ಜಯದೇವ ವೃತ್ತದ ಮೇಲ್ಸೇತುವೆಗೆ ಜೀವದಾನ
Team Udayavani, Apr 10, 2018, 12:21 PM IST
ಬೆಂಗಳೂರು: ವಿಧಾನಸಭಾ ಚುನಾವಣೆಯಿಂದ ಜಯದೇವ ವೃತ್ತದ ಮೇಲ್ಸೇತುವೆಗೆ ಜೀವದಾನ ಸಿಕ್ಕಿದೆ! “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗಾಗಿ ಜಯದೇವ ಫ್ಲೈಓವರ್ ನೆಲಸಮಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ನಿರ್ಧರಿಸಿತ್ತು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಇದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಫ್ಲೈಓವರ್ ಕೆಡವಲು ಈ ಹಿಂದೆಯೇ ಸಂಚಾರ ಪೊಲೀಸರ ಅನುಮತಿ ದೊರಕಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನೂ ರೂಪಿಸಲಾಗಿತ್ತು. ಅಲ್ಲದೆ, ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ (ಎಚ್‌ಸಿಸಿ) ಮತ್ತು ಯುಆರ್‌ಸಿ ಕನ್‌ಸ್ಟ್ರಕ್ಷನ್‌ಗೆ ಟೆಂಡರ್ ನೀಡಲಾಗಿತ್ತು. ಸಿವಿಲ್ ಕಾಮಗಾರಿಯ ಯೋಜನಾ ವೆಚ್ಚ 797.29 ಕೋಟಿ ರೂ. ಆಗಿದೆ. ಕಾಮಗಾರಿ ದಿನಾಂಕ ನಿಗದಿ ಮಾತ್ರ ಬಾಕಿ ಇತ್ತು. ಅಷ್ಟರಲ್ಲಿ ಚುನಾವಣೆ ಘೋಷಣೆ ಆಗಿದ್ದರಿಂದ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂಜರಿಕೆ: ನಗರದ ಅತಿಹೆಚ್ಚು ವಾಹನದಟ್ಟಣೆ ಇರುವ ಮಾರ್ಗಗಳಲ್ಲಿ ಜಯದೇವ ವೃತ್ತ ಕೂಡ ಒಂದು. ಇಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಮೇಲ್ಸೇತುವೆ ನೆಲಸಮಗೊಳಿಸಿ, ಜನರಿಗೆ ಕಿರಿಕಿರಿ ಉಂಟುಮಾಡುವುದರ ಜತೆಗೆ “ಕಪ್ಪುಚುಕ್ಕೆ’ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂದೆಸರಿಯಲಾಗಿದೆ ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಶಕದ ಹಿಂದಷ್ಟೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಮೇಲ್ಸೇತುವೆಯು ಬನ್ನೇರುಘಟ್ಟ ಮಾರ್ಗದ ಸಿಗ್ನಲ್ ಮುಕ್ತ ಸಂಚಾರ ಸೇವೆ ಒದಗಿಸುತ್ತಿದೆ.
ಹಿನ್ನೆಲೆ: ಜಯದೇವ ಬಳಿಯ 8 ಕಿ.ಮೀ. ಮೆಟ್ರೋ ಮಾರ್ಗವು ಜಯದೇವ ಆಸ್ಪತ್ರೆ ಆವರಣದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಇದಕ್ಕೆ ಆಸ್ಪತ್ರೆ ಆಕ್ಷೇಪ ವ್ಯಕ್ತಪಡಿಸಿತು. ಪರಿಣಾಮ ಆಸ್ಪತ್ರೆಯ ವಿರುದ್ಧ ದಿಕ್ಕಿನಲ್ಲಿರುವ ಸ್ಥಳಕ್ಕೆ ವರ್ಗಾವಣೆಗೊಂಡಿತ್ತು. ಇದಕ್ಕೂ ವಾಣಿಜ್ಯ ಕಟ್ಟಡಗಳು ಹಾಗೂ ಹಿರಿಯ ನಾಗರಿಕರ ಮನೆಗಳು ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಮನೆಗಳು ನೆಲಸಮಗೊಳ್ಳುತ್ತಿದ್ದವು. ಈ ಬದಲಾವಣೆಯನ್ನು ಖಂಡಿಸಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ಸಂತ್ರಸ್ತರ ವೇದಿಕೆ ವಿರೋಧ ವ್ಯಕ್ತಪಡಿಸಿತ್ತು.
ಎತ್ತರಿಸಿದ ಮಾರ್ಗದಿಂದ ನಿವಾಸಿಗಳಿಗೆ ತೊಂದರೆಯಾಗಲಿದ್ದು, ಈ ಮಾರ್ಗವನ್ನು ಸುರಂಗ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದೂ ವೇದಿಕೆ ಆಗ್ರಹಿಸಿತ್ತು. ಆದರೆ, ಸುರಂಗ ಮಾರ್ಗ ನಿರ್ಮಾಣ ವೆಚ್ಚ ದುಪ್ಪಟ್ಟು ಆಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಮಾರ್ಗಗಳನ್ನು ಕೈಬಿಟ್ಟು, ರಸ್ತೆ ಮಧ್ಯದಿಂದ ಮಾರ್ಗ ನಿರ್ಮಾಣಕ್ಕೆ ನಿಗಮ ನಿರ್ಧರಿಸಿತು. ಇದರಿಂದ ಕಟ್ಟಡಗಳನ್ನು ಕೆಡಹುವುದು ತಪ್ಪಲಿದೆ. ಈ ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.
ಏನೇನು ಬರುತ್ತೆ?: ಇಲ್ಲಿ ಮೂರು ಗ್ರೇಡ್ ಸೆಪರೇಟರ್‌ಗಳು ಹಾಗೂ ಎರಡು ಮೆಟ್ರೋ ಮಾರ್ಗಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಬರಲಿದೆ. ಒಂದು ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವೂ ಇಲ್ಲಿ ನಿರ್ಮಾಣಗೊಳ್ಳಲಿದೆ. ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತದೆ. ಆದರೆ, ಈಗಿರುವ ಕೆಳಸೇತುವೆ ಹಾಗೆಯೇ ಉಳಿಸಿಕೊಳ್ಳಲಾಗುವುದು.
ಡೇರಿ ವೃತ್ತದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಪರ್ಕಿಸುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಈ ಕೆಳಸೇತುವೆ ಮೊದಲ ಹಂತದಲ್ಲಿ ಇರಲಿದೆ. ಕೆಳಸೇತುವೆಯ ಮೇಲೆ ನೆಲಮಟ್ಟದಲ್ಲಿ ಎರಡೂ ದಿಕ್ಕುಗಳಲ್ಲಿ ರಸ್ತೆ ನಿರ್ಮಿಸಲಾಗುತ್ತದೆ. ಅವು ಎರಡನೇ ಹಂತದಲ್ಲಿ ಬರಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.