ನದಿ-ಕೆರೆಗಳಲ್ಲಿ ರಜಾ ದಿನಗಳ ಮಜಾ: ಮಕ್ಕಳಲ್ಲಿ ಇರಲಿ ಎಚ್ಚರ
Team Udayavani, Apr 9, 2018, 12:16 PM IST
ಮಹಾನಗರ: ಸಾಮಾನ್ಯವಾಗಿ ಬೇಸಗೆ ರಜೆ ಶುರುವಾಗುತ್ತಿದ್ದಂತೆ ಶಾಲಾ ಮಕ್ಕಳು ನದಿ, ಕೆರೆಗಳಿಗೆ ಈಜಾಡಲು ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಬೇಸಗೆ ರಜೆ ಇನ್ನೇನು ಪ್ರಾರಂಭ ಆರಂಭವಾಗುತ್ತಿದೆಯಷ್ಟೇ, ಆಗಲೇ ವಿಟ್ಲ ಮುಟ್ನೂರಿನ ಬಾಲಕನೋರ್ವ ಕೆಲವು ದಿನಗಳ ಹಿಂದೆ ಬಾವಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದು, ಈ ಬಗ್ಗೆ ಎಚ್ಚರ ವಹಿಸುವುದು ಅತೀ ಅಗತ್ಯ.
ಎಪ್ರಿಲ್ 1ರಂದು ಶಾಲೆಗೆ ರಜೆಯಿದ್ದ ಕಾರಣ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ಪಿಲಿಂಜದಲ್ಲಿ ಈಜಾಡಲೆಂದು ಬಾವಿಗಿಳಿದಿದ್ದ ಮೂವರು ಬಾಲಕರ ಪೈಕಿ 8ನೇ ತರಗತಿ ವಿದ್ಯಾರ್ಥಿ ದರ್ಶನ್ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೇಸಗೆ ರಜೆ ಆರಂಭವಾಗುವುದಕ್ಕೆ ಮುನ್ನವೇ ಜಿಲ್ಲೆಯಲ್ಲಿ ಇಂತಹ ದುರ್ಘಟನೆ ಸಂಭವಿಸಿರುವುದು ಎಲ್ಲರಿಗೂ ಎಚ್ಚರಿಕೆಯ ಪಾಠವಾಗಬೇಕು.
ಹೆತ್ತವರು ನಿಗಾ ವಹಿಸಬೇಕಿದೆ
ನದಿ-ಕೆರೆಗಳಲ್ಲಿ ಈಜಾಡಲು ತೆರಳುವುದು ಮಕ್ಕಳ ರಜಾ ದಿನಚರಿಗಳಲ್ಲಿ ಸಾಮಾನ್ಯ. ಆದರೆ ಈಜಾಡುವ ಬಗ್ಗೆ ಸಾಕಷ್ಟು ಎಚ್ಚರವಹಿಸಬೇಕು. ಅಚಾತುರ್ಯದಿಂದಲೋ, ಆಕಸ್ಮಿಕವಾಗಿಯೋ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಸರಣಿ ರೀತಿಯಲ್ಲಿ ಸಂಭವಿಸಿವೆ. ಇನ್ನಾದರೂ ದುರ್ಘಟನೆಗಳು ಸಂಭವಿಸದಂತೆ ಮಕ್ಕಳ ಬಗ್ಗೆ ಹೆತ್ತವರು ನಿಗಾ ವಹಿಸಬೇಕು.
ಸುಳಿಯ ಬಗ್ಗೆ ಎಚ್ಚರ ಅಗತ್ಯ
ಬೇಸಗೆಯಾದ್ದರಿಂದ ನದಿಗಳಲ್ಲಿ ನೀರು ಕಡಿಮೆ ಇರುತ್ತದೆ. ಆದರೂ ಕೆಲವು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಈಜಲು ಹೋಗಿ ಆಳ ಗಮನಕ್ಕೆ ಬಾರದೇ ನೀರಿನಲ್ಲಿ ಮುಳುಗುವ ಸಂದರ್ಭಗಳು ಎದುರಾಗುತ್ತವೆ. ಅನೇಕ ಸಂದರ್ಭಗಳಲ್ಲಿ ನದಿ ನೀರಿನಲ್ಲಿ ಸುಳಿ ಇರುವುದು ಗೊತ್ತಾಗದೆ, ಅದರ ಸೆಳೆತಕ್ಕೆ ಸಿಲುಕಿ ದುರ್ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರ ವಹಿಸಿ.
ಸೆಪ್ಟಂಬರ್‌ನಲ್ಲಿ ದೊಡ್ಡ ದುರಂತ
2017ರ ಸೆಪ್ಟಂಬರ್‌ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೂರು ದಿನ ನಿರಂತರವಾಗಿ ಎಂಟು ಮಂದಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪೈಕಿ ಆರು ಮಂದಿ ನೇತ್ರಾವತಿ ಮತ್ತು ಕುಮಾರಧಾರಾ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದರು. ಸೆ. 3ರಂದು ಕುಂದಾಪುರದ ಕೊರ್ಗಿಯ ಜೋಸ್ ಥಾಮಸ್ ಅವರ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
4ರಂದು ಇನೋಳಿಪದವಿನಲ್ಲಿ ನೇತ್ರಾವತಿ ನದಿಗೆ ಈಜಾಡಲು ತೆರಳಿದ ಮೂವರು ವಿದ್ಯಾರ್ಥಿಗಳಾದ ಶುಭಂ ರಾಜ್, ಶ್ರೀರಾಮ್, ವಿಕಿಲ್ ಮೃತಪಟ್ಟ ಬೆನ್ನಲ್ಲೇ, 5ರಂದು ಸವಣೂರಿನಲ್ಲಿ ಕುದ್ಮಾರು ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸ್ನಾನಕ್ಕಿಳಿದ ಸಹೋದರರಾದ ಕಡಬ ಅಲರ್ಮೆಯ ಹರಿಪ್ರಸಾದ್ ಮತ್ತು ಸತ್ಯಪ್ರಸಾದ್ ಸಾವನ್ನಪ್ಪಿದ್ದರು. ಇದೇ ನದಿಯಲ್ಲಿ ಇಳಿಯುವಾಗ ಕಾಲು ಜಾರಿ ಬಿದ್ದು ಪೊಳಲಿ ನಿವಾಸಿ ಹರಿ ಅವರು ಸೆ. 3ರಂದು ನೀರುಪಾಲಾಗಿದ್ದರು. ಅದೇ ದಿನ ಹೆಬ್ರಿಯಲ್ಲಿ ಬೇಳಂಜೆ ದಾಸನಗದ್ದೆ ನಿವಾಸಿ ಕರುಣಾಕರ ಪೂಜಾರಿ ಸ್ನಾನ ಮಾಡಲು ಹೋದವರು ಕಾಲು ಜಾರಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದರು.
ಬೀಚ್‌ನಲ್ಲಿ ಆಟ: ಇರಲಿ ಎಚ್ಚರ
ಪರವೂರಿನ ವಿದ್ಯಾರ್ಥಿಗಳು ರಜೆ ಸಂದರ್ಭ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಅಥವಾ ಪ್ರವಾಸಕ್ಕೆಂದು ಬಂದಾಗ ಸಮುದ್ರ ನೋಡಲು ತೆರಳಿ ಈಜಾಡುವುದು ಸಾಮಾನ್ಯ.ಈಜು ತಿಳಿಯದಿದ್ದಲ್ಲಿ ಅಥವಾ ಸಮುದ್ರದ ಆಳದಲ್ಲಿ ಈಜಾಡಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ನಡೆಯುತ್ತಲೇ ಇದೆ. ಜೀವ ರಕ್ಷಕ ತಂಡದವರು ಅಥವಾ ಸ್ಥಳೀಯರ ಎಚ್ಚರಿಕೆಯನ್ನೂ ಲೆಕ್ಕಿಸದೆ ತೆರೆಯ ಸೆಳೆತಕ್ಕೆ ಸಿಕ್ಕಿ ಅಪಾಯ ಆಹ್ವಾನಿಸಿಕೊಳ್ಳುವ ಸಂದರ್ಭ ಈ ಹಿಂದೆಯೂ ಹಲವು ಬಾರಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಎಚ್ಚರವಹಿಸಬೇಕು. ಸೆ. 5ರಂದು ಮಲ್ಪೆ ಬೀಚ್‌ನಲ್ಲಿ ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಕ್ಕಿ ಪಶ್ಚಿಮ ಬಂಗಾಲದ ರತನ್ ಅವರು ಸಮುದ್ರಪಾಲಾಗುವುದರಿಂದ ಅದೃಷ್ಟವಶಾತ್ ಪಾರಾಗಿದ್ದರು. ಜೀವರಕ್ಷಕ ತಂಡದವರು ರಕ್ಷಿಸದೇ ಇದ್ದರೆ ಬೇಕಂತಲೇ ಅಪಾಯ ಆಹ್ವಾನಿಸಿಕೊಂಡಂತಾಗುತ್ತಿತ್ತು ಎಂಬುದು ಉಲ್ಲೇಖನೀಯ.
ಸೆಲ್ಫಿ ಜೀವಕ್ಕೆ ಕುತ್ತು ತರದಿರಲಿ
ಸೆಲ್ಫಿಯ ಅತಿಯಾದ ಕ್ರೇಝ್ ಕೂಡ ಜೀವಕ್ಕೆ ಕುತ್ತು ತಂದ ಅನೇಕ ಘಟನೆಗಳು ನಡೆದಿವೆ. ಜಲಪಾತ, ನದಿ ದಡಗಳಲ್ಲಿ ಸೆಲ್ಫಿ ತೆಗೆಯುವಾಗ ದಡದಿಂದ ಗರಿಷ್ಠ ಅಂತರ ಕಾಯ್ದುಕೊಳ್ಳಿ. ನದಿ ದಡ ಅಥವಾ ಜಲಪಾತದ ತೀರಾ ಸನಿಹಕ್ಕೆ ತೆರಳಿ ಸೆಲ್ಫಿ ಅಥವಾ ಫೋಟೋ ತೆಗೆಯುವ ದುಸ್ಸಾಹಸ ಬೇಡ.
1077 ಸಂಪರ್ಕಿಸಿ
ನೀರಿನ ಆಳದಲ್ಲಿ ಈಜಾಡುವುದು, ಸಮುದ್ರದಲ್ಲಿ ದೊಡ್ಡ ತೆರೆಗಳ ಮಧ್ಯೆ ಈಜಲು ತೆರಳುವುದು, ಈಜಾಡಲು ಪೈಪೋಟಿ ನಡೆಸುವುದು ಮುಂತಾದವು ಅಪಾಯಕ್ಕೆ ಸ್ವತಃ ಆಹ್ವಾನ ನೀಡಿದಂತೆ ಎಂಬ ಅರಿವಿರಲಿ. ಒಂದು ವೇಳೆ ನದಿಯಲ್ಲಿ ಆಟವಾಡಲು ತೆರಳಿದ ವೇಳೆ ಅಪಾಯದ ಬಗ್ಗೆ ಸಾರ್ವಜನಿಕರು ತಿಳಿ ಹೇಳಿದರೆ ನಿರ್ಲಕ್ಷಿಸದಿರಿ. ನೀರಾಟ ಆಡಲು ತೆರಳಿದ ಸಂದರ್ಭ ಜತೆಗಿದ್ದವರು ಅಪಾಯದಲ್ಲಿ ಸಿಲುಕಿಕೊಂಡಲ್ಲಿ ತತ್‌ಕ್ಷಣಕ್ಕೆ ಜಿಲ್ಲಾಧಿಕಾರಿ ಕಂಟ್ರೋಲ್ ರೂಂ ಸಂಖ್ಯೆ 1077 ಸಂಪರ್ಕಿಸಿ ಮಾಹಿತಿ ನೀಡಬಹುದು. ಮಾಹಿತಿಗನುಗುಣವಾಗಿ ಪೂರಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಿಬಂದಿ ಕಾರ್ಯೋನ್ಮುಖರಾಗುತ್ತಾರೆ ಎಂಬುದಾಗಿ ಜಿಲ್ಲಾಧಿಕಾರಿ ಕಚೇರಿ ಸಿಬಂದಿ ತಿಳಿಸಿದ್ದಾರೆ.
ಅಪಾಯ ಆಹ್ವಾನಿಸಿಕೊಳ್ಳದಿರಿ
.ಈಜಲು ಬರದಿದ್ದರೆ ಎಲ್ಲಿಯೂ ನೀರಿಗಿಳಿಯಬೇಡಿ.
. ಸ್ಥಳೀಯರ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸದಿರಿ.
.ಮದ್ಯಪಾನ ಮಾಡಿ ನೀರಿನ ಸನಿಹಕ್ಕೂ ಹೋಗಬೇಡಿ.
. ಸೆಲ್ಫಿ ಕ್ಲಿಕ್ಕಿಸುವಾಗ ನದಿ ದಡದಿಂದ ಗರಿಷ್ಠ ಅಂತರ ಕಾಯ್ದುಕೊಳ್ಳಿ.
ಮಾಹಿತಿ ನೀಡಿ ತೆರಳಿ
ಸಮುದ್ರ ಬದಿಗಳಲ್ಲಾದರೆ ಜೀವರಕ್ಷಕ ಈಜುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬಂದಿ ಇರುತ್ತಾರೆ. ಆದರೆ ನದಿ ಬದಿಗಳಲ್ಲಿ ತತ್‌ಕ್ಷಣಕ್ಕೆ ಸಿಗುವವರು ಯಾರೂ ಇರುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಥವಾ ಯಾರೇ ಆಗಲಿ ನದಿಯಲ್ಲಿ ಈಜಾಡಲು ತೆರಳುವಾಗ ಹತ್ತಿರದಲ್ಲಿರುವ ಯಾವುದಾದರೂ ಅಂಗಡಿಯೋ, ಸಂಘ-ಸಂಸ್ಥೆಗಳಿಗೋ ಮಾಹಿತಿ ನೀಡಿ ಹೋಗುವುದು ಉತ್ತಮ. ಕೆಲವರು ತಮಗೆ ಈಜು ಬರುತ್ತದೆ ಎನ್ನುತ್ತಾರೆ. ಈಜುತ್ತಾ ಸುಳಿ, ಆಳಕ್ಕೆ ಸಿಲುಕಿಕೊಂಡು ಅಪಾಯಕ್ಕೆ ಒಳಗಾಗುತ್ತಾರೆ. ಯಾರೇ ಎಚ್ಚರಿಕೆ ನೀಡಿದರೂ ಅದನ್ನು ಉಪೇಕ್ಷಿಸದೆ ಸ್ವೀಕರಿಸಬೇಕು.
-ಮೋಹನ್ ಕುಮಾರ್
ಜೀವರಕ್ಷಕ ಈಜುಗಾರರ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.