆಂದರೆ, ಅಂದು ನೋಟಾ ಆಯ್ಕೆಯ ಬಟನ್ ಇರಲಿಲ್ಲ!
ಇಂದಿಗೂ ರಾಜಕಾರಣದಲ್ಲಿ, ನಾವು ಹೇಳುವ ಸಿದ್ಧಾಂತಗಳನ್ನು ಜನ ಗಮನಿಸಬೇಕು ಎಂಬ ಅರ್ಥದಲ್ಲಿ ಚುನಾವಣಾ ಕಣಕ್ಕಿಳಿಯುವ ಪ್ರವೃತ್ತಿ ಕಾಣುತ್ತಿದ್ದೇವೆ. ಆದರೆ, ಈ ಮಾದರಿಯಲ್ಲಿ ಗೆಲುವಿನ ಮಾತು ಹಾಗಿರಲಿ, ಗಮನಾರ್ಹ ಮತ ಪಡೆಯುವಲ್ಲಿಯೂ ಸಮಾಜ ಸುಧಾರಕರು ವಿಫಲರಾಗುತ್ತಾರೆ. ಜನ, ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ತಮ್ಮ ಮತ ವ್ಯರ್ಥವಾಗದಂತೆ ನೋಡಿಕೊಳ್ಳುವ ತರಾತುರಿಯಲ್ಲಿರುವುದರಿಂದ ಈ ದುರಂತ ನಡೆಯುತ್ತದೆ. ಇತ್ತ ಸಮಾಜಕ್ಕೆ ಸಂದೇಶ ಸಾರುವ ಉದ್ದೇಶದಲ್ಲಿ ಇರುವವರು ನಿರಾಶರಾಗುತ್ತಾರೆ. ಅಷ್ಟೇ ಅಲ್ಲ, ಅವರು ಪಡೆದ ಮತ ಠೇವಣಿ ಕಳೆದುಕೊಂಡವರ ಸಾಲಿಗೆ ಸೇರುತ್ತದೆ. ಪರಿಗಣನೆಯಲ್ಲಿಯೂ ಸಹ! ಅದರ ಬದಲು ಅಂಥವರೂ ಸೇರಿದಂತೆ ಪ್ರಜಾnವಂತರು ನೋಟಾ ಕುರಿತು ಹೆಚ್ಚಿನ ಪ್ರಚಾರ ಮಾಡಿ ಅದಕ್ಕೊಂದು ಗುರುತರ ಮತ ಗಳಿಸಿಕೊಟ್ಟರೆ ಅದು ಐತಿಹಾಸಿಕ ದಾಖಲೆಯಾಗುತ್ತದೆ. ಇನ್ನು 10 ವರ್ಷಗಳ ನಂತರ ನಡೆಯಬಹುದಾದ ಒಂದು ವಿಶ್ಲೇಷಣೆಯಲ್ಲಿ, ಇಂತಿಪ್ಪ ಕ್ಷೇತ್ರದಲ್ಲಿ 2018ರಲ್ಲಿ ಜನಾಂದೋಲನದ ಕಾರಣ ಇಂತಿಷ್ಟು ಪ್ರಮಾಣದ ನೋಟಾ ಮತ ಚಲಾವಣೆಯಾಗಿತ್ತು ಎಂಬರ್ಥದ ಉಲ್ಲೇಖ ಸಿಗುತ್ತದೆ. ನಿಜ, ಬದಲಾವಣೆ ಏಕಾಏಕಿ ಆಗುವುದಿಲ್ಲ. ಕೊನೇಪಕ್ಷ ನಮ್ಮ ಕಾರ್ಯಚಟುವಟಿಕೆ ಆ ಹಾದಿಯಲ್ಲಿರಬೇಕು!
ಮತದ ವಾಸ್ತವ ಶಕ್ತಿಯ ಮಾನದಂಡ
ಎಲೆಕ್ಟ್ರಾನಿಕ್ ಮತ ಯಂತ್ರ ಬೇಡ ಎಂಬ ಕೂಗು ಎಲ್ಲೆಡೆ ಜೋರಾಗಿದೆ. ಅದಕ್ಕೆ, ಬೇರೆ ಆಧುನಿಕ ದೇಶಗಳಲ್ಲಿಯೇ ಇಎಂ ಇಲ್ಲ ಎಂಬ ಆಧಾರ ಕೊಡಲಾಗುತ್ತದೆ. ಇಎಂನ ದೋಷ, ತಾಕತ್ತುಗಳ ಚರ್ಚೆ ಬದಿಗಿರಲಿ. ತೀರಾ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಇಎಂಗಿಂತ ಮತಪತ್ರ ವ್ಯವಸ್ಥೆ ಮಾಡುವುದು ಸುಲಭ ಎಂಬ ಕಾರಣವೂ ಇರಬಹುದು. ಆದರೆ ಈ ನೋಟಾ ಮತದಾನ ಪದ್ಧತಿ ಇಂಥ ದೇಶಗಳಲ್ಲೂ ಇದೆ. ಗ್ರೀಸ್, ಯುನೈಟೆಡ್ ಸ್ಟೇಟ್ಸ್ ಆಫ್ ನೆವಡಾ, ಉಕ್ರೇನ್, ಸ್ಪೈನ್, ರಷ್ಯಾ…. ಇತ್ತೀಚೆಗೆ ಬಲ್ಗೇರಿಯಾದಲ್ಲೂ ಎಲ್ಲ ಅಭ್ಯರ್ಥಿಗಳ ವಿರುದ್ಧದ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ.
ಬಲ್ಗೇರಿಯಾದಲ್ಲಿ 2016ರಲ್ಲಿ ಅಧ್ಯಕ್ಷರ ಚುನಾವಣೆಯಲ್ಲಿಯೇ “ಎಲ್ಲರ ವಿರುದ್ಧ’ ಎಂದು ಅವಕಾಶ ಕಲ್ಪಿಸಲಾಗಿತ್ತು. ಆಗ ಅಧ್ಯಕ್ಷರ ಆಯ್ಕೆಯ ಮೊದಲ ಸುತ್ತಿನಲ್ಲಿ ನೋಟಾ ಶೇ. 5.59ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು. ಮತದಾನದ ಎರಡನೇ ಸುತ್ತಿನಲ್ಲಿ ಕೂಡ ನೋಟಾ ಶೇ. 4.47ರ ಸಾಧನೆ ಮಾಡಿತು. 1990ರ ಸೋವಿಯತ್ ಯೂನಿಯನ್ ಚುನಾವಣೆಯಲ್ಲಿ ನೋಟಾ 200 ಸ್ಪರ್ಧೆಗಳಲ್ಲಿ ಹೊಸ ಸ್ಪರ್ಧಿಗಳನ್ನು ಹೂಡುವಂತೆ ಮಾಡಿತ್ತು. ಅವತ್ತಿನ ಸಂಯುಕ್ತ ರಷ್ಯಾದ 1500 ಸ್ಥಾನಗಳ ಚುನಾವಣೆಯಲ್ಲಿ ನನ್ ಆಫ್ ದ ಅಬೌವ್ ಆಯ್ಕೆ ಇತ್ತು. ಅವತ್ತಿನ ರಷ್ಯಾ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಹೇಳಿದ ಮಾತು ನಾಳೆ ಭಾರತಕ್ಕೂ ಅನ್ವಯವಾಗಬಹುದು, ಚುನಾವಣಾ ಅಕ್ರಮಗಳ ಕೂಡ ಬೆರೆತಿದ್ದ ಸಂದರ್ಭದಲ್ಲಿ ನೋಟಾ ಮತದಾರರಿಗೆ ತಮ್ಮ ಮತದ ಶಕ್ತಿಯ ವಾಸ್ತವ ಅನುಭವ ನೋಟಾ ಮೂಲಕ ಆಗಿದೆ.
ಸ್ಪೈನ್‌ನಲ್ಲಿ ನೋಟಾ ವಿಚಿತ್ರ ರೀತಿಯಲ್ಲಿ ಜಾರಿಯಲ್ಲಿದೆ. ಖಾಲಿ ಮತಪತ್ರವನ್ನು ಅಲ್ಲಿ ನೋಟಾ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಖಾಲಿ ಮತಪತ್ರಗಳು ಅರ್ಹ ಮತಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಶೇಕಡಾವಾರು ಮತಗಳಿಂದ ಶಾಸನ ಸಭೆಯ ಸ್ಥಾನ ಗಿಟ್ಟಿಸುವ ಪಕ್ಷಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಖಾಲಿ ಸ್ಥಾನಗಳು ನಿರ್ಮಾಣವಾಗುತ್ತವೆ. ಅಲ್ಲಿನ ಸಿÂಡಡಾನೋಸ್ ಎನ್ ಬ್ಲಾನ್ಕೋ ಪಕ್ಷ ಖಾಲಿ ಮತಪತ್ರ ಆಂದೋಲನ ನಡೆಸುತ್ತಿದೆ. ನಮ್ಮಲ್ಲೂ ನೋಟಾಗೆ ಮತ ಹಾಕಲು ಆಂದೋಲನ ನಡೆಸುವ ರಾಜಕೀಯ ಪಕ್ಷವೊಂದು ಹುಟ್ಟಿಕೊಂಡರೆ ತಪ್ಪೇನು?
ಹಲ್ಲುಗಳನ್ನೂ ಕೊಡಿ!
ಆ ಮಟ್ಟಿಗೆ ಅಮೆರಿಕ ಇಎಂನಂತೆ ನೋಟಾ ವಿಚಾರದಲ್ಲೂ ತೀರಾ ಸಾಂಪ್ರದಾಯಕವಾಗಿದೆ. ಇಲ್ಲಿನ ನೆವಡಾ ರಾಜ್ಯದಲ್ಲಿ ಮಾತ್ರ ಈ ನಿಯಮವನ್ನು 1976ರಷ್ಟು ಹಿಂದೆಯೇ ಜಾರಿಗೊಳಿಸಲಾಗಿತ್ತು. ಇಡೀ ದೇಶದಲ್ಲಿ ಜಾರಿ ತರುವ ಪ್ರಸ್ತಾಪ 2000ದ ಮಾರ್ಚ್ ಸಾಮಾನ್ಯ ಚುನಾವಣೆಯ ಸಂದರ್ಭದಲ್ಲಿ 64-36 ಮತ ಶೇಕಡಾದಿಂದ ಸೋಲಲ್ಪಟ್ಟಿತು. ಇಂಗ್ಲೆಂಡ್ ಕೂಡ ನೋಟಾ ಸಮ್ಮತಿಸಿಲ್ಲ. ಇಲ್ಲಿ ನೋಟಾ ಪ್ರಚಾರಕ್ಕಾಗಿಯೇ ನೋಟಾ ಯುಕೆ ಸಂಘಟನೆ 2010ರಲ್ಲಿ ಚಾಲ್ತಿಗೆ ಬಂದಿತ್ತು. ಸಂಗೀತ ನಿರ್ಮಾಪಕ ಜೇಮಿ ಸ್ಟಾನ್ಲಿ ಅದರ ಸಂಚಾಲಕರಾಗಿದ್ದರು. ನೋಟಾ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಅಬೌವ್ ಎಂಡ್ ಬಿಯಾಂಡ್ ಪಾರ್ಟಿ 2015ರಲ್ಲಿ 8 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. 2000ದಲ್ಲಿ ನೋ ಕ್ಯಾಂಡಿಡೇಟ್ ಡಿಸರ್ವ್ ಮೈ ವೋಟ್ ಎಂಬ ಪಕ್ಷ ಜನಿಸಿತ್ತು. 2010ರಲ್ಲಿ ಆ ಪಕ್ಷವನ್ನು ಪ್ರತಿನಿಧಿಸಿದ್ದ ಸ್ಟೀಫನ್ ಪಿಲಿಪ್ಸ್ ಶೇ. 0.7ರಷ್ಟು ಮತ ಪಡೆದು ಸ್ಪರ್ಧಿಸಿದ ಒಂಬತ್ತರಲ್ಲಿ ಏಳನೆಯವರಾದರು.
ಒಂದಂತೂ ನಿಜ, ನೋಟಾ ಜಾರಿಯಲ್ಲಿರುವಲ್ಲಿಯೂ ಅದಕ್ಕೆ ಶಕ್ತಿ ತುಂಬುವ ಕೆಲಸ ಆಗಿಲ್ಲ. ಇಂಗ್ಲೆಂಡ್‌ನಲ್ಲಿ ಗ್ರೀನ್ ಪಾರ್ಟಿಯಿಂದ ಹಿಡಿದು ವಿವಿಧ ಜನ ನಡೆಸಿದ ಹೋರಾಟ ಬರೀ ಈ ಮತಾವಕಾಶವಲ್ಲ, ಇದರ ಗೆಲುವಿಗೆ ಸಂಬಂಧಿಸಿದಂತೆ ಬೋಳು ಬಾಯಿಯಂತಾದರೆ ಪ್ರಯೋಜನವಿಲ್ಲ. ಹಲ್ಲು ಕೂಡ ಕೊಡಿ ಎಂದು ಆಗ್ರಹಿಸಲಾಗುತ್ತಿದೆ. ಯುಕೆಯಲ್ಲಿ ತಮ್ಮ ಹೆಸರನ್ನೇ ಬದಲಿಸಿ ನೋಟಾ ಗಮನ ಸೆಳೆೆಯುವಂತಹ ಪ್ರಯತ್ನ ಕೂಡ ನಡೆದಿತ್ತು. 2010ರಲ್ಲಿ ಎರಿಕ್ ಮಚ್ ಎಂಬ ವ್ಯಕ್ತಿ ತನ್ನ ಹೆಸರನ್ನು ಝೀರೋ, ನನ್ ಆಫ್ ದಿ ಎಬೌವ್ ಎಂದೇ ಬದಲಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದ. ಟೆರ್ರಿ ಮಾರ್ಷ್ ಎಂಬ ಬಾಕ್ಸರ್ ನನ್ ಆಫ್ ದಿ ಅಬೌವ್ ಇಲೆವೆನ್ ಎಂಬ ನಾಮಧೇಯ ಪಡೆದು ಸ್ಪರ್ಧಿಸಿದ್ದ!
ಸರ್ಬಿಯಾದಲ್ಲಂತೂ 2010ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನ್ ಆಫ್ ದಿ ಅಬೌವ್ ಹೆಸರಿನ ಪಕ್ಷ 22,905 ಮತಗಳನ್ನೇ ಪಡೆದಿದ್ದರಿಂದ ಅದಕ್ಕೆ ಒಂದು ಪಾರ್ಲಿಮೆಂಟ್ ಸ್ಥಾನ ಸಿಕ್ಕಿತ್ತು! ಪಾಕಿಸ್ತಾನದಲ್ಲಿಯೂ ಬ್ಯಾಲೆಟ್‌ಗೆ ನೋಟಾ ಸೇರಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ಸ್ವಯಂಘೋಷಿತವಾಗಿ 2013ರಲ್ಲಿ ನಡೆಸಿತ್ತಾದರೂ ಅಲ್ಲಿನ ನ್ಯಾಯಾಲಯ ಅದಕ್ಕೆ ತಡೆ ಒಡ್ಡಿತ್ತು. ಯುಕ್ರೇನ್, ಪೋಲ್ಯಾಂಡ್ ಮೊದಲಾದ ಹಲವು ದೇಶಗಳಲ್ಲಿ ನೋಟಾ ಪ್ರಯತ್ನ ನಡೆದಿದೆ.
ಕರ್ನಾಟಕದತ್ತ ಸಕಾರಾತ್ಮಕ ನೋಟಾ!
ಇವತ್ತಿಗೂ ನೋಟಾ ಕುರಿತ ನಕಾರಾತ್ಮಕ ಧೋರಣೆ ಬದಲಾಗಿಲ್ಲದಿರುವುದೇ ದೊಡ್ಡ ಸಮಸ್ಯೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಯಲ್ಲೂ ನೋಟಾ ಎಂಬುದು ಮತವನ್ನು ವ್ಯರ್ಥ ಮಾಡುವ ವ್ಯವಸ್ಥೆ ಎಂದೇ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ 2014ರ ಚುನಾವಣೆಯಲ್ಲಿ ಆರು ಮಿಲಿಯನ್ ಜನ ನೋಟಾ ಪರ ಮತ ಚಲಾಯಿಸಿದ್ದಾರೆ. ನಿಜ, ಒಂದೇಟಿಗೆ ಒಂದು ಲೋಕಸಭೆೆ ಅಥವಾ ವಿಧಾನಸಭೆ ಕ್ಷೇತ್ರದಲ್ಲಿ ನೋಟಾ ಬಹುಮತ ಪಡೆಯುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಆದರೆ ಹೀಗೆ ಯೋಚಿಸಲು ಅವಕಾಶವಿದೆ. ಮೇ 12ರಂದು ನಡೆಯಲಿರುವ ಕರ್ನಾಟಕದ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಸಾವಿರ ಮತಗಳು ನೋಟಾ ಪರವಾಗಿ ಬಿದ್ದರೆ 2 ಮಿಲಿಯನ್‌ಗೂ ಹೆಚ್ಚಿನ ಜನ ಇಂದಿನ ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿರುವ ಅಂಶ ಇತಿಹಾಸದಲ್ಲಿ ದಾಖಲಾಗುತ್ತದೆ. ಆ ನಿಟ್ಟಿನಲ್ಲಿ ಇನ್ನಷ್ಟು ಮತ್ತಷ್ಟು ಸಕಾರಾತ್ಮಕ ಚಿಂತನೆಗಳು ನಡೆಯಬೇಕಿವೆ.
– ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.