ವೆರೈಟಿ ಆಸ್ವಾದ
Team Udayavani, May 2, 2018, 12:35 PM IST
ಬೆಳಗ್ಗೆ ರವರವ ಬಿಸಲು, ಸಂಜೆ ತಂಪೆರೆವ ಮಳೆ- ಇಂಥ ವಾತಾವರಣ ಜೊತೆಗಿರುವ ದಿನಗಳಿವು. ಬೇಸಿಗೆಯ ಕಾರಣಕ್ಕೆ ದಾಹ-ಹಸಿವು ಎರಡೂ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಏನಾದರೂ ಹೊಸ ಬಗೆಯ ತಿಂಡಿಗಳನ್ನು ಮಾಡಿಕೊಂಡು ತಿನ್ನುವ ಆಸೆಯಾಗುವುದು ಸಹಜ. ಕಡಿಮೆ ಬೆಲೆ ಹಾಗೂ ಸ್ವಲ್ಪ ಖರ್ಚು ಬೀಳುವ ತಿನಿಸುಗಳ ರೆಸಿಪಿ ಇಲ್ಲಿದೆ.
ಹೆಸರು ಕಾಳಿನ ಕೋಫ್ತಾ
ಬೇಕಾಗುವ ಸಾಮಗ್ರಿ: 2 ಕಪ್ ಹೆಸರುಕಾಳು, 4 ಈರುಳ್ಳಿ, 2ಟೊಮೆಟೊ, 7 ಹಸಿಮೆಣಸಿನಕಾಯಿ, 2 ಚಮಚ ಜೀರಿಗೆ ಪುಡಿ, ಧನಿಯ ಪುಡಿ, ಅಚ್ಚ ಖಾರದಪುಡಿ, ಗರಂ ಮಸಾಲ, 1/2 ಕಪ್ ಕಾರ್ನ್ ಫ್ಲೋರ್ (ಮುಸುಕಿನಜೋಳದ ಹಿಟ್ಟು), ಎಣ್ಣೆ, ಉಪ್ಪು, ಇಂಗು, ಕೊತ್ತಂಬರಿಸೊಪ್ಪು, ಶುಂಠಿ, ಕಸೂರಿ ಮೇತಿ 1/2 ಚಮಚ, ಅರಿಶಿಣ ಪುಡಿ
ಮಾಡುವ ವಿಧಾನ: ಹೆಸರುಕಾಳನ್ನು ಒಂದು ಗಂಟೆ ನೆನೆಸಿ, ಬಿಸಿನೀರಲ್ಲಿ ಒಂದು ಹದ ಬೇಯಿಸಿ. ನಂತರ ಎರಡು ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿ. ಆ ಮಿಶ್ರಣಕ್ಕೆ 1 ಚಮಚ ಜೀರಿಗೆ ಪುಡಿ, 1 ಚಮಚ ಗರಂ ಮಸಾಲ ಹಾಕಿ ಕಲೆಸಿ ಉಂಡೆ ಮಾಡಿ. ಈ ಉಂಡೆಗಳನ್ನು ಕಾರ್ನ್ ಫ್ಲೋರ್ ಮೇಲೆ ಉರುಳಿಸಿ ಎಣ್ಣೆಯಲ್ಲಿ ಫ್ರೈ ಮಾಡಿ.
ನಂತರ ಈರುಳ್ಳಿ, ಟೊಮೆಟೊ, ಹಸಿಮೆಣಸು, ಶುಂಠಿ, ಕಸೂರಿ ಮೇತಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಆಮೇಲೆ ಬಾಣಲೆಗೆ ಎರಡು ಚಮಚ ಎಣ್ಣೆ, ಒಂದು ಚಮಚ ಅರಿಶಿಣ ಹಾಕಿ, ಎಣ್ಣೆ ಕಾದ ಮೇಲೆ ರುಬ್ಬಿದ ಮಿಶ್ರಣವನ್ನು, ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಕುದಿಸಿ.
ಈ ಕುದ್ದ ಗ್ರೇವಿಗೆ 1 ಚಮಚ ಜೀರಿಗೆ ಪುಡಿ, 1ಚಮಚ ಧನಿಯ ಪುಡಿ, 1ಚಮಚ ಅಚ್ಚಖಾರದ ಪುಡಿ, ಚಿಟಿಕೆ ಇಂಗು ಮತ್ತು ಉಪ್ಪು ಹಾಕಿ ಎರಡು ನಿಮಿಷ ಕುದಿಸಿ, ಅದರಲ್ಲಿ ಕರಿದಿಟ್ಟ ಹೆಸರುಕಾಳು ಉಂಡೆಗಳನ್ನು ಹಾಕಿ ಐದು ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಅಲಂಕರಿಸಿದರೆ ಕೋಫ್ತಾ ರೆಡಿ.
* ಸ್ನೇಹಾ ರಮಾಕಾಂತ್
*****
ಅಕ್ಕಿತರಿ ಉಂಡೆ
ಬೇಕಾಗುವ ಸಾಮಗ್ರಿ: ತೊಳೆದು ಬಿಸಿಲಿಗೆ ಹಾಕಿದ ಅಕ್ಕಿಯನ್ನು ತರಿಯಾಗಿ ಬೀಸಿಕೊಳ್ಳಿ (ಅಂಗಡಿಗಳಲ್ಲಿ ಅಕ್ಕಿತರಿ ಸಿದ್ಧರೂಪದಲ್ಲೇ ಸಿಗುತ್ತೆ) ಸಾಸಿವೆ, ಜೀರಿಗೆ, ಮೆಣಸು (ಒಗ್ಗರಣೆಗೆ), ಕಾಯಿ ತುರಿ ಸ್ವಲ್ಪ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಅವರೆಕಾಯಿ/ತೊಗರಿಕಾಯಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಅಕ್ಕಿತರಿಯನ್ನು ಸಣ್ಣ ಉರಿಯಲ್ಲಿ ಹುರಿದು ಇಟ್ಟುಕೊಳ್ಳಿ. ಕಾದ ಬಾಣಲೆಗೆ 3 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಮೆಣಸು ಹಾಕಿ ಸಿಡಿಸಿ. ಈಗ ಅದರೊಳಕ್ಕೆ ಹೆಚ್ಚಿಟ್ಟುಕೊಂಡ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ ಹಾಕಿ, ಚಿಟಿಕೆ ಇಂಗು ಪುಡಿ ಹಾಕಿ. ಈಗಾಗಲೇ ಬೇಯಿಸಿಟ್ಟುಕೊಂಡ ಕಾಳನ್ನೂ ಹಾಕಿಕೊಳ್ಳಿ. ತಕ್ಕಷ್ಟು ನೀರು ಹಾಕಿ ಮುಚ್ಚಿಡಿ.
ಕುದಿಯುತ್ತಿರುವ ನೀರಿಗೆ ಉಪ್ಪು ಹಾಕಿ. ಎರಡು ನಿಮಿಷದ ನಂತರ ತುರಿದ ಕೊಬ್ಬರಿ, ಕೊತ್ತಂಬರಿ ಸೊಪ್ಪು ಹಾಕಿ. ತದನಂತರ ಅಕ್ಕಿತರಿ ಹಾಕಿ 2 ನಿಮಿಷ ಮುಚ್ಚಿಡಿ. ಪೂರ್ತಿ ಬೇಯಿಸಬೇಡಿ. ಈಗ ಒಲೆ ಆರಿಸಿ, ಒಂದು ತಟ್ಟೆಯಲ್ಲಿ ಆರಲು ಹಾಕಿ. ಕೊಂಚ ತಣ್ಣಗಾದ ನಂತರ ಉಂಡೆ ಮಾಡಿ ಎಣ್ಣೆ ಹಚ್ಚಿದ ಇಡ್ಲಿ ತಟ್ಟೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿ. ಈಗ ಅಕ್ಕಿತರಿ ಉಂಡೆ ರೆಡಿ. ಇದನ್ನು ತುಪ್ಪದ ಜೊತೆ ತಿಂದರೆ ರುಚಿ ಹೆಚ್ಚು.
* ಸವಿತಾ ನಾಗೇಶ್
*****
ಖರ್ಜೂರದ ಹೋಳಿಗೆ
ಬೇಕಾಗುವ ಸಾಮಗ್ರಿ: ಖರ್ಜೂರ 8-10, ಮೈದಾ ಹಿಟ್ಟು-2 ಕಪ್, ಚಿರೋಟಿ ರವೆ-1 ಕಪ್, ಸಕ್ಕರೆ ಪುಡಿ-2 ಕಪ್, ತುರಿದ ಒಣಕೊಬ್ಬರಿ-3/4 ಕಪ್, ಗಸಗಸೆ ಪುಡಿ-1/4 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1 ಕಪ್
ಮಾಡುವ ವಿಧಾನ: ಖರ್ಜೂರದ ಬೀಜ ತೆಗದು ಬೇಯಿಸಿ ರುಬ್ಬಿ. ಅದಕ್ಕೆ ಮೈದಾ ಹಿಟ್ಟು, ಚಿರೋಟಿ ರವೆ ಸೇರಿಸಿ, ಸ್ವಲ್ಪ ಎಣ್ಣೆ ಹಾಕಿ ನೀರಿನೊಂದಿಗೆ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಕಣಕ ತಯಾರಿಸಿ, ಒಂದು ಗಂಟೆ ನೆನೆಯಲಿರಿಸಿ. ಬೇಯಿಸಿದ ಖರ್ಜೂರಕ್ಕೆ, ಸಕ್ಕರೆ ಪುಡಿ ಸೇರಿಸಿ ನಾದಿ, ಅದಕ್ಕೆ ಗಸಗಸೆ, ಏಲಕ್ಕಿ ಪುಡಿ, ತುರಿದ ಒಣಕೊಬ್ಬರಿ, ಸ್ವಲ್ಪ ತುಪ್ಪ ಸೇರಿಸಿ ಕಲಸಿ,
ಹೂರಣ ತಯಾರಿಸಿಟ್ಟುಕೊಳ್ಳಿ. ಕಲಸಿದ ಕಣಕದಿಂದ ಲಿಂಬೆ ಗಾತ್ರದ ಉಂಡೆ ಮಾಡಿ, ಅಂಗೈಯಲ್ಲಿ ತಟ್ಟಿ, ಹೂರಣ ತುಂಬಿಸಿ, ಮೃದುವಾಗಿ ಲಟ್ಟಿಸಿ, ತುಪ್ಪ ಸವರಿ, ಕಾಯಿಸಿದ ಕಾವಲಿಯ ಮೇಲೆ ಹರಡಿ. ಎರಡೂ ಬದಿಯನ್ನು ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಹೋಳಿಗೆ ತಯಾರು.
ಬೆಲ್ಲದ ಹೋಳಿಗೆ
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು-2 ಕಪ್, ಚಿರೋಟಿ ರವೆ-1 ಕಪ್, ಅಕ್ಕಿ ಹಿಟ್ಟು-2 ಚಮಚ, ಬೆಲ್ಲದ ತುರಿ-2 ಕಪ್, ತುರಿದ ಒಣಕೊಬ್ಬರಿ-3/4 ಕಪ್, ಗಸಗಸೆ ಪುಡಿ-1/4 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1 ಕಪ್
ಮಾಡುವ ವಿಧಾನ: ಮೈದಾ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟು ಸೇರಿಸಿ, ಸ್ವಲ್ಪ ಎಣ್ಣೆ ಹಾಕಿ ನೀರಿನೊಂದಿಗೆ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಒಂದು ಗಂಟೆ ನೆನೆಸಿಡಿ. 1 ಚಮಚ ಮೈದಾ ಹಿಟ್ಟಿಗೆ, ಗಸಗಸೆ ಪುಡಿ, ಬೆಲ್ಲದ ತುರಿ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ, ಕಲಸಿ, ಹೂರಣ ತಯಾರಿಸಿ. ಕಣಕದಿಂದ ಲಿಂಬೆ ಗಾತ್ರದ ಉಂಡೆ ಮಾಡಿ, ಅಂಗೈಯಲ್ಲಿ ತಟ್ಟಿ, ಹೂರಣ ತುಂಬಿಸಿ, ಮೃದುವಾಗಿ ಲಟ್ಟಿಸಿ, ತುಪ್ಪ ಸವರಿ ಕಾಯಿಸಿದ ಕಾವಲಿಯ ಮೇಲೆ ಹರಡಿ. ಎರಡೂ ಬದಿಯನ್ನು ಹೊಂಬಣ್ಣ ಬರುವವರೆಗೆ ಬೇಯಿಸಿ.
* ಜಯಶ್ರೀ ಕಾಲ್ಕುಂದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.