ಅಂಕುರ್ ಮಿತ್ತಲ್ ಕಂಚಿನ ಕಮಾಲ್
Team Udayavani, Apr 12, 2018, 6:00 AM IST
ಗೋಲ್ಡ್ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಯ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಭಾರತದ ಅಂಕುರ್ ಮಿತ್ತಲ್ ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಮೊಹಮ್ಮದ್ ಅಸಬ್ 4ನೇ ಸ್ಥಾನಿಯಾದರು.
“ಬೆಲ್ಮಾಂಟ್ ಶೂಟಿಂಗ್ ಸೆಂಟರ್’ ನಲ್ಲಿ ನಡೆದ 6 ಮಂದಿಯ ಫೈನಲ್ನಲ್ಲಿ ಅಂಕುರ್ ಮಿತ್ತಲ್ 53 ಅಂಕ ಗಳಿಸಿದರು. ಸ್ಕಾಟ್ಲೆಂಡಿನ ಡೇವಿಡ್ ಮೆಕ್ಮ್ಯಾಥ್ 74 ಅಂಕಗಳ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರೆ, ಐಲ್ ಆಫ್ ಮ್ಯಾನ್ನ ಟಿಮ್ ನೀಲೆ ಬೆಳ್ಳಿ ಪಡೆದರು (70 ಅಂಕ). ಭಾರತದ ಮೊಹಮ್ಮದ್ ಅಸಬ್ ಗ್ಲಾಸೊದಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಈ ಬಾರಿ ಪದಕ ಯಾದಿ ಯಿಂದ ಹೊರಗುಳಿಯಬೇಕಾಯಿತು. ಅನು ಭವಿ ಜೇಮ್ಸ್ ವಿಲ್ಲೆಟ್ ಫೈನಲ್ನಿಂದ ಎಲಿಮಿನೇಟ್ ಆದ ಮೊದಲ ಶೂಟರ್ಎಂಬುದು ಅಚ್ಚರಿಯ ಸಂಗತಿ ಎನಿಸಿಕೊಂಡಿತು.
26ರ ಹರೆಯದ ಅಂಕುರ್ ಮಿತ್ತಲ್ ಕಳೆದ ವರ್ಷ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ರಜತ ಪದಕ ಗೆದ್ದು ಸುದ್ದಿಯಾಗಿದ್ದರು. ಐಎಸ್ಎಸ್ಎಫ್ ವರ್ಲ್ಡ್ ಕಪ್ನಲ್ಲಿ ಬಂಗಾರಕ್ಕೆ ಗುರಿ ಇರಿಸಿದ್ದರು. ಗ್ಲಾಸೊ ಗೇಮ್ಸ್ನಲ್ಲಿ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದರು.
ಗೋಲ್ಡ್ಕೋಸ್ಟ್ ಗೇಮ್ಸ್ ಅರ್ಹತಾ ಸುತ್ತಿನಲ್ಲಿ ಮಿತ್ತಲ್ 133 ಅಂಕಗಳೊಂದಿಗೆ 5ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರೆ, ಅಸಬ್ ದ್ವಿತೀಯ ಸ್ಥಾನ ಅಲಂಕರಿಸಿದ್ದರು. ಮೆಕ್ಮ್ಯಾಥ್ ಅವರೊಂದಿಗೆ 137 ಅಂಕ ಹಂಚಿಕೊಂಡದ್ದು ಅಸಬ್ ಹೆಚ್ಚುಗಾರಿಕೆ. ಬಳಿಕ ಶೂಟ್-ಆಫ್ನಲ್ಲಿ ಅಸಬ್ ಸ್ಕಾಟ್ಲೆಂಡ್ ಶೂಟರ್ಗೆ ಅಗ್ರಸ್ಥಾನ ಬಿಟ್ಟುಕೊಡಬೇಕಾಯಿತು. ಆದರೆ ಪದಕ ಸ್ಪರ್ಧೆಯಲ್ಲಿ ಅಸಬ್ ಅರ್ಹತಾ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.