ಪುತ್ತೂರು: ಬರೆ ಜರಿದು ಇಬ್ಬರು ಕಾರ್ಮಿಕರ ಸಾವು
Team Udayavani, Apr 25, 2018, 12:53 PM IST
ಪುತ್ತೂರು:ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಬರೆ ಜರಿದು ಇಬ್ಬರು ಕಾರ್ಮಿಕರು ಅದರಡಿ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ಬಸ್ ನಿಲ್ದಾಣದ ಮುಂಭಾಗದ ಅನಿತಾ ಆಯಿಲ್ ಮಿಲ್‌ನ ಜಾಗದಲ್ಲಿ ಸಂಭವಿಸಿದೆ.
ಮಂಗಳೂರಿನ ಜಲ್ಲಿಗುಡ್ಡೆ ನಿವಾಸಿ ಪದ್ಮನಾಭ (35), ಕೊಪ್ಪಳದ ಅಡವಿಬಾವಿ ನಿವಾಸಿ ಶಿವು ಯಾನೆ ಶಿವಣ್ಣ (40) ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕುಷ್ಟಗಿಯ ಮಹಾಂತೇಶ್ ಗಂಭೀರ ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೋಕಟ್ಟೆಯ ಯಶವಂತ್ ಸಣ್ಣಪುಟ್ಟ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಷ್ಟಗಿ ನಿವಾಸಿಗಳಾದ ನಾಗರಾಜ್ ಹಾಗೂ ಮೃತ ಪಟ್ಟ ಶಿವಣ್ಣ ಅವರ ಪತ್ನಿ ಹನುಮವ್ವ ಘಟನಾ ಸ್ಥಳದಿಂದ ಅನತಿ ದೂರ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಶಿವಣ್ಣ, ಮಹಾಂತೇಶ್, ಹನುಮವ್ವ, ನಾಗರಾಜ್ ಮಂಗಳೂರಿನ ಅಡ್ಯಾರ್ ನಲ್ಲಿ ವಾಸವಾಗಿದ್ದರು. ಗುತ್ತಿಗೆದಾರರು ಮಂಗಳೂರಿ ನವರೇ ಆಗಿದ್ದು, ಈ ಕಾಮಗಾರಿಗೆ ಮಂಗಳೂರಿ ನಿಂದಲೇ ಕಾರ್ಮಿಕ ರನ್ನು ಕರೆಸಿಕೊಂಡಿದ್ದರು.
ಅವಘಡ ಸಂಭವಿಸಿದ ತತ್‌ಕ್ಷಣ ಸಾರ್ವ ಜನಿಕರು, ಪೊಲೀಸ್ ನಿರೀಕ್ಷಕ ಶರಣ ಗೌಡ, ಎಸ್‌ಐ ಅಜಯ್ ಕುಮಾರ್, ನಾರಾಯಣ ರೈ, ಅಗ್ನಿಶಾಮಕ ದಳ ಸಿಬಂದಿ ಸಮರೋಪಾದಿಯ ಕಾರ್ಯಾಚರಣೆ ನಡೆಸಿದರು. ಸುಮಾರು 1 ಗಂಟೆ 15 ನಿಮಿಷದ ನಿರಂತರ ಕಾರ್ಯಾಚರಣೆಯಲ್ಲಿ ಎಲ್ಲರನ್ನು ಮೇಲಕ್ಕೆ ಎತ್ತ ಲಾಯಿತು.
ಅಕ್ರಮ ಕಟ್ಟಡ: ದೂರು
2017ರಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅನಿತಾ ಆಯಿಲ್ ಮಿಲ್‌ನ ಮಾಲಕರು ನಗರಸಭೆಯಿಂದ ಅನುಮತಿ ಪಡೆದಿದ್ದರು. ಇದರ ಅವಧಿ 2018ರ ಎಪ್ರಿಲ್ 14ಕ್ಕೆ ಮುಗಿದಿತ್ತು. ಎಪ್ರಿಲ್ 17ರಂದು ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದುವರೆಗೆ ನವೀಕರಣಗೊಂಡಿರಲಿಲ್ಲ.ಹಾಗಿದ್ದರೂ ಕಾಮಗಾರಿ ನಡೆಸಲಾಗುತ್ತಿತ್ತು. ಅವಧಿ ಮೀರುವ ಒಂದು ತಿಂಗಳ ಮೊದಲೇ ಅರ್ಜಿ ಸಲ್ಲಿಸಬೇಕೆಂಬ ನಿಯಮ ವಿದೆ. ಆದ್ದರಿಂದ ಇದನ್ನು ಅಕ್ರಮ ಕಟ್ಟಡ ಕಾಮಗಾರಿ ಎಂದು ಪರಿಗಣಿಸಿ ಠಾಣೆಗೆ ದೂರು ನೀಡ ಲಾಗುವುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.
ಆವರಣ ಗೋಡೆ ನಿರ್ಮಾಣಕ್ಕೂ ನಗರಸಭೆ ಯಿಂದ ಅನುಮತಿ ಪಡೆದಿಲ್ಲ ಎನ್ನ ಲಾಗಿದೆ. ಪರವಾನಿಗೆಯನ್ನು ಅಮಾನತಿನಲ್ಲಿ ಇಟ್ಟು, ಜಾಗದಲ್ಲೇ ಇರುವ ಹಳೆ ಕಟ್ಟಡದ ತೆರವಿಗೆ ಆದೇಶಿಸ ಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟ ಶಿವಣ್ಣ ಅವರ ಪತ್ನಿ ಹನುಮವ್ವ ಅವರು ಕಟ್ಟಡ ಮಾಲಕರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಆರೋಪ
ಪುತ್ತೂರು ಸಿಟಿ ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗವಾಗಿ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆ ವಿಸ್ತರಣೆಗೆ ಜಾಗ ಇಡುವಂತೆ ನಗರಸಭೆ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ. ಇದನ್ನು ಉಪೇಕ್ಷಿಸಿ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ್ದಾರೆ. ಇದರಿಂದಾಗಿ ದುರಂತ ಸಂಭವಿಸಿದೆ ಎಂದು ನಗರಸಭೆ ಸದಸ್ಯ ಶಕ್ತಿ ಸಿನ್ಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತಿಲ ಪ್ರತ್ಯಕ್ಷ
ರಾಜಕೀಯ ಬೆಳವಣಿಗೆಗಳಿಂದ ಸೋಮವಾರ ನಾಪತ್ತೆಯಾಗಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ದುರಂತ ಸ್ಥಳದಲ್ಲಿ ಕಾಣಿಸಿಕೊಂಡು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ತಹಶೀಲ್ದಾರ್ ಅನಂತಶಂಕರ, ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಕಿಶೋರ್ ಬೊಟ್ಯಾಡಿ, ಮುರಳೀಕೃಷ್ಣ ಹಸಂತ್ತಡ್ಕ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ನಡೆದದ್ದೇನು?
ಮಂಗಳವಾರ ಬೆಳಗ್ಗೆ 10.26ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಆವರಣ ಗೋಡೆ ನಿರ್ಮಿ ಸಲು ರಸ್ತೆ ಬದಿಯವರೆಗೆ ಸುಮಾರು 30 ಅಡಿ ಅಗೆದಿರುವುದೇ ದುರಂತಕ್ಕೆ ಕಾರಣ. 30 ಅಡಿ ಆಳದಲ್ಲಿ ಗೋಡೆಯ ತಳವನ್ನು ಮತ್ತಷ್ಟು ಕೊರೆದ ಕಾರಣ ಬರೆ ಜರಿದಿದೆ. ಸಮೀಪ ದಲ್ಲೇ ಇದ್ದ ಆವರಣ ಶೀಟ್ ಹಾಗೂ ಹೋರ್ಡಿಂಗ್ಸ್ ಕೂಡ ಬಿದ್ದಿದೆ. ಜೋಕಟ್ಟೆಯ ಯಶವಂತ್ ಮಣ್ಣಿನಡಿ ಸಿಲುಕಿದ್ದರೂ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.
ಸನಿಹವೇ ಶಾಲೆ
ಘಟನೆ ಸಂಭವಿಸಿದ ಅನತಿ ದೂರ ದಲ್ಲೇ ರಿಕ್ಷಾ ಪಾರ್ಕಿಂಗ್, ಟ್ರಾನ್ಸ್ ಫಾರ್ಮರ್, ನೆಲ್ಲಿಕಟ್ಟೆ ಹಿ.ಪ್ರಾ. ಶಾಲೆ ಹಾಗೂ ಅನ್ನ ದಾಸೋಹ ಕಟ್ಟಡವಿದೆ. ಸೆಟ್‌ಬ್ಯಾಕ್ ಬಿಡದೇ ಆವರಣ ಗೋಡೆ ನಿರ್ಮಿಸುವ ಧಾವಂತದಲ್ಲಿ ಗೋಡೆ ಇನ್ನಷ್ಟು ಕುಸಿದರೆ ಶಾಲೆಗೂ ಅಪಾಯ ತಪ್ಪಿದ್ದಲ್ಲ .
ಪರವಾನಿಗೆ ನವೀಕರಣಕ್ಕೆ ಅರ್ಜಿ
ಅನಿತಾ ಆಯಿಲ್ ಮಿಲ್‌ನ ಹಳೆಯ ಕಟ್ಟಡವನ್ನು ತೆರವು ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯಲಾಗಿದೆ. ಈಗ ಅವಧಿ ಮುಗಿದಿದ್ದು, ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಡೆಗೋಡೆಯ ಬಳಿಕ ಸೆಟ್‌ಬ್ಯಾಕ್ ಬಿಡಲಾಗುವುದು.
– ಅಜಿತ್ ನಾಯಕ್, ಪ್ರಕಾಶ್ ನಾಯಕ್ ಕಟ್ಟಡ ಮಾಲಕರು
ಕಾನೂನು ಕ್ರಮ
ಸ್ಥಳವನ್ನು ಗಮನಿಸಿದಾಗ ಯಾವುದೇ ಮುಂಜಾಗ್ರತೆ ಕೈಗೊಳ್ಳದಿರುವುದು ಕಂಡು ಬಂದಿದೆ. ನಿರ್ಲಕ್ಷದಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಾ| ರವಿಕಾಂತೇಗೌಡ, ಎಸ್ಪಿ , ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.