ಕಗ್ಗತ್ತಲಲ್ಲಿ ಇದ್ದಾಕೆ ಕರುಣೆಯ ದೀಪ ಹಿಡಿದಳು!
Team Udayavani, Apr 10, 2018, 12:30 AM IST
ಈಕೆ ಎಳವೆಯಲ್ಲೇ ಹೆತ್ತವರನ್ನು ಕಳೆದುಕೊಂಡಳು. ಮುಂದೆ, ಬಂಧುಗಳ ಆಶ್ರಯದಲ್ಲಿ ಬೆಳೆದಳು. 18ನೇ ವರ್ಷಕ್ಕೆ ಮದುವೆಯಾಗಿ, ಮರುವರ್ಷವೇ ತಾಯಿಯಾದಳು. ಇಂಥವಳನ್ನು, ಕೈ ಹಿಡಿದ ಗಂಡನೇ ವೇಶ್ಯಾವಾಟಿಕೆಗೆ ತಳ್ಳಿಬಿಟ್ಟ. ಆ ನರಕದಲ್ಲಿ ಕೆಲ ವರ್ಷ ಕಳೆದ ಈಕೆ, ನಂತರ ಅಲ್ಲಿಂದ ಎದ್ದು ಬಂದಳು. ತನ್ನಂಥ ನತದೃಷ್ಟರ ಏಳೆಗೆಗೆಂದೇ ಒಂದು ಎನ್‌ಜಿಓ ಆರಂಭಿಸಿದಳು! ಇಂಥ ಹಿನ್ನೆಲೆಯ ಜಯಮ್ಮ ಭಂಡಾರಿ, ಇದೀಗ 5000ಕ್ಕೂ ಹೆಚ್ಚು ನಿರ್ಗತಿಕ ಹೆಣ್ಣು ಮಕ್ಕಳಿಗೆ ನೌಕರಿ ಕೊಡಿಸಿದ್ದಾರೆ. 3000ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಷ್ಟೇ ಅಲ್ಲ, 45 ಹೆಣ್ಣು ಮಕ್ಕಳನ್ನು ಜೊತೆಗಿಟ್ಟುಕೊಂಡು ಸಾಕುತ್ತಿದ್ದಾರೆ. ಈ ಸೇವೆಯನ್ನು ಪರಿಗಣಿಸಿ, ತಿಂಗಳ ಹಿಂದೆ ನಡೆದ ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ ಜಯಮ್ಮ ಭಂಡಾರಿ ಅವರನ್ನು ರಾಷ್ಟ್ರಪತಿಗಳು ಸನ್ಮಾನಿಸಿದ್ದಾರೆ…
ಈ ಸುದ್ದಿ ಓದಿದಾಗ, ಹೆಮ್ಮೆ, ಆಶ್ಚರ್ಯ ಮತ್ತು ಕುತೂಹಲ ಒಟ್ಟೊಟ್ಟಿಗೇ ಆಯಿತು. ಒಂದು ಕಾಲಕ್ಕೆ ವೇಶ್ಯೆ ಅನ್ನಿಸಿ ಕೊಂಡಿದ್ದಾಕೆ, ಅಲ್ಲಿಂದ ಎದ್ದು ಬಂದು ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರಲ್ಲ: ಆ ವಿವರಗಳನ್ನು ಅವರಿಂದಲೇ ಕೇಳಬೇಕು ಅನ್ನಿಸಿತು. ಒಂದಿಡೀ ವಾರದ ಸತತ ಪ್ರಯತ್ನದ ನಂತರ, ಕಡೆಗೂ ಮಾತಿಗೆ ಸಿಕ್ಕಿದ ಜಯಮ್ಮ ಭಂಡಾರಿ, ತಮ್ಮ ಬದುಕಿನ ಕಥೆ- ವ್ಯಥೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಅದು ಹೀಗೆ…
“ತೆಲಂಗಾಣ ರಾಜ್ಯದ ನಾಲ್ಗೊಂಡ ಜಿಲ್ಲೆಯ ನಕ್ರಕಾಲ್ ಎಂಬ ಹಳ್ಳಿ ನನ್ನ ಹುಟ್ಟೂರು. ಕಡುಬಡತನ ಅಂತಾರಲ್ಲ; ಅಂಥ ಹಿನ್ನೆಲೆ ಹೊಂದಿದ್ದ ಕುಟುಂಬ ನಮ್ಮದು. 9 ತಿಂಗಳ ಮಗುವಿದ್ದಾಗ ತಂದೆಯನ್ನೂ, 2 ವರ್ಷದವಳಿದ್ದಾಗ ತಾಯಿಯನ್ನೂ ಕಳೆದುಕೊಂಡ ನತದೃಷ್ಟೆ ನಾನು. ಮುಂದೆ, ಅಜ್ಜಿ-ತಾತನ ಆಶ್ರಯದಲ್ಲಿ ಬೆಳೆದೆ. ನನ್ನ ಬಾಲ್ಯ, ಅತೀ ಅನ್ನುವಷ್ಟು ಕಷ್ಟಗಳಿಂದ ಕೂಡಿತ್ತು. ಒಂದು ಹೊತ್ತಿನ ಅನ್ನಕ್ಕೂ ಗತಿಯಿರಲಿಲ್ಲ. ಬಂಧುಗಳು ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ನನ್ನ ವಾರಿಗೆಯ ಮಕ್ಕಳೊಂದಿಗೆ ಅವರ ಹೆತ್ತವರು ಬಂದಾಗ, ಯಾವುದಾದರೂ ಹೊಸ ವಸ್ತು ತೋರಿಸಿ- ನಮ್ಮಪ್ಪ, ಅಮ್ಮ ತೆಗೆದುಕೊಟ್ರಾ ಗೊತ್ತಾ? ಎಂದು ಸಹಪಾಠಿಗಳು ಹೇಳಿದಾಗ, ವಿಪರೀತ ಸಂಕಟವಾಗುತ್ತಿತ್ತು. ಈ ನಡುವೆಯೇ ನಾನು ದೊಡ್ಡವಳಾದೆ. 10ನೇ ತರಗತಿ ಮುಗಿಯುತ್ತಿದ್ದಂತೆಯೇ ಬಂಧುಗಳು, ನೀನು ಓದಿದ್ದು ಸಾಕು ಅಂದರು. ಈ ಮಧ್ಯೆ, ಕೆಲವೇ ದಿನಗಳ ಅಂತರದಲ್ಲಿ, ನನ್ನ ತಾತ-ಅಜ್ಜಿ ತೀರಿಕೊಂಡರು. ಆಗ, ಬಂಧುಗಳೆಲ್ಲ ಚರ್ಚಿಸಿ, ವರಸೆಯಲ್ಲಿ ಚಿಕ್ಕಪ್ಪನಾಗಬೇಕಿದ್ದ ನೆಂಟರ ಬಳಿ ನನ್ನನ್ನು ಬಿಟ್ಟರು.
ಆ ದಿನಗಳಲ್ಲಿಯೇ, ಕುಟುಂಬದ ಮದುವೆಯೊಂದರಲ್ಲಿ ಯುವಕನೊಬ್ಬ ಪರಿಚಯವಾದ. ಅವನನ್ನು ತುಂಬಾ ಹಚ್ಚಿಕೊಂಡೆ. ಪರಿಣಾಮ, ಗೆಳೆತನ, ಕೆಲವೇ ದಿನಗಳಲ್ಲಿ ಪ್ರೇಮಕ್ಕೆ ತಿರುಗಿ, ಮದುವೆಯಲ್ಲಿ ಮುಕ್ತಾಯವಾಯಿತು. ವರ್ಷ ಕಳೆಯುತ್ತಲೇ ಹೆಣ್ಣು ಮಗುವಿನ ತಾಯಿಯಾದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಮಗಳು ಹುಟ್ಟಿದ ನಂತರ, ನನ್ನ ಗಂಡ ಕುಡಿಯಲು ಕಲಿತುಬಿಟ್ಟ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರತೊಡಗಿದ. “ಯಾಕೆ ಕೆಲಸಕ್ಕೆ ಹೋಗ್ತಿಲ್ಲ? ನೀವು ದುಡಿಯದೇ ಹೋದ್ರೆ ನಮ್ಮ ಗತಿಯೇನು?’ ಅಂತ ಕೇಳಿದ್ದಕ್ಕೆ, ಜಗಳ ಆರಂಭಿಸಿ, ದನಕ್ಕೆ ಹೊಡೆಯುವಂತೆ ಹೊಡೆದ. “ನಾನು ಕೆಲಸಕ್ಕೆ ಹೋಗಲ್ಲ. ನಿಮ್ಮ ತವರಿನಿಂದ ದುಡ್ಡು ಈಸ್ಕೊಂಡು ಬಾ ಹೋಗ್…’ ಅಂದ. ದಿಕ್ಕು ತೋಚದೆ ಚಿಕ್ಕಪ್ಪನ ಮನೆಗೆ ಬಂದೆ. ನಡೆದಿದ್ದನ್ನೆಲ್ಲ ವಿವರಿಸಿದೆ. ಅವರು-“ನೋಡಮ್ಮಾ, ನಮ್ಮ ಜವಾಬ್ದಾರೀನ ನಾವು ಮಾಡಿದೀವಿ. ನೀನು ಒಬ್ಬಳೇ ಆಗಿದ್ದಿದ್ರೆ ಖಂಡಿತಾ ಜಾಗ ಕೊಡ್ತಿದ್ವಿ. ಆದ್ರೆ ನೀವೀಗ ಮೂರು ಜನ ಇದೀರ. ಹಾಗಾಗಿ ಯಾರಿಗೂ ಎಂಟ್ರಿ ಇಲ್ಲ. ನಿನ್ನ ಗಂಡ ಹೇಳಿದಂತೆ ಕೇಳಿಕೊಂಡು ಬದುಕು’ ಅಂದುಬಿಟ್ಟರು.
ಮುಂದೇನು ಮಾಡಬೇಕೆಂದೇ ತಿಳಿಯಲಿಲ್ಲ. ಅಳುತ್ತಲೇ ಮನೆಗೆ ವಾಪಸಾದೆ. ನಾನು ಬರಿಗೈಲಿ ಬಂದದ್ದನ್ನು ನೋಡಿ ಗಂಡ ವ್ಯಗ್ರನಾದ. ಮತ್ತೆ ಜಗಳ ತೆಗೆದ. ಮನಬಂದಂತೆ ಹೊಡೆದ. ಅಷ್ಟಕ್ಕೇ ಸುಮ್ಮನಾಗದೆ, ಬ್ರೋಕರ್ ಒಬ್ಬನ ಬಳಿ ಹಣ ಪಡೆದು ನನ್ನನ್ನು ವೇಶ್ಯಾವಾಟಿಕೆಗೆ ಮಾರಿಬಿಟ್ಟ. “ನನಗೆ ದುಡ್ಡು ಬೇಕು. ಅದಕ್ಕಾಗಿ ನೀನು ಈ ಕೆಲ್ಸ ಮಾಡ್ಲೆàಬೇಕು. ಮಾಡ್ಲಿಲ್ಲಾಂದ್ರೆ ಈ ಮಗೂನ ಕುತ್ತಿಗೆ ಹಿಸುಕಿ ಸಾಯಿಸಿಬಿಡ್ತೀನಿ’ ಎಂದು ಹೆದರಿಸಿದ. ಅಂಥದೊಂದು ಹೇಯ ಕೃತ್ಯಕ್ಕೂ ಅವನು ಹೇಸುವುದಿಲ್ಲ ಎಂದು ಆ ವೇಳೆಗೆ ನನಗೂ ಅರ್ಥವಾಗಿತ್ತು. ಮಗಳನ್ನು ಉಳಿಸಿಕೊಳ್ಳಬೇಕು ಎಂಬ ಒಂದೇ ಆಸೆಯಿಂದ ಗಂಡ ಹೇಳಿದಂತೆಯೇ ಕೇಳಿದೆ. ಹೀಗೆ ಬದುಕುವ ಬದಲು ಆತ್ಮಹತ್ಯೆ ಮಾಡಿಕೋಬೇಕು ಅನಿಸುತ್ತಿತ್ತು. ಮರುಕ್ಷಣವೇ-ನಾನೇನಾದ್ರೂ ಆತ್ಮಹತ್ಯೆ ಮಾಡಿಕೊಂಡ್ರೆ ಮಗಳು ಅನಾಥೆ ಆಗ್ತಾಳೆ. ಈ ಸಮಾಜ, ಮುಂದೊಂದು ದಿನ ಅವಳನ್ನೂ ವೇಶ್ಯೆಯನ್ನಾಗಿ ಮಾಡುತ್ತೆ ಅನಿಸಿದಾಗ, ಮಗಳನ್ನು ಚೆನ್ನಾಗಿ ಓದಿಸಿ ಆಫೀಸರ್ ಮಾಡಿ, ಆಮೇಲೆ ಸಾಯೋಣ ಅಂತ ಸುಮ್ಮನಾಗ್ತಿದ್ದೆ.
ದಿನಗಳು ಕಳೆದಂತೆಲ್ಲ, ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ನನಗೇ ವಾಕರಿಕೆ ಬರತೊಡಗಿತು. ಎಲ್ಲಾದ್ರೂ ಭಿಕ್ಷೆ ಬೇಡಿಕೊಂಡು ಬದುಕೋದೇ ವಾಸಿ ಅನ್ನಿಸ್ತು. ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಗಂಡನಿಗೆ ಗುಡ್‌ಬೈ ಹೇಳಿ, ಮಗಳನ್ನು ಎತ್ತಿಕೊಂಡು ಬಂದುಬಿಟ್ಟೆ. ಒಂದು ಎನ್‌ಜಿಓದಲ್ಲಿ ಆಶ್ರಯ ಪಡೆದೆ. ಅಲ್ಲಿಯೇ ಜೈ ಸಿಂಗ್ ಥಾಮಸ್ ಎಂಬ, ದೇವರಂಥ ವ್ಯಕ್ತಿಯೊಬ್ಬರ ಪರಿಚಯವಾಯಿತು. ಅದೇ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್. ಅವರು, ನನ್ನ ಬದುಕಿನ ಕಥೆ ಕೇಳಿ ಮರುಗಿದರು. ಆ ಎನ್‌ಜಿಓದಲ್ಲೇ ಕೆಲಸ ಕೊಡಿಸಿದರು. ಅಷ್ಟೇ ಅಲ್ಲ; ನಿನ್ನಂತೆಯೇ ನೋವು ತಿನ್ನುತ್ತಿರುವ ಸಾವಿರಾರು ಹೆಂಗಸರಿದ್ದಾರಲ್ಲ; ಅವರ ಏಳಿಗೆಗಾಗಿ ನೀನೇ ಒಂದು ಎನ್‌ಜಿಓ ಆರಂಭಿಸಬಾರದೇಕೆ ಎಂಬ ಸಲಹೆಯನ್ನೂ ಕೊಟ್ಟರು. ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಕಲಿತೆ. ನಂತರ ವೇಶ್ಯೆಯರಿಗೆ, ಅವರ ಮಕ್ಕಳಿಗೆ, ನಿರ್ಗತಿಕರಿಗೆ ಆಶ್ರಯ ನೀಡುವ ಉದ್ದೇಶದಿಂದ- ಚೈತನ್ಯ ಮಹಿಳಾ ಮಂಡಳಿ ಎಂಬ ಎನ್‌ಜಿಓ ಆರಂಭಿಸಿದೆ. ಇದಾಗಿದ್ದು 1998ರಲ್ಲಿ.
ಹಿತೈಷಿಗಳು ಉದಾರವಾಗಿ ನೀಡಿದ ಹಣ, ನಾನು ಆಪದ್ಧನದ ರೂಪದಲ್ಲಿ ಉಳಿಸಿದ್ದ ಹಣ- ಇದಿಷ್ಟೇ ಅಲ್ಪ ಬಂಡವಾಳದಲ್ಲಿ
ಎನ್‌ಜಿಓ ಶುರುವಾಯಿತು. ಮೊದಲು ಆಶ್ರಯ ನೀಡುವುದು, ನಂತರ ಕೌನ್ಸೆಲಿಂಗ್ ಕೊಡಿಸಿ, ಕೆಲಸಕ್ಕೆ ಸೇರಿಸುವುದು ನನ್ನ ಉದ್ದೇಶವಾಗಿತ್ತು. ಆದರೆ, ದಿಢೀರನೆ ಕಸುಬು ಬಿಡಲಿಕ್ಕೆ ವೇಶ್ಯೆಯರು ರೆಡಿ ಇರ್ತಿರಲಿಲ್ಲ. ವೇಶ್ಯೆಯರ ಮನೆಗೆ ಬಂದು ಅವರನ್ನು ಕನ್ವಿನ್ಸ್ ಮಾಡೋಕೆ ನನ್ನ ಜೊತೆಗಿದ್ದವರೂ ಒಪ್ತಾ ಇರಲಿಲ್ಲ. ಕೆಲವರಂತೂ -ಮೊನ್ನೆ ಮೊನ್ನೆತನಕ ನೀನೂ ಇದೇ ಕಸುಬು ಮಾಡ್ತಿದ್ದೆ ಅಲ್ವ? ಈಗೇನು ಇದ್ದಕ್ಕಿದ್ದಂತೆ ಜ್ಞಾನೋದಯ ಆಗಿದೆಯಲ್ಲ… ಎಂದು ವ್ಯಂಗ್ಯವಾಗಿ ಕೇಳುತ್ತಿದ್ದರು. 2006ರಲ್ಲಿ, ಜೈಲಿನಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಏಡ್ಸ್ ಜಾಗೃತಿ ತಂಡದ ನಿರ್ದೇಶಕ, ನನ್ನನು ಕಂಡಾಕ್ಷಣ- ಈ ಮೊದುÉ ನೀನು ಬಸ್‌ಸ್ಟಾಂಡ್‌ನಲ್ಲಿ ಗಿರಾಕಿಗೆ ಕಾಯ್ತಾ ಇರಿ¤ದ್ದೆ ಅಲ್ವ ಎಂದು ಎಲ್ಲರ ಎದುರೇ ಜೋರಾಗಿ ಕೇಳಿಬಿಟ್ಟಿದ್ದ! “ಈ ಕೆಲಸ ಬಿಟ್ಟು ನನ್ನ ಜೊತೆ ಬನ್ನಿ’ ಎಂದು ಮನವಿ ಮಾಡಿದರೆ- ‘ನೋಡೂ, ಈಗ ನಮಗೆ ದಿನಾಲೂ ದುಡ್ಡು ಸಿಗುತ್ತೆ, ಡ್ರಿಂಕ್ಸ್ ಸಿಗುತ್ತೆ. ನಾನ್‌ವೆಜ್ ಊಟ ಸಿಗುತ್ತೆ. ನೀನೂ ಅದನ್ನೆಲ್ಲಾ ಕೊಡೋದಾದ್ರೆ ಖಂಡಿತಾ ಬರಿ¤àವಿ..’ ಎಂಬ ಉತ್ತರ ಹೆಂಗಸರಿಂದ ಬರುತ್ತಿತ್ತು. ವೇಶ್ಯೆಯಾಗಿಯೇ ಬದುಕಿದ್ರೆ ಐದೇ ವರ್ಷದಲ್ಲಿ ಏಡ್ಸ್ ಬರುತ್ತೆ. ಆಮೇಲೆ ನಿಮ್ಮನ್ನು ಈ ಸಮಾಜ ಬೀದಿನಾಯಿಗಿಂತ ಕಡೆಯಾಗಿ ನೋಡುತ್ತೆ. ಹಾಗಾಗೋದು ಬೇಡ. ನಿಮ್ಮಿಂದ ಆಗುವಂಥ ಕೆಲಸ ಮಾಡಿ. ಇರುವುದನ್ನೇ ಹಂಚಿಕೊಂಡು ತಿನ್ನೋಣ. ನಿಮಗೆ ಮಾತ್ರವಲ್ಲ; ನಿಮ್ಮ ಮಕ್ಕಳಿಗೂ ಆಶ್ರಯ ಕೊಡ್ತೀನಿ. ಅವರನ್ನು ಸತøಜೆಗಳನ್ನಾಗಿ ರೂಪಿಸೋಣ. ನನ್ನೊಂದಿಗೆ ಬನ್ನಿ’ ಎಂದು ಬೇಡಿಕೊಂಡೆ. ನನ್ನ ಈ ಪರಿಶ್ರಮಕ್ಕೆ ತುಂಬಾ ನಿಧಾನವಾಗಿ ಆದ್ರೂ ಪ್ರತಿಫಲ ದೊರೆಯಿತು.
ಈಗ, ನನ್ನ ಸುಪರ್ದಿಯಲ್ಲಿ 45 ಹೆಣ್ಣು ಮಕ್ಕಳಿವೆ. (ಅವರೊಂದಿಗೇ ನನ್ನ ಮಗಳೂ ಇದ್ದಾಳೆ) ಇವರೆಲ್ಲಾ ವೇಶ್ಯೆಯರ ಮಕ್ಕಳೇ. ಎಲ್ಲರೂ ನನ್ನನ್ನು ಪ್ರೀತಿಯಿಂದ “ಅಮ್ಮಾ’ ಅನ್ನುತ್ತವೆ. ಸ್ವಂತ ತಾಯಿಯನ್ನು ಕಾಣದೇ ಬೆಳೆದವಳು ನಾನು. ಅಂಥವಳು ಈಗ 45 ಮಕ್ಕಳಿಗೆ ಅಮ್ಮನಾಗಿ ಪ್ರೀತಿ ಹಂಚಾ¤ ಇದೀನಿ. ಇಷ್ಟಲ್ಲದೆ, 3000ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ, ವೇಶ್ಯಾವೃತ್ತಿ ಯಲ್ಲಿರುವ ತಮ್ಮ ಅಮ್ಮಂದಿರೊಂದಿಗೇ ಬದುಕುತ್ತಿರುವ 600 ಹೆಣ್ಣು ಮಕ್ಕಳಿಗೆ ಊಟ, ಬಟ್ಟೆ, ಪಠ್ಯಪುಸ್ತಕದ ಖರ್ಚುಗಳನ್ನು ನಾವು ಕೊಡ್ತಿದೀವಿ. ಎನ್‌ಜಿಓ ಅಂದ್ರೆ ತುಂಬಾ ಫಂಡ್ ಸಿಗುತ್ತೆ ಎಂಬ ಭಾವನೆ ಹಲವರಿಗಿದೆ. ಸತ್ಯ ಏನೆಂದ್ರೆ, ದೊಡ್ಡ ದೊಡ್ಡ ಎನ್‌ಜಿಓಗಳಿಗೆ, ನಯವಾಗಿ ವ್ಯವಹಾರ ಮಾಡುವವರಿಗೆ ಜಾಸ್ತಿ ದುಡ್ಡು ಸಿಗುತ್ತೆ. ನಾನು ಹೆಚ್ಚು ಓದಿದವಳಲ್ಲ. ಹಾಗಾಗಿ, ಜಾಸ್ತಿ ಹಣ ಪಡೆಯುವ “ಮಾರ್ಗ’ ನನಗೆ ಗೊತ್ತಿಲ್ಲ. ಈಗಲೂ ಪರಿಚಿತರು, ಹಿತೈಷಿಗಳು ಉದಾರವಾಗಿ ನೀಡುವ ಹಣದ ಬಲದಿಂದಲೇ ನಮ್ಮ ಸಂಸ್ಥೆ ನಡೀತಾ ಇದೆ.
ಒಂದು ಮಾತು ಕೇಳಿ: ಅವಳು ವೇಶ್ಯೆಯೇ ಆಗಿರಬಹುದು. ಅಂಥವಳು ಕೂಡ ಪ್ರತಿಯೊಬ್ಬ ಗಂಡಿನಲ್ಲೂ ಒಬ್ಬ ಪ್ರೇಮಿಯನ್ನು ಹುಡುಕ್ತಾಳೆ. ಆದ್ರೆ, ಗಂಡಸರು, ಹದ್ದಿನಂತೆ ಮೇಲೆರಗಿ ಬರ್ತಾರೆ. ಒರಟಾಗಿ, ವಿಕೃತವಾಗಿ ವರ್ತಿಸ್ತಾರೆ. ಈ ಆಘಾತದಿಂದ, ನೋವಿನಿಂದ ಪಾರಾಗಲಿಕ್ಕೆ ವೇಶ್ಯೆಯರು ಕುಡಿತ ಕಲಿತಾರೆ. ಅವರ ಮಕ್ಕಳು ಕೂಡ ಅಮ್ಮಂದಿರೊಂದಿಗೆ ಕುಳಿತು ಕುಡಿಯೋದನ್ನು ಕಲಿತುಬಿಡ್ತಾರೆ. ಅಮ್ಮಂದಿರ ಜೊತೆಗೇ ಇರುವ ಮಕ್ಕಳ ಮೇಲೂ ಕೆಲವೊಮ್ಮೆ ಲೈಂಗಿಕ ದೌರ್ಜನ್ಯಗಳು ಆಗಿಬಿಡ್ತವೆ. ನನ್ನ ಆಶ್ರಯದಲ್ಲಿರುವ ಎಷ್ಟೋ ಮಕ್ಕಳು- “ನಮ್ಮಮ್ಮ ದಿನಾಲೂ ಕುಡೀತಾರೆ. ಡೈಲಿ ತಪ್ಪದೇ ಬಿರಿಯಾನಿ ಕೊಡಿಸ್ತಾಳೆ. ನೀವ್ಯಾಕೆ ಹಾಗೆ ಮಾಡಲ್ಲ?’ ಅಂತ ಕೇಳ್ತವೆ. ಅವರಿಗೆ ಸಾವಧಾನದಿಂದ ಉತ್ತರ ಹೇಳಿ, ಶಾಲೆಗೆ ಕಳಿಸ್ತೇನೆ.
ಸೆಕ್ಸ್ ವರ್ಕರ್ ,ಅಮ್ಮಮ್ಮಾ ಅಂದ್ರೆ 45 ವರ್ಷದತನಕ ಆ ವೃತ್ತೀಲಿ ಇರ್ತಾರೆ. ಆನಂತರ ಅವರನ್ನು ಮಾತಾಡಿಸೋರೂ ಗತಿಯಿರಲ್ಲ. ಹೊಟ್ಟೆ ತುಂಬಿಸ್ಕೋಬೇಕಲ್ವ? ಅದಕ್ಕೆ ಅವರೇನು ಮಾಡ್ತಾರೆ ಅಂದ್ರೆ- ಐದಾರು ಹುಡುಗೀರನ್ನ ಇಟ್ಕೊಂಡು ತಾವೇ ಒಂದು ವೇಶ್ಯಾವಾಟಿಕೆ ಅಡ್ಡೆ ಆರಂಭಿಸಿಬಿಡ್ತಾರೆ. ಆಮೇಲೆ, ಈ ವಿಷಚಕ್ರ ಮುಂದುವರಿತಾನೇ ಹೋಗುತ್ತೆ. ಬೇರೇನೂ ಅಲ್ಲ, ಈ ವಯಸ್ಸಾದವರಿಗೆ ಮೂರು ಹೊತ್ತಿನ ಊಟಕ್ಕೆ ವ್ಯವಸ್ಥೆ ಆಗಿಬಿಟ್ಟರೆ ಹೊಸಬರು ವೇಶ್ಯಾವಾಟಿಕೆಗೆ ಬರೋದು ನಿಲ್ಲುತ್ತೆ. ವೇಶ್ಯೆಯರ ಮಕ್ಕಳಿಗೆ ಶಿಕ್ಷಣ ದೊರಕಿದ್ರೆ ಸಮಾಜದ ಬದಲಾವಣೆಗೂ ಅವಕಾಶ ಇರುತ್ತೆ ಅಂದೊRಂಡೇ ಕೆಲಸ ಮಾಡಿದೆ. 18 ವರ್ಷಗಳ ನನ್ನ ಪರಿಶ್ರಮದ ಕೆಲಸವನ್ನು ಸರ್ಕಾರ ಗುರುತಿಸಿದ್ದು, ಕಡೆಗೊಮ್ಮೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವಂತಾದದ್ದು ನನ್ನ ಬದುಕಿನ ಸುವರ್ಣಘಳಿಗೆ. ಪ್ರಶಸ್ತಿ ಪಡೆದೆನಲ್ಲ; ಆಗ ನನ್ನ ಬದುಕಿನ ಕಥೆಯೆಲ್ಲಾ ಒಂದು ಸಿನಿಮಾದ ಥರಾ ಕಣ್ಮುಂದೆ ತೇಲಿಹೋಯ್ತು. ಹೊಸ ಹುಮ್ಮಸ್ಸು, ಜವಾಬ್ದಾರಿಯೊಂದಿಗೆ ಸೇವೆ ಮುಂದುವರಿಸ್ತೀನಿ. ನಾಲ್ಕು ಮಂದಿಗೆ ನೆರಳು ನೀಡುವ ಶಕ್ತಿ ಕೊಡು ದೇವರೇ ಎಂದು ಪ್ರಾರ್ಥಿಸ್ತೀನಿ’ ಅನ್ನುತ್ತಾ ಭಾವುಕರಾಗಿ, ಮಾತು ಮುಗಿಸಿದರು ಜಯಮ್ಮ ಭಂಡಾರಿ.
chaithanyamahilamandali.jimdo.comಲ್ಲಿ ಜಯಮ್ಮನವರ ಹೋರಾಟದ ಬದುಕಿನ ವಿವರಗಳಿವೆ. ಒಮ್ಮೆ ನೋಡಿ. ಸಾಧ್ಯವಾದ್ರೆ ಸಹಾಯ ಮಾಡಿ.
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
ದಿ| ದಾಮೋದರ ಆರ್. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.