ಜೀವನೋಪಾಯಕ್ಕೆ “ಪರ್ಯಾಯ ಮಾರ್ಗ’
Team Udayavani, Apr 25, 2018, 11:41 AM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ನಗರದ ನಡುವೆ ಪರ್ಯಾಯ ರಸ್ತೆ, ಸೇವೆಗೆ ಮುಕ್ತಗೊಂಡ ಬೆನ್ನಲ್ಲೇ ಆ ಮಾರ್ಗದುದ್ದಕ್ಕೂ ಬರುವ ಗ್ರಾಮಸ್ಥರ ಅದೃಷ್ಟದ ಬಾಗಿಲು ಕೂಡ ತೆರೆದಿದೆ!
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳಿಂದ ಕೇವಲ ಪ್ರಯಾಣದ ದೂರ ಮತ್ತು ಸಮಯ ಉಳಿತಾಯ ಆಗುತ್ತಿಲ್ಲ. ಜತೆಗೆ ಆ ಭಾಗದ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಪರ್ಯಾಯ ಮಾರ್ಗಗಳಿಗೂ ಇವು ದಾರಿಮಾಡಿಕೊಟ್ಟಿವೆ.
ಈ ಮಾರ್ಗದಲ್ಲಿ ಬರುವ ಬರಡು ಭೂಮಿಯಲ್ಲಿ ಜಾಹಿರಾತು ಫಲಕಗಳನ್ನು ಹಾಕಲು ಹಲವು ಕಂಪನಿಗಳು ಮುಂದೆ ಬಂದಿವೆ. ಇದರಿಂದ ಜಮೀನು ಮಾಲಿಕರಿಗೆ ತಿಂಗಳಿಗೆ ಕನಿಷ್ಠ 30ರಿಂದ 40 ಸಾವಿರ ರೂ. ಬಾಡಿಗೆ ಬರಲಿದೆ.
ವಾಣಿಜ್ಯ ಚಟುವಟಿಕೆಗಳು ಗರಿಗೆದರಿದ್ದು, 200-300 ರೂ.ಗಾಗಿ ಕೂಲಿಗೆ ಹೋಗುತ್ತಿದ್ದ ಗ್ರಾಮಸ್ಥರು ಈಗ ರಸ್ತೆಯಲ್ಲೇ ತಳ್ಳುವ ಗಾಡಿ ಇಟ್ಟು ನಿತ್ಯ 800ರಿಂದ ಸಾವಿರ ರೂ. ಗಳಿಸುತ್ತಿದ್ದಾರೆ. ಹೋಟೆಲ್, ಲಾಡ್ಜ್ಗಳನ್ನು ತೆರೆಯಲು ಭೂಮಿ ಹುಡುಕಿಕೊಂಡು ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದಾರೆ. ಇದೆಲ್ಲದರ ಪರಿಣಾಮ ಗ್ರಾಮೀಣ ಜನರ ಅದೃಷ್ಟದ ಬಾಗಿಲು ತೆರೆದಂತಾಗಿದೆ.
ವಿಮಾನ ನಿಲ್ದಾಣಕ್ಕೆ ಮೂರು ಮಾರ್ಗಗಳಲ್ಲಿ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಮೈಲನಹಳ್ಳಿಯಿಂದ ಬಾಗಲೂರು ಮೂಲಕ ಬೆಂಗಳೂರು ಉತ್ತರ ತಲುಪಬಹುದು. ಅದೇ ರೀತಿ, ಮೈಲನಹಳ್ಳಿಯಿಂದ ಬೂದಿಗೆರೆಯಲ್ಲಿ ಹಾದು ವೈಟ್‌ಫೀಲ್ಡ್ ಮತ್ತು ಮೈಲನಹಳ್ಳಿಯಿಂದ ದೇವನಹಳ್ಳಿ ರಸ್ತೆ ಮೂಲಕವೂ ನಗರಕ್ಕೆ ಬರಬಹುದು. ಈ ರಸ್ತೆಗಳು ಸೇವೆಗೆ ಮುಕ್ತವಾಗಿದ್ದರಿಂದ ಟ್ಯಾಕ್ಸಿ ಚಾಲಕರಿಗೆ 10ರಿಂದ 12 ಕಿ.ಮೀ ಉಳಿತಾಯ ಆಗುತ್ತಿದೆ.
ಗರಿಗೆದರಿದ ವಾಣಿಜ್ಯ ಚಟುವಟಿಕೆ: ಇಷ್ಟೇ ಅಲ್ಲ, ದೇಶ-ವಿದೇಶಗಳಿಗೆ ತೆರಳುವವರು ಈ ಹಳ್ಳಿಗಳ ಮೂಲಕ ಹಾದುಹೋಗುತ್ತಾರೆ. ಜನದಟ್ಟಣೆ ಹೆಚ್ಚಿದ ಬೆನ್ನಲ್ಲೇ ಬೇರೆ ಬೇರೆ ಕಂಪನಿಗಳು ಹೂಡಿಕೆಗಾಗಿ ಇತ್ತ ಮುಖಮಾಡುತ್ತಿವೆ. ಇದೆಲ್ಲದರ ಪರಿಣಾಮ ಸುತ್ತಲಿನ ಗ್ರಾಮಸ್ಥರಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಉದ್ದೇಶಿತ ಮಾರ್ಗಗಳಲ್ಲಿ ಸುತ್ತಲಿನ ಕಾಡಯರಪನಹಳ್ಳಿ, ಚಿಕ್ಕನಹಳ್ಳಿ, ಬೇಗೂರು, ಶೆಟ್ಟಿಗೆರೆ, ಮುತ್ತುಗದಹಳ್ಳಿ, ದೊಡ್ಡಜಾಲ, ಎರ್ತಗಾನಹಳ್ಳಿ ಮುಂತಾದ ಗ್ರಾಮಗಳು ಬರುತ್ತವೆ. ಇಲ್ಲೆಲ್ಲಾ ಭೂಮಿಯ ಬೆಲೆ ತಿಂಗಳ ಹಿಂದೆ ಎಕರೆಗೆ ಕನಿಷ್ಠ 2.50ರಿಂದ 3 ಕೋಟಿ ಇತ್ತು. ಈಗ ಅದು ನಾಲ್ಕು ಕೋಟಿ ರೂ. ತಲುಪಿದೆ.
ತೋಟ, ವಿಮಾನ ನಿಲ್ದಾಣದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ರಸ್ತೆ ಬದಿ ವ್ಯಾಪಾರ ಶುರುಮಾಡಿದ್ದಾರೆ. ಕೆಲವೇ ದಿನಗಳಲ್ಲಿ ನೂರಾರು ಸಣ್ಣ-ಪುಟ್ಟ ಅಂಗಡಿಗಳು ಇಲ್ಲಿ ತಲೆಯೆತ್ತಿವೆ. ರಸ್ತೆ ಸುಧಾರಣೆಯಾದ ನಂತರ ವಾಹನಗಳ ಸಂಚಾರ ಮತ್ತಷ್ಟು ಹೆಚ್ಚಲಿದ್ದು, ಆದಾಯ ಕೂಡ ಹೆಚ್ಚುವ ನಿರೀಕ್ಷೆ ಇದೆ ಎಂದು ಬೇಗೂರಿನ ಹಂಸ ಮಂಜುನಾಥ್ ತಿಳಿಸುತ್ತಾರೆ.
ರೈತರೂ ಉತ್ಸುಕರಾಗಿದ್ದಾರೆ?: ಈ ಭಾಗದ ಜಮೀನು ಮಳೆಯಾಶ್ರಿತವಾಗಿದೆ. ಕೊಳವೆಬಾವಿ ಕೊರೆದರೂ ನೀರು ಸಿಗುತ್ತದೆ ಎಂಬ ಖಾತ್ರಿ ಇಲ್ಲ. ಆದ್ದರಿಂದ ಜನ ಇದ್ದುದರಲ್ಲೇ ರಾಗಿ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ವರ್ಷಕ್ಕೆ ಹೆಚ್ಚೆಂದರೆ ಎಕರೆಗೆ 40ರಿಂದ 50 ಸಾವಿರ ರೂ. ಆದಾಯ ಬರುತ್ತದೆ.
ಆದರೆ ವಿಮಾನ ನಿಲ್ದಾಣಕ್ಕೆ ಈ ರಸ್ತೆ ಕೂಡುವುದರಿಂದ ಭಾರೀ ಬೇಡಿಕೆ ಬಂದಿದ್ದು, ವಿವಿಧ ಕಂಪನಿಗಳು ಇಲ್ಲಿನ ಜಮೀನುಗಳಲ್ಲಿ ಜಾಹಿರಾತು ಫಲಕಗಳನ್ನು ಹಾಕಲು ಮುಂದೆಬಂದಿವೆ. ಜಾಗಕ್ಕೆ ತಿಂಗಳಿಗೆ 30ರಿಂದ 70 ಸಾವಿರ ರೂ. ಬಾಡಿಗೆ ನೀಡಲು ಸಿದ್ಧರಿದ್ದಾರೆ. ಈಗಾಗಲೇ ಆರೇಳು ಕಂಪನಿಗಳು ರೈತರನ್ನು ಸಂಪರ್ಕಿಸಿವೆ ಎಂದು ಕಾಡಯರಪನಹಳ್ಳಿ ನಿವಾಸಿ ಮದನ್ ಮಾಹಿತಿ ನೀಡಿದರು.
ಬಹುತೇಕ ಯುವಕರು ವಿಮಾನ ನಿಲ್ದಾಣದ ಕಾರ್ಗೊ, ನರ್ಸರಿ, ಹೌಸ್‌ಕೀಪಿಂಗ್, ಎಲೆಕ್ಟ್ರೀಷಿಯನ್ ಮತ್ತಿತರ ಕೆಲಸದಲ್ಲಿ ತೊಡಗಿದ್ದಾರೆ. ಈಗ ಅನಾಯಾಸವಾಗಿ ತಿಂಗಳಿಗೆ ಸಾವಿರಾರು ರೂ. ಬರುವುದರಿಂದ ಈ ನಡುವೆ ಹೂಡಿಕೆದಾರರನ್ನು ಸೆಳೆಯಲು ರೈತರು ಜಮೀನುಗಳಲ್ಲಿ ಬೆಳೆದುನಿಂತ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಸ್ವತ್ಛ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಮೈಲನಹಳ್ಳಿಯ ಮಂಜುನಾಥ್ ಹೇಳುತ್ತಾರೆ.
ತಲೆನೋವು ತಪ್ಪಲಿದೆ: ಟ್ಯಾಕ್ಸಿ ಚಾಲಕರು ಸೇರಿದಂತೆ ಕಡಿಮೆ ಸಂಬಳದಲ್ಲಿ ದುಡಿಯುವ ಉದ್ಯೋಗಿಗಳಿಗೆ ಏಕಮುಖ ರಸ್ತೆಯಿಂದ ತೊಂದರೆಯಾಗಿತ್ತು. ಈಗ ಪರ್ಯಾಯ ರಸ್ತೆಯಿಂದ ಈ ತಲೆನೋವು ತಪ್ಪಿದೆ. ರಸ್ತೆ ಅಕ್ಕ-ಪಕ್ಕ ಅಂಗಡಿ ಹಾಕಿದಾಗ ಜನದಟ್ಟಣೆ ಹೆಚ್ಚುವ ಸಾಧ್ಯತೆಯಿದೆ.
ಆದರೆ, ಈ ಮೊದಲು ಹತ್ತಿರದಲ್ಲೆಲ್ಲೂ ಕೈಗೆಟಕುವ ದರದಲ್ಲಿ ಊಟ-ತಿಂಡಿ ಸಿಗುತ್ತಿರಲಿಲ್ಲ. ರಾತ್ರಿ ಊಟ ಹುಡುಕುವುದೇ ಚಾಲಕರಿಗೆ ಕೆಲಸವಾಗಿತ್ತು. ಆ ತೊಂದರೆ ಈಗ ಕಡಿಮೆಯಾಗಲಿದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಹಮೀದ್ ಅಕºರ್ ಅಲಿ.
ಸಂಪೂರ್ಣವಾದರೆ ಅನುಕೂಲ: ಪರ್ಯಾಯದಿಂದ ಪ್ರಯಾಣ ದೂರ ಕಡಿಮೆ ಆಗಿದೆ ಹಾಗೂ ಸಮಯವೂ ಉಳಿತಾಯ ಆಗುತ್ತಿದೆ. ಆದರೆ, ಒಂದೂವರೆ ತಿಂಗಳಾದರೂ ಪರ್ಯಾಯ ರಸ್ತೆ ಇನ್ನೂ ಸಂಪೂರ್ಣವಾಗಿ ದುರಸ್ತಿ ಆಗಿಲ್ಲ.
ನಿತ್ಯ ವಿಮಾನ ನಿಲ್ದಾಣಕ್ಕೆ ಒಂದು ಲಕ್ಷ ವಾಹನಗಳು ಸಂಚರಿಸುತ್ತಿದ್ದು, ಈ ಪೈಕಿ ಪರ್ಯಾಯ ರಸ್ತೆಯಲ್ಲಿ ಕೇವಲ 10 ಸಾವಿರ ವಾಹನಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಸಂಖ್ಯೆ ಕನಿಷ್ಠ 30 ಸಾವಿರಕ್ಕೆ ಏರಿಕೆಯಾದರೆ, ಜನರಿಗೆ ಅನುಕೂಲ ಆಗಲಿದೆ ಎಂದು ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲಿಕರ ಸಂಘ (ಬಿಟಿಟಿಒಎ)ದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಸ್ಪಷ್ಟಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.