ಅಂಗವೈಕಲ್ಯ ಮೀರಿ ಪರೀಕ್ಷೆ ಗೆದ್ದ ಈ ಅಣ್ಣ ತಂಗಿ ಬದುಕನ್ನೂ ಗೆಲ್ಲಲಿ…
Team Udayavani, May 3, 2018, 7:00 AM IST
ಆ ತಂದೆ ತಾಯಿಗಳದ್ದು ಬರೋಬ್ಬರಿ 15-16 ವರ್ಷಗಳ ತಪಸ್ಸು. ಹೌದು, ತಮ್ಮ ಎರಡೂ ಮಕ್ಕಳ ಸ್ಥಿತಿಯೂ ಒಂದೇ ರೀತಿಯದ್ದಾದರೆ ಅವರಿನ್ನೇನು ತಾನೇ ಮಾಡಲು ಸಾಧ್ಯ? ಹುಟ್ಟಿದ ಕೆಲವು ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಆಟವಾಡುತ್ತಾ ಬೆಳೆಯುತ್ತಿದ್ದ ಮಕ್ಕಳು ಬಳಿಕ ಇದ್ದಕಿದ್ದಂತೆಯೇ ಸೊಂಟದ ಕೆಳಭಾಗದ ಸ್ವಾಧೀನವನ್ನು ಕಳೆದುಕೊಳ್ಳತೊಡಗಿದಾಗ ಆ ದಂಪತಿ ಕಂಗಾಲಾದರು… ಆ ಬಳಿಕ ಏನಾಯ್ತು, ಆ ಮಕ್ಕಳಿಬ್ಬರ ಸ್ಥಿತಿ ಇವತ್ತು ಯಾವ ರೀತಿ ಇದೆ ಎನ್ನುವುದೇ ಈ ವಾರದ ವಿಶೇಷ ಬರಹದಲ್ಲಿ…
ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಬೋರ್ಗಲ್ ಗುಡ್ಡೆ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿರುವ ಶೇಖರ್ ಸಾಲಿಯಾನ್ ಹಾಗೂ ಜ್ಯೋತಿ ಸಾಲಿಯಾನ್ ಅವರಿಗೆ ಇಬ್ಬರು ಮಕ್ಕಳು, ಒಂದು ಗಂಡು ಮತ್ತೊಂದು ಹೆಣ್ಣು. ಪ್ರಜ್ವಲ್ ಮತ್ತು ಪ್ರತೀಕ್ಷಾ. ಈ ಇಬ್ಬರು ಮಕ್ಕಳಿಗೂ ಅಂಗವೈಕಲ್ಯವೆಂಬುದು ಶಾಪವಾಗಿ ಕಾಡುತ್ತಿದೆ. ಆದರೆ ತಮ್ಮ ದೈಹಿಕ ನ್ಯೂನತೆಯನ್ನು ಯಶಸ್ವಿಯಾಗಿ ಮೆಟ್ಟಿನಿಂತಿರುವ ಈ ಸಹೋದರ-ಸಹೋದರಿ ಇವತ್ತು ರಾಜ್ಯಾದಂತ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಮೊನ್ನೆ ತಾನೆ ಪ್ರಕಟಗೊಂಡ ಪಿ.ಯು. ಫಲಿತಾಂಶದಲ್ಲಿ ಇವರಿಬ್ಬರೂ ಉತ್ತೀರ್ಣರಾಗಿದ್ದಾರೆ. ಪ್ರಜ್ವಲ್ 51% ಮತ್ತು ಪ್ರತೀಕ್ಷಾ 49% ಅಂಕಗಳನ್ನು ಕಲಾವಿಭಾಗದಲ್ಲಿ ಪಡೆದುಕೊಂಡಿದ್ದಾರೆ. ಅದೂ ಮನೆಯಲ್ಲಿಯೇ ಪಾಠವನ್ನು ಕೇಳಿ, ಸಹಾಯಕರ ನೆರವಿನಿಂದ ಪರೀಕ್ಷೆಯನ್ನು ಬರೆಯುವ ಮೂಲಕ. ಇದೀಗ ಈ ಮಕ್ಕಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ…
ಈಗ ವಿಷಯ ಏನಂದ್ರೆ, ಸುಮಾರು 14-15 ವರ್ಷಗಳಿಂದ ಈ ಮಕ್ಕಳನ್ನುಕಣ್ಣಿನ ರೆಪ್ಪೆಯಂತೆ ಕಾಪಾಡಿದ, ಅವರಲ್ಲಿದ್ದ ಓದಿನ ಹಸಿವಿಗೆ ಸೂಕ್ತ ಶಿಕ್ಷಣದ ವ್ಯವಸ್ಥೆಯನ್ನು ಮಾಡಲು ಹೆಣಗಾಡಿದ ಮತ್ತು ಈ ಮಕ್ಕಳಿಬ್ಬರಿಗೂ ಸಾಧ್ಯವಿರುವ ಎಲ್ಲಾ ವೈದ್ಯಕೀಯ ನೆರವನ್ನು ನೀಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪ್ರಜ್ವಲ್ ಮತ್ತು ಪ್ರತೀಕ್ಷಾ ಅವರ ಹೆತ್ತವರನ್ನು ಮಾತನಾಡಿಸಿದಾಗ ಒಂದು ಯಶೋಗಾಥೆಯ ಪುಟವೇ ನಮ್ಮೆದುರು ತೆರೆದುಕೊಂಡಿತು. ತಮ್ಮ ಮಕ್ಕಳ ವಿಷಯವನ್ನು ಹೇಳುತ್ತಾ ಹೇಳುತ್ತಾ ಆ ತಾಯಿ ಅದೆಷ್ಟು ಬಾರಿ ಗದ್ಗದಿತರಾದರೋ.., ತಿಳಿಯದು, ಇನ್ನು ತಂದೆಯದ್ದೋ ಬರೀ ನಿಟ್ಟುಸಿರು.
ಪ್ರತೀಕ್ಷಾಳಿಗೆ ಡ್ಯಾನ್ಸ್ ಎಂದರೆ ಜೀವ ! ಟಿ.ವಿ.ಯಲ್ಲಿ ಯಾವುದೇ ಡ್ಯಾನ್ಸ್ ನೋಡಿದರೂ ತನಗೂ ಹಾಗೆಯೇ ಕುಣಿಯಬೇಕೆಂಬ ಹಂಬಲ ಆಕೆಯ ಕಣ್ಣಿನಲ್ಲಿ ಕಾಣುತ್ತಿರುತ್ತದೆ ; ಆದರೆ ಕುಣಿಯಬೇಕಾಗಿರುವ ಕಾಲುಗಳೇ ಬಲವಿಲ್ಲದೆ ಸುಮ್ಮನಾಗಿವೆ !! ಇನ್ನು ಪ್ರಜ್ವಲ್ ಗೆ ಭಜನೆ ಹಾಡುಗಳೆಂದರೆ ಪಂಚಪ್ರಾಣ – ‘ಮಹಿಮೆಯಿಂದ ಶಬರಿಗಿರಿಯ ಪುಣ್ಯಭೂಮಿಯ ಮಾಡಿದೆ..’ ಎಂದು ತನಗಿರುವ ಉಗ್ಗುವಿಕೆಯ ನಡುವೆಯೂ ಹಾಡುತ್ತಿದ್ದರೆ ಕೇಳುಗರ ಮನಸ್ಸು ಕಾಣದಿರುವ ದೇವರ ಕುರಿತಾಗಿ ಯೋಚಿಸುತ್ತಿರುತ್ತದೆ. ಈ ರೀತಿ ತಮ್ಮ ಮಕ್ಕಳಿಬ್ಬರ ವಿಶಿಷ್ಠ ಆಸಕ್ತಿಗೆ ಅವರ ಅಂಗ ವೈಕಲ್ಯವೇ ಅಡ್ಡಿಯಾಗಿರುವುದನ್ನು ಇಷ್ಟು ವರ್ಷಗಳವರೆಗೆ ಪ್ರತೀದಿನ ನೋಡಿಕೊಂಡು ಬರುತ್ತಿರುವ ಹೆತ್ತ ಮನಸ್ಸುಗಳು ಅದಿನ್ನೆಷ್ಟು ನೊಂದಿರಬೇಡ…??
ಪ್ರಜ್ವಲ್ ಚಟುವಟಿಕೆಗಳು ನಿಧಾನ…
ಪ್ರಜ್ವಲ್ ಪುಟ್ಟ ಮಗುವಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುವ ತಂದೆ ಶೇಖರ್ ಸಾಲಿಯಾನ್, ಹೇಳುವುದು ಹೀಗೆ…: ‘ಆತ ಮಗುವಾಗಿದ್ದ ಚಟುವಟಿಕೆಗಳೆಲ್ಲಾ ನಿಧಾನವಾಗಿತ್ತು. ಒಂದು ಒಂದೂವರೆ ವರ್ಷದ ಮಗುವಿಗೆ ಸರಿಯಾಗಿ ನಿಲ್ಲಲಾಗುತ್ತಿರಲಿಲ್ಲ. ಇನ್ನು ಉಳಿದ ಚಟುವಟಿಕೆಗಳೂ ಮಂದಗತಿಯಲ್ಲೇ ಇತ್ತು. ಕೆಲವು ಮಕ್ಕಳಲ್ಲಿ ಇವೆಲ್ಲಾ ಸಾಮಾನ್ಯವೆಂದು ನಾವೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ಕೈ ಕಾಲುಗಳಲ್ಲಿ ಬಲವೇ ಇಲ್ಲದಂತಾಯಿತು. ಆಗ ನಮಗೆ ಚಿಂತೆಯಾಗಿ ವೈದ್ಯರ ಬಳಿ ಹೋದಾಗ, ಇದು ಮಾಂಸಖಂಡಗಳ ಸರಿಯಾದ ಬೆಳವಣಿಗೆ ಇಲ್ಲದೆ ಉಂಟಾಗಿರುವ ಸಮಸ್ಯೆ ಎಂದರು. ಮತ್ತಿದಕ್ಕೆ ಯಾವುದೇ ಔಷಧಿಯೂ ಇಲ್ಲವಂತೆ, ಫಿಸಿಯೋಥೆರಪಿ ಮತ್ತು ಸೂಕ್ತ ರೀತಿಯ ತೈಲ ಮಸಾಜ್ ಮಾತ್ರವೇ ಪರಿಹಾರವೆಂಬ ಉತ್ತರ ಅವರಿಂದ ಬಂತು.’ ಆ ಬಳಿಕ ನಾವು ಆತನ ಸ್ಥಿತಿಯನ್ನು ಸುಧಾರಿಸಲು ಹೋಗದ ಜಾಗವಿಲ್ಲ. ಅಲೋಪತಿ, ಆಯುರ್ವೇದ, ನಾಟಿ.. ಹೀಗೆ ಎಲ್ಲಾ ಕಡೆಗೆ ಅಲೆದಿದ್ದೇವೆ. ಆದರೆ ಯಾವುದೂ ಫಲಕಾರಿಯಾಗಲಿಲ್ಲವೆಂದು ನಿಟ್ಟುಸಿರು ಬಿಡುತ್ತಾರೆ ಶೇಖರಣ್ಣ!
ಪರಿಸ್ಥಿತಿ ಹೀಗಿರುವಾಗಲೇ ಪ್ರತೀಕ್ಷಾ ಹುಟ್ಟುತ್ತಾಳೆ. ಬಹಳ ಚೂಟಿ ಹುಡುಗಿ. ಡ್ಯಾನ್ಸ್ ಅಂದ್ರೆ ಪಂಚಪ್ರಾಣ. ಮಾತಿನಲ್ಲಿ, ಚಟುವಟಿಕೆಗಳಲ್ಲಿ ಅಣ್ಣನಿಗಿಂತಲೂ ಚುರುಕು. ಆದರೆ ವಿಧಿಯಾಟ ನೋಡಿ, ಸುಮಾರು ನಾಲ್ಕು ವರ್ಷ ಪ್ರಾಯವಾಗುವ ಸಂದರ್ಭದಲ್ಲಿ ಆಕೆಯ ಮಾಂಸಖಂಡಗಳ ಬೆಳವಣಿಗೆಯೂ ಮುಷ್ಕರ ಹೂಡಿ ಕುಳಿತವು. ಅಲ್ಲಿಗೆ ಓಡಿ ನಲಿದಾಡಿ ಬೆಳೆಯಬೇಕಿದ್ದ ಮನೆಮಗಳು ನೆಲಹಿಡಿಯುವಂತಾಯಿತು. ಇಬ್ಬರಿಗೂ ಸೊಂಟದ ಕೆಳಭಾಗದಲ್ಲಿ ಸ್ವಾಧೀನವಿಲ್ಲ. ಕೈಗಳ ಮಣಿಕಟ್ಟು ಭಾಗದಲ್ಲಿ ಬಲವಿಲ್ಲ. ಉಳಿದಂತೆ ಮಾತು, ನೋಟ, ಇನ್ನುಳಿದ ಚಟುವಟಿಕೆಗಳೆಲ್ಲಾ ಸರಾಗ.
ಮಕ್ಕಳ ಬುದ್ದಿವಂತಿಕೆಗೆ ಹೆತ್ತವರು ಬೆರಗು…!
ಪ್ರಜ್ವಲ್ ಮತ್ತು ಪ್ರತೀಕ್ಷಾ ನಾಲ್ಕನೇ ತರಗತಿಯವರೆಗೆ ಶಾಲೆಗೆ ಹೋಗಿಯೇ ಪಾಠ ಕೇಳಿದ್ದಾರೆ. ತಾಯಿ ಇವರಿಬ್ಬರನ್ನು ಹೊತ್ತುಕೊಂಡು ಅಂಗನವಾಡಿಗೂ ಕರೆದೊಯ್ದಿದ್ದಾರೆ. ಮತ್ತೆ, ಆಟೋ ರಿಕ್ಷಾದಲ್ಲಿ ತಾಯಿ ಕರೆದುಕೊಂಡು ಹೋಗಲಾರಂಭಿಸಿದರು. ಪಠ್ಯ ಚಟುವಟಿಕೆಗಳಲ್ಲಿ ಇಬ್ಬರೂ ಬಹಳ ಚುರುಕು. ಇದು ಶಾಲೆಗಳಲ್ಲಿ ಶಿಕ್ಷಕರಿಗೂ ಆಶ್ಚರ್ಯಕ್ಕೆ ಕಾರಣವಾಗಿತ್ತು. ಆದರೆ ಬಳಿಕ ತಾಯಿ ಜ್ಯೋತಿಯವರಿಗೆ ಇಬ್ಬರನ್ನೂ ಕರೆದುಕೊಂಡು ಹೋಗುವುದು ಅಸಾಧ್ಯವೆನಿಸಿತು. ಮನೆಯಲ್ಲಿಯೇ ಪಾಠ ಹೇಳಿಕೊಡುವ ವ್ಯವಸ್ಥೆ ಮಾಡುವಂತೆ ಪರಿಚಯದ ಶಿಕ್ಷಕರೂ ಸಲಹೆ ಕೊಟ್ಟರು. ಇವೆಲ್ಲದರ ನಡುವೆ ಸ್ವಲ್ಪ ಸಮಯ ಪ್ರಜ್ವಲ್ ನನ್ನು ಕಾರ್ಕಳದ ವಿಶೇಷ ಮಕ್ಕಳ ಶಾಲೆಗೂ ಸೇರಿಸಿದ್ದರು ಹೆತ್ತವರು. ಆದರೆ ಆತನ ಬುದ್ದಿಮತ್ತೆ ಸಾಮಾನ್ಯ ಮಕ್ಕಳ ಹಾಗೆಯೇ ಇದ್ದ ಕಾರಣ ಶಾಲೆಗೆ ಸೇರಿಸುವಂತೆ ಅಲ್ಲಿನ ಶಿಕ್ಷಕರು ಸಲಹೆ ನೀಡಿದರು.
ಇದಾದ ಬಳಿಕ ಶೈಕ್ಷಣಿಕ ಪಠ್ಯ ಕ್ರಮದಂತೆಯೇ ತಮ್ಮ ಇಬ್ಬರು ಮಕ್ಕಳಿಗೂ ಮನೆಯಲ್ಲಿಯೇ ಶಿಕ್ಷಣವನ್ನು ನೀಡಲು ಈ ತಾಯಿ ಪಟ್ಟ ಪಾಡಂತೂ ಹೇಳತೀರದು. ಹಲವರ ಸಹಕಾರ ಸಲಹೆ ಪಡೆದು, ಬಿ.ಇ.ಒ., ಡಿಡಿಪಿಐ ಸೇರಿದಂತೆ ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳ ಬಳಿಗೆ ಹೋಗಿ ತಮ್ಮ ಮಕ್ಕಳ ಸ್ಥಿತಿಯನ್ನು ಮತ್ತು ಕಲಿಕೆಯಲ್ಲಿ ಅವರಿಗಿರುವ ಉತ್ಸಾಹವನ್ನು ಮನದಟ್ಟು ಮಾಡಿಕೊಟ್ಟು ಮನೆಯಲ್ಲಿಯೇ ಪಾಠ, ತರಗತಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ಅನುಮತಿಯನ್ನು ಪಡೆದುಕೊಂಡೇ ಬಿಟ್ಟರು.
ಇದೆಲ್ಲಾ ವಿಷಯಗಳು ಒಂದೆಡೆಯಾದರೆ, ಮನೆಯ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತಿತ್ತು. ಮನೆ ಸಮೀಪದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಶೇಖರ್ ಅವರು ಅನಾರೋಗ್ಯದ ಕಾರಣ ಕೆಲಸ ಬಿಡುವಂತಾಯಿತು. ಇತ್ತ ತಾಯಿ ಜ್ಯೋತಿ, ಹಗಲೆಲ್ಲಾ ಮಕ್ಕಳ ಆರೈಕೆ ಮಾಡಿ ಸಂಜೆ ಮೇಲೆ ಬೀಡಿ ಕಟ್ಟಿ ಅದರಲ್ಲಿ ಬಂದ ಆದಾಯದಿಂದ ಮನೆ ನಡೆಸುವ ಜವಾಬ್ದಾರಿ ಹೊರುತ್ತಾರೆ.
ಕಾಮತರ ಡಾಕ್ಯುಮೆಂಟ್ರಿ ಮತ್ತು ಮಿಡಿದ ಸೋಷಿಯಲ್ ಮೀಡಿಯಾ!
ಇಷ್ಟೆಲ್ಲಾ ಆಗುವ ಹೊತ್ತಿಗೆ ಮಕ್ಕಳಿಬ್ಬರೂ ಹತ್ತನೇ ತರಗತಿ ಪ್ರವೇಶಿಸಿದ್ದರು. ಇಲ್ಲಿಯೂ ಮನೆ ಪಾಠ ಮತ್ತು ಇವರಿಗೆ ಪಾಠ ಮಾಡುತ್ತಿದ್ದ ಶಿಕ್ಷಕ ಶಿಕ್ಷಕಿಯರೇ ಸ್ಕ್ಯಾಡ್ ನವರ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಜ್ವಲ್ ಮತ್ತು ಪ್ರತೀಕ್ಷಾ ಕ್ರಮವಾಗಿ 68% ಮತ್ತು 70% ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಇವರ ಊರಿನವರೇ ಆದ ಉಪನ್ಯಾಸಕ ಮತ್ತು ‘ದಾರಿ ತಪ್ಪಿಸು ದೇವರೇ. ಪುಸ್ತಕ ಖ್ಯಾತಿಯ ಬರಹಗಾರ ಮಂಜುನಾಥ್ ಕಾಮತ್ ಈ ಮಕ್ಕಳ ವಿಷಯ ತಿಳಿದು ಇವರ ಕುರಿತಾಗಿ ಚಿಕ್ಕದೊಂದು ವಿಡಿಯೋ ಚಿತ್ರಿಕೆ ಮಾಡಿ ಅದನ್ನು ಫೇಸ್ಬುಕ್ ನಲ್ಲಿ ಹಾಕುತ್ತಾರೆ. ಅಲ್ಲಿಯವರೆಗೆ ಹೊರಜಗತ್ತಿಗೆ ಗೊತ್ತಿರದೇ ಇದ್ದ ಈ ಮಕ್ಕಳ ಪ್ರತಿಭೆ ಮತ್ತು ಅಸಹಾಯಕ ಸ್ಥಿತಿ ಎಲ್ಲರಿಗೂ ತಿಳಿಯುತ್ತದೆ, ಮಾತ್ರವಲ್ಲ, ಇವರ ಕಷ್ಟಕ್ಕೆ ಹಲವು ಮನಸ್ಸುಗಳು ಸ್ಪಂದಿಸಿ ಉದಾರವಾಗಿ ಧನ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುತ್ತಾರೆ. ಈ ಮೂಲಕ ಕೆಲವೊಂದು ಲಕ್ಷಗಳಷ್ಟು ಹಣ ಸಂಗ್ರಹವಾಗುತ್ತದೆ ಮತ್ತು ಇವರ ದೈಹಿಕ ಸ್ಥಿತಿಯನ್ನು ಸರಿಪಡಿಸಲು ಹಲವರ ಸಲಹೆಗಳೂ ಸಿಗುತ್ತವೆ.
ಇನ್ನು ಹೆತ್ತವರ ಅಪೇಕ್ಷೆಯಂತೆ ಪ್ರಜ್ವಲ್ ಮತ್ತು ಪ್ರತೀಕ್ಷಾ ಎಲ್ಲಾ ತರಗತಿಗಳನ್ನೂ ಉತ್ತೀರ್ಣಗೊಳ್ಳುತ್ತಲೇ ಉಳಿದ ಮಕ್ಕಳಂತೆಯೇ ಶಿಕ್ಷಣವನ್ನು ಹೊಂದಿದವರು. ಈ ವಿಚಾರದಲ್ಲಿ ಇವರ ಊರಿನ ಶಾಲಾ ಅಧ್ಯಾಪಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಊರಿನ ಹಲವರ ಸಹಕಾರವಿದೆ. ಈ ಮೂಲಕ ಇವರಿಬ್ಬರೂ ಇವತ್ತು ಎಲ್ಲರಿಗೂ ಸ್ಪೂರ್ತಿಯಾಗುವ ಸಾಧನೆಯನ್ನು ಮೆರೆದಿದ್ದಾರೆ.
ಮುಂದೇನು…?
ಇಬ್ಬರಿಗೂ ವಿದ್ಯಾಭ್ಯಾಸ ಮುಂದುವರೆಸುವ ಮನಸ್ಸಿದೆ. ಆದರೆ ಹೆತ್ತವರ ಬಯಕೆ ಮೊದಲಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು. ಇಷ್ಟು ವರ್ಷಗಳ ಕಾಲ ಈ ಮಕ್ಕಳನ್ನು ತಮ್ಮ ಕಣ್ ರೆಪ್ಪೆಗಳಂತೆ ಕಾಪಾಡಿಕೊಂಡು ಬಂದ ಇವರಿಗೆ ತಮ್ಮ ಮಕ್ಕಳ ಭವಿಷ್ಯದ ಜೀವನದ ಬಗ್ಗೆ ಚಿಂತೆ ಮೂಡಿದೆ. ಕನಿಷ್ಠ ಪಕ್ಷ ಅವರ ಕೆಲಸವನ್ನು ಅವರು ಮಾಡಿಕೊಳ್ಳುವಂತಾದರೆ ಸಾಕು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ತಾಯಿ ಜ್ಯೋತಿ ಹೇಳುವಾಗ ತಮ್ಮ ಮಗಳ ಕಡೆಗೆ ನೋವಿನ ನೋಟವನ್ನು ಬೀರುತ್ತಾರೆ! ಈಗಲೂ ಇಬ್ಬರಿಗೂ ಔಷಧಿ ಪ್ರಕ್ರಿಯೆ ನಡೆಯುತ್ತಿದೆ. ಇವರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತೊಯ್ಯಲು ಹೆತ್ತವರ ಮೈಯಲ್ಲಿ ಕಸುವು ಉಳಿದಿಲ್ಲ! ದಾನಿಗಳು ನೀಡಿದ ವ್ಹೀಲ್ ಚಯರ್ ಇದೆ, ಆದರೆ ಇದರ ಬಳಕೆ ಸೀಮಿತವಷ್ಟೇ…?
ದೈಹಿಕ ವೈಫಲ್ಯವನ್ನು ಮೆಟ್ಟಿನಿಂತು ಶೈಕ್ಷಣಿಕವಾಗಿ ಎಲ್ಲರಿಗೂ ಸ್ಪೂರ್ತಿಯಾಗುವಂತಹ ಸಾಧನೆ ಮಾಡಿದ ಪ್ರಜ್ವಲ್ – ಪ್ರತೀಕ್ಷಾ ಅವರು ತಮ್ಮ ದೈಹಿಕ ಅಸಮರ್ಥತೆಯನ್ನೂ ಮೆಟ್ಟಿನಿಂತು ಸ್ವಾವಲಂಬಿಗಳಾಗಿ ಬಾಳುವಂತಾದರೆ ಇಷ್ಟು ವರ್ಷ ತಮ್ಮೆಲ್ಲಾ ನೋವು – ನಲಿವುಗಳನ್ನು ಮಕ್ಕಳ ಆರೈಕೆಯಲ್ಲಿಯೇ ಕಂಡ ಹೆತ್ತವರ ಮನಸ್ಸಿಗೆ ಸಮಾಧಾನ ಸಿಕ್ಕುವುದರಲ್ಲಿ ಸಂಶಯವಿಲ್ಲ, ನಮ್ಮೆಲ್ಲರ ಆಶಯವೂ ಇದುವೇ ಆಗಿದೆ…!
— ಹರಿಪ್ರಸಾದ್ ನೆಲ್ಯಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.