ನೀರಿನ ಬಿಲ್‌ಗೆ ಲಿಂಕ್ ಆಗದ ನೆಟ್: ಸ್ವೀಕೃತವಾಗದ ಇ- ತಂತ್ರಾಂಶ
Team Udayavani, Apr 15, 2018, 7:00 AM IST
ಪುತ್ತೂರು: ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ನೀರಿನ ಬಳಕೆದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. 100- 150 ರೂ. ನೀರಿನ ಬಿಲ್ ಪಾವತಿಗೂ ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾಗಿದ್ದು, ಕ್ಯಾಶ್‌ಲೆಸ್ ಹೆಸರಿನಲ್ಲಿ ಜನಸಾಮಾನ್ಯರನ್ನು ಸತಾಯಿಸುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆ ನೀರಿನ ಬಿಲ್ ಕಟ್ಟಲು ನೇರವಾಗಿ ಸ್ಥಳೀಯಾಡಳಿತ ಕಚೇರಿಗೆ ಹೋಗಿ, ಕೌಂಟರ್‌ನಲ್ಲಿ ಹಣ ಪಾವತಿಸಬಹುದಿತ್ತು. ಆದರೆ ಎಪ್ರಿಲ್ 2ರಿಂದ “ಸ್ವೀಕೃತಿ’ ತಂತ್ರಾಂಶ ಪರಿಚಯಿಸಲಾಗಿದೆ. ಇದರಡಿ ಸ್ಥಳೀಯಾಡಳಿತ ಕೌಂಟರ್‌ನಿಂದ ಚಲನ್ ಪಡೆದು, ಬ್ಯಾಂಕ್‌ನಲ್ಲಿ ಹಣ ಪಾವತಿಸಬೇಕು. ಹೀಗಾಗಿ ಎರಡೆರಡು ಬಾರಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.
“ಸ್ವೀಕೃತಿ’ ಅಡಿಯಲ್ಲಿ ಸ್ಥಳೀಯಾಡಳಿತದಿಂದ ಚಲನ್ ಪಡೆದು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಗದು, ಡಿಡಿ ಅಥವಾ ಚೆಕ್ ಮೂಲಕ ಪಾವತಿಸಬೇಕು. ಹೀಗೆ ಚಲನ್ ನೀಡುವ ಸಂದರ್ಭ ಸರ್ವರ್ ಕೈಕೊಡುತ್ತಿದೆ. ಇದರಿಂದಾಗಿ ನೀರಿನ ಬಿಲ್ ಕಟ್ಟಲು ಹೋಗಿ ಬೆಳಗಿನಿಂದ ಸಂಜೆಯ ವರೆಗೆ ಕಾದು ಕುಳಿತ ಉದಾಹರಣೆ ಇದೆ.
ಆನ್‌ಲೈನ್ ಸೇವೆ ಸದ್ಯ ಅಲಭ್ಯ
ಆನ್‌ಲೈನ್ ಮೂಲಕ ನೇರವಾಗಿ ಹಣ ವರ್ಗಾಯಿಸುವ ವ್ಯವಸ್ಥೆಯೂ ಇದೆ. ಆದರೆ ಇದು ಇನ್ನೂ ಸೇವೆಗೆ ಸಿಕ್ಕಿಲ್ಲ. ಆನ್‌ಲೈನ್ ಲಿಂಕ್ ಸಮಸ್ಯೆಯಿಂದಾಗಿ ಬಳಕೆದಾರರ ಖಾತೆಯಿಂದ ಸ್ವೀಕೃತಿ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ತಂತ್ರಾಂಶ ಪೂರ್ಣವಾಗಿ ಸೇವೆಗೆ ದೊರಕದೆ ಸ್ಥಳೀಯಾಡಳಿತದಿಂದ ಕೌಂಟರ್ ವ್ಯವಸ್ಥೆ ತೆಗೆದು ಹಾಕಿರುವುದು ಸರಿಯಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
ಹೊಸ ಪದ್ಧತಿ ಪರಿಚಯಿಸುವುದು ಸರಿ; ಆದರೆ ತಂತ್ರಾಂಶ ಪೂರ್ಣವಾಗಿ ಸೇವೆಗೆ ಸಿಗದೆ ಹಿಂದಿನ ವ್ಯವಸ್ಥೆಯನ್ನು ತೆಗೆದು ಹಾಕಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಬಳಕೆದಾರರದ್ದು. ಈಗಾಗಲೇ ಪುರಸಭೆ, ನಗರಸಭೆಗೆ ಈ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳು ಬರಲಾರಂಭಿಸಿವೆ. ಇದನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಕಡ್ಡಾಯ ಪಾವತಿ
ಬಿಲ್ ಪಾವತಿ ಅಂತಿಮ ಮಾಡಲಾಗಿದೆ. ನೀರು ಜೀವನಾವಶ್ಯಕ ಎಂಬ ಹಿನ್ನೆಲೆಯಲ್ಲಿ ಎರಡು ನೋಟಿಸ್ ಕಳುಹಿಸುತ್ತಾರೆ, ಆ ಬಳಿಕ ಸಂಪರ್ಕ ಕಡಿತ ಮಾಡುತ್ತಾರೆ. ಆದರೆ ಬಿಲ್ ಕಟ್ಟದಿರುವುದಕ್ಕೆ ಸರತಿ ಸಾಲು, ಚಲನ್ ಸಿಕ್ಕಿಲ್ಲ, ವೆಬ್‌ಸೈಟ್ ಸರಿಯಿಲ್ಲ ಎಂಬ ಕಾರಣ ಪರಿಗಣಿಸಲಾಗುವುದಿಲ್ಲ.
ನೆಟ್‌ಬ್ಯಾಂಕ್ ಮೂಲಕ ನೀರಿನ ಬಿಲ್ ಪಾವತಿ ಆಗುತ್ತಿಲ್ಲ. ಆನ್‌ಲೈನ್ ಪಾವತಿಗೆ ಇನ್ನೂ ಲಿಂಕ್ ಸರಿಯಾಗಿ ಮಾಡಿಲ್ಲ. ವ್ಯವಸ್ಥೆ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವ ವರೆಗೆ ನಗರಸಭೆಯಲ್ಲೇ ಬ್ಯಾಂಕ್ ಕೌಂಟರ್ ತೆರೆಯಬೇಕು. ಇದರ ಜತೆಗೆ ಮೊಬೈಲ್ ಆ್ಯಪ್ ಮೂಲಕ ಬಿಲ್ ಪಾವತಿ ಮಾಡುವಂತೆ ಆಗಬೇಕು. ಒಂದು ವ್ಯವಸ್ಥೆಯನ್ನು ಅಪ್‌ಡೇಟ್ ಮಾಡುವಾಗ, ಜನಸಾಮಾನ್ಯರಿಗೆ ತೊಂದರೆ ಆಗದಂತೆ ಆಡಳಿತ ಎಚ್ಚರಿಕೆ ತೆಗೆದುಕೊಳ್ಳಲೇಬೇಕು.
ದಿನೇಶ್ ಭಟ್, ಸಾಮಾಜಿಕ ಕಾರ್ಯಕರ್ತ
ಮೊದಲು ನಗರಸಭೆಯಲ್ಲೇ ನೀರಿನ ಬಿಲ್ ಪಾವತಿಗೆ ಅವಕಾಶವಿತ್ತು. ಎಪ್ರಿಲ್‌ನಿಂದ ಇಲ್ಲ. ಚಲನ್ ತೆಗೆದುಕೊಡುವ ಸಂದರ್ಭ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಬಳಿ ಮಾತನಾಡಿ, ಸರ್ವರ್ ಸಮಸ್ಯೆ ಆದಾಗ ನಗರಸಭೆಯಲ್ಲೇ ಹಣ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಇದಕ್ಕೆ ಅವಕಾಶವಿಲ್ಲ.
ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.