ಭಾರೀ ಅಂತರದ ಗೆಲುವೇ ಅನಿವಾರ್ಯ
Team Udayavani, Apr 24, 2018, 6:50 AM IST
ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಶಿಕಾರಿಪುರದಲ್ಲಿಯೇ ಕಟ್ಟಿ ಹಾಕುವ ಪ್ರಯತ್ನದಲ್ಲಿ ಸೋತ ಕಾಂಗ್ರೆಸ್ ಇದೀಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಂತವೀರಪ್ಪಗೌಡರನ್ನು ಕಾಂಗ್ರೆಸ್‌ಗೆ ಸೆಳೆಯುವ ಮೂಲಕ ಬಿಜೆಪಿಗೆ ಒಳ ಹೊಡೆತ ನೀಡುವತ್ತ ಹೆಜ್ಜೆ ಹಾಕಿದೆ.
ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರುವುದು ಮಾತ್ರವಲ್ಲ, ಇಡೀ ರಾಜ್ಯದ ಉಸ್ತುವಾರಿ ಹೊತ್ತಿರುವುದರಿಂದ ಸಹಜ ವಾಗಿಯೇ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಹೆಚ್ಚಿದೆ. ತಮ್ಮ ಕ್ಷೇತ್ರದಲ್ಲಿ ದೊಡ್ಡ ಮತಗಳ ಅಂತರದಿಂದ ಗೆಲುವು ಸಾಧಿಸುವ ಅನಿ ವಾರ್ಯತೆಯನ್ನು ಸೃಷ್ಟಿಸಿದೆ. ಸ್ವಕ್ಷೇತ್ರದಲ್ಲಿನ ಗಟ್ಟಿ ನೆಲೆಯನ್ನು ಸಾದರಪಡಿಸುವ ಮೂಲಕ ನಾಯಕತ್ವಕ್ಕೆ ಗಟ್ಟಿತನ ಕೊಡಬೇಕಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಬಿಎಸ್‌ವೈ ನಿರಾಳರಾಗಿದ್ದರು. ಆದರೆ ಇದೀಗ ಅವರ ಆಪ್ತ ವಲಯದಲ್ಲಿದ್ದ ಶಾಂತವೀರಪ್ಪಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಸಣ್ಣ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಸಾದರ ಲಿಂಗಾಯತ ವರ್ಗಕ್ಕೆ ಸೇರಿದ ಶಾಂತವೀರಪ್ಪಗೌಡರು ದೀರ್ಘ ಕಾಲ ಯಡಿಯೂರಪ್ಪನವರ ಆಪ್ತ ಬಳಗದಲ್ಲಿಯೇ ಗುರುತಿಸಿಕೊಂಡವರು. ಆದರೆ 2013ರ ಚುನಾವಣೆಗೆ ಮುನ್ನ ಅವರು ಕಾಂಗ್ರೆಸ್ ಸೇರಿದರು. ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆ ಬಾರಿ ಅವರು ಗಮನಾರ್ಹ ಮತ ಗಳಿಸಿದರು. 2014 ರಲ್ಲಿ ಯಡಿಯೂರಪ್ಪ ಸಂಸದರಾದ ಬಳಿಕ ಇಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಪುನಃ ಶಾಂತವೀರಪ್ಪ ಗೌಡರು ಸ್ಪರ್ಧಿಸಿ ಇನ್ನಷ್ಟು ಹೆಚ್ಚು ಮತಗಳನ್ನುಗಳಿಸಿದ್ದರು. ರಾಘವೇಂದ್ರ ಅವರು ಸುಮಾರು 6,500 ಮತಗಳ ಅಂತರದಿಂದಷ್ಟೇ ಜಯಿಸಿದರು. ಆ ಚುನಾವಣೆಯ ಬಳಿಕ ಪುನಃ ಯಡಿ ಯೂರಪ್ಪ ಪಾಳಯಕ್ಕೆ ಮರಳಿದ್ದ ಗೌಡರು ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಟಿಕೆಟ್‌ಗಾಗಿ ಯತ್ನಿಸಿದರೂ ದೊರೆಯಲಿಲ್ಲ. ಆದರೆ ಕಾಂಗ್ರೆಸ್‌ನ ಅಭ್ಯರ್ಥಿ ಗೋಣಿ ಮಾಲತೇಶ್‌ರನ್ನು ಬೆಂಬಲಿಸುವ ಸಾಧ್ಯತೆ ಇದೆ. ಸ್ವತಃ ಗೌಡರೇ ಸ್ಪರ್ಧಿಸುವುದಕ್ಕೂ ಬೇರೆಯವರಿಗೆ ಬೆಂಬಲ ನೀಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದ್ದರೂ, ಬಿಎಸ್‌ವೈ ತಂಡ ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕಾಗಿದೆ.
ಶಿಕಾರಿಪುರದಲ್ಲಿ ಹೊರಗಿನಿಂದ ವ್ಯಕ್ತಿಗಳು ಬಂದಾಗ ಇಡೀ ಶಿಕಾರಿಪುರ ಒಂದಾಗಿ ಯಡಿಯೂರಪ್ಪನವರನ್ನು ಬೆಂಬಲಿ ಸಿತು. ಆದರೆ ಆ ಕ್ಷೇತ್ರದ ಸಾದರ ಲಿಂಗಾಯತ ಅಭ್ಯರ್ಥಿಗಳು ಎದುರಾಳಿ ಆದಾಗೆಲ್ಲ ಮತಗಳ ಅಂತರ ಕಡಿಮೆಯಾಗುತ್ತಲಿದೆ. ಶಿಕಾರಿಪುರದಲ್ಲಿ ಲಿಂಗಾಯತ, ಕುರುಬ, ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲಿಂಗಾಯತರಲ್ಲಿ ಸಾದರ ಲಿಂಗಾಯತರು ಅಧಿಕ ಸಂಖ್ಯೆಯಲ್ಲಿದ್ದು, ಯಡಿಯೂರಪ್ಪ ಪಂಚಮಸಾಲಿ ಗಾಣಿಗ ಲಿಂಗಾಯತ ವರ್ಗಕ್ಕೆ ಸೇರುತ್ತಾರೆ. ಆ ಮತಗಳು ಇಲ್ಲಿ ಕಡಿಮೆ ಸಂಖ್ಯೆಯಲ್ಲಿದೆ. ಹೀಗಾಗಿ ಯಡಿಯೂರಪ್ಪ ನವರು ತಮ್ಮ ರಾಜಕೀಯ ತಂತ್ರದ ಒಂದು ಭಾಗವಾಗಿ ಸಾದರ ಲಿಂಗಾಯತ ನಾಯಕರನ್ನು ತಮ್ಮ ಜೊತೆಗೇ ಇಟ್ಟುಕೊಳ್ಳುತ್ತಾರೆ.
ಯಡಿಯೂರಪ್ಪ ಅವರ ವಿರುದ್ಧ ದೊಡ್ಡ ಸಂಖ್ಯೆಯ ಮತಗಳೇ ಕ್ಷೇತ್ರದಲ್ಲಿವೆ. ಆದರೆ ಈ ಮತಗಳು ಕ್ರೋಡೀಕೃತಗೊಳ್ಳುತ್ತಿಲ್ಲ.
ಈ ಬಾರಿ ಕಾಂಗ್ರೆಸ್‌ನಿಂದ ಗೋಣಿ ಮಾಲತೇಶ್ ಸ್ಪರ್ಧಿಸಿದ್ದು, ಇವರು ಪ್ರಬಲ ಅಭ್ಯರ್ಥಿ ಯಾಗದಿದ್ದರೂ, ಉಳಿದವರು ಒಂದಾಗಿ ಬೆಂಬಲಿಸುವ ಸಾಧ್ಯತೆ ಕಾಣುತ್ತಿದೆ. ಜೆಡಿಎಸ್‌ನಿಂದ ನಿವೃತ್ತ ಅಧಿಕಾರಿ ಎಚ್.ಟಿ. ಬಳಿಗಾರ್ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಇರುವುದು ಯಡಿಯೂರಪ್ಪನವರಿಗೆ ಲಾಭವಾಗುವ ಇನ್ನೊಂದು ಅಂಶ. ಅವರ ವಿರುದ್ಧದ ಮತಗಳು ಹಂಚಿ ಹೋಗುತ್ತವೆ.
ಕ್ಷೇತ್ರ ಮಹಿಮೆ
ಇಂದು ಬಿಜೆಪಿ ಕ್ಷೇತ್ರವಾಗಿ ಪರಿವರ್ತಿತ ವಾಗಿರುವ ಶಿಕಾರಿಪುರ ಕ್ಷೇತ್ರ ಒಂದು ಕಾಲದಲ್ಲಿ ಮೀಸಲು ಕ್ಷೇತ್ರವಾಗಿತ್ತು ಎಂಬುದು ವಿಶೇಷ. ಕಾಂಗ್ರೆಸ್, ಸಮಾಜವಾದಿ ಪಕ್ಷದತ್ತ ಕೂಡ ಹೊರಳಿತ್ತು. ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ ಬಳಿಕ ವಿಭಿನ್ನ ನೆಲೆಯಲ್ಲಿ ಹೊರಳಿಕೊಂಡಿತು.
1952 ಮತ್ತು 1957 ರಲ್ಲಿ ಸೊರಬ ಕ್ಷೇತ್ರದೊಂದಿಗೆ ದ್ವಿಸದಸ್ಯತ್ವ ಕ್ಷೇತ್ರವಾಗಿದ್ದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. 1962 ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, 1967 ರಲ್ಲಿ ಸೋಷಿಯಲಿಸ್ಟ್ ಪಕ್ಷದಿಂದ ಜಿ.ಬಸವಣ್ಯಪ್ಪ ದೊಡ್ಡ ಅಂತರದಿಂದ ಗೆದ್ದು ಸದ್ದು ಮಾಡಿದ್ದರು.ಆದರೆ 1972 ರಲ್ಲಿ ಮರಳಿ ಇದು ಕಾಂಗ್ರೆಸ್ ಕ್ಷೇತ್ರವಾಯಿತು. ಆಗ ಕೆ. ವೆಂಕಟಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ದೊಡ್ಡ ಅಂತರದಿಂದ ಗೆದ್ದರು. 1978 ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆಯಾದ ಇಲ್ಲಿ ಪುನಃ ಕೆ. ವೆಂಕಟಪ್ಪ ಅವರು ಗೆದ್ದು ಸಚಿವರೂ ಆದರು. 1983 ರಲ್ಲಿ ಈ ಕ್ಷೇತ್ರ ನಿರ್ಣಾಯಕ ಸ್ಥಿತಿಯಲ್ಲಿತ್ತು.
ಆಗ ಬಿಜೆಪಿಯಿಂದ ಯುವಕರಾಗಿದ್ದ ಯಡಿಯೂರಪ್ಪ ಸ್ಪರ್ಧಿಸಿದರು. ಅನೇಕ ಹೋರಾಟಗಳ ಮೂಲಕ ಜನ ಮನ್ನಣೆ ಗಳಿಸಿದ್ದ ಯಡಿಯೂರಪ್ಪ ವಿರುದ್ಧ ಸಚಿವರಾಗಿದ್ದ ಇದೇ ಕೆ.ವೆಂಕಟಪ್ಪ ಅವರು ಸುಮಾರು 22 ಸಾವಿರ ಮತಗಳ ಅಂತರದಿಂದ ಸೋತರು.
ನಂತರ ಯಡಿಯೂರಪ್ಪ ಕಾರುಬಾರು. 1985, 1989, 1994 ರಲ್ಲಿ ಗೆಲುವು ಸಾಧಿಸಿದರು. ಆದರೆ 1999 ರಲ್ಲಿ ಜಿಲ್ಲೆಯಲ್ಲಿ ಬಂಗಾರಪ್ಪ ಹವಾ ಎದ್ದಿತ್ತು. ಆಗ ಬಂಗಾರಪ್ಪ ಅವರು ಸಾದರ ಲಿಂಗಾಯತ ಅಭ್ಯರ್ಥಿಯಾದ ಮಹಾಲಿಂಗಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಿದರು. ಆ ಬಾರಿ 7 ಸಾವಿರ ಮತಗಳ ಅಂತರದಿಂದ ಮೊದಲ ಬಾರಿಗೆ ಯಡಿಯೂರಪ್ಪ ಸೋತರು. ಅದು ಅವರ ಪ್ರಥಮ ಸೋಲು. ಈ ಕ್ಷಣದವರೆಗೂ ಅದೇ ಅವರ ಕೊನೆಯ ಸೋಲೂ ಹೌದು. 2004 , 2008, 2013ರಲ್ಲಿ ಇಲ್ಲಿ ಯಡಿಯೂರಪ್ಪ ಅಭೂತಪೂರ್ವ ಗೆಲುವು ಸಾಧಿಸಿದರು.
ಮೋದಿ ಸರಕಾರದ ಜನಪರ ಯೋಜನೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿವೆ. ಜನರ ನಂಬಿಕೆ ಹುಸಿಗೊಳಿಸಲ್ಲ.
– ಯಡಿಯೂರಪ್ಪ
ಈ ಚುನಾವಣೆ ಒಬ್ಬ ಬಡವ ಮತ್ತು ಶ್ರೀಮಂತನ ಮಧ್ಯೆ ನಡೆಯುತ್ತಿರುವ ಸಮರ. ಈ ಸಮರದಲ್ಲಿ ಜನರು ನನ್ನಂತಹ ಬಡವನನ್ನು ಗೆಲ್ಲಿಸುವುದರ ಮೂಲಕ ಸಂಪತ್ತಿಗೆ ಸವಾಲ್ ಹಾಕಲಿದ್ದಾರೆ. ನಾನು ದುರ್ಬಲ ಅಭ್ಯರ್ಥಿ ಅಲ್ಲ.
– ಜಿ.ಬಿ. ಮಾಲತೇಶ್
5 ವರ್ಷಗಳಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಆಡಳಿತವನ್ನು ಜನತೆ ನೋಡಿದ್ದಾರೆ. ಈ ಬಾರಿ ಜೆಡಿಎಸ್ ಗೆ ಅವಕಾಶ ಮಾಡಿಕೊಡಲಿದ್ದಾರೆ.
– ಎಚ್.ಟಿ. ಬಳಿಗಾರ್
– ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.