ಚಿಣ್ಣರು ಮಾಡಿದ ಚಿಟ್‌ಪಟ್ ಸಂದರ್ಶನ
Team Udayavani, Apr 20, 2018, 6:20 AM IST
ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಪ್ರಶ್ನೆ ಕೇಳುವುದು ಹೊಸತೇನಲ್ಲ. ಎಲ್ಲಿ ಈ ಪ್ರಶ್ನಾ ಬಾಣ ತಮ್ಮನ್ನು ತಿವಿಯುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳದ್ದು. ಆದರೆ, ಇಲ್ಲಿ ವಿದ್ಯಾರ್ಥಿಗಳೇ ಮುಖ್ಯಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆಗಳ ಮೂಲಕ, ನಿವೃತ್ತಿಯಂಚಿನಲ್ಲಿರುವ ತಮ್ಮದೇ ಶಾಲೆಯ ಮುಖ್ಯಶಿಕ್ಷಕಿಯವರ ಬಾಲ್ಯ, ಶಿಕ್ಷಣ, ವೃತ್ತಿ ಬದುಕಿನ ಅನುಭವಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.
ತಮ್ಮ ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರೀತಿಯಿಂದ ಉತ್ತರಿಸಿದವರು ದ.ಕ.ಜಿ.ಪಂ.ಮಾ.ಹಿ.ಪ್ರಾ ಶಾಲೆ ಬೋಳಂತೂರು, ಬಂಟ್ವಾಳ ಇಲ್ಲಿನ ಮುಖ್ಯಶಿಕ್ಷಕಿ ಜುಡಿತ್ ಅಲಿಸ್ ಡಿಸೋಜಾ. ಇದು ನಡೆದದ್ದು ಅವರ ನಿವೃತ್ತಿಗೆ ಎರಡು ದಿನ ಮುಂಚೆ. ತಮ್ಮ ಸುದೀರ್ಘ ಸೇವಾವಧಿಯನ್ನು ಮಕ್ಕಳೊಂದಿಗೆ ಕಳೆದಿರುವ ಆದರ್ಶ ಶಿಕ್ಷಕಿಗೆ ವಿಭಿನ್ನ ರೀತಿಯಲ್ಲಿ ವಿದಾಯ ಹೇಳಬೇಕು ಎಂದು ಆಲೋಚಿಸಿದಾಗ ತೋಚಿದ್ದೇ ಈ ಸಂದರ್ಶನ.
ಜಸ್ಮಿರ: ಟೀಚರ್ ನಿಮ್ಮ ಬಾಲ್ಯದ ಜೀವನ ಹೇಗಿತ್ತು? ಅದರಲ್ಲಿ ಸದಾ ನೆನಪಿನಲ್ಲುಳಿಯುವ, ನಿಮಗೆ ಇಷ್ಟವೆನಿಸುವ ಸಂಗತಿ ಯಾವುದು?
ಉತ್ತರ : ನಾನು ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದರಿಂದ ನನ್ನ ಬಾಲ್ಯದ ಜೀವನ ಸೊಗಸಾಗಿತ್ತು. ಹಳ್ಳಿಯ ವಾತಾವರಣವೇ ಹಿತಕರ. ನಮ್ಮದು ಕೃಷಿ ಪ್ರಧಾನ ಕುಟುಂಬ. ಚಿಕ್ಕವಯಸ್ಸಿನಲ್ಲಿ ಹಿರಿಯರ ಜೊತೆ ಗದ್ದೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಸದಾಕಾಲ ನೆನಪಿನಲ್ಲುಳಿಯುವ ಸಂಗತಿ. ಈ ಬಗೆಯ ವಾತಾವರಣದಿಂದಾಗಿ ಬಡತನವಿದ್ದರೂ ಅದರ ಬೇಗೆ ನನ್ನನ್ನು ಅಷ್ಟಾಗಿ ಕಾಡುತ್ತಿರಲಿಲ್ಲ.
ಹರ್ಷಿತಾ: ನಿಮ್ಮ ಅಚ್ಚುಮೆಚ್ಚಿನ ಟೀಚರ್ ಯಾರಾಗಿದ್ದರು? ಅವರ ಬಗ್ಗೆ ಹೇಳ್ತೀರಾ ಮೇಡಂ?
ಉತ್ತರ : ನನಗೆ ಆರನೇ ತರಗತಿಯಲ್ಲಿ ಗಣಿತದ ಟೀಚರ್ ಆಗಿದ್ದ ಲೂಸಿ ಡಿಸೋಜಾ ನನ್ನ ಮೆಚ್ಚಿನ ಶಿಕ್ಷಕರು. ನನ್ನ ವೈಯಕ್ತಿಕ ಸಮಸ್ಯೆಗಳಿಂದಾಗಿ ಶಾಲೆಗೆ ಹೋಗಲು ಆಗದೇ ಇದ್ದಾಗ ಅವರು ಶಾಲಾ ಅವಧಿಯ ನಂತರವೂ ನನಗೆ ಪಾಠಗಳನ್ನು ಕಲಿಸಿಕೊಟ್ಟಿದ್ದರು. ಹಾಗೆಯೇ ಈ ವೃತ್ತಿಗೆ ಸೇರುವಲ್ಲಿಯೂ ಅವರು ನನಗೆ ನೆರವಾದವರು.
ತಮೀಮ್: ಇಂದಿನ ಶಾಲಾ ವ್ಯವಸ್ಥೆಗೂ ಅಂದಿನ ಶಾಲಾ ವ್ಯವಸ್ಥೆಗೂ ತುಂಬಾ ವ್ಯತ್ಯಾಸಗಳಿವೆಯಂತೆ. ನಿಮ್ಮ ಶಾಲಾ ದಿನಗಳ ಅನುಭವ ಹೇಗಿತ್ತು ತಿಳಿಸುವಿರಾ ಟೀಚರ್?
ಉತ್ತರ : ಖಂಡಿತ. ಶಾಲೆಗಳಿಗೆ ಸಂಬಂಧಿಸಿದಂತೆ ಇಂದಿಗೂ ಅಂದಿಗೂ ಬಹಳ ವ್ಯತ್ಯಾಸಗಳಿವೆ. ಆಗೆಲ್ಲ ನಾವು ನಿತ್ಯ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ ಶಾಲೆಯನ್ನು ತಲುಪುತ್ತಿದ್ದೆವು. ಒಂದೇ ಛತ್ರಿಯಡಿಯಲ್ಲಿ ಮೂರು-ನಾಲ್ಕು ಮಂದಿ ಆ ಜಡಿಮಳೆಯಲ್ಲಿ ಸಾಗುತ್ತಿದ್ದ ನೆನಪು ಇನ್ನೂ ಒದ್ದೆಯಾಗಿದೆ. ಒಂದೇ ಬುತ್ತಿಯನ್ನು ಹಂಚಿಕೊಂಡು ತಿನ್ನುವ ಮೂಲಕ ನಮಗರಿವಿಲ್ಲದಂತೆ ಸಹಬಾಳ್ವೆಯ ಪಾಠ ಕಲಿಯುತ್ತಿದ್ದೆವು. ಇಂದು ಶಾಲೆಗೆ ಬರುವ ಮಕ್ಕಳು ಈ ಅನುಭವಗಳಿಂದ ವಂಚಿತರಾಗಿದ್ದಾರೆ. ಕಷ್ಟದಲ್ಲಿ ಓದಿದ ನಾವು ಜೀವನದಲ್ಲಿ ಗಟ್ಟಿಯಾದೆವು. ಇಂದು ಉತ್ತಮ ವ್ಯವಸ್ಥೆಗಳನ್ನು ಹೊಂದಿ ಸುಖದಿಂದ ಬದುಕುತ್ತಿರುವ ನೀವು ಇನ್ನೂ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬಹುದಾಗಿದೆ.
ಸಹೀಮ: ಶಿಕ್ಷಕಿ ಆಗಬೇಕೆನ್ನುವುದೇ ನಿಮ್ಮ ಗುರಿಯಾಗಿತ್ತೇ? ಅದಕ್ಕೆ ನಿಮಗೆ ಯಾವ ರೀತಿಯ ಪ್ರೋತ್ಸಾಹ ಸಿಕ್ಕಿತು?
ಉತ್ತರ : ಇಲ್ಲ , ಚಿಕ್ಕಂದಿನಲ್ಲಿ ನನಗೆ ಶುಶ್ರೂಷಕಿಯಾಗಿ ರೋಗಿಗಳ ಆರೈಕೆ ಮಾಡಬೇಕೆಂಬ ಆಸೆಯಿತ್ತು. ತುಂಬ ಕಡಿಮೆ ವಿದ್ಯಾಭ್ಯಾಸ ಹೊಂದಿದ್ದ ನನ್ನ ಪೋಷಕರಿಗೆ ಅವರ ಸುತ್ತಮುತ್ತಲಿದ್ದ ಶಿಕ್ಷಕರನ್ನು ನೋಡಿ ನಾನೂ ಶಿಕ್ಷಕಿಯಾಗಬೇಕು ಎಂಬ ಆಸೆ ಮೂಡಿತ್ತು. ಹಾಗಾಗಿ, ನಾನೂ ಆ ಬಗ್ಗೆ ಒಲವು ಬೆಳೆಸಿಕೊಂಡೆ. ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ನನ್ನ ತಂದೆ ಇದಕ್ಕೆ ಬೆಂಬಲವಾಗಿ ನಿಂತರು. ಏಕೆಂದರೆ, ಆ ಕಾಲದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಇಂದಿನಷ್ಟು ಸುಲಭವಾಗಿರಲಿಲ್ಲ.
ಸಂದೀಪ್: ಟೀಚರ್, ನಿಮ್ಮ ಬೆಸ್ಟ್ ಫ್ರೆಂಡ್ ಯಾರಾಗಿದ್ದರು?
ಉತ್ತರ : ನಮ್ಮ ಆಗಿನ ಪರಿಸ್ಥಿತಿಯಲ್ಲಿ ಬೆಸ್ಟ್ ಫ್ರೆಂಡ್ ಅಂತ ಪ್ರತ್ಯೇಕ ಭಾವನೆ ಇರಲಿಲ್ಲ. ಆದರೆ, ಹಲವಾರು ಸ್ನೇಹಿತರಿದ್ದರು. ಅವರೊಂದಿಗೆ ಕಳೆದ ಕ್ಷಣಗಳೆಲ್ಲವೂ ಬೆಸ್ಟ್.
ನೌಫಲ್: ಕಷ್ಟಗಳೆಂದರೆ ನಮಗೆ ಏನೋ ಭಯ. ನಿಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ಹೇಗೆ ಎದುರಿಸಿದಿರಿ ಎನ್ನುವುದನ್ನು ತಿಳಿಸುತ್ತೀರಾ?
ಉತ್ತರ : ಆರಂಭದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳಿದ್ದವು ಆದರೆ ಅದನ್ನು ನೀಗಿಸಿಕೊಳ್ಳಲು ಶಿಕ್ಷಣವನ್ನು ಏಣಿಯಂತೆ ಬಳಸಿಕೊಂಡೆ. ಓದಿನಲ್ಲಿ ಚೆನ್ನಾಗಿ ತೊಡಗಿಸಿಕೊಂಡು, ಒಳ್ಳೆಯ ಉದ್ಯೋಗ ಹಿಡಿಯುವ ಹಾದಿಯಲ್ಲಿನ ಸಣ್ಣ ಸಣ್ಣ ಯಶಸ್ಸುಗಳೇ ನನ್ನ ಕಷ್ಟವನ್ನು ಕರಗಿಸಿದವು. ನೀವೂ ಅಷ್ಟೇ, ಯಾವುದೇ ಕಷ್ಟವಿದ್ದಾಗ ಸಾಧನೆಯೆಡೆಗೆ ಗಮನ ನೀಡಿ. ಆಗಲೂ ಎದುರಿಸಲಾಗದೇ ಇದ್ದರೆ ಪ್ರೀತಿ ಪಾತ್ರರಲ್ಲಿ ಅದನ್ನು ಹಂಚಿಕೊಳ್ಳಿ.
ಜೀವಿತಾ: ಸರ್ಕಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ದೊರಕುತ್ತಿ ದ್ದರೂ ಕೆಲವರು ಅದನ್ನು ಬದಿಗೊತ್ತಿ ಪ್ರೈವೇಟ್ ಶಾಲೆಗಳ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ : ಹೀಗೊಂದು ಭ್ರಮೆ ಜನರಲ್ಲಿದೆ. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಓದಿಯೂ ದೊಡ್ಡ ದೊಡ್ಡ ಸಾಧನೆ ಮಾಡಿದವರು ಸಾಕಷ್ಟಿದ್ದಾರೆ. ಮೇಲಾಗಿ ಇಲ್ಲಿರುವ ಶಿಕ್ಷಕರೂ ಕೂಡ ಹೆಚ್ಚು ಶೈಕ್ಷಣಿಕ ಅರ್ಹತೆ ಉಳ್ಳವರು. ನೀವೆಲ್ಲರೂ ಈ ಅಭಿಪ್ರಾಯವನ್ನು ಬದಲಿಸಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲು ಕಾರಣವಾಗಬೇಕು.
ಸಿನಾನ್: ಒಬ್ಬ ಅನುಭವಿ ಶಿಕ್ಷಕಿಯಾಗಿ ಮಕ್ಕಳ ಯಾವ ವರ್ತನೆ ತಮ್ಮಲ್ಲಿ ಕೋಪ, ನಿರಾಸೆ ಹಾಗೂ ಕಸಿವಿಸಿಯನ್ನು ತರಿಸುತ್ತದೆ?
ಉತ್ತರ : ಅಶಿಸ್ತಿನ ವರ್ತನೆ! ಶಿಸ್ತು ತುಂಬಾ ಮುಖ್ಯ. ಅಶಿಸ್ತಿನ ವರ್ತನೆ ವ್ಯಕ್ತಿತ್ವವನ್ನು ನಾಶಮಾಡುವುದರೊಂದಿಗೆ, ಸರ್ವತೋಮುಖ ಬೆಳವಣಿಗೆಯ ಮೇಲೆ ವ್ಯತಿರಿಕ್ತವಾಗಿ ಪರಿಣಮಿಸುತ್ತದೆ.
ಜೋಹರುನ್ನೀಸ: ನಿವೃತ್ತರಾಗಿ ನಮ್ಮ ಶಾಲೆಯನ್ನು ಬಿಟ್ಟು ಹೋಗುತ್ತಿರುವ ಸಂದರ್ಭದಲ್ಲಿ ನಿಮಗೆ ಏನನ್ನಿಸುತ್ತಿದೆ?
ಉತ್ತರ : ಒಳ್ಳೆಯ ನೆನಪುಗಳೊಂದಿಗೆ ನಿವೃತ್ತಿಯಾಗುತ್ತಿರುವುದರಿಂದ ಮನಸ್ಸಿಗೆ ತೃಪ್ತಿಯಿದೆ. ಇದೊಂದು ಅನಿವಾರ್ಯ ಪ್ರಕ್ರಿಯೆ, ಆದರೂ ಶಾಲೆಯ ಜೊತೆಗಿನ ನಂಟು, ಶಿಕ್ಷಣದ ಜೊತೆಗೆ ಇರುವ ಬಾಂಧವ್ಯ ಎಂದಿಗೂ ಮರೆಯಾಗದು. ಅದು ಮುಂದೆ ಬೇರಾವುದಾದರೂ ರೂಪದಲ್ಲಿ ಪ್ರಕಟವಾಗಬಹುದು.
ಅನುಷಾ: ಕೊನೆಯದಾಗಿ, ನೀವು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದವರು. ಆ ಅನುಭವದ ಆಧಾರದಲ್ಲಿ ವಿದ್ಯಾರ್ಥಿಗಳಾದ ನಮಗೆ ನಿಮ್ಮ ಕಿವಿಮಾತೇನು?
ಉತ್ತರ : ಮೊ ತ್ತಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ದೈನಂದಿನ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳೆಡೆಗೆ ಆದ್ಯ ಗಮನವಿರಬೇಕು. ಆಟ-ಪಾಠಗಳೊಂದಿಗೆ ಮನೆಯಲ್ಲಿ ಪೋಷಕರ ಜೊತೆಗೂ ಚೆನ್ನಾಗಿ ಬೆರೆಯಬೇಕು. ಪೋಷಕರಿಗೆ ತಮ್ಮ ಮಕ್ಕಳು ಶಾಲೆಗೆ ಹೋಗಿ ಸದ್ವರ್ತನೆಗಳೊಂದಿಗೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದಾರೆಂಬ ತೃಪ್ತಿ ಮೂಡಿಸಬೇಕು. ಸಮಾಜಕ್ಕೆ ನೀವೆಲ್ಲರೂ ಅಮೂಲ್ಯ ಆಸ್ತಿಯಾಗಬೇಕು.
– ಸಂದೇಶ್ ನಾಯಕ್ ಹಕ್ಲಾಡಿ,
ಶಿಕ್ಷಕ, ದ.ಕ.ಜಿ.ಪಂ.ಮಾ.ಹಿ.ಪ್ರಾ ಶಾಲೆ,
ಬೋಳಂತೂರು, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.