ಪ್ರವಾಸಿಗರ ಪಾಲಿಗೆ ಆಪತ್ಬಾಂಧವರಾದ ಜೀವರಕ್ಷಕರು
Team Udayavani, Apr 30, 2018, 10:44 AM IST
ಮಹಾನಗರ: ಕರಾವಳಿ ಅಂದರೆ, ತತ್‌ಕ್ಷಣ ನೆನಪಿಗೆ ಬರುವುದು ಇಲ್ಲಿನ ಬೀಚ್ ಗಳು. ಗಮನಾರ್ಹ ಅಂದರೆ, ಪಣಂಬೂರು ಸೇರಿದಂತೆ ಕರಾವಳಿಯ ಪ್ರಮುಖ ಮೂರು ಬೀಚ್‌ಗಳಲ್ಲಿ 10 ವರ್ಷಗಳಲ್ಲಿ ಆಟವಾಡಲು ಹೋಗಿ ಸಮುದ್ರಪಾಲಾಗಬೇಕಾಗಿದ್ದ 334 ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಆ ಮೂಲಕ ಲೈಫ್ ಗಾರ್ಡ್ಸ್‌ಗಳು ಪ್ರವಾಸಿಗರ ಪಾಲಿಗೆ ನಿಜವಾದ ಜೀವ ರಕ್ಷಕರೆನಿಸಿಕೊಂಡಿದ್ದಾರೆ.
ಶಾಲಾ ಮಕ್ಕಳಿಗೆ ಈಗಾಗಲೇ ಬೇಸಗೆ ರಜೆ ಸಿಕ್ಕಿದೆ. ಮಳೆಗಾಲ ಕೂಡ ಸಮೀಪಿಸುತ್ತಿದ್ದು, ಇದೇ ಸಮಯದಲ್ಲಿ ಬೀಚ್‌ಗಳಿಗೆ ಹೋಗಿ ನೀರಾಟವಾಡುವ ಮಂದಿ ಕೂಡ ಹೆಚ್ಚಿದ್ದಾರೆ. ಎಷ್ಟೇ ಮುನ್ನೆಚ್ಚರಿಕೆ ಇದ್ದರೂ ಸಾಲದು. ಏಕೆಂದರೆ, ಕಾಪು ಬೀಚ್‌ನಲ್ಲಿ ಶನಿವಾರ ಕೂಡ ಆಟವಾಡಲು ತೆರಳಿ ಸಮುದ್ರಪಾಲು ಆಗುತ್ತಿದ್ದ ಇಬ್ಬರ ಪೈಕಿ ಒಬ್ಬರನ್ನು ರಕ್ಷಿಸಲಾಗಿದೆ. ಆದರೆ, ಈ ರೀತಿಯಾಗಿ, ಪ್ರತಿದಿನವೂ ಕರಾವಳಿಯ ಬೀಚ್‌ಗಳಲ್ಲಿ ಅಪಾಯಕ್ಕೆ ಸಿಲುಕುವ ಹಲವು ಪ್ರವಾಸಿಗರನ್ನು ರಕ್ಷಿಸುವಲ್ಲಿ ಈ ಬೀಚ್ ಲೈಫ್ ಗಾರ್ಡ್‌ಗಳು ತಮ್ಮ ಜೀವದ ಹಂಗು ತೊರೆದು ಕರ್ತವ್ಯನಿರತರಾಗಿರುತ್ತಾರೆ.
ಬೀಚ್‌ಗಳಲ್ಲಿ ಲೈಫ್‌ಗಾರ್ಡ್ ಸಂಖ್ಯೆ ಹೆಚ್ಚಳ
ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ವೀಕೆಂಡ್‌ಗಳಲ್ಲಿ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಲೈಫ್ ಗಾರ್ಡ್‌ಗಳು ಎಷ್ಟೇ ಮುನ್ನೆಚ್ಚರಿಕೆ ನೀಡಿದರೂ ಹೆಚ್ಚಿನ ಪ್ರವಾಸಿಗರು ಅದಕ್ಕೆ ಸ್ಪಂದಿಸದೇ ಇರುವುದು ಅನಾಹುತಗಳಿಗೆ ಕಾರಣವಾಗುತ್ತಿದೆ. ಈಗ ಹೆಚ್ಚಿನ ಸಂಖ್ಯೆಯ ಲೈಫ್‌ಗಾರ್ಡ್‌ನವರನ್ನು ನಿಯೋಜನೆ ಮಾಡಲಾಗುತ್ತಿದೆ. ಪಣಂಬೂರು ಬೀಚ್‌ನಲ್ಲಿ ಸಾಮಾನ್ಯ ದಿನಗಳಲ್ಲಿ 8 ಮಂದಿಗಳಿದ್ದರೆ, ವೀಕೆಂಡ್‌ಗಳಲ್ಲಿ ಇಬ್ಬರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ.
ಕಾಪು ಬೀಚ್‌ನಲ್ಲಿ 3 ಮಂದಿ ಮತ್ತು ಸೋಮೇಶ್ವರ ಬೀಚ್‌ನಲ್ಲಿ 2 ಮಂದಿ ಲೈಫ್ ಗಾರ್ಡ್‌ಗಳಿದ್ದಾರೆ. ಇವರಷ್ಟೇ ಅಲ್ಲದೆ, ಸ್ಥಳೀಯ ಪೊಲೀಸರು ಕೂಡ ಆಗಾಗ ಬೀಚ್ ಸುತ್ತಮುತ್ತ ಗಸ್ತು ತಿರುಗುತ್ತಾರೆ. ಬೀಚ್‌ಗಳಲ್ಲಿ ನುರಿತ ಲೈಫ್‌ಗಾರ್ಡ್ ನವರನ್ನು ಹಾಕಲಾಗಿದೆ. ಅವರಿಗೆ ಸಮುದ್ರದ ಆಳದ ಬಗ್ಗೆ ತಿಳಿದಿದೆ. ಅಲ್ಲದೆ, ಈಜು ಸೇರಿದಂತೆ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿರುವರನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬ ತಂತ್ರ ಕೂಡ ಗೊತ್ತಿದೆ.
ಅದಕ್ಕೆಂದೇ ವಿದೇಶಿ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿ ತರಬೇತಿ ನೀಡಲಾಗುತ್ತಿದೆ. ಬೆಳಗ್ಗೆ 8.30ರಿಂದ ರಾತ್ರಿ 7 ಗಂಟೆಯವರೆಗೆ ಲೈಫ್‌ಗಾರ್ಡ್‌ನವರು ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, ಪಣಂಬೂರು ಬೀಚ್‌ನಲ್ಲಿ ರಾತ್ರಿಯಿಡಿ ಎರಡು ಮಂದಿ ಕಾರ್ಯಾಚರಣೆ ನಡೆಸುತ್ತಾರೆ.
ಸಲಹೆ ಸೂಚನೆಗಳನ್ನು ಕೇಳುವುದಿಲ್ಲ
ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಬೈಕಂಪಾಡಿ ಅವರು ‘ಉದಯವಾಣಿ’ಗೆ ಪ್ರತಿಕ್ರಿಯಿಸಿ ‘ಬೀಚ್‌ಗಳಿಗೆ ಆಗಮಿಸುವ ಕೆಲವು ಮಂದಿ ಪ್ರವಾಸಿಗರು ಲೈಫ್‌ಗಾರ್ಡ್ ಅವರ ಸಲಹೆ ಸೂಚನೆಗಳನ್ನು ಕೇಳುವುದಿಲ್ಲ. ಈ ವೇಳೆಯಲ್ಲಿ ನಾವು ಎಷ್ಟೇ ಸಹನೆಯಿಂದ ನಡೆದುಕೊಂಡರೂ ನಮ್ಮ ಮೇಲೆಯೇ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಕೆಲವರು ಬರುತ್ತಾರೆ. ಇದು ತುಂಬಾ ಬೇಸರ ತಂದಿದೆ. ಇಂತಹ ಸಮಯದಲ್ಲಿ ಸ್ಥಳಿಯ ಪೊಲೀಸರ ಸಹಾಯ ಪಡೆಯುತ್ತೇವೆ ಎನ್ನುತ್ತಾರೆ.
ತಣ್ಣೀರುಬಾವಿ ಬೀಚ್ 27 ಮಂದಿಯ ರಕ್ಷಣೆ
ತಣ್ಣೀರುಬಾವಿ ಬೀಚ್‌ನ್ನು ಎರಡು ವಿಭಾಗಗಳಾಗಿ ವಿಂಗಡಣೆ ಮಾಡಿದ್ದು, ಒಟ್ಟು 6 ಮಂದಿ ಜೀವರಕ್ಷಕರಿದ್ದಾರೆ. ವೀಕೆಂಡ್ ಸೇರಿದಂತೆ ಬೇಸಗೆ ರಜೆ ಸಮಯದಲ್ಲಿ ಹೆಚ್ಚುವರಿ ಲೈಫ್‌ಗಾರ್ಡ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. 2011ರಲ್ಲಿ ಇಲ್ಲಿನ ಬೀಚ್‌ಗೆ ಲೈಫ್ ಗಾರ್ಡ್ ಪರವಾನಿಗೆ ದೊರಕಿದ್ದು, ಅಲ್ಲಿಂದ ಇಲ್ಲಿಯವರಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 27 ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.
ಆ ಬೇಸರ ಇಂದೂ ಇದೆ
ಸುಮಾರು ಮೂರು ವರ್ಷಗಳ ಹಿಂದೆ ಸಂಜೆಯ ವೇಳೆ ಮೂರು ಮಂದಿ ನೀರಿನಲ್ಲಿ ಆಡುತ್ತಿದ್ದ ವೇಳೆ ಕೊಚ್ಚಿ ಹೋದ ಘಟನೆ ನಡೆಯಿತು. ಆ ಸಮಯದಲ್ಲಿ ಮೂವರನ್ನೂ ರಕ್ಷಿಸಲು ನಾವು ಕಾರ್ಯಾಚರಣೆ ನಡೆಸಿದೆವು. ಕೊನೆಗೂ ಮೂವರನ್ನು ಜೀವಂತವಾಗಿಯೇ ದಡಕ್ಕೆ ತಂದೆವು. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಒಬ್ಬ ಕೊನೆಯುಸಿರೆಳೆದ. ಆ ಬೇಸರ ಇಂದೂ ಇದೆ ಎನ್ನುತ್ತಾರೆ ಪಣಂಬೂರಿನ ಲೈಫ್‌ಗಾರ್ಡ್ ಶರತ್.
2008-2018ರ ಎಪ್ರಿಲ್ ವರೆಗೆ ರಕ್ಷಿಸಲ್ಪಟ್ಟವರು:
ಪಣಂಬೂರು 220, ಕಾಪು 12, ಸೋಮೇಶ್ವರ 65, ತಣ್ಣೀರುಬಾವಿ(2011-18): 27
ಅನೈತಿಕ ಚಟುವಟಿಕೆಗೆ ಬ್ರೇಕ್
ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಬೀಚ್‌ನಲ್ಲಿ ಅನೈತಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಲೈಫ್‌ಗಾರ್ಡ್‌ಗಳು ಪ್ರವಾಸಿಗರ ಬಗ್ಗೆ ನಿಗಾ ಇಡುತ್ತಾರೆ. ಇತ್ತೀಚೆಗೆ ಕೆಲವು ಪ್ರವಾಸಿಗರು ಬೀಚ್‌ನಲ್ಲಿ ಮಹಿಳೆಯರ ವೀಡಿಯೋ ಮಾಡುವುದು ಗಮನಕ್ಕೆ ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರ ಸಹಾಯ ಕೇಳಲಾಗಿದೆ.
-ಯತೀಶ್ ಬೈಕಂಪಾಡಿ
ಪಣಂಬೂರು ಬೀಚ್ ಅಭಿವೃದ್ಧಿ
ಯೋಜನೆಯ ಸಿಇಒ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.